ಹೊಸ ವರ್ಷಕ್ಕೆ ಹೊಸ ಬೆಲೆ- ಮಾರುತಿ ಸುಜುಕಿ ಕಾರು ಖರೀದಿ ಇನ್ನು ಬಲುದುಬಾರಿ..!
ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ತನ್ನೆಲ್ಲಾ ಕಾರು ಮಾದರಿಗಳ ಬೆಲೆ ಹೆಚ್ಚಳ ಮಾಡಿದ್ದು, ಜನವರಿ 1ರಿಂದಲೇ ಹೊಸ ದರ ಅನ್ವಯವಾಗುವಂತೆ ಹೊಸ ದರ ಪಟ್ಟಿಯನ್ನು ಜಾರಿಗೆಗೊಳಿಸಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿತ ಮತ್ತು ಕಾರುಗಳ ಬೀಡಿಭಾಗಗಳ ಆಮದು ಮೇಲಿನ ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆ ಕಾರಿನ ಬೆಲೆ ಏರಿಕೆ ಮಾಡಿರುವುದಾಗಿ ಹೇಳಿಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಪ್ರತಿ ಕಾರಿನ ಮೇಲೂ ಕನಿಷ್ಠ ರೂ.10 ಸಾವಿರ ಬೆಲೆ ಹೆಚ್ಚಳ ಮಾಡಿದೆ.

ಕಳೆದ ತಿಂಗಳು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಪ್ರತಿ ಕಾರಿನ ಬೆಲೆಯು ಶೇ.3 ರಷ್ಟು ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ಹಳೆಯ ನಿರ್ಧಾರವನ್ನು ಬದಲಿಸಿದ್ದು, ಸರಾಸರಿಯಾಗಿ ಎಲ್ಲಾ ಕಾರುಗಳ ಮೇಲೂ ರೂ.10 ಸಾವಿರ ಮಾತ್ರ ಹೆಚ್ಚಳ ಮಾಡಿದೆ.

ಇದು ಒಂದು ರೀತಿ ಗ್ರಾಹಕರಿಗೆ ಸಿಹಿಸುದ್ದಿ ಎಂದೇ ಹೇಳಬಹುದಾಗಿದ್ದು, ಒಂದು ವೇಳೆ ಶೇ.3 ರಷ್ಟು ಹೆಚ್ಚಳ ಮಾಡಿದ್ದಲ್ಲಿ ಪ್ರತಿ ಕಾರಿನ ಬೆಲೆಯು ಕನಿಷ್ಠ ಅಂದ್ರು ರೂ. 12 ಸಾವಿರದಿಂದ ರೂ. 30 ಸಾವಿರ ತನಕ ಹೆಚ್ಚಳವಾಗುತ್ತಿದ್ದವು.

ಆದರೂ ಕೂಡಾ ಇದೀಗ ಹೆಚ್ಚಳ ಮಾಡಿರುವ ರೂ. 10 ಸಾವಿರ ಕೂಡಾ ಮಧ್ಯಮ ವರ್ಗದ ಕಾರು ಖರೀದಿದಾರರಿಗೆ ಹೊರೆಯಾಗಿ ಪರಿಣಮಿಸಲಿದ್ದು, ಕಾರಿನ ಇಎಂಐ ಮತ್ತು ಹೆಚ್ಚಳವಾದ ಬೆಲೆಗಳ ಮೇಲಿನ ಬಡ್ಡಿದರವು ಸಹ ಬಿಸಿತುಪ್ಪವಾಗಲಿವೆ.

ಇನ್ನು ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿರುವ ನ್ಯೂ ಜನರೇಷನ್ ಎರ್ಟಿಗಾ ಕಾರುಗಳ ಬೆಲೆಯಲ್ಲೂ ದರಕ್ಕೆ ಅನುಗುಣವಾಗಿ ರೂ.10 ಸಾವಿರ ಹೆಚ್ಚಳವಾಗಿದ್ದು, ಹೊಸ ವರ್ಷದ ಆರಂಭದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಮಾರುತಿ ಸುಜುಕಿ ಶಾಕಿಂಗ್ ಸುದ್ದಿ ನೀಡಿದೆ.

ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಖರ್ಚುಗಳನ್ನು ನಿಭಾಯಿಸಲು ಬೆಲೆ ಏರಿಕೆ ಮಾಡಲಾಗುತ್ತಿದ್ದು, ಮಾರುತಿ ಸುಜುಕಿ ಬೆಲೆ ಹೆಚ್ಚಳ ಮಾಡುವುದಕ್ಕೂ ಮುನ್ನ ಟೊಯೊಟಾ, ಬಿಎಂಡಬ್ಲ್ಯು, ಇಸುಝು ಮೋಟಾರ್ಸ್ ಸಂಸ್ಥೆಗಳು ಈಗಾಗಲೇ ಪ್ರತಿಶತ 2ರಿಂದ 3ರಷ್ಟು ಬೆಲೆ ಹೆಚ್ಚಳ ಮಾಡುವುದಾಗಿ ಹೇಳಿಕೊಂಡಿವೆ.

ಆದ್ರೆ ಇದುವರೆಗೂ ಮಾರುತಿ ಸುಜುಕಿ ಹೊರತುಪಡಿಸಿ ಯಾವುದೇ ಸಂಸ್ಥೆಯು ಬೆಲೆ ಹೆಚ್ಚಳ ಕುರಿತು ಅಧಿಕೃತ ಮಾಹಿತಿ ಬಿಟ್ಟುಕೊಡದಿದ್ದರೂ ಸಹ ಹೊಸ ಕಾರು ಖರೀದಿ ವೇಳೆ ಹೊಸ ದರಪಟ್ಟಿಯೆಂತೆ ಮಾರಾಟ ಮಾಡುತ್ತಿದ್ದು, ಮುಂದಿನ ವಾರವಷ್ಟೇ ಎಲ್ಲಾ ಕಾರು ಉತ್ಪಾದನಾ ಸಂಸ್ಥೆಗಳು ಅಧಿಕೃತ ಮಾಹಿತಿ ಪ್ರಕಟಿಸಲಿವೆ.

ಒಟ್ಟಿನಲ್ಲಿ ಕಾರು ಮಾರಾಟದಲ್ಲಿ ಸದ್ಯ ಶೇ.51ರಷ್ಟು ಮಾರುಕಟ್ಟೆ ಪಾಲುನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಮಾರುತಿ ಸುಜುಕಿ ಸಂಸ್ಥೆಯು ಕಾರು ಬೆಲೆ ಹೆಚ್ಚಳ ಮಾಡುವ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡಿದ್ದ, ಇದು ಕಾರು ಮಾರಾಟದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
MOST READ: ಬಿಡುಗಡೆಗೂ ಮುನ್ನವೇ ಹಾರುವ ಕಾರಿನ ಬೆಲೆ ಪಟ್ಟಿ ಬಿಡುಗಡೆ ಮಾಡಿದ ಪಿಎಲ್-ವಿ ಲಿಬರ್ಟಿ

ಇದರ ಮಧ್ಯೆ ಇದೇ ತಿಂಗಳು 23ರಂದು ನ್ಯೂ ಜನರೇಷನ್ ವ್ಯಾಗನ್ಆರ್ ಕಾರನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಗುರುತರ ಬದಲಾವಣೆ ಹೊಂದಿರುವ ಹೊಸ ಕಾರು ಸ್ಯಾಂಟ್ರೋ ಕಾರಿಗೆ ಭಾರೀ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಪೆಟ್ರೋಲ್, ಸಿಎನ್‍ಜಿ ಮತ್ತು ಎಲ್‍ಪಿಜಿ ಮಾದರಿಯಲ್ಲಿ ಬಿಡುಗಡೆಯಾಗಲಿರುವ ಹೊಸ ವ್ಯಾಗನ್ ಆರ್ ಕಾರು ಈಗಾಗಲೇ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಹೊಸ ತಲೆಮಾರಿನ ಹ್ಯುಂಡೈ ಸ್ಯಾಂಟ್ರೋ ಕಾರಿಗೆ ಟಕ್ಕರ್ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.


Click it and Unblock the Notifications