ವರ್ಷದಲ್ಲಿ ಎರಡನೇ ಬಾರಿ ಬೆಲೆ ಏರಿಕೆ- ಟೊಯೊಟಾ ಹೊಸ ಕಾರು ಖರೀದಿ ಮತ್ತಷ್ಟು ದುಬಾರಿ..!
ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಟೊಯೊಟಾ ಸಂಸ್ಥೆಯು ಕಾರುಗಳ ಬೆಲೆ ಹೆಚ್ಚಳಕ್ಕೆ ನಿರ್ಧರಿಸಿದ್ದು, ಮುಂದಿನ ತಿಂಗಳಿನಿಂದಲೇ ಹೊಸ ದರ ಪರಿಷ್ಕರಣೆ ಮಾಡುವುದಾಗಿ ಹೇಳಿಕೊಂಡಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಸತತ ಕುಸಿತ ಮತ್ತು ಕಾರುಗಳ ಬೀಡಿಭಾಗಗಳ ಆಮದು ಮೇಲಿನ ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆ ಕಾರಿನ ಬೆಲೆ ಏರಿಕೆ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿಕೊಂಡಿರುವ ಟೊಯೊಟಾ ಸಂಸ್ಥೆಯು, ಏಪ್ರಿಲ್ 1 ರಿಂದಲೇ ಹೊಸ ದರ ಪಟ್ಟಿಯಂತೆ ಕಾರು ಬೆಲೆಗಳು ಅನ್ವಯವಾಗಿವೆ ಎಂದಿದೆ.

ಮಾಹಿತಿಗಳ ಪ್ರಕಾರ, ಟೊಯೊಟಾ ಸಂಸ್ಥೆಯು ಕಾರಿನ ಬೆಲೆಯಲ್ಲಿ ಶೇ. 2ರಿಂದ ಶೇ.3ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯ ಇಟಿಯಾಸ್ ಲಿವಾ ಬೆಲೆಯಲ್ಲಿ ರೂ. 15 ಸಾವಿರ ಹೆಚ್ಚಳವಾಗಲಿದ್ದರೆ, ಹೈ ಎಂಡ್ ಮಾದರಿಯಾದ ಲ್ಯಾಂಡ್ ಕ್ರೂಸರ್ ಪ್ರಾಡೋ ಮಾದರಿಯ ಬೆಲೆಯಲ್ಲಿ ರೂ. 2.50 ಲಕ್ಷ ಹೆಚ್ಚಳಲಾಗಲಿದೆ.

ಹಾಗೆಯೇ ಕ್ಯಾಬ್ ಸೇವೆಗಳಿಗಾಗಿ ಹೆಚ್ಚಾಗಿ ಬಳಕೆಯಾಗುವ ಇಟಿಯಾಸ್ ಸೆಡಾನ್ ಕಾರುಗಳ ಬೆಲೆಯು ರೂ. 15 ಸಾವಿರ ಹೆಚ್ಚಳವಾಗಲಿದ್ದರೆ, ಯಾರಿಸ್ ಬೆಲೆಯಲ್ಲಿ 20 ಸಾವಿರದಿಂದ 25 ಸಾವಿರ ಹಾಗೂ ಇನೋವಾ ಕ್ರಿಸ್ಟ್ರಾ ಕಾರುಗಳ ಬೆಲೆಯು ರೂ. 25 ಸಾವಿರದಿಂದ 30 ಸಾವಿರ ತನಕ ಬೆಲೆ ಹೆಚ್ಚಳವಾಗುವುದು ಖಚಿತವಾಗಿದೆ.

ಇನ್ನು ಫಾರ್ಚೂನರ್ ಎಸ್‌ಯುವಿ, ಪ್ರಿಯಸ್, ಕ್ಯಾಮ್ರಿ ಮತ್ತು ಕರೊಲ್ಲಾ ಆಲ್ಟಿಸ್ ಸೆಡಾನ್ ಕಾರುಗಳ ಬೆಲೆಯಲ್ಲೂ ದರಕ್ಕೆ ಅನುಗುಣವಾಗಿ ಶೇ. 2ರಿಂದ 3ರಷ್ಟು ಹೆಚ್ಚಳವಾಗಲಿದ್ದು, 2019-20ರ ಹಣಕಾಸು ವರ್ಷದ ಆರಂಭದಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಖರ್ಚುಗಳನ್ನು ನಿಭಾಯಿಸಲು ಟೊಯೊಟಾ ಸೇರಿದಂತೆ ಇನ್ನು ಹಲವು ಆಟೋ ಉತ್ಪಾದನಾ ಸಂಸ್ಥೆಗಳು ಸದ್ಯದಲ್ಲೇ ತಮ್ಮ ಹೊಸ ದರ ಪಟ್ಟಿ ಪ್ರಕಟಿಸಲು ಸಜ್ಜಾಗುತ್ತಿದ್ದು, ಶೇ.2ರಿಂದ ಶೇ.4ರಷ್ಟು ಪ್ರತಿ ಕಾರುಗಳ ಬೆಲೆ ಹೆಚ್ಚಳವಾಗಲಿವೆ.

ಇನ್ನು ಕಳೆದ ಜನವರಿ ಆರಂಭದಲ್ಲೂ ಕೂಡಾ ಶೇ.3 ರಷ್ಟು ಬೆಲೆ ಹೆಚ್ಚಳ ಮಾಡಿದ್ದ ಟೊಯೊಟಾ ಸಂಸ್ಥೆಯು ಆಗಲೂ ಕೂಡಾ ಬೀಡಿಭಾಗಗಳ ವೆಚ್ಚ ನಿಭಾಯಿಸಲು ಬೆಲೆ ಹೆಚ್ಚಳ ಅನಿವಾರ್ಯ ಎಂದು ಹೇಳಿತ್ತು. ಇದೀಗ ಮತ್ತೊಮ್ಮೆ ಬೆಲೆ ಹೆಚ್ಚಳ ಮಾಡುತ್ತಿರುವುದು ಟೊಯೊಟಾ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನಿಡಿದಂತಾಗಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಇಷ್ಟರ ಮಧ್ಯೆಯು ಟೊಯೊಟಾ ಸಂಸ್ಥೆಯು ಸದ್ಯ ಎಂಟ್ರಿ ಲೆವಲ್ ಕಾರುಗಳಿಂತಲೂ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಭಾರೀ ಪ್ರಯಾಣದ ಆದಾಯ ಗಳಿಕೆ ಮಾಡುತ್ತಿದ್ದು, ಕಳೆದ ಮಾರ್ಚ್ ನಂತರ ಇದುವರೆಗೆ ಬರೋಬ್ಬರಿ ರೂ.960 ಕೋಟಿ ಗಳಿಕೆ ಮಾಡಿದೆ.

ಇದಲ್ಲದೇ ಇದೇ ತಿಂಗಳು ಆರಂಭದಲ್ಲಿ ಇನೋವಾ ಕ್ರಿಸ್ಟಾ ಜಿ ಪ್ಲಸ್ ಎನ್ನುವ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿರುವ ಟೊಯೊಟಾ ಸಂಸ್ಥೆಯು, ಹೊಸ ಕಾರಿನ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ರೂ.15.57 ಲಕ್ಷಕ್ಕೆ(7 ಸೀಟರ್) ಮತ್ತು ರೂ.15.62 ಲಕ್ಷಕ್ಕೆ(8 ಸೀಟರ್) ನಿಗದಿ ಮಾಡಿತ್ತು. ಇದೀಗ ಕಾರಿನ ಬೆಲೆಯನ್ನು ಕೂಡಾ ಹೆಚ್ಚಳ ಮಾಡಲಿದೆಯೆಂತೆ.
MOST READ: ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಒಟ್ಟಿನಲ್ಲಿ ಮಾರ್ಚ್ ನಂತರ ಟೊಯೊಟಾ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದ್ದು, ಒಂದು ವೇಳೆ ನೀವು ಕೂಡಾ ಹೊಸ ಕಾರು ಖರೀದಿಸುವ ಯೋಜನೆಯಲ್ಲಿದ್ದಲ್ಲಿ ಈಗಲೇ ಖರೀದಿ ಮಾಡಿ ಬೆಲೆ ಹೆಚ್ಚಳದ ಹೊಡೆತದಿಂದ ತಪ್ಪಿಸಿಕೊಳ್ಳಬಹುದು.


Click it and Unblock the Notifications








