ಬಿಎಂಟಿಸಿ ಸುರಕ್ಷತೆ ಪರೀಕ್ಷಿಸಲು ಬಸ್ ಚಾಲನೆ ಮಾಡಿದ ಎಂಡಿ
ಬಿಎಂಟಿಸಿ ಬಸ್ಸುಗಳ ಕಾರ್ಯಕ್ಷಮತೆಯನ್ನು ತಿಳಿಯಲು ಬಿಎಂಟಿಸಿ ಎಂಡಿ ಮತ್ತು ಖಡಕ್ ಅಧಿಕಾರಿ ಸಿ.ಶಿಖಾ ಅವರು ವೋಲ್ವೋ ಬಸ್ ಅನ್ನು ಚಲಾಯಿಸಿದ್ದಾರೆ. ಬಿಎಂಟಿಸಿ ಎಂಡಿ ಶಿಖಾರವರು ಬಸ್ ಚಾಲನೆ ಮಾಡುವ ವೀಡಿಯೋ ಸಖತ್ ವೈರಲ್ ಆಗಿದೆ.

ಕೆಲವೇ ದಿನಗಳ ಹಿಂದೆ ಬಿಎಂಟಿಸಿ ಬಸ್‍ಗಳು ಸರಣಿ ಅಪಘಾತಗಳು ಸಂಭವಿಸಿದ್ದವು. ಅಪಘಾತಕ್ಕೆ ಬ್ರೇಕ್ ಫೇಲ್ ಆಗಿರುವುದೇ ಮುಖ್ಯ ಕಾರಣವಾಗಿತ್ತು ಎಂಬ ವಾದಗಳು ಕೇಳಿ ಬಂದಿದ್ದವು. ಸರಣಿ ಅಪಘಾತಗಳಿಂದಾಗಿ ಬಿಎಂಟಿಸಿ ಬಸ್ ಎಷ್ಟು ಸೇಫ್ ಎಂಬ ಪ್ರಶ್ನೆ ಉದ್ಭವಿಸಿತ್ತು. ಕೆಲವು ದಿನಗಳಲ್ಲಿ ಖಾಸಗಿ ಚಾನೆಲ್‍ಗಳು ರಹಸ್ಯ ಕಾರ್ಯಚರಣೆ ನಡೆಸಿ ಬಿಎಂಟಿಸಿ ಬಸ್ಸುಗಳು ಕಾರ್ಯಕ್ಷಮತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.

ಈ ರೀತಿ ಬಿಎಂಟಿಸಿ ಬಸ್‍ಗಳ ಸುರಕ್ಷತೆಯ ಬಗ್ಗೆ ಸಾಲು ಸಾಲು ಪ್ರಶ್ನೆಗಳು ಬರಲು ಪ್ರರಂಭವಾಗಿತ್ತು. ಇದರ ನಡುವೆ ಕಿಲ್ಲರ್ ಬಿಎಂಟಿಸಿ ಎಂಬ ಪದಗಳನ್ನು ಬಳಸಿ ವ್ಯಾಪಕ ಟೀಕೆಗಳು ಬರತೊಡಗಿತು.

ಇಂತಹ ಟೀಕೆಗಳ ನಡುವೆ ಖಡಕ್ ಅಧಿಕಾರಿ ಎಂದೇ ಹೆಸರುವಾಸಿಯಾದ ಶಿಖಾರವರು ಬಿಎಂಟಿಸಿ ಬಸ್ ಸುರಕ್ಷತೆಯನ್ನು ಪರಿಶೀಲಿಸಲು ಮುಂದಾದರು. ತಾವೇ ಸ್ವತಃ ಬಿಎಂಟಿಸಿ ವೋಲ್ವೊ ಬಸ್ ಅನ್ನು ಚಾಲನೆ ಮಾಡಿದರು.

ಮಹಿಳಾ ಅಧಿಕಾರಿಯಾದರೂ ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಸರಾಗವಾಗಿ ಬಸ್ ಅನ್ನು ಚಾಲನೆ ಮಾಡಿ ಬಸ್ಸಿನ ಕಾರ್ಯಕ್ಷಮತೆಯನ್ನು ಪರಿಶೀಲನೆ ಮಾಡಿದರು. ಈ ವೇಳೆ ಹಿರಿಯ ಕೆಲವು ಅಧಿಕಾರಿಗಳು ಕೂಡ ಅವರಿಗೆ ಸಾಥ್ ನೀಡಿದರು.

2004ರ ಬ್ಯಾಚ್‍ನ ಐಎಎಸ್ ಅಧಿಕಾರಿಯಾದ ಶಿಖಾ ಅವರು ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಬಿಎಂಟಿಸಿ ಎಂಡಿಯಾಗಿ ಅಧಿಕಾರಿ ವಹಿಸಿಕೊಂಡಿದ್ದರು. ಬಿಎಂಟಿಸಿ ಸಂಸ್ಥೆಯ ಬಸ್ಸುಗಳಲ್ಲಿ ಪ್ರತಿದಿನ 36 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ.

ಬಿಎಂಟಿಸಿ ಸಂಸ್ಥೆಯು ಒಟ್ಟು 6,400 ಬಸ್ಸುಗಳನ್ನು ಹಾಗೂ ಸುಮಾರು 14,000 ಚಾಲಕರನ್ನು ಹೊಂದಿದೆ. ಬಿಎಂಟಿಸಿ ಎಂಡಿ ಶಿಖಾರವರು ವೋಲ್ವೋ ಬಸ್ ಓಡಿಸಿರುವ ದೃಶ್ಯ ಈಗ ರಾಜ್ಯಾದ್ಯಂತ ವೈರಲ್ ಆಗಿದೆ.
ಈ ಬಗ್ಗೆ ಬಿಎಂಟಿಸಿ ಸಂಸ್ಥೆಯ ಮೂಲಗಳು ಸ್ಪಷ್ಟನೆ ನೀಡಿವೆ. ಬಿಎಂಟಿಸಿ ಎಂಡಿ ಶಿಖಾರವರು ಕೇವಲ ಬಸ್‌ನ ಕಾರ್ಯಕ್ಷಮತೆ ಪರಿಶೀಲಿಸಲು ಬಿಎಂಟಿಸಿ ಬಸ್ ಟೆಸ್ಟ್ ಡ್ರೈವ್ ಮಾಡಿದ್ದಾರೆ ಎಂದು ಬಿಎಂಟಿಸಿ ತಿಳಿಸಿದೆ. ಬಿಎಂಟಿಸಿ ಎಂಡಿ ಶಿಖಾ ತಮ್ಮ ಸಂಸ್ಥೆಯ ಬಸ್ ಚಾಲನೆ ಮಾಡಿದ ವಿಚಾರಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾನೂನು ಮಾಡುವವರೇ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಸ್ ಓಡಿಸಲು ಹೆವಿ ವೆಹಿಕಲ್ ಲೈಸೆನ್ಸ್ ಇರಬೇಕು. ಹೆವಿ ವೆಹಿಕಲ್ ಲೈಸೆನ್ಸ್ ಇಲ್ಲದೆ ಬಸ್ ಚಾಲನೆ ಮಾಡಿದ್ದು ತಪ್ಪು ಎಂಬುದು ಕೆಲವರ ವಾದ. ಆದರೆ ಅವರು ಚಾಲನಾ ತರಬೇತುದಾರರೊಂದಿಗೆ ಬಸ್ ಅನ್ನು ಡ್ರೈವ್ ಮಾಡಿದ್ದಾರೆ. ಅದೂ ಕೂಡ ಹೊಸಕೋಟೆಯ ಬಳಿಯಿರುವ ಡ್ರೈವಿಂಗ್ ಟ್ರಾಕ್‍ನಲ್ಲಿ.

ಕೆಲವೇ ದಿನಗಳ ಹಿಂದೆ ಶಾಸಕ ರೇಣುಕಾಚಾರ್ಯ ಅವರು ಕೂಡಾ ಕೆಎಸ್ಆರ್‍ಟಿಸಿ ಬಸ್ ಚಾಲನೆ ಮಾಡಿದ್ದರು. ಶಿವಮೊಗ್ಗ ಡಿಪೋಗೆ ಸೇರಿದ್ದ ಕೆಎಸ್‌ಆರ್‌ಟಿಸಿ ಬಸ್ ದಾವಣಗೆರೆಯ ಹೊಸ ಮಾರ್ಗಕ್ಕೆ ಚಾಲನೆ ನೀಡುವ ವೇಳೆ ಉದ್ಘಾಟನಾ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರವರು ಬಸ್ ಚಲಾಯಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಬಿಎಂಟಿಸಿ ಬಸ್ಸುಗಳ ಸುರಕ್ಷತೆ ಬಗ್ಗೆ ವ್ಯಾಪಕ ಟೀಕೆಗಳು ಬಂದ ಕಾರಣ ಬಿಎಂಟಿಸಿ ಎಂಡಿ ಅವರು ಸ್ವತಃ ಅವರೇ ಬಸ್ಸುಗಳನ್ನು ಚಾಲನೆ ಮಾಡಿದ್ದಾರೆ. ಚಾಲನೆ ಮಾಡಿ ಬಸ್ಸಿನ ಸುರಕ್ಷತೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇವರ ಕರ್ತವ್ಯ ನಿಷ್ಠೆಯನ್ನು ಮೆಚ್ಚಬೇಕು. ಇಲ್ಲಿ ಇವರು ಮನರಂಜನೆಗಾಗಿ ಅಥವಾ ತಮ್ಮ ಜನಪ್ರಿಯತೆಗಾಗಿ ಬಸ್ ಅನ್ನು ಚಾಲನೆ ಮಾಡಿಲ್ಲ ಎಂಬುದನ್ನು ನಾವು ಅರಿಯಬೇಕು.


Click it and Unblock the Notifications