ಓಮ್ನಿ ಮಾರಾಟವನ್ನು ಅಧಿಕೃತವಾಗಿ ಬಂದ್ ಮಾಡಿದ ಮಾರುತಿ ಸುಜುಕಿ..!
ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯೊಂದಿಗೆ ಮುನ್ನುಗ್ಗುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಬಹುಬೇಡಿಕೆಯ ಓಮ್ನಿ ವಾಹನದ ಮಾರಾಟವನ್ನು ಅಧಿಕೃತ ಬಂದ್ ಮಾಡಿರುವುದಾಗಿ ಹೇಳಿಕೊಂಡಿದ್ದು, 35 ವರ್ಷಗಳ ಸುಧೀರ್ಘ ಮಾರಾಟದ ದಾಖಲೆಯನ್ನು ಹೊಂದಿರುವ ಓಮ್ನಿ ಇನ್ನು ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವುದಿಲ್ಲ.

ಹೌದು, ದೇಶಿಯ ಮಾರುಕಟ್ಟೆಯಲ್ಲಿ ಈ ಹಿಂದೆ 1984ರಲ್ಲಿ ಬಿಡುಗಡೆಗೊಂಡಿದ್ದ ಓಮ್ನಿ ವಾಹನವು ಭಾರೀ ಜನಪ್ರಿಯತೆಯೊಂದಿಗೆ ಆಟೋ ಉದ್ಯಮದಲ್ಲಿ ಇಂದಿಗೂ ಬಹುಬೇಡಿಕೆ ವಾಹನವಾಗಿ ಮಾರಾಟಗೊಳ್ಳುತ್ತಿದ್ದು, ಇತ್ತೀಚೆಗೆ ಆಟೋ ಉದ್ಯಮದಲ್ಲಿ ಬದಲಾಗುತ್ತಿರುವ ಪ್ರಮುಖ ಬೆಳವಣಿಗೆಯಿಂದಾಗಿ ಓಮ್ನಿ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಕುತ್ತು ಬಂದಿದೆ.

ದೇಶದಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ವಾಹನಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನದಲ್ಲಿದ್ದು, ಮಾರಾಟಕ್ಕೆ ಲಭ್ಯವಿರುವ 15ಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಬಹುತೇಕ ಮಾದರಿಗಳು ಜನಪ್ರಿಯತೆ ಸಾಧಿಸಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ.

ಆದ್ರೆ ಕಾರುಗಳಲ್ಲಿನ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಮಾರುತಿ ಸುಜುಕಿ ಸಂಸ್ಥೆಗೆ ಇದೀಗ ಹಿನ್ನೆಡೆಯಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಜನಪ್ರಿಯ ಕಾರುಗಳೇ ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿವೆ ಎಂದ್ರೆ ನೀವು ನಂಬಲೇಬೇಕು.

ಕೇಂದ್ರ ಸರ್ಕಾರವು ಇದೇ ವರ್ಷ ಜುಲೈ 1ರಿಂದ ಪ್ರತಿ ಕಾರು ಮಾದರಿಯಲ್ಲೂ ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದರೇ ಮಾತ್ರವೇ ಕಾರು ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಮಾರುತಿ ಸುಜುಕಿಗೆ ಈಗಲೇ ತಳಮಳ ಶುರುವಾಗಿದೆ.

ಇದಲ್ಲದೇ 2018ರ ಅಕ್ಟೋಬರ್‌ನಲ್ಲಿ ನಡೆದಿದ್ದ ಮಾರುತಿ ಸುಜುಕಿ ನಿರ್ಮಾಣದ 15 ಪ್ರಮುಖ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹತ್ತಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷತೆ ಇಲ್ಲದಿರುವುದು ಖರೀದಿಗೆ ಯೋಗ್ಯವಲ್ಲದ ಎಂಬುವುದು ಭಾರೀ ಚರ್ಚಗೆ ಕಾರಣವಾಗಿತ್ತು.

ಕಾರುಗಳು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 4, 3, 2, 1, 0 ಸ್ಟಾರ್ ರೇಟಿಂಗ್ ಬಂದಲ್ಲಿ ಅನುಕ್ರಮವಾಗಿ ಉತ್ತಮ, ಖರೀದಿಗೆ ಯೋಗ್ಯ, ಸಾಧರಣ, ಅಸುರಕ್ಷಿತ ಕಾರು ಮಾದರಿ ಎಂದು ಕರೆಯಲಾಗುತ್ತದೆ.

ಇದರಲ್ಲಿ ಮಾರುತಿ ಸುಜುಕಿ ನಿರ್ಮಾಣದ ಸೆಲೆರಿಯೊ, ಇಗ್ನಿಸ್, ಸ್ವಿಫ್ಟ್, ಡಿಜೈರ್, ಎರ್ಟಿಗಾ, ಬಲೆನೊ, ವಿಟಾರಾ ಬ್ರೆಝಾ, ಸಿಯಾಜ್ ಮತ್ತು ಎಸ್-ಕ್ರಾಸ್ ಕಾರುಗಳು ಮಾತ್ರವೇ ಉತ್ತಮವಾದ ಸುರಕ್ಷಾ ರೇಟಿಂಗ್ ಪಡೆದುಕೊಂಡಿದ್ದು, ಇನ್ನುಳಿದ ಆಲ್ಟೊ, ವ್ಯಾಗನ್ ಆರ್, ಓಮ್ನಿ, ಇಕೋ ಮತ್ತು ರಫ್ತು ವಾಹನ ಮಾದರಿಯಾದ ಜಿಪ್ಸಿ ಕಾರು ರೇಟಿಂಗ್ ಪಾಯಿಂಟ್‌ನಲ್ಲಿ ಸೊನ್ನೆ ಪಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿವೆ.

ವಾಸ್ತಾವವಾಗಿ ಸೊನ್ನೆ ರೇಟಿಂಗ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಲು ವಿದೇಶಿ ಮಾರುಕಟ್ಟೆಗಳಲ್ಲಿ ಅನುಮತಿಯೇ ಇಲ್ಲದಿರುವ ಸಂದರ್ಭದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೊ, ವ್ಯಾಗನ್ ಆರ್ ಕಾರುಗಳನ್ನು ಹಾಟ್ ಚಿಪ್ಸ್‌ನಂತೆ ಮಾರಾಟ ಮಾಡುತ್ತಿರುವುದು ಅಪಾಯಕಾರಿ ಸಂಗತಿ ಅಂದ್ರೆ ತಪ್ಪಾಗುವುದಿಲ್ಲ.
MOST READ: ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿಗೆ ಹೊಸ ಹೆಸರು ನೀಡಿದ್ರೆ 2 ಕಾರು ಫ್ರೀ ಅಂತೆ..!

ಕನಿಷ್ಠ ಮಟ್ಟದ ಸುರಕ್ಷೆತೆಯನ್ನು ನೀಡಲು ಹಿಂದೆ ಮುಂದೆ ನೋಡುವ ಮಾರುತಿ ಸುಜುಕಿಗೆ ಇದೀಗ ಸಂಕಷ್ಟ ಎದುರಾಗಿದ್ದು, 2019ರ ಜುಲೈ 1ರಿಂದ ಜಾರಿಗೆ ಬರಲಿರುವ ಹೊಸ ಕಾಯ್ದೆಯಿಂದ ಸೊನ್ನೆ ರೇಟಿಂಗ್ ಪಡೆದಿರುವ ಕಾರುಗಳು ಮೂಲೆಗುಂಪಾಬೇಕಾದ ಅನಿವಾರ್ಯತೆ ಎದುರಾಗಿದೆ.

ಇಲ್ಲವಾದ್ರೆ, ಗುಣಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿದ ನಂತರವೇ ಮಾರಾಟ ಮಾಡಬಹುದಾದ ಅವಕಾಶವಿದ್ದು, ಇದುವರೆಗೆ ಆಲ್ಟೊ, ವ್ಯಾಗನ್ ಆರ್, ಓಮ್ನಿ, ಇಕೋ ಖರೀದಿ ಮಾಡಿರುವ ಗ್ರಾಹಕರ ಪರಿಸ್ಥಿತಿ ಉಹಿಸಲು ಅಸಾಧ್ಯ.
MOST READ: ಟೊಯೊಟೊ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಮಾರುತಿ ಸುಜುಕಿ ಬಲೆನೊ

ಯಾಕೆಂದ್ರೆ ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ಕನಿಷ್ಠ ಮಟ್ಟದ ಸುರಕ್ಷೆ ಇಲ್ಲದಿರುವ ಕಾರುಗಳಿಂದ ಅಪಘಾತದ ತೀವ್ರತೆ ಮತ್ತಷ್ಟು ಏರಿಕೆಯಾಗಲಿದ್ದು, ಇದೇ ಕಾರಣಕ್ಕೆ ಕಠಿಣ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು ಕನಿಷ್ಠ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿ ಮಾರಾಟ ಮಾಡಿ ಇಲ್ಲವೇ ಕಳಪೆ ಗುಣಮಟ್ಟದ ಕಾರುಗಳನ್ನು ವಾಪಸ್ ಪಡೆಯಿರಿ ಎಂದು ಕಾರು ಉತ್ಪಾದನಾ ಸಂಸ್ಥೆಗಳಿಗೆ ಖಡಕ್ ವಾರ್ನ್ ಮಾಡಿದೆ.

ಹೀಗಾಗಿಯೇ ಕೇಂದ್ರದ ಹೊಸ ಮಾನದಂಡಗಳಿಗೆ ತಲೆದೂಗಿರುವ ಮಾರುತಿ ಸುಜುಕಿ ಸಂಸ್ಥೆಯು ಡೆಡ್ ಲೈನ್‌ಗೂ ಮುನ್ನವೇ ಪ್ರತಿ ಕಾರಿನಲ್ಲೂ ಗುಣಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸುವ ನಿರ್ಧಾರಕ್ಕೆ ಬಂದಿದ್ದು, ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಒಪ್ಪಿಗೆ ಸೂಚಿಸಿದೆ.
MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಓಮ್ನಿಯಲ್ಲಿ ಹೊಸ ತಂತ್ರ ಅಳವಡಿಕೆ ಅಸಾಧ್ಯ..!
ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಸುರಕ್ಷತೆಯಲ್ಲಿ ಸೊನ್ನೆ ಸುತ್ತಿರುವ ಕೆಲವು ಕಾರುಗಳಲ್ಲಿ ಹೊಸ ಸುರಕ್ಷಾ ಸೌಲಭ್ಯಗಳನ್ನು ಒದಗಿಸಿ ಮಾರಾಟ ಮುಂದುವರಿಸುವ ಅವಕಾಶಗಳಿದ್ದು, ಓಮ್ನಿ ವಾಹನಗಳಲ್ಲಿ ಮಾತ್ರ ಈ ಅವಕಾಶ ಇಲ್ಲದಿರುವುದು ಪ್ರಮುಖ ವಿಚಾರವಾಗಿದೆ.

ಯಾಕೆಂದ್ರೆ ಓಮ್ನಿ ವಾಹನದಲ್ಲಿ ಮುಂಭಾಗದ ವಿನ್ಯಾಸವನ್ನು ಸುರಕ್ಷಾ ದೃಷ್ಠಿಯಿಂದ ನೋಡುವುದಾದರೇ ಹೆಚ್ಚು ಅಪಾಯಕಾರಿ ಡಿಸೈನ್ ಹೊಂದಿದ್ದು, ಚಾಲಕ ಸೀಟು ಮತ್ತು ವಾಹನ ಫ್ರಂಟ್ ಗ್ರೀಲ್ ನಡುವಿನ ಅಂತರ ಅತಿ ಕಡಿಮೆ ಇರುವುದು ಅಪಘಾತದ ವೇಳೆ ಹೆಚ್ಚು ಹಾನಿ ಉಂಟು ಮಾಡುತ್ತವೆ.

ಹೀಗಾಗಿ ಹೊಸ ಸುರಕ್ಷಾ ಸೌಲಭ್ಯಗಳಾದ ಏರ್‌ಬ್ಯಾಗ್, ಎಬಿಎಸ್, ಇಬಿಡಿ ಸೌಲಭ್ಯಗಳನ್ನು ಸೇರಿಸಿದರು ಸಹ ಮುಂಭಾಗದ ವಿನ್ಯಾಸ ಸರಿಇಲ್ಲದಿರುವುದು ಮಾರುತಿ ಸಂಸ್ಥೆಗೆ ಸಂಕಷ್ಟ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಓಮ್ನಿ ಉತ್ಪಾದನೆ ಮತ್ತು ಮಾರಾಟಕ್ಕೆ ಬ್ರೇಕ್ ಹಾಕಿ ಮತ್ತೊಂದು ಜನಪ್ರಿಯ ಮಾದರಿಯಾದ ಇಕೋ ವಾಹನದ ಮೇಲೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ.

ಈ ಬಗ್ಗೆ ಮಾರುತಿ ಸುಜುಕಿಯ ಸಂಸ್ಥೆಯ ಚೇರ್‌ಮನ್ ಆರ್.ಸಿ.ಭಾರ್ಗವ್ ಅವರೇ ಮಾಹಿತಿಯನ್ನು ಹಂಚಿಕೊಂಡಿದ್ದು, ಕೇಂದ್ರ ಸರ್ಕಾರದ ಸೂಚನೆಯಂತೆ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕುತ್ತಿರುವುದಾಗಿ ಸುದ್ದಿಸಂಸ್ಥೆಯೊಂದರ ಸಂದರ್ಶನ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಜಿಪ್ಸಿ ಕಾರನ್ನು ಸಹ ಸ್ಥಗಿತಗೊಳಿಸುವ ನೀರಿಕ್ಷೆಯಿದ್ದು, ಮುಂಬರುವ ಮಾರ್ಚ್ ಅಂತ್ಯಕ್ಕೆ ಜಿಪ್ಸಿ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಈ ಹಿಂದೆಯೇ ಮಾರುತಿ ಸುಜುಕಿ ಹೇಳಿಕೊಂಡಿತ್ತು.


Click it and Unblock the Notifications








