ಹೊಸ ಟ್ರಾಫಿಕ್ ರೂಲ್ಸ್ ಜಾರಿ ನಂತರ ಬೆಂಗಳೂರಿನಲ್ಲಿ ಸಂಗ್ರಹವಾದ ದಂಡ ಎಷ್ಟು ಗೊತ್ತಾ?
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರ್ ಕಾಯ್ದೆ ಅನುಷ್ಠಾನದ ನಂತರ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ ವಾಹನ ಸವಾರರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಲಾಗುತ್ತಿದ್ದು, ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 3 ಸಾವಿರ ಪ್ರಕರಣಗಳಿಂದ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಹೊಸ ಮೋಟಾರ್ ಕಾಯ್ದೆ ಜಾರಿಗೆ ಬಂದ ಕ್ಷಣದಿಂದಲೇ ಫೀಲ್ಡ್‌ಗೆ ಇಳಿದಿರುವ ಟ್ರಾಫಿಕ್ ಪೊಲೀಸರು ಹೊಸ ಕಾಯ್ದೆ ಅಡಿ ದಂಡವಿಧಿಸುತ್ತಿದ್ದು, ಕೇವಲ 2 ದಿನಗಳ ಅವಧಿಯಲ್ಲಿ ಲಕ್ಷ ಲಕ್ಷ ದಂಡ ವಸೂಲಿ ಮಾಡಲಾಗಿದೆ. ಭರ್ಜರಿ ದಂಡಗಳ ಹೊರತಾಗಿಯೂ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಂದ ರೂ.31 ಲಕ್ಷ ದಂಡ ವಸೂಲಿ ಮಾಡಲಾಗಿದ್ದು, ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ವಾಹನ ಸವಾರರು ಹೊಸ ದಂಡದ ಮೊತ್ತ ನೋಡಿ ಶಾಕ್ ಆಗಿದ್ದಾರೆ.

ಮೋಟಾರ್ ವೆಹಿಕಲ್ ಕಾಯ್ದೆಗೆ ಕೆಲವು ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರವು ಪ್ರಸ್ತುತ ಇರುವ ದಂಡಗಳ ಮೊತ್ತದಲ್ಲಿ ಭಾರೀ ಪ್ರಮಾಣದ ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ ಕೆಲವು ಪ್ರಕರಣಗಳ ಮೇಲೆ ಗರಿಷ್ಠ ಪ್ರಮಾಣದ ದಂಡಗಳನ್ನು ವಿಧಿಸಲಾಗಿದೆ. ಹೀಗಾಗಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸುವಂತ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರಿನಲ್ಲಿ ಮಾತ್ರವಲ್ಲದೇ ದೇಶದ ವಿವಿಧ ನಗರಗಳಲ್ಲೂ ದೊಡ್ಡ ಮೊತ್ತದ ದಂಡ ಸಂಗ್ರಹ ಮಾಡಲಾಗಿದ್ದು, ಕೆಲವು ಕಡೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಲಾರಿ ಚಾಲಕರಿಂದ ಮತ್ತು ಕಾರು ಮಾಲೀಕರಿಂದ ರೂ.70 ಸಾವಿರದಿಂದ 80 ಸಾವಿರದಷ್ಟು ದಂಡ ವಿಧಿಸಲಾಗಿದೆ. ಹಾಗಾದ್ರೆ ಹೊಸ ನಿಯಮದ ಪ್ರಕಾರ ಯಾವ ಪ್ರಕರಣಕ್ಕೆ ಎಷ್ಟು ವಿಧಿಸಲಾಗಿದೆ ಎನ್ನುವ ಮಾಹಿತಿ ಮುಂದೆ ತಿಳಿಯಿರಿ.

ಸ್ಪೀಡ್ ಡ್ರೈವಿಂಗ್
ನಗರ ಪ್ರದೇಶಗಳಲ್ಲಿ ದಿನನಿತ್ಯದ ವಾಹನ ದಟ್ಟಣೆ ಮಧ್ಯೆದಲ್ಲೂ ಬಹುತೇಕ ವಾಹನ ಸವಾರರು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಪ್ರಯಾಣಕ್ಕೆ ಮುಂದಾಗುತ್ತಾರೆ. ಇದು ಅಪಘಾತಗಳಿಗೆ ಮೊದಲ ಹೆಜ್ಜೆಯಾಗಿದ್ದು, ವೇಗವಾಗಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದಲ್ಲಿ ರೂ.1 ಸಾವಿರ ದಂಡ ಪಾವಸಿಬೇಕಾಗುತ್ತೆ.

ರ‍್ಯಾಶ್ ಡ್ರೈವಿಂಗ್
ಇಂದಿನ ಯುವಕರಿಗೆ ರ‍್ಯಾಶ್ ಡ್ರೈವ್ ಮಾಡುವುದು ಅಂದ್ರೆ ಒಂದು ಥರಾ ಕ್ರೇಜ್. ಆದ್ರೆ ಇದರಿಂದ ಅದೆಷ್ಟೋ ಅಮಾಯಕರು ಪ್ರಾಣಕಳೆದುಕೊಂಡಿದ್ದಾರೆ. ರ‍್ಯಾಶ್ ಡ್ರೈವಿಂಗ್ ವಿರುದ್ಧ ಇದೀಗ ಕಠಿಣ ಕ್ರಮ ಜರಗಿಸಲಾಗುತ್ತಿದ್ದು, ರ‍್ಯಾಶ್ ಡ್ರೈವಿಂಗ್ ವೇಳೆ ಒಂದನೇ ಬಾರಿ ಸಿಕ್ಕಿಬಿದ್ದಲ್ಲಿ ರೂ.1 ಸಾವಿರ, 2ನೇ ಬಾರಿ ಸಿಕ್ಕಿಬಿದ್ದಲ್ಲಿ 2 ಸಾವಿರ ಹಾಗೂ 3ನೇ ಬಾರಿ ಸಿಕ್ಕಿಬಿದ್ದಲ್ಲಿ ಚಾಲನಾ ಪರವಾನಿಗೆಯನ್ನೇ ರದ್ದುಗೊಳಿಸಲಾಗುತ್ತದೆ.

ಒಂದು ವೇಳೆ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಗೊಳಿಸಿದ ನಂತರವೂ ವಾಹನ ಚಾಲನೆಗೆ ಮುಂದಾದಲ್ಲಿ ಜೈಲಿಗೂ ಹೋಗುವ ಪರಿಸ್ಥಿತಿ ಎದುರಾಗಬಹುದಾಗಿದ್ದು, ಇಲ್ಲವೇ ಭಾರೀ ಪ್ರಮಾಣದ ದಂಡವನ್ನು ತೆರಬೇಕಾಗುತ್ತೆ. ಹೀಗಾಗಿ ರ‍್ಯಾಶ್ ಡ್ರೈವಿಂಗ್ ಮಾಡುವ ಹುಚ್ಚು ಸಹವಾಸಕ್ಕೆ ಇಂದೇ ಗುಡ್ ಬೈ ಹೇಳುವುದು ಒಳಿತು.
MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಚಾಲನೆ ವೇಳೆ ಮೊಬೈಲ್ ಬಳಕೆ
'ಒಂದು ಕೈಯಲ್ಲಿ ಸ್ಟಿರಿಂಗ್ ಇನ್ನೊಂದು ಕೈಯಲ್ಲಿ ಮೊಬೈಲ್ ಫೋನ್' ಇದು ಎಲ್ಲಾ ಕಡೆಗೂ ಕಂಡುಬರುವ ಸಾಮಾನ್ಯ ದೃಶ್ಯ. ಆದ್ರೆ ಇದರಿಂದ ಆಗುವ ಅನಾಹುತಗಳು ಮಾತ್ರ ಅಷ್ಟಿಷ್ಟಲ್ಲ. ಹೀಗಾಗಿ ಇನ್ಮುಂದೆ ಮೊಬೈಲ್‌ನಲ್ಲಿ ಹಾಯ್ ಆಗಿ ಮಾತನಾಡಿಕೊಂಡು ಚಾಲನೆ ಮಾಡುವ ಪ್ರವೃತ್ತಿಯನ್ನು ಬಿಟ್ಟುಬಿಡುವುದು ಎಲ್ಲರಿಗೂ ಒಳ್ಳೆಯದು.
MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಒಂದು ವೇಳೆ ಮೊಬೈಲ್ ಬಳಸಿದ್ರೆ ಎನಾಗುತ್ತೆ ಎನ್ನುವ ಹುಚ್ಚು ಧೈರ್ಯವಿದ್ದಲ್ಲಿ ಜೇಬು ಗಟ್ಟಿಯಾಗಿರಲಿ. ಯಾಕೆಂದ್ರೆ ಹೊಸ ನಿಯಮದನ್ವಯ ಒಂದೇ ಬಾರಿ ಚಾಲನೆ ವೇಳೆ ಮೊಬೈಲ್ ಬಳಸಿ ಸಿಕ್ಕಿಬಿದ್ದರೆ ರೂ.1 ಸಾವಿರ, 2ನೇ ಬಾರಿ ಸಿಕ್ಕಿಬಿದ್ದಲ್ಲಿ 2 ಸಾವಿರ ಮತ್ತು ಮೂರನೇ ಬಾರಿಗೂ ಸಿಕ್ಕಿಬಿದ್ದಲ್ಲಿ ಅಧಿಕ ಮೊತ್ತದ ದಂಡದ ಜೊತೆಗೆ ಲೈಸೆನ್ಸ್ ಕೂಡಾ ಕೆಲದಿನಗಳ ಮಟ್ಟಿಗೆ ರದ್ದಾಗುತ್ತೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ವಿಮೆ ಇಲ್ಲದೇ ವಾಹನ ಚಾಲನೆ
ಪ್ರತಿಯೊಂದು ವಾಹನಕ್ಕೂ ಮೂರನೇ ವ್ಯಕ್ತಿ(ಥರ್ಡ್ ಪಾರ್ಟಿ) ಇನ್ಸುರೆನ್ಸ್ ಹೊಂದಿರುವುದು ಈಗಾಗಲೇ ಕಡ್ಡಾಯವಾಗಿದ್ದು, ಅಪಘಾತಗಳ ಸಂದರ್ಭದಲ್ಲಿ ಇದು ಗಾಯಾಳು ಅಥವಾ ಸಾವನ್ನಪ್ಪಿದ ಬಲಿಪಶುಗೆ ಪರಿಹಾರ ಒದಗಿಸಲು ಸಹಕಾರಿಯಾಗಿದೆ. ಹೀಗಾಗಿ ನಿಗದಿತ ಸಮಯದಲ್ಲಿ ಇನ್ಸುರೆನ್ಸ್ ಖರೀದಿಸಿ ಇಲ್ಲವಾದ್ರೆ ರೂ.1 ಸಾವಿರ ದಂಡ ಖಾಯಂ.

ರಾಂಗ್ ಪಾರ್ಕಿಂಗ್
ಹೆಚ್ಚುತ್ತಿರುವ ಹೊಸ ವಾಹನಗಳ ಸಂಖ್ಯೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಅತಿಯಾದ ಟ್ರಾಫಿಕ್ ದಟ್ಟಣೆ ಕಂಡುಬರುತ್ತಿದ್ದು, ಇದಕ್ಕೆ ಪ್ರಮುಖ ಕಾರಣವೇ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಪಾರ್ಕ್ ಮಾಡುವುದು ಒಂದಾಗಿದೆ. ಹೀಗಾಗಿ ರಾಂಗ್ ಸೈಡ್‌ನಲ್ಲಿ ಪಾರ್ಕ್ ಮಾಡುವ ವಾಹನಗಳಿಗೆ ರೂ.1 ಸಾವಿರ ದಂಡ ವಿಧಿಸಲಾಗುತ್ತಿದೆ.

ಹೆಲ್ಮೆಟ್‌ಯಿಲ್ಲದೇ ಚಾಲನೆ ಮತ್ತು ಸಿಗ್ನಲ್ ಜಂಪ್
ಬಹುತೇಕ ಬೈಕ್ ಸವಾರರು ಟ್ರಾಫಿಕ್ ಪೊಲೀಸರು ಇರುವ ಕಡೆಗಳಲ್ಲಿ ಮಾತ್ರವೇ ಹೆಲ್ಮೆಟ್ ಬಳಕೆ ಮಾಡುತ್ತಾರೆ. ಆದ್ರೆ ನಮ್ಮದೇ ಜೀವ ಕಾಪಾಡಲು ಇರುವ ಹೆಲ್ಮೆಟ್ ಬಳಕೆ ಮಾಡದೇ ಸಿಕ್ಕಿಬಿದ್ದಲ್ಲಿ ಈ ಹಿಂದೆ ಇದ್ದ ರೂ.100 ದಂಡವನ್ನು ಇದೀಗ ರೂ.500ಕ್ಕೆ ಏರಿಕೆ ಮಾಡಲಾಗಿದೆ.

ಹಾಗೆಯೇ ಸಿಗ್ನಲ್ ಜಂಪ್ ಪ್ರಕರಣಗಳನ್ನು ಕೂಡಾ ಗಂಭೀರವಾಗಿ ಪರಿಣಮಿಸಿರುವ ಟ್ರಾಫಿಕ್ ಪೊಲೀಸರು ಸಿಸಿಟಿವಿ ಮೂಲಕ ಸಿಗ್ನಲ್ ಜಂಪ್ ಪ್ರಕರಣಗಳನ್ನು ಹತ್ತಿಕ್ಕಲು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದು, ದಂಡದ ಮೊತ್ತವನ್ನು ರೂ.100ರಿಂದ ರೂ.500ಕ್ಕೆ ಏರಿಸಲಾಗಿದೆ.

ಲೈನೆಸ್ಸ್ ಇಲ್ಲದೆಯೇ ವಾಹನ ಚಾಲನೆ
ಅಧಿಕೃತವಾಗಿ ಚಾಲನಾ ಪರವಾನಿಗೆ ಪಡೆಯದೇ ವಾಹನಗಳನ್ನು ಚಾಲನೆ ಮಾಡುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಲೆಸೆನ್ಸ್ ಹೊಂದದೇ ವಾಹನ ಚಾಲನೆಗೆ ಮುಂದಾದರೆ ರೂ.1 ಸಾವಿರ ದಂಡ ವಿಧಿಸಲಾಗುತ್ತಿದೆ. ಹಾಗೆಯೇ ಅಪ್ರಾಪ್ತರ ಕೈಗೆ ವಾಹನಗಳನ್ನು ನೀಡುವ ಪೋಷಕರಿಗೂ ಭರ್ಜರಿ ದಂಡವನ್ನು ವಿಧಿಸಲಾಗುತ್ತಿದ್ದು, ಪದೇ ಪದೇ ತಪ್ಪು ಕಂಡುಬಂದಲ್ಲಿ ಜೈಲಿಗೂ ಹೋಗಬೇಕಾದ ಪರಿಸ್ಥಿತಿ ಎದುರಾಗಬಹುದು.

ಆ್ಯಂಬುಲೆನ್ಸ್‌ಗೆ ಅಡ್ಡಿ
ರೋಗಿಗಳನ್ನು ನಿಗದಿತ ಸಮಯಕ್ಕೆ ಆಸ್ಪತ್ರೆಗಳಿಗೆ ಸೇರಿಸುವಲ್ಲಿ ಆ್ಯಂಬುಲೆನ್ಸ್‌ಗಳ ಪಾತ್ರ ದೊಡ್ಡದು. ಆದ್ರೆ ರೋಗಿಗಳ ಆಕ್ರಂದನಕ್ಕೂ ಮರುಗದ ಕೆಲವರು ಆ್ಯಂಬುಲೆನ್ಸ್‌ಗೂ ದಾರಿ ಮಾಡಿಕೊಡದೇ ಅಡ್ಡಿಪಡಿಸುವ ಅದೆಷ್ಟೋ ಪ್ರಕರಣಗಳು ದಿನಂಪ್ರತಿ ನಡೆಯುತ್ತಿರುತ್ತವೆ. ಹೀಗಾಗಿ ಆ್ಯಂಬುಲೆನ್ಸ್‌ಗಳಿಗೆ ಅಡ್ಡಿಪಡಿಸುವ ವಾಹನ ಸವಾರರಿಗೆ ರೂ.10 ಸಾವಿರ ತನಕ ದಂಡವಿಧಿಸುವ ಅವಕಾಶವಿದೆ.

ಕುಡಿದು ವಾಹನ ಚಾಲನೆ
ವಿಕೇಂಡ್ ಬಂತೂ ಅಂದ್ರೆ ಸಾಕು ಎಲ್ಲೆಲ್ಲೂ ಎಣ್ಣೆ ಗಮತ್ತು ಇದ್ದೆ ಇರುತ್ತೆ. ಅದರಲ್ಲೂ ಕುಡಿದು ನಂತರ ವಾಹನ ಚಾಲನೆ ಮಾಡುವುದು ಕೂಡಾ ಒಂದು ಕ್ರೇಜ್ ಆಗಿ ಮಾರ್ಪಾಟ್ಟಿದ್ದು, ಇನ್ಮುಂದೆ ಕುಡಿದು ಸಿಕ್ಕಿಬಿದ್ದಲ್ಲಿ ರೂ. 10 ಸಾವಿರ ದಂಡದೊಂದಿಗೆ ಜೈಲುವಾಸವನ್ನು ಅನುಭವಿಸಬೇಕಾಗುತ್ತದೆ.

ಇನ್ನು ತ್ರಿಬಲ್ ರೈಡಿಂಗ್, ಕಾನೂನು ಬಾಹಿರವಾಗಿ ವಾಹನಗಳನ್ನು ಮಾಡಿಫೈ ಮಾಡುವುದು, ಚಾಲನೆ ವೇಳೆ ಇಯರ್ ಫೋನ್ ಬಳಕೆ ಮತ್ತು ಫುಟ್‌ಪಾತ್‌ಗಳ ಮೇಲೆ ವಾಹನಗಳ ಚಾಲನೆ ಸೇರಿದಂತೆ ವಿವಿಧ ಮಾದರಿಯ ಸಂಚಾರಿ ನಿಯಮ ಉಲ್ಲಂಘನೆಗಳ ವಿರುದ್ಧ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದ್ದು, ಯಾವುದೇ ಕಾರಣಕ್ಕೂ ನೀವು ಕೂಡಾ ಸಂಚಾರಿ ನಿಯಮಗಳನ್ನು ಮೀರಿ ದಂಡಕ್ಕೆ ಗುರಿಯಾಗಬೇಡಿ.


Click it and Unblock the Notifications








