ಮೈಲೇಜ್ ರೇಂಜ್ ವಿಸ್ತರಿತ ಟಾಟಾ ಹೊಸ ಟಿಗೋರ್ ಎಲೆಕ್ಟ್ರಿಕ್ ಬಿಡುಗಡೆ
ಟಾಟಾ ಸಂಸ್ಥೆಯು ಈಗಾಗಲೇ ಟಿಗೋರ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಿ ಮಾರಾಟ ಮಾಡುತ್ತಿದ್ದು, ಇದೀಗ ಮೈಲೇಜ್ ರೇಂಜ್ ವಿಸ್ತರಿತ ಮತ್ತೊಂದು ಹೊಸ ಟಿಗೋರ್ ಇವಿ ಮಾದರಿಯನ್ನು ಬಿಡುಗಡೆ ಮಾಡಿದೆ.

ಟಿಗೋರ್ ಇವಿ ಕಾರಿನ ಮೈಲೇಜ್ ಪ್ರಮಾಣವನ್ನು ಹೆಚ್ಚಿಸಿರುವುದಲ್ಲದೇ ಮಾರಾಟದಲ್ಲೂ ಮಹತ್ವದ ಬದಲಾವಣೆ ತಂದಿರುವ ಟಾಟಾ ಸಂಸ್ಥೆಯು ಈ ಬಾರಿ ವ್ಯಯಕ್ತಿಕ ಕಾರು ಬಳಕೆದಾರರಿಗೂ ಖರೀದಿಗೆ ಅವಕಾಶ ನೀಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಟಿಗೋರ್ ಎಕ್ಸ್ಇ ಪ್ಲಸ್, ಟಿಗೋರ್ ಎಕ್ಸ್ಎಂ ಪ್ಲಸ್ ಮತ್ತು ಟಿಗೋರ್ ಎಕ್ಸ್‌ಟಿ ಪ್ಲಸ್ ಆವೃತ್ತಿಯನ್ನು ಖರೀದಿಸಬಹುದಾಗಿದ್ದು, ಹೊಸ ಆವೃತ್ತಿಯು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚುವರಿಯಾಗಿ 71 ಕಿ.ಮೀ ಮೈಲೇಜ್ ನೀಡಲಿದೆ.

ಟಾಟಾ ಸಂಸ್ಥೆಯು ಈ ಹಿಂದೆ ಟಿಗೋರ್ ಇವಿ ಕಾರನ್ನು ಬಿಡುಗಡೆ ಮಾಡಿದ್ದ ಸಂದರ್ಭದಲ್ಲಿ ಕ್ಯಾಬ್ ಸೇವೆಗಳ ಬಳಕೆದಾರರಿಗೆ ಮಾತ್ರವೇ ಖರೀದಿ ಅವಕಾಶ ನೀಡಿತ್ತು. ಇದೀಗ ವ್ಯಯಕ್ತಿಕ ಕಾರು ಖರೀದಿದಾರರಿಗೂ ಅವಕಾಶ ನೀಡಿರುವ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೀಗಾಗಿ ಟಿಗೋರ್ ಎಲೆಕ್ಟ್ರಿಕ್ ಕಾರು ಸದ್ಯ ಎರಡು ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಬೆಲೆಗಳು ಕೂಡಾ ಬೇರೆ ಬೇರೆಯಾಗಲಿವೆ. ವ್ಯಯಕ್ತಿಕ ಕಾರು ಖರೀದಿದಾರರಿಗೆ ಸಬ್ಸಡಿ ಯೋಜನೆಯು ಸಿಗದಿರುವುದರಿಂದ ಕಾರಿನ ಬೆಲೆಯು ತುಸು ದುಬಾರಿಯಾಗಲಿದ್ದು, ಕ್ಯಾಬ್ ಸೇವೆಗಾಗಿ ಖರೀದಿಸುವ ಎಲೆಕ್ಟ್ರಿಕ್ ಕಾರುಗಳಿಗೆ ಮಾತ್ರವೇ ಸಬ್ಸಡಿ ಅನ್ವಯವಾಗುತ್ತದೆ.

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಕ್ಯಾಬ್ ಬಳಕೆದಾರರಿಗೆ ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ.9.44 ಲಕ್ಷಕ್ಕೆ ನಿಗದಿ ಮಾಡಿದ್ದರೆ ವ್ಯಯಕ್ತಿಕ ಬಳಕೆಯ ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆಯನ್ನು ಆರಂಭಿಕವಾಗಿ ಎಕ್ಸ್‌ಶೋರಂ ಪ್ರಕಾರ ರೂ.12.59 ಲಕ್ಷ ನಿಗದಿಪಡಿಸಲಾಗಿದೆ. ಇದೀಗ ಹೊಸದಾಗಿ ಪರಿಚಯಿಸಲಾಗಿರುವ ಟಿಗೋರ್ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ ಗರಿಷ್ಠ 213 ಕಿ.ಮೀ ಮೈಲೇಜ್ ರೇಂಜ್ ಹೊಂದಿದ್ದು, ಇದು ಹಳೆಯ ಆವೃತ್ತಿಗಿಂತ 71 ಕಿ.ಮೀ ಹೆಚ್ಚುವರಿ ಮೈಲೇಜ್ ಒದಗಿಸಲಾಗಿದೆ.

ಹೊಸ ಕಾರಿನ ಬೆಲೆಗಳು(ವ್ಯಯಕ್ತಿಕ ಬಳಕೆಗಾಗಿ)
ಟಿಗೋರ್ ಎಕ್ಸ್ಇ ಪ್ಲಸ್ - ರೂ. 12.76 ಲಕ್ಷ
ಟಿಗೋರ್ ಎಕ್ಸ್ಎಂ ಪ್ಲಸ್- ರೂ. 12.76 ಲಕ್ಷ
ಟಿಗೋರ್ ಎಕ್ಸ್‌ಟಿ ಪ್ಲಸ್- ರೂ. 12.91 ಲಕ್ಷ

ಹೊಸ ಕಾರಿನಲ್ಲಿ ಟಾಟಾ ಸಂಸ್ಥೆಯು 21.5ಕೆಡಬ್ಲ್ಯು ಬ್ಯಾಟರಿ ಪ್ಯಾಕ್ ಒದಗಿಸಲಾಗಿದ್ದು, ಎಆರ್‌ಎಐ ಸಂಸ್ಥೆಯಿಂದ ಪ್ರಮಾಣಿಕೃತಗೊಂಡಿದೆ. ಹೊಸ ಕಾರಿನಲ್ಲಿ ಈ ಬಾರಿ ಡ್ರೈವ್ ಮತ್ತು ಸ್ಪೋರ್ಟ್ ಎನ್ನುವ ಎರಡು ರೀತಿಯ ಚಾಲನಾ ಸೌಲಭ್ಯ ನೀಡಿದ್ದು, ಪರ್ಫಾಮೆನ್ಸ್‌ನಲ್ಲೂ ಈ ಕಾರು ಹಿಂದೆ ಬಿದ್ದಿಲ್ಲ.

ಇದರೊಂದಿಗೆ ಹೊಸ ಕಾರಿನ ಮೇಲೆ 3 ವರ್ಷ ಅಥವಾ 1.25 ಲಕ್ಷ ಕಿ.ಮೀ ಆಧಾರ ಮೇಲೆ ವಾರಂಟಿ ನೀಡಲಾಗಿದ್ದು, ಬೆಂಗಳೂರು, ದೆಹಲಿ, ಚೆನ್ನೈ, ಅಹಮದಾಬಾದ್, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹೊಸ ಕಾರು ಶೀಘ್ರದಲ್ಲೇ ಖರೀದಿಗೆ ಲಭ್ಯವಿರಲಿದೆ.

ಟಾಟಾ ಸಂಸ್ಥೆಯು ಸಾಮಾನ್ಯ ಮಾದರಿಯ ಟಿಗೋರ್ ಕಾರಿನಂತೆಯೇ ಎಲೆಕ್ಟ್ರಿಕ್ ಟಿಗೋರ್ ಕಾರಿನಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಒದಗಿಸಿದ್ದು, ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ ಫಾಸ್ಟ್ ಚಾರ್ಜ್‌ಗಾಗಿ ಡಿಸಿ ಚಾರ್ಜಿಂಗ್ ಪಾಯಿಂಟ್ ನೀಡಲಾಗಿದೆ.

ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಏರ್‌ಬ್ಯಾಗ್, ಇಬಿಡಿ, ಸೀಟ್ ಬೆಲ್ಟ್ ರಿಮೆಂಡರ್, ಹೈ-ಸ್ಪೀಡ್ ವಾರ್ನಿಂಗ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ನೀಡಲಾಗಿದೆ.


Click it and Unblock the Notifications








