ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಎರ್ಟಿಗಾ ಪೆಟ್ರೋಲ್ ವರ್ಷನ್ ಬಿಡುಗಡೆ
ದೇಶಾದ್ಯಂತ 2020ರ ಏಪ್ರಿಲ್ 1ರಿಂದ ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳನ್ನು ಕಡ್ಡಾಯಗೊಳಿಸುವ ಸಂಬಂಧ ಕೇಂದ್ರ ಸರ್ಕಾರವು ಮಹತ್ವದ ಯೋಜನೆಯೊಂದನ್ನು ಜಾರಿಗೊಳಿಸುತ್ತಿದ್ದು, ಕೇಂದ್ರ ಸರ್ಕಾರದ ಡೆಡ್‌ಲೈನ್‌ಗೂ ಮುನ್ನವೇ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ಎಂಜಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಕಳೆದ ತಿಂಗಳ ಹಿಂದಷ್ಟೇ ಬಿಎಸ್-6 ಪ್ರೇರಿತ ಬಲೆನೊ ಪೆಟ್ರೋಲ್, ಸ್ವಿಫ್ಟ್ ಪೆಟ್ರೋಲ್, ವ್ಯಾಗನ್‌ಆರ್ ಪೆಟ್ರೊಲ್ ಮತ್ತು ಡಿಜೈರ್ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಇದೀಗ ತನ್ನ ಜನಪ್ರಿಯ ಎಂಪಿವಿ ಆವೃತ್ತಿಯಾದ ಎರ್ಟಿಗಾ ಕಾರಿನ ಪೆಟ್ರೋಲ್ ಮಾದರಿಯನ್ನು ಹೊಸ ನಿಯಮಗಳಿಗೆ ಉನ್ನತಿಕರಿಸಿ ಬಿಡುಗಡೆ ಮಾಡಿದೆ. ಹೊಸ ನಿಯಮದಿಂದಾಗಿ ಎರ್ಟಿಗಾ ಪೆಟ್ರೋಲ್ ಮಾದರಿಗಳಲ್ಲಿ ಕೆಲವು ತಾಂತ್ರಿಕ ಬದಲಾವಣೆಗಳಾಗಿದ್ದು, ಸುಧಾರಿತ ಎಂಜಿನ್ ಜೊತೆಗೆ ಕೆಲವು ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯವಾಗಿ ಜೋಡಣೆ ಮಾಡಲಾಗಿದೆ.

ಹೊಸ ಎಂಜಿನ್ ಪಡೆಯ ಎರ್ಟಿಗಾ ಪೆಟ್ರೋಲ್ ವರ್ಷನ್ ಮಾದರಿಯ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.54 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.10.05 ಲಕ್ಷಕ್ಕೆ ನಿಗದಿ ಮಾಡಲಾಗಿದ್ದು, ಬಿಎಸ್-4 ಗಿಂತ ಬಿಎಸ್-6 ಎಂಜಿನ್ ಮಾದರಿಯು ರೂ.10 ಸಾವಿರ ಹೆಚ್ಚುವರಿ ಬೆಲೆ ಪಡೆದಿದೆ.

ಜೊತೆಗೆ ಹೊಸ ಎಂಜಿನ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಮಾಲಿನ್ಯ ಹೊರಸೂಸುವಿಕೆ ಪ್ರಮಾಣದಲ್ಲಿ ಶೇ.25ರಷ್ಟು ಕಡಿತವಾಗಿದ್ದು, ಈ ಹಿಂದಿಗಿಂತಲೂ ಶೇ.10ರಿಂದ ಶೇ.15 ರಷ್ಟು ಹೆಚ್ಚು ಮೈಲೇಜ್ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎನ್ನಬಹುದು.

ಇನ್ನು ಕೇಂದ್ರ ಸರ್ಕಾರವು ಮಾಲಿನ್ಯ ಪ್ರಮಾಣವನ್ನು ತಗ್ಗಿಸುವ ಉದ್ದೇಶದಿಂದ ಬಿಎಸ್-4 ಎಂಜಿನ್ ವಾಹನಗಳ ಮಾರಾಟವನ್ನು ನಿಷೇಧಿಸಿ 2020ರ ಏಪ್ರಿಲ್ 1ರಿಂದಲೇ ಬಿಎಸ್-6 ವಾಹನಗಳ ಮಾರಾಟವನ್ನು ಕಡ್ಡಾಯಗೊಳಿಸುತ್ತಿದ್ದು, ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಇತರೆ ಕಾರು ಉತ್ಪಾದನಾ ಸಂಸ್ಥೆಗಳಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಎಂಜಿನ್‌ಗಳನ್ನು ಈಗಲೇ ಬಿಡುಗಡೆಗೊಳಿಸುತ್ತಿದೆ.

ಬಿಎಸ್-6 ನಿಯಮದಿಂದಾಗಿ ಪೆಟ್ರೋಲ್ ಕಾರುಗಳಿಂತ ಡೀಸೆಲ್ ಕಾರುಗಳ ಬೆಲೆಯಲ್ಲಿ ತುಸು ದುಬಾರಿಯಾಗಿದ್ದು, ಬಿಎಸ್-6 ವೈಶಿಷ್ಟ್ಯತೆಯಿಂದಾಗಿ ಡೀಸೆಲ್ ಕಾರು ಮಾದರಿಗಳು ರೂ.1.20 ಲಕ್ಷದಿಂದ ರೂ.1.80 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಈ ಹಿನ್ನೆಲೆಯಲ್ಲಿ ಅಗ್ಗದ ಬೆಲೆಯ ಡೀಸೆಲ್ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನು 2020ರಿಂದ ಸ್ಥಗಿತಗೊಳಿಸುವ ಬಗ್ಗೆ ಸುಳಿವು ನೀಡಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರತಿ ಕಾರಿನಲ್ಲೂ ಎಲೆಕ್ಟ್ರಿಕ್, ಹೈಬ್ರಿಡ್ ಮತ್ತು ಸಿಎನ್‌ಜಿ ಆವೃತ್ತಿಗಳನ್ನು ಬಿಡುಗಡೆ ಮಾಡುತ್ತಿರುವುದು ಗಮನಿಸಬಹುದು.

ಈಗಾಗಲೇ ಮಾರುಕಟ್ಟೆಯಲ್ಲಿ ವ್ಯಾಗನ್‌ಆರ್, ಸೆಲೆರಿಯೊ, ಆಲ್ಟೋ 800 ಮಾದರಿಗಳಲ್ಲಿ ಸಿಎನ್‌ಜಿ ಆಯ್ಕೆಯನ್ನು ಪರಿಚಯಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಎಂಪಿವಿ ಆವೃತ್ತಿಯಾದ ಎರ್ಟಿಗಾ ಮಾದರಿಯಲ್ಲೂ ಸಿಎನ್‌ಜಿ ಆಯ್ಕೆಯನ್ನು ನೀಡಲಾಗಿದ್ದು, ವಿಎಕ್ಸ್ಐ ಮತ್ತು ಟೂರ್ ಎಂ ಆವೃತ್ತಿಗಳಲ್ಲಿ ಸಿಎನ್‌ಜಿ ಮಾದರಿಯನ್ನು ಖರೀದಿ ಮಾಡಬಹುದಾಗಿದೆ.

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಸಿಎನ್‌ಜಿ ಎರ್ಟಿಗಾ ಮಾದರಿಯು ವಿಎಕ್ಸ್ಐನಲ್ಲಿ ರೂ. 8,87,689ಕ್ಕೆ ಮತ್ತು ಟೂರ್ ಎಂ ಸಿಎನ್‌ಜಿ ಮಾದರಿಯು ರೂ. 8,82,689ಕ್ಕೆ ಖರೀದಿಗೆ ಲಭ್ಯವಿದ್ದು, ಸಿಎನ್‌ಜಿ ಆಯ್ಕೆ ಹೊಂದಿರುವ 1.5-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 103-ಬಿಎಚ್‌ಪಿ ಮತ್ತು 138-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇನ್ನುಳಿದಂತೆ ಸಾಮಾನ್ಯ ಕಾರುಗಳಲ್ಲಿ ಬಹುತೇಕ ಫೀಚರ್ಸ್‌ಗಳನ್ನು ಹೊಸ ಆವೃತ್ತಿಯಲ್ಲೂ ಮುಂದುವರಿಸಲಾಗಿದೆ.

ವ್ಯಯಕ್ತಿಯ ಬಳಕೆಗಾಗಿ ವಿಎಕ್ಸ್ಐ ಸಿಎನ್‌ಜಿಯನ್ನು ಮತ್ತು ವಾಣಿಜ್ಯ ಬಳಕೆಯಾಗಿ ಟೂರ್ ಎಂ ಸಿಎನ್‌ಜಿ ಕಾರನ್ನು ಖರೀದಿ ಮಾಡಬಹುದಾಗಿದ್ದು, ಪ್ರತಿ ಕೆ.ಜಿ ಸಿಎನ್‌ಜಿಗೆ ಎರ್ಟಿಗಾ ಮಾದರಿಯು 26.2ಕಿ.ಮಿ ಮೈಲೇಜ್ ನೀಡುತ್ತದೆ. ಇದು ಸಾಮಾನ್ಯ ಎರ್ಟಿಗಾ ಪೆಟ್ರೋಲ್ ಆವೃತ್ತಿಗಿಂತಲೂ ಅಧಿಕ ಮಟ್ಟದ ಮೈಲೇಜ್ ಕಾರು ಮಾದರಿಯಾಗಿದ್ದು, ಮಾಲಿನ್ಯ ಪ್ರಮಾಣ ಕೂಡಾ ಗಣನೀಯ ಪ್ರಮಾಣದಲ್ಲಿ ತಗ್ಗಿಸುತ್ತದೆ.

ಈ ಮೂಲಕ ಡೀಸೆಲ್ ಎಂಜಿನ್‌ನಲ್ಲಿ ದೊರೆಯುತ್ತಿದ್ದ ಮೈಲೇಜ್ ಪ್ರಮಾಣವನ್ನೇ ಪೆಟ್ರೋಲ್ ಹೈಬ್ರಿಡ್ ಮತ್ತು ಪೆಟ್ರೋಲ್ ಸಿಎನ್‌ಜಿ ವರ್ಷನ್‌ಗಳ ಮೂಲಕ ಒದಗಿಸಲು ಪ್ರಯತ್ನಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಬಿಎಸ್-6 ಜಾರಿಯಾಗುವುದಕ್ಕೂ ಮುನ್ನವೇ ಗ್ರಾಹಕರನ್ನು ಹೊಸ ಕಾರುಗಳತ್ತ ಸೆಳೆಯುವ ವಿಶ್ವಾಸದಲ್ಲಿದೆ.


Click it and Unblock the Notifications