ಕೇಂದ್ರ ಬಜೆಟ್ 2019: ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್..!
2019-20ರ ಕೇಂದ್ರ ಬಜೆಟ್ ಮಂಡಿಸಿರುವ ಸಚಿವೆ ನಿರ್ಮಲಾ ಸೀತಾರಾಮನ್ ಆಟೋ ಉದ್ಯಮವನ್ನು ವಿಶೇಷ ಆದ್ಯತಾ ವಲಯವನ್ನಾಗಿ ಆಯ್ದುಕೊಂಡಿದ್ದು, ಭವಿಷ್ಯದ ಸಾರಿಗೆ ವ್ಯವಸ್ಥೆಯಾದ ಎಲೆಕ್ಟ್ರಿಕ್ ವಾಹನ ಉದ್ಯಮದ ಬೆಳವಣಿಗಾಗಿ ಹಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.

ದೇಶದಲ್ಲಿ ತುರ್ತು ಬೆಳವಣಿಗೆ ಕಾಣಬೇಕಿರುವ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕಾಗಿ ಕೇಂದ್ರ ಸರ್ಕಾರವು 2019ರ ಬಜೆಟ್‌ನಲ್ಲಿ ಕೆಲವು ಆಕರ್ಷಕ ಯೋಜನೆಗಳನ್ನು ಘೋಷಣೆ ಮಾಡಿದ್ದು, ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡುವ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕೆಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸಲಾಗಿದೆ. ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಭರಾಟೆಯನ್ನು ತಗ್ಗಿಸುವುದಕ್ಕಾಗಿ ಅಬಕಾರಿ ತೆರಿಗೆಯಲ್ಲಿ ಹೆಚ್ಚಳ ಮಾಡಲಾಗಿದೆ.

2030ರ ವೇಳೆಗೆ ಶೇ.100ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಉದ್ದೇಶದಿಂದ ಈಗಿನಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬೇಡಿಕೆಯನ್ನು ತಗ್ಗಿಸುವುದಕ್ಕಾಗಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಪ್ರಸ್ತಕ ವರ್ಷದ ಬಜೆಟ್‌ನಲ್ಲಿ ಆಕರ್ಷಕ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.

ಇವಿ ಖರೀದಿ ಮೇಲೆ ತೆರಿಗೆ ವಿನಾಯ್ತಿ..!
ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತೆರಿಗೆ ವಿನಾಯ್ತಿ ನೀಡಿದ್ದು, ಬರೋಬ್ಬರಿ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಹಿಂದಿನ ಫೇಮ್ 2 ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ ಸಬ್ಸಡಿ ಯೋಜನೆಯನ್ನು ಸಹ ಮುಂದುವರಿಸಲಾಗಿದೆ.

ತಗ್ಗಿದ ಜಿಎಸ್‌ಟಿ ಪ್ರಮಾಣ..!
ಎಲೆಕ್ಟ್ರಿಕ್ ವಾಹನಗಳ ಮೇಲೆ ಈ ಹಿಂದೆ ಇದ್ದ ಜಿಎಸ್‌ಟಿ ಪ್ರಮಾಣವನ್ನು ಶೇ. 12ರಿಂದ ಇದೀಗ ಶೇ.5 ಕ್ಕೆ ಇಳಿಕೆ ಮಾಡಲಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆ ಮಾಡಲು ಸಾಕಷ್ಟು ಸಹಕಾರಿಯಾಗಿದೆ. ಈ ಬಗ್ಗೆ ಎಲೆಕ್ಟ್ರಕ್ ವಾಹನ ಉತ್ಪಾದನಾ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದ್ದು, ಇವಿ ವಾಹನ ಖರೀದಿಸುವ ಗ್ರಾಹಕರನ್ನು ಸೆಳೆಯಲು ಜಿಎಸ್‌ಟಿ ಇಳಿಕೆ ಮಾಡಿರುವುದು ಮಹತ್ವದ ಬದಲಾವಣೆಗೆ ಮೊದಲ ದಿಟ್ಟಹೆಜ್ಜೆ ಎಂದು ಹೇಳಲಾಗಿದೆ.

ಇನ್ನು ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸಲಾಗಿದ್ದು, ಹೊಸ ತೆರಿಗೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು ಮತ್ತಷ್ಟು ದುಬಾರಿಯಾಗಲಿವೆ. ಇದು ಎಲೆಕ್ಟ್ರಿಕ್ ವಾಹನಗಳ ಬೇಡಿಕೆಗೆ ಪೂರಕವಾಗಿರಲಿದ್ದು, ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸುವುದು ಪ್ರಮುಖ ಸವಾಲಾಗಿದೆ.

ಇದರಲ್ಲದೇ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಪೂರಕವಾಗಿ ಚಾರ್ಜಿಂಗ್ ಸ್ಟೆಷನ್‌ಗಳು ಇಲ್ಲದಿರುವುದು ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಅಡ್ಡಿಯಾಗುತ್ತಿದ್ದು, ಇದಕ್ಕಾಗಿಯೇ ಹೆಚ್ಚಿನ ಮಟ್ಟದಲ್ಲಿ ಚಾರ್ಜಿಂಗ್ ಸ್ಟೆಷನ್‌ಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ.

ಈ ಹಿಂದೆ 2018ರಲ್ಲಿ ಘೋಷಣೆ ಮಾಡಲಾಗಿರುವ ಫೇಮ್ 2 ಯೋಜನೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಬೆಳವಣಿಗಾಗಿ ರೂ. 10 ಸಾವಿರ ಕೋಟಿ ಮೀಸಲು ಇರಿಸಲಾಗಿದ್ದು, 2018-19, 2019-20 ಮತ್ತು 2020-21ರ ಆರ್ಥಿಕ ವರ್ಷದ ಅವಧಿಗಾಗಿ ಈ ಮೀಸಲು ಹಣವನ್ನು ಖರ್ಚು ಮಾಡಲು ನಿರ್ಧರಿಸಲಾಗಿದೆ.

ಫೇಮ್ 2 ಯೋಜನೆ ಅಡಿ ಸಬ್ಸಡಿ ಸೇರಿದಂತೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕಾಗಿ ಹೆಚ್ಚಿನ ಮಟ್ಟದಲ್ಲಿ ಹಣ ವಿನಿಯೋಗ ಮಾಡಲಾಗಿದ್ದು, ಇದೀಗ ಜಿಟಿಎಸ್ ತಗ್ಗಿಸಿರುವುದು ಇವಿ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಇದು ಮತ್ತಷ್ಟು ಸಹಕಾರಿಯಾಗಿಲಿದೆ.

ಈ ಮೂಲಕ 2030ರ ವೇಳೆಗೆ ಶೇ.100 ರಷ್ಟು ವಾಹನಗಳನ್ನು ರಸ್ತೆಗಿಳಿಸಬೇಕೆಂಬ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಇದು ಪೂರಕವಾಗಿ ಇದು ಪೂರಕವಾದ ಬಜೆಟ್ ಆಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಖರೀದಿ ಬಯಸುವ ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications