ವಾಹನ ಮಾರಾಟದಲ್ಲಿ ಸತತ ಕುಸಿತ- ಕಾರು ಉತ್ಪಾದನೆಗೆ ಮತ್ತೆ ಬ್ರೇಕ್ ಹಾಕಿದ ಮಾರುತಿ ಸುಜುಕಿ
ಕಳೆದ 19 ವರ್ಷಗಳಲ್ಲೇ ಮೊದಲ ಬಾರಿಗೆ ಹೊಸ ವಾಹನಗಳ ಮಾರಾಟದಲ್ಲಿ ಭಾರೀ ಹಿನ್ನಡೆ ಅನುಭವಿಸಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಆಟೋ ಉತ್ಪಾದನಾ ವಲಯದ ಚೇತರಿಕೆಗೆ ಕೇಂದ್ರ ಸರ್ಕಾರದ ಹಲವು ಸುಧಾರಣಾ ಕ್ರಮಗಳ ಹೊರತಾಗಿಯೂ ಕಾರು ಮಾರಾಟದಲ್ಲಿ ಸತತ ಕುಸಿತವು ಸ್ಟಾಕ್ ಪ್ರಮಾಣದ ಮೇಲೆ ಪರಿಣಾಮ ಬೀರಿದೆ.

ಇತ್ತೀಚೆಗಷ್ಟೇ ಕಾರು ಮಾರಾಟವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದಲ್ಲದೇ ಉತ್ಪಾದನಾ ಪ್ರಮಾಣವನ್ನು ತಗ್ಗಿಸಿ ಸುಮಾರು 3 ಸಾವಿರ ಉದ್ಯೋಗಿಗಳ ಕಡಿತಗೊಳಿಸಿದ್ದ ಮಾರುತಿ ಸುಜುಕಿಯು ಇದೀಗ ಮತ್ತಷ್ಟು ಕಠಿಣ ಕ್ರಮವನ್ನು ಮುಂದುವರಿಸಲು ಮುಂದಾಗಿದ್ದು, ಸೆಪ್ಟೆಂಬರ್‌ನಲ್ಲಿ ಮತ್ತೆ 2 ದಿನಗಳ ಕಾಲ ಕಾರು ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ದೇಶದ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಮಾರುತಿ ಸುಜುಕಿಯು ದಿನಂಪ್ರತಿ ಸಾವಿರಾರು ಹೊಸ ಕಾರುಗಳ ಉತ್ಪಾದನಾ ಸಾಮಾರ್ಥ್ಯ ಹೊಂದಿದ್ದು, ಎರಡು ದಿನಗಳ ಕಾಲ ಕಾರು ಉತ್ಪಾದನೆ ಸಂಪೂರ್ಣ ಮಾಡಲಾಗುತ್ತಿದೆ.

ಗುಜರಾತ್‌ನಲ್ಲಿರುವ ಕಾರು ಉತ್ಪಾದನಾ ಘಟಕವನ್ನು ಹೊರತುಪಡಿಸಿ ಮನೆಸಾರ್ ಮತ್ತು ಗುರುಗ್ರಾಮ್‌ನಲ್ಲಿ ಕಾರು ಉತ್ಪಾದನಾ ಘಟಕದಲ್ಲಿನ ಉತ್ಪಾದನಾ ಪ್ರಕ್ರಿಯೆಯನ್ನು ತಾತ್ಕಲಿಕವಾಗಿ ನಿಲ್ಲಿಸಲು ಮುಂದಾಗಿದ್ದು, ಆರ್ಥಿಕವಾಗಿ ಹೊರೆಯಾಗುತ್ತಿರುವ ಸ್ಟಾಕ್ ಪ್ರಮಾಣವನ್ನು ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಅಗಸ್ಟ್ ಅವಧಿಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಳೆದ ವರ್ಷದ ಕಾರು ಮಾರಾಟಕ್ಕಿಂತ ಸುಮಾರು 33ರಷ್ಟು ಮಾರಾಟ ಕುಸಿತ ದಾಖಲಿಸಿದ್ದು, ಕೇವಲ 1,11,370 ಕಾರುಗಳನ್ನು ಮಾರಾಟ ಮಾಡುವಲ್ಲಿ ಮಾತ್ರ ಶಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಟಾಕ್ ಉಳಿದಿರುವ ಪ್ರಮುಖ ಕಾರು ಮಾದರಿಗಳು ಆರ್ಥಿಕವಾಗಿ ಮತ್ತಷ್ಟು ಹೊರೆಯಾಗಿ ಪರಿಣಮಿಸುತ್ತಿದ್ದು, ಆಫರ್‌ಗಳ ಮೇಲೆ ಸ್ಟಾಕ್ ಪ್ರಮಾಣವನ್ನು ಕರಗಿಸಲು ಹರಸಾಹಸ ಪಡುತ್ತಿದೆ. ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಮುಂಬರುವ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳು ನಿಷೇಧಗೊಳ್ಳಲಿದ್ದು, ಹೊಸ ನಿಯಮ ಜಾರಿಗೆ ಬರುವ ಮೊದಲೇ ಹಳೆಯ ವಾಹನಗಳನ್ನು ಸಂಪೂರ್ಣವಾಗಿ ಮಾರಾಟ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಹೀಗಾಗಿ ಬೇಡಿಕೆಗೆ ತಕ್ಕಂತೆ ಮಾತ್ರವೇ ಸ್ಟಾಕ್ ನೀತಿ ಅನುಸರಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಪೆಟ್ರೋಲ್ ಮಾದರಿಗಳನ್ನು ಬಿಎಸ್-6 ನಿಯಮದಂತೆಯೇ ಉತ್ಪಾದನೆ ಮಾಡುತ್ತಿದ್ದು, ಡೀಸೆಲ್ ಆವೃತ್ತಿಗಳ ಉತ್ಪಾದನೆಯಲ್ಲಿ ಕಠಿಣ ನಿಲವು ತೆಗೆದುಕೊಂಡಿದೆ.

ಬಿಎಸ್-6 ನಿಯಮಕ್ಕೆ ಉನ್ನತೀಕರಣ ಸಾಧ್ಯವಿಲ್ಲದ 1.3-ಲೀಟರ್ ಸಾಮಾರ್ಥ್ಯ ಡೀಸೆಲ್ ಎಂಜಿನ್ ಅನ್ನು ಮಾರಾಟದಿಂದ ಕೈಬಿಡಲಾಗುತ್ತಿದ್ದು, ಪೆಟ್ರೋಲ್, ಸ್ಮಾರ್ಟ್ ಹೈಬ್ರಿಡ್, ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಇನ್ನು ಸತತ ಕುಸಿತದಿಂದಾಗಿ ಕಂಗೆಟ್ಟಿರುವ ಭಾರತೀಯ ಆಟೋಮೊಬೈಲ್ ಉದ್ಯಮ ಚೇತರಿಕೆಗಾಗಿ ಹಲವು ಸುತ್ತಿನ ಮಾತಕತೆಯ ನಂತರ ಜಿಎಸ್‌ಟಿ ಇಳಿಕೆ ಬಗ್ಗೆ ಸುಳಿವು ನೀಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸದ್ಯ ಹೊಸ ಇಂಧನ ಆಧರಿತ ವಾಹನಗಳ ಮೇಲೆ ವಿಧಿಸಲಾಗುತ್ತಿರುವ ಶೇ.28 ಜಿಎಸ್‌ಟಿ ಪ್ರಮಾಣವನ್ನು ಶೀಘ್ರವೇ ಜಾರಿಗೆ ಬರುವಂತೆ ಹೊಸ ದರಗಳನ್ನು ಪ್ರಕಟಿಸುವುದಾಗಿ ಭರವಸೆ ನೀಡಿದ್ದಾರೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಆಟೋಮೊಬೈಲ್ ಕ್ಷೇತ್ರದ ಕುಸಿತವು ದೇಶದ ಒಟ್ಟಾರೆ ಆರ್ಥಿಕ ಕ್ಷೇತ್ರದ ಕುಸಿತದ ಪ್ರತಿಬಿಂಬವಾಗಿದ್ದು, ಆಟೋ ಉದ್ಯಮವನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿರುವ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ಪುನರುಚ್ಚರಿಸಿದ್ದಾರೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಇದರ ಜೊತೆಗೆ ಇಂಧನ ಆಧರಿತ ವಾಹನಗಳನ್ನು ನಿರ್ಬಂಧಿಸುವ ಸಂಬಂಧ ಕಳೆದ ಕೆಲ ದಿನಗಳ ಹಿಂದೆ ಜಾರಿಗೆ ತರಲಾಗಿದ್ದ ನೋಂದಣಿ ಶುಲ್ಕ ಹೆಚ್ಚಳ, ದುಬಾರಿ ಸೆಸ್ ಸೇರಿದಂತೆ ಹಲವು ಕಠಿಣ ಕ್ರಮಗಳು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದ್ದು, ಜಿಎಸ್‌ಟಿ ಪ್ರಮಾಣವನ್ನು ತಗ್ಗಿಸಿದ್ದಲ್ಲಿ ಹೊಸ ವಾಹನಗಳ ಬೆಲೆಯು ಗಣನೀಯವಾಗಿ ತಗ್ಗಲಿದೆ ಎಂದಿದ್ದಾರೆ.

ಇದಲ್ಲದೇ ಭವಿಷ್ಯ ವಾಹನಗಳ ಮಾದರಿಯಾದ ಎಲೆಕ್ಟ್ರಿಕ್ ವಾಹನ ಮಾದರಿಗಳಿಗೆ ವಿಶೇಷ ಆದ್ಯತೆಯನ್ನು ಮುಂದುವರಿಸುವ ಬಗ್ಗೆಯು ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವರು, ಹೆಚ್ಚುತ್ತಿರುವ ಮಾಲಿನ್ಯ ತಡೆಗಾಗಿ ಹಂತ ಹಂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಕಡಿತಗೊಳಿಸುವುದು ನಿಶ್ಚಿತ ಎಂದಿದ್ದಾರೆ. ಹೀಗಾಗಿ ಸದ್ಯಕ್ಕೆ ಎಲೆಕ್ಟ್ರಿಕ್ ವಾಹನಗಳ ಜೊತೆ ಜೊತೆಗೆ ಬಿಎಸ್-4 ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟ ಮುಂದುವರಿಯಲಿದ್ದು, 2020 ಏಪ್ರಿಲ್ 1ರ ನಂತರ ಬಿಎಸ್-6 ನಿಯಮ ಜಾರಿಗೆಯಾಗಲಿದೆ ಎಂದಿದ್ದಾರೆ.

ಇದರಿಂದ ಸದ್ಯ ತಲೆದೊರಿರುವ ಆರ್ಥಿಕ ಕುಸಿತವು ಸರಿದಾರಿಗೆ ಬರಲು ಇನ್ನು ಕೆಲವು ತಿಂಗಳು ಕಾಲ ಬೇಕಾಗಬಹುದು ಎನ್ನಲಾಗುತ್ತಿದ್ದು, ಬಿಎಸ್-6 ಪ್ರೇರಿತ ಹೊಸ ಮಾದರಿಯ ವಾಹನಗಳ ಖರೀದಿಯ ಯೋಜನೆಗಳು ಸಹ ಇಂತಹ ಸಂದರ್ಭ ಸೃಷ್ಠಿಗೆ ಪರೋಕ್ಷ ಕಾರಣವಾಗಿರುವ ಬಗ್ಗೆ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications