ಬಿಡುಗಡೆಯಾಗಲಿರುವ ಹೋಂಡಾ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ತಾಂತ್ರಿಕ ಮಾಹಿತಿ ಬಹಿರಂಗ
ಹೋಂಡಾ ಇಂಡಿಯಾ ಕಂಪನಿಯು ಇದೇ ತಿಂಗಳಾಂತ್ಯಕ್ಕೆ ತನ್ನ ಪ್ರಮುಖ ಕಾರುಗಳ ಬಿಎಸ್-6 ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಕಾರಿನ ಮಾಹಿತಿಗಳು ಬಹಿರಂಗವಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಅತ್ಯುತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಡಬ್ಲ್ಯುಆರ್-ವಿ ಕಾರು ಮಾದರಿಯು ಈ ಬಾರಿ ಬಿಎಸ್-6 ಎಂಜಿನ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳೊಂದಿಗೆ ಬಿಡುಗಡೆಗೆ ಸಜ್ಜಾಗುತ್ತಿದ್ದು, ಹೊಸ ಕಾರು ಖರೀದಿಗಾಗಿ ಆಸಕ್ತ ಗ್ರಾಹಕರು ಈಗಾಗಲೇ ರೂ.21 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ದಾಖಲಿಸುತ್ತಿದ್ದಾರೆ. ಸಿಟಿ ಸೆಡಾನ್ ಬಿಡುಗಡೆಯ ನಂತರವಷ್ಟೇ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಬಿಡುಗಡೆ ಮಾಡಲಿದ್ದು, ಹೊಸ ಕಾರಿನಲ್ಲಿ ನೀಡಲಾಗಿರುವ ಹೊಸ ಫೀಚರ್ಸ್‌ಗಳ ಮಾಹಿತಿಯನ್ನು ಇಲ್ಲಿ ಪಡೆಯಿರಿ.

ಹೋಂಡಾ ಸಂಸ್ಥೆಯು ತನ್ನ ಹೊಸ ತಲೆಮಾರಿನ ಕಾರು ಮಾದರಿಗಳ ಜೊತೆ ಫೇಸ್‌ಲಿಫ್ಟ್ ಆವೃತ್ತಿಗಳ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳನ್ನು ಪರಿಚಯಿಸಿದ್ದು, ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್‌ನಲ್ಲೂ ಹಲವಾರು ಗುರುತರವಾದ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದೆ.

ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ರೆಡಿಯೇಟರ್ ಗ್ರಿಲ್, ಬಲಿಷ್ಠವಾದ ವಿಂಗ್ ಕ್ರೋಮ್‌ನಲ್ಲಿ ಎಲ್ಇಡಿ ಪ್ರೋಜೆಕ್ಟರ್, ಹಳೆಯ-ಶೈಲಿಯ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಸಂಯೋಜಿತ ಡಿಆರ್‌ಎ, ಪೊಸಿಷನ್ ಲ್ಯಾಂಪ್ ಮತ್ತು ಹಿಂಭಾಗದ ವಿನ್ಯಾಸದಲ್ಲಿ ಸಿ-ಆಕಾರದ ಹೊಸ ಎಲ್ಇಡಿ ಟೈಲ್ ಲ್ಯಾಂಪ್‌ಗಳನ್ನು ಕಾಣಬಹುದಾಗಿದೆ.

ಇದರೊಂದಿಗೆ ಹೊಸ ಡಬ್ಲ್ಯುಆರ್-ವಿ ಕಾರನ್ನು ಮತ್ತಷ್ಟು ಆಕರ್ಷಕವಾಗಿಸಲು ಕ್ರೂಸ್ ಕಂಟ್ರೋಲ್ ಮತ್ತು ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಜೋಡಿಸಲಾಗಿದ್ದು, ಹೊಸ ಕಾರಿನಲ್ಲಿ ಒಳಾಂಗಣದಲ್ಲಿ ಬದಲಾವಣೆ ಮಾಡಿರುವ ತಾಂತ್ರಿಕ ಅಂಶಗಳ ಕುರಿತಾಗಿ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಹೊಸ ಕಾರಿನ ಒಳಭಾಗದಲ್ಲಿ ಅಷ್ಟಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳನ್ನು ನೀರಿಕ್ಷೆ ಮಾಡಲು ಸಾಧ್ಯವಿಲ್ಲದಿದ್ದರೂ ಪ್ರಯಾಣಿಕ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಹೊಸ ಕಾರಿನಲ್ಲಿ ಈ ಹಿಂದಿನ ಫೀಚರ್ಸ್‌ಗಳ ಜೊತೆಗೆ ಸ್ಮಾರ್ಟ್ ಕನೆಕ್ವಿಟಿಗಾಗಿ ಆ್ಯಂಡ್ರಾಯಿಡ್ ಆಟೋ ಆ್ಯಪಲ್ ಕಾರ್‌ಪ್ಲೇ ಜೋಡಿಸಲಾಗಿದ್ದು, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್ಸ್, ಪುಶ್-ಬಟನ್ ಸ್ಟಾರ್ಟ್ ಮತ್ತು 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹಾಗೆಯೇ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹೊಸ ಡಬ್ಲ್ಯುಆರ್-ವಿ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ರಿಯರ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಎಬಿಎಸ್ ಜೊತೆಗೆ ಇಬಿಡಿ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡಲಾಗಿದೆ.

ಎಂಜಿನ್ ಸಾಮರ್ಥ್ಯ
2020ರ ಹೋಂಡಾ ಡಬ್ಲ್ಯುಆರ್-ವಿ ಕಾರು ಮಾದರಿಯು ಎಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಬಿಎಸ್-6 ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದ್ದು, ಪೆಟ್ರೋಲ್ ಮಾದರಿಯು 1.2-ಲೀಟರ್ ಐ-ವಿಟಿಇಸಿ ಎಂಜಿನ್ ಮತ್ತು ಡೀಸೆಲ್ ಮಾದರಿಯು 1.5-ಲೀಟರ್ ಐ-ಡಿಟಿಇಸಿ ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಗಳಲ್ಲೂ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದ್ದು, ಪೆಟ್ರೋಲ್ ಮಾದರಿಯು 89-ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ, ಡೀಸೆಲ್ ಮಾದರಿಯು 99-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಉತ್ತಮ ಪೈಪೋಟಿ ನೀಡಬಲ್ಲ ನೀರಿಕ್ಷೆಯಲ್ಲಿರುವ ಡಬ್ಲ್ಯುಆರ್-ವಿ ಫೇಸ್‌ಲಿಫ್ಟ್ ಆವೃತ್ತಿಯು ಹೊಸ ಎಂಜಿನ್ ಆಯ್ಕೆಯೊಂದಿಗೆ ಬೆಲೆಯಲ್ಲೂ ದುಬಾರಿಯಾಗಲಿದ್ದು, ಹೊಸ ಕಾರಿನ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಲೆಗಿಂತ ಪೆಟ್ರೋಲ್ ಆವೃತ್ತಿಯು ರೂ.20 ಸಾವಿರದಿಂದ ರೂ.40 ಸಾವಿರ ಮತ್ತು ಡೀಸೆಲ್ ಮಾದರಿಯು ರೂ. 50 ಸಾವಿರದಿಂದ ರೂ.70 ಸಾವಿರದಷ್ಟು ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿದೆ.


Click it and Unblock the Notifications