ಬಿಡುಗಡೆಯ ಸನಿಹದಲ್ಲಿರುವ ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್ ಕಾರಿನಿಂದ ರೋಡ್ ಟೆಸ್ಟ್
ರೆನಾಲ್ಟ್ ಇಂಡಿಯಾ ಸಂಸ್ಥೆಯು ಮೊನ್ನೆಯಷ್ಟೇ ತನ್ನ ಬಹುನೀರಿಕ್ಷಿತ ಟ್ರೈಬರ್ ಎಂಪಿವಿ ಕಾರು ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆಗಾಗಿ ಸಿದ್ದಗೊಳಿಸುತ್ತಿದ್ದು, ಇದರ ಮಧ್ಯೆ ಕ್ವಿಡ್ ಫೇಸ್‌ಲಿಫ್ಟ್ ಮತ್ತು ಕ್ವಿಡ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಸಹ ಬಿಡುಗಡೆಗೊಳಿಸುವ ಉದ್ದೇಶದಿಂದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ.

ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತು ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ಪರ್ಯಾಯ ಇಂಧನ ಬಳಕೆಯ ವಾಹನಗಳತ್ತ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಮುಖ ಮಾಡುತ್ತಿದ್ದು, ಭವಿಷ್ಯದ ವಾಹನ ಮಾದರಿಗಳಾದ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆಯಲ್ಲಿ ಇದೀಗ ಹೊಸದೊಂದು ಕ್ರಾಂತಿ ಶುರುವಾಗಿದೆ. ಈ ನಿಟ್ಟಿನಲ್ಲಿ ರೆನಾಲ್ಟ್ ಕೂಡಾ ಹೊಸ ಯೋಜನೆಗಳೊಂದಿಗೆ ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುತ್ತಿದ್ದು, ಕ್ವಿಡ್ ಎಲೆಕ್ಟ್ರಿಕ್ ಹಲವು ವಿಶೇಷತೆಗಳಿಗೆ ಕಾರಣವಾಗಲಿದೆ.

2030ರ ಹೊತ್ತಿಗೆ ವಿಶ್ವಾದ್ಯಂತ ಶೇ.100ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ರಸ್ತೆಗಿಳಿಸುವ ಉದ್ದೇಶದೊಂದಿಗೆ ಜಗತ್ತಿನ ಎಲ್ಲಾ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಚಾಲನೆ ನೀಡಿದ್ದು, ರೆನಾಲ್ಟ್ ಸಂಸ್ಥೆಯು ಸಹ ತನ್ನ ಕನಸಿನ ಕೂಸಾದ ಕೆ-ಜೆಡ್ಇ ಕಾನ್ಸೆಪ್ಟ್(ಕ್ವಿಡ್ ಎಲೆಕ್ಟ್ರಿಕ್) ಅನಾವರಣಗೊಳಿಸಿರುವುದಲ್ಲದೇ ಬಿಡುಗಡೆಯ ಉದ್ದೇಶದಿಂದ ರೋಡ್ ಟೆಸ್ಟಿಂಗ್ ನಡೆಸುತ್ತಿದೆ.

ಕ್ವಿಡ್ ವಿನ್ಯಾಸವನ್ನೇ ಆಧಾರಿಸಿರುವ ಹೊಸ ಎಲೆಕ್ಟ್ರಿಕ್ ಕಾರು ಕೆಲವು ಸಣ್ಣಪುಟ್ಟ ಬದಲಾವಣೆ ಹೊರತುಪಡಿಸಿ ಬಹುತೇಕ ಸಾಮಾನ್ಯ ಮಾದರಿಯಲ್ಲೇ ಸಿದ್ದಗೊಂಡಿದ್ದು, ಹೊಸ ಎಲೆಕ್ಟ್ರಿಕ್ ಕಾರು ಆವೃತ್ತಿಯನ್ನು ಈ ಮೊದಲು ಶಾಂಘೈನಲ್ಲಿ ನಡೆದಿದ್ದ 2019ರ ಆಟೋ ಮೇಳದಲ್ಲಿ ಅನಾವರಣಗೊಳಿಸಲಾಗಿತ್ತು.

ಇನ್ನೊಂದು ವಿಶೇಷ ಅಂದ್ರೆ, ಹೊಸ ಕಾರಿನ ಡಿಸೈನ್‌ಗಳನ್ನು ಚೆನ್ನೈನಲ್ಲಿರುವ ರೆನಾಲ್ಟ್ ಕಾರು ಉತ್ಪಾದನಾ ಕೇಂದ್ರದಲ್ಲಿ ಸಿದ್ದಪಡಿಸಲಾಗಿದ್ದು, ಮೊದಲ ಹಂತವಾಗಿ ಹೊಸ ಕಾರು ಚೀನಾದಲ್ಲಿ ಹಾಗೂ ತದನಂತರವಷ್ಟೇ ಭಾರತದಲ್ಲಿ ಕ್ವಿಡ್ ಇವಿ ಕಾರು ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಾಮಾನ್ಯ ಮಾದರಿಯ ಕ್ವಿಡ್ ಹ್ಯಾಚ್‌ಬ್ಯಾಕ್ ಕಾರಿನ ಹೋಲಿಕೆ ಇರುವ ಕೆ-ಜೆಡ್ಇ ಕಾನ್ಸೆಪ್ಟ್ ಕಾರು ಸ್ಲಿಕ್ ಹೆಡ್‌ಲ್ಯಾಂಪ್ಸ್, ಮರು ವಿನ್ಯಾಸಗೊಳಿಸಲಾದ ಗ್ರೀಲ್, ಸ್ಪೋರ್ಟಿ ಬಂಪರ್ ಮತ್ತು ಕಾರಿನ ಬಹುತೇಕ ಕಡೆ ಇರಿಸಲಾಗಿರುವ ಬ್ಲ್ಯೂ ಅಸೆಸ್ಟ್ಸ್ ಕಾರಿನ ಲುಕ್ ಹೆಚ್ಚಿಸಿದೆ.

ಕಾರಿನ ಮೈಲೇಜ್ ಕೆ-ಜೆಡ್ಇ ಕಾರಿನಲ್ಲಿ ಅಳವಡಿಸಲಾಗಿರುವ ಬ್ಯಾಟರಿ ವೈಶಿಷ್ಟ್ಯತೆಗಳ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಪ್ರತಿ ಚಾರ್ಜ್‌ಗೆ ಬರೋಬ್ಬರಿ 250ಕಿ.ಮಿ ಮೈಲೇಜ್ ರೇಂಜ್ ಹೊಂದಿರುವ ಈ ಎಲೆಕ್ಟ್ರಿಕ್ ಕಾರನ್ನು ನಿಸ್ಸಾನ್ ಜೊತೆಗೂಡಿ ಅಭಿವೃದ್ಧಿ ಮಾಡಲಾಗುತ್ತಿದೆ.
ಭಾರತದಲ್ಲಿ ಬಿಡುಗಡೆ ಯಾವಾಗ?
ಮೇಲೆ ಹೇಳಿದ ಹಾಗೆ ಮೊದಲು ಚೀನಾದಲ್ಲಿ ಬಿಡುಗಡೆಗೊಳಿಸಿದ ನಂತರವಷ್ಟೇ ಭಾರತದಲ್ಲಿ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರೆನಾಲ್ಟ್ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳಿಗೆ ಬೇಕಿರುವ ಅಗತ್ಯ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣ ಮಾಡುವ ಯೋಜನೆಯಲ್ಲಿದ್ದು, ಕೇಂದ್ರ ಸರ್ಕಾರವು ಸಹ ಇವಿ ಕಾರುಗಳು ಪೂರಕವಾಗುವಂತೆ 2019ರ ಸೆಪ್ಟೆಂಬರ್ ಹೊತ್ತಿಗೆ ಪ್ರತಿ 3 ಕಿ.ಮಿ ಗೆ ಒಂದು ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ.

ಹೀಗಾಗಿ ರೆನಾಲ್ಟ್ ಹೊಸ ಎಲೆಕ್ಟ್ರಿಕ್ ಕಾರು 2020ರ ಆರಂಭದಲ್ಲಿ ಇಲ್ಲವೇ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನೀರಿಕ್ಷೆಯಿದ್ದು, ಇದಕ್ಕೂ ಮುನ್ನ ರೆನಾಲ್ಟ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಟ್ರೈಬರ್, ಕ್ವಿಡ್ ಫೇಸ್‌ಲಿಫ್ಟ್ ಮತ್ತು ಡಸ್ಟರ್ ಫೇಸ್‌ಲಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ.
MOST READ: ಪ್ರಪಾತಕ್ಕೆ ಬೀಳುತ್ತಿದ್ದ ಟಾಟಾ ನೆಕ್ಸಾನ್ ಕಾರು ಜಸ್ಟ್ ಮಿಸ್

ಇದಲ್ಲದೇ 2020ರ ಎಪ್ರಿಲ್ 1ರಿಂದ ಸದ್ಯ ಚಾಲ್ತಿಯಲ್ಲಿರುವ ಬಿಎಸ್-4 ವಾಹನಗಳ ಶ್ರೇಣಿಯು ಮುಕ್ತಾಯಗೊಳ್ಳಲ್ಲಿದ್ದು, ಬಿಎಸ್-6 ವಾಹನಗಳಿಗೆ ಮಾತ್ರವೇ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶ ನೀಡಲಾಗುತ್ತೆ. ಇದರಿಂದ ರೆನಾಲ್ಟ್ ಸೇರಿದಂತೆ ಹಲವು ಸಣ್ಣ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮಾರ್ಥ್ಯದ ಡೀಸೆಲ್ ಎಂಜಿನ್ ಉತ್ಪಾದನೆಯನ್ನು ಕೈಬಿಡುತ್ತಿದ್ದು, ಪೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮತ್ತು ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡುತ್ತಿವೆ.


Click it and Unblock the Notifications