ಭಾರತದಲ್ಲಿ ಅನಾವರಣಗೊಳ್ಳಲು ಸಜ್ಜಾದ ಟಾಟಾ ಹೊಸ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?
ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಯೋಜನೆಗಳೊಂದಿಗೆ ಉತ್ತಮ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದನೆ ಮಾಡುತ್ತಿದ್ದು, ಜನಪ್ರಿಯ ಟಾಟಾ ಮೋಟಾರ್ಸ್ ಕೂಡಾ ಈ ನಿಟ್ಟಿನಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಎಲೆಕ್ಟ್ರಿಕ್ ಕಾರುಗಳ ನಿರ್ಮಾಣಕ್ಕಾಗಿ ಈಗಾಗಲೇ ಚಾಲನೆ ನೀಡಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಹೊಸ ಇವಿ ಕಾರು ಮಾದರಿಯೊಂದನ್ನು ಅಭಿವೃದ್ಧಿ ಮಾಡಿದೆ. ಈ ಹಿಂದೆ ಜಿನೆವಾದಲ್ಲಿ ನಡೆದ 2018ರ ಆಟೋ ಮೇಳದಲ್ಲೇ ಹೊಸ ಕಾರನ್ನು ಪ್ರದರ್ಶನ ಮಾಡಿದ್ದ ಟಾಟಾ ಸಂಸ್ಥೆಯು ಇದೀಗ ಅದೇ ಕಾರನ್ನು ಭಾರತದಲ್ಲೂ ಕೂಡಾ ಮುಂದಿನ ಕೆಲವೇ ದಿನಗಳಲ್ಲಿ ಪ್ರದರ್ಶನ ಮಾಡುವುದಾಗಿ ಹೇಳಿಕೊಂಡಿದೆ.

ಹೊಸ ಎಲೆಕ್ಟ್ರಿಕ್ ಕಾರನ್ನು ಇ ವಿಷನ್ ಎನ್ನುವ ಹೆಸರಿನೊಂದಿಗೆ ಅಭಿವೃದ್ಧಿ ಮಾಡಿರುವ ಟಾಟಾ ಸಂಸ್ಥೆಯು, ವಿಶ್ವಾದ್ಯಂತ ಜನಪ್ರಿಯಗೊಳ್ಳುತ್ತಿರುವ ಟೆಸ್ಲಾ ಕಾರು ಮಾದರಿಯಲ್ಲೇ ಹೊಸ ಇ ವಿಷನ್ ಕಾರನ್ನು ಪರಿಚಯಿಸುತ್ತಿರುವುದಾಗಿ ಹೇಳಿಕೊಂಡಿದೆ.
ಸದ್ಯ ಟಾಟಾ ಸಂಸ್ಥೆಯು ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಕಾರುಗಳನ್ನು ಅಭಿವೃದ್ಧಿ ಮಾಡುತ್ತಿದ್ದು, ಕಾರುಗಳ ಉತ್ಪಾದನೆಗಾಗಿ ಓ ಮೇಗಾ ಮತ್ತು ಆಲ್ಫಾ ಎನ್ನುವ ಎರಡು ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಕಾರುಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಹ್ಯಾರಿಯರ್ ಕಾರು ಓ ಮೇಗಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲೇ ಸಿದ್ದವಾಗಿದ್ದು, ಇ ವಿಷನ್ ಕಾರುಗಳನ್ನು ಸಹ ಓ ಮೇಗಾ ಕಾರು ಉತ್ಪಾದನಾ ಶೈಲಿಯಲ್ಲೇ ಸಿದ್ದಗೊಳಿಸಿರುವುದಾಗಿ ಟಾಟಾ ಎಂಡಿ ಗುಂಟೆರ್ ಬುಟ್ಸ್ಚೆಕ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಆದ್ರೆ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಕುರಿತಾದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿರುವ ಗುಂಟೆರ್ ಬುಟ್ಸ್ಚೆಕ್ ಅವರು ಮುಂದಿನ ಕೆಲವೇ ದಿನಗಳಲ್ಲಿ ಹೊಸ ಇ ವಿಷನ್ ನಿಮ್ಮ ಮುಂದೆ ಇರಲಿದ್ದು, ಇದರ ಹೊರತಾಗಿ ಹೆಚ್ಚಿನ ಮಾಹಿತಿ ನಾನು ನೀಡಲಾರೆ ಎಂದಿದ್ದಾರೆ.

ಇನ್ನು ಮಾಹಿತಿಗಳ ಪ್ರಕಾರ, ಹೊಸ ಇ ವಿಷನ್ ಎಲೆಕ್ಟ್ರಿಕ್ ಕಾರುಗಳಲ್ಲಿ ಸಿಲಿಂಡ್ರಕಲ್-ಸೆಲ್ ಲಿಥೀಯಂ ಅಯಾನ್ ಬ್ಯಾಟರಿ ಹೊಂದಿದ್ದು, ಇವು ಪ್ರತಿ ಚಾರ್ಜಿಂಗ್‌ಗೆ ಬರೋಬ್ಬರಿ 300ಕಿಮಿ ಮೈಲೇಜ್ ಹಿಂದಿರುಗಿಸಬಲ್ಲವು ಎಂದು ಹೇಳಲಾಗಿದೆ.
ಇದಲ್ಲದೇ ಟಾಟಾ ಕಾರುಗಳಲ್ಲಿ ಪ್ರತಿ ಚಾರ್ಜಿಂಗ್‌ಗೆ 400 ಕಿಮಿ ಮೈಲೇಜ್ ಒದಗಿಸಬಲ್ಲ ಸುಧಾರಿತ ಬ್ಯಾಟರಿ ಆವಿಷ್ಕಾರ ಬಗ್ಗೆಯೂ ಸುಳಿವು ನೀಡಿರುವ ಗುಂಟೆರ್ ಬುಟ್ಸ್ಚೆಕ್, ಬಿಡುಗಡೆಗಾಗಿ ಸಿದ್ದವಾಗಿರುವ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಮತ್ತು ನಿಸ್ಸಾನ್ ಲೀಫ್ ಎಲೆಕ್ಟ್ರಿಕ್ ಕಾರುಗಳು ಪ್ರತಿಸ್ಪರ್ಧಿಯಾಗಲಿದೆ.

ಜೊತೆಗೆ ಪ್ರೀಮಿಯಂ ಅಂಶಗಳನ್ನು ಹೊಂದಿರುವ ಟಾಟಾ ಇವಿ ಸೆಡಾನ್ ಕಾರುಗಳು ಸಿ ಸೆಗ್ಮೆಂಟ್ ಮಾದರಿಯಲ್ಲಿ ಅತ್ಯುತ್ತಮ ಬೇಡಿಕೆ ಹೊಂದುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಹ್ಯುಂಡೈ ವೆರ್ನಾ, ಮಾರುತಿ ಸುಜುಕಿ ಸಿಯಾಜ್, ಹೋಂಡಾ ಸಿಟಿ, ಟೊಯೊಟಾ ಯಾರಿಸ್ ಕಾರುಗಳಿಗೆ ಇದು ಸಮವಾಗಿರಲಿದೆ ಎಂಬ ಮಾಹಿತಿ ಇದೆ. ಆದರೂ ಕೂಡಾ ಹೊಸ ಕಾರಿನ ಬೆಲೆ ಬಗ್ಗೆ ಯಾವುದೇ ಮಾಹಿತಿಯಿಲ್ಲ.
ಈ ಮೂಲಕ ಭವಿಷ್ಯದ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸಲು ಹವಣಿಸುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು, ಇದೀಗ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ನೀಡಬಲ್ಲ ಬ್ಯಾಟರಿ ತಂತ್ರಜ್ಞಾನ ಆವಿಷ್ಕಾರಕ್ಕಾಗಿ ವಿಶೇಷ ಆಸಕ್ತಿ ತೋರುತ್ತಿದೆ.


Click it and Unblock the Notifications








