ಸ್ಕೋಡಾ ಕೊಡಿಯಾಕ್ ಮೇಲೆ ಭರ್ಜರಿ ರಿಯಾಯಿತಿ
ಸ್ಕೋಡಾ ಕೊಡಿಯಾಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಸ್ಟೈಲ್ ಹಾಗೂ ಎಲ್ ಅಂಡ್ ಕೆ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮಾದರಿಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ಕ್ರಮವಾಗಿ ರೂ.35.36 ಲಕ್ಷ ಹಾಗೂ ರೂ.36.79 ಲಕ್ಷಗಳಾಗಿದೆ.

ಈ ಎರಡೂ ಮಾದರಿಯ ಕಾರುಗಳು 2.0 ಲೀಟರಿನ ಟಿಡಿಐ ಡೀಸೆಲ್ ಎಂಜಿನ್ ಹೊಂದಿದ್ದು, 148 ಬಿಹೆಚ್‍ಪಿ ಪವರ್ ಹಾಗೂ 340 ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ. ಈ ಎಂಜಿನ್‍ಗಳಲ್ಲಿ 7 ಸ್ಪೀಡ್‍ನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದ್ದು, ಎಲ್ಲಾ ನಾಲ್ಕು ವ್ಹೀಲ್‍ಗಳಿಗೂ ಪವರ್ ಕಳುಹಿಸುತ್ತದೆ.

ದೇಶಿಯ ಆಟೋಮೊಬೈಲ್ ಉದ್ಯಮವು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಮುಖ ಕಾರು ತಯಾರಕ ಕಂಪನಿಗಳ ಮಾರಾಟದಲ್ಲಿ ಕಳೆದ 6 ತಿಂಗಳುಗಳಿಂದ ಭಾರೀ ಕುಸಿತ ಉಂಟಾಗಿದೆ. ನಷ್ಟವನ್ನು ಸರಿ ಪಡಿಸಲು ಹಾಗೂ ಮಾರಾಟವಾಗದೇ ಉಳಿದಿರುವ ಕಾರುಗಳನ್ನು ಮಾರಾಟ ಮಾಡುವ ಸಲುವಾಗಿ ಬಹುತೇಕ ಕಾರು ತಯಾರಕ ಕಂಪನಿಗಳು, ಕಾರುಗಳ ಮೇಲೆ ಹಾಗೂ ಬಿಡಿಭಾಗಗಳೆ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತಿವೆ.

ಕಾರುಗಳನ್ನು ಖರೀದಿಸಲು ಬಯಸುವವ ಗ್ರಾಹಕರಿಗಾಗಿ ದೆಹಲಿಯ ಎನ್‍ಸಿಆರ್‍ನಲ್ಲಿರುವ ಸ್ಕೋಡಾ ಡೀಲರ್‍ಗಳು, ಸ್ಕೋಡಾ ಕೊಡಿಯಾಕ್ ಕಾರುಗಳ ಮೇಲೆ ರೂ.2.75 ಲಕ್ಷಗಳವರೆಗೆ ರಿಯಾಯಿತಿ ನೀಡುತ್ತಿದ್ದಾರೆ. 7 ಸೀಟರ್‍ಗಳ ಕೊಡಿಯಾಕ್ ಕಾರ್ ಅನ್ನು 2017ರ ಅಕ್ಟೋಬರ್‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಸಲುವಾಗಿ 2018ರ ನವೆಂಬರ್‍ನಲ್ಲಿ ಲಾರೆನ್ ಹಾಗೂ ಕ್ಲೆಮೆಂಟ್ ಮಾದರಿಗಳನ್ನು ಈ ಸರಣಿಯಲ್ಲಿ ಬಿಡುಗಡೆಗೊಳಿಸಲಾಯಿತು. ಸ್ಕೋಡಾ ಕಂಪನಿಯು ಕೊಡಿಯಾಕ್ ಕಾರಿಗಾಗಿ ಸಣ್ಣ ಪ್ರಮಾಣದ ನವೀಕರಣವನ್ನು ಅಭಿವೃದ್ಧಿಪಡಿಸುತ್ತಿದ್ದು, ನವೀಕರಿಸಿದ ಕಾರು ಭಾರತದಲ್ಲಿಯೂ ಸಹ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಈ ಎಸ್‍ಯುವಿ ಸುಮಾರು 3 ವರ್ಷಗಳಿಗೂ ಹೆಚ್ಚು ಕಾಲದಿಂದ ವಿಶ್ವ ಮಾರುಕಟ್ಟೆಯಲ್ಲಿದ್ದು, ಸ್ಕೋಡಾ ಕಂಪನಿಯು ಈಗ ಈ ಎಸ್‍ಯುವಿಯನ್ನು ನವೀಕರಣಗೊಳಿಸುತ್ತಿದೆ. ಹೊಸ ಹಾಗೂ ಸುಧಾರಿತ ಆವೃತ್ತಿಯು ಹೆಚ್ಚಿನ ಗ್ರಾಹಕರನ್ನು ತನ್ನತ್ತ ಸೆಳೆಯುವ ಸಾಧ್ಯತೆಗಳಿವೆ.

ಸ್ಕೋಡಾದ ನವೀಕೃತ ಕಾರಿನಲ್ಲಿ ಹೊಸ ಸೂಪರ್ಬ್ ಕಾರಿನಲ್ಲಿರುವಂತಹ ಟೆಕ್ನಿಕಲ್ ಅಂಶಗಳನ್ನು ಅಳವಡಿಸುವ ನಿರೀಕ್ಷೆಗಳಿವೆ. ಹೊಸ ವಿನ್ಯಾಸದ ಬಂಪರ್, ಹೆಡ್‍ಲ್ಯಾಂಪ್ ಕ್ಲಸ್ಟರ್ ಹಾಗೂ ಹೊಸ ಬಗೆಯ ಗ್ರಿಲ್‍ಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಇಂಟಿರಿಯರ್‍ನಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿದ್ದು, ಹೊಸ ಬಗೆಯ ಇನ್ಫೋಟೇನ್‍ಮೆಂಟ್ ಸಿಸ್ಟಂ ಅಳವಡಿಸಬಹುದು.

ಹೊಸ ಸ್ಕೋಡಾ ಕೊಡಿಯಾಕ್‍ನಲ್ಲಿ ಡ್ರೈವರ್ ಅಸಿಸ್ಟ್ ಫೀಚರ್, ಸುರಕ್ಷತಾ ಫೀಚರ್‍ಗಳನ್ನು ಅಳವಡಿಸಲಾಗುವುದು. ಲಘು ಹೈಬ್ರಿಡ್ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಅಪ್‍ಡೇಟೆಡ್ ಎಂಜಿನ್‍ನಿಂದಾಗಿ ಹೆಚ್ಚಿನ ಗ್ರಾಹಕರು ಈ ಕಾರ್ ಅನ್ನು ಖರೀದಿಸುವ ಸಾಧ್ಯತೆಗಳಿವೆ.

ಕೆಲವು ಮೂಲಗಳ ಪ್ರಕಾರ, ಸ್ಕೋಡಾ ಕಂಪನಿಯು 2020ರ ಆಟೋ ಎಕ್ಸ್ ಪೋದಲ್ಲಿ ಕರೋಕ್ ಕಾರ್ ಅನ್ನು ಅನಾವರಣಗೊಳಿಸುವ ಸಾಧ್ಯತೆಗಳಿವೆ. ದೇಶಿಯ ಮಾರುಕಟ್ಟೆಗಾಗಿಯೇ ಅಭಿವೃದ್ದಿಪಡಿಸಲಾಗಿರುವ ಎಂಕ್ಯೂಬಿ ಎ0 ಐಎನ್ ಪ್ಲಾಟ್‍ಫಾರಂ ಮೇಲೆ ನಿರ್ಮಿಸಲಾಗಿರುವ ಕಾಮಿಕ್ ಕಾರ್ ಅನ್ನು ಈ ವರ್ಷದ ಕೊನೆಯ ಭಾಗದಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಬಿಎಸ್ 6 ಮಾಲಿನ್ಯ ನಿಯಮಗಳು ಜಾರಿಯಾಗುವ ಮೊದಲು ಕಾರು ತಯಾರಕ ಕಂಪನಿಗಳು ತಮ್ಮಲ್ಲಿ ಮಾರಾಟವಾಗದೇ ಉಳಿದಿರುವ ಕಾರುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿವೆ. ಇದರ ಜೊತೆಗೆ ಕಾರುಗಳ ಮಾರಾಟದಲ್ಲಿಯೂ ಸಹ ಭಾರೀ ಪ್ರಮಾಣದ ಕುಸಿತ ಉಂಟಾಗಿದೆ. ಸ್ಕೋಡಾ ಜೊತೆಗೆ ಬೇರೆ ಕಾರು ತಯಾರಕ ಕಂಪನಿಗಳೂ ಸಹ ರಿಯಾಯಿತಿಗಳನ್ನು ನೀಡುವ ಸಾಧ್ಯತೆಗಳಿವೆ. ದೀಪಾವಳಿ ಹಬ್ಬದ ವೇಳೆಗೆ ರಿಯಾಯಿತಿಗಳು ಇನ್ನಷ್ಟು ಹೆಚ್ಚಾಗಲಿವೆ.


Click it and Unblock the Notifications