ಶೀಘ್ರದಲ್ಲೇ ಬಿಡುಗಡೆಯಾಗಲಿದೆ 1,200 ಕಿ.ಮೀ ಮೈಲೇಜ್ ನೀಡುವ ಕಾರು..!
ಭಾರತದ ಎಲೆಕ್ಟ್ರಿಕ್ ವಾಹನಗಳ ಸೆಗ್‍ಮೆಂಟಿನಲ್ಲಿ ಸ್ಟಾರ್ಟ್ ಅಪ್ ಕಂಪನಿಗಳಿಂದ, ಅಂತರ್‍ರಾಷ್ಟ್ರೀಯ ಮಟ್ಟದ ಕಂಪನಿಗಳವರೆಗೆ ಬಹುತೇಕ ಕಾರು ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಇತ್ತೀಚಿಗೆ ಹಲವು ಎಲೆಕ್ಟ್ರಿಕ್ ಕಾರುಗಳನ್ನು ಭಾರತದಲ್ಲಿ ಪ್ರದರ್ಶಿಸಲಾಗಿದೆ. ಇವುಗಳಲ್ಲಿ ಬಹುತೇಕ ಕಂಪನಿಗಳ ಹೆಸರುಗಳನ್ನು ಯಾರೂ ಕೇಳಿಲ್ಲ. ಆದರೂ ಎಲೆಕ್ಟ್ರಿಕ್ ವಾಹನಗಳಿಗೆ ಭಾರತದಲ್ಲಿ ಹೆಚ್ಚುತ್ತಿರುವ ಬೇಡಿಕೆಯ ಕಾರಣಕ್ಕೆ ಈ ಕಂಪನಿಗಳು ತಮ್ಮ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

ಇದೇ ವೇಳೆ ಇಟಲಿ ಮೂಲದ ಐಕೋನಾ ಡಿಸೈನ್ ಗ್ರೂಪ್ ಕಂಪನಿಯು ತನ್ನ ಹೈ ಸ್ಪೀಡ್ ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಬಿಡುಗಡೆಗೂ ಮೊದಲು ಮುಂದಿನ ತಿಂಗಳು ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಈ ಕಾರ್ ಅನ್ನು ಪ್ರದರ್ಶಿಸಲಾಗುವುದು.

ಈ ಕಾರು ಭವಿಷ್ಯದಲ್ಲಿ ಬರಲಿರುವ ಹಲವಾರು ಟೆಕ್ನಾಲಜಿಗಳನ್ನು ಹಾಗೂ ಆಟೋಮ್ಯಾಟಿಕ್ ಡ್ರೈವ್ ಫೀಚರ್‍ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾರ್ ಅನ್ನು ಒಂದು ಬಾರಿ ಚಾರ್ಜ್ ಮಾಡಿದರೆ 1,200 ಕಿ.ಮೀ ಚಲಿಸುತ್ತದೆ ಎಂದು ಕಂಪನಿಯು ಹೇಳಿದೆ.

ಐಕೋನಾ ನ್ಯೂಕ್ಲಿಯಸ್ ಎಂದು ಕರೆಯಲಾಗುವ ಈ ಕಾರ್ ಅನ್ನು ಆಟೋ ಎಕ್ಸ್ ಪೋ ಮುಗಿದ ನಂತರ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಹೆಚ್ಚು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುವ ಈ ಕಾರಿನ ಬಿಡುಗಡೆಯ ನಂತರ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಕಾರುಗಳು ದೇಶಿಯ ಮಾರುಕಟ್ಟೆಗೆ ಕಾಲಿಡುವ ಸಾಧ್ಯತೆಗಳಿವೆ.

ಈ ಎಲೆಕ್ಟ್ರಿಕ್ ಕಾರು ಹಲವಾರು ಅಡ್ವಾನ್ಸ್ ಟೆಕ್ನಾಲಜಿಗಳನ್ನು ಹೊಂದಿದೆ. ಇದರಲ್ಲಿ ಡ್ರೈವರ್‍ಲೆಸ್ ಟೆಕ್ನಾಲಜಿಯು ಸಹ ಸೇರಿದೆ. ಈ ಕಾರಿನಲ್ಲಿ ಎಮರ್ಜೆನ್ಸಿ ಸಂದರ್ಭಕ್ಕಾಗಿ ಡ್ಯಾಶ್‍ಬೋರ್ಡ್ ಹಾಗೂ ಸ್ಟೀಯರಿಂಗ್ ವ್ಹೀಲ್‍ಗಳನ್ನು ನೀಡುವ ಸಾಧ್ಯತೆಗಳಿವೆ.

ಈ ಫೀಚರ್‍ನಿಂದಾಗಿ ಈ ಕಾರಿನಲ್ಲಿ ಪ್ರಯಾಣಿಸುವವರು ಹೊಸ ಅನುಭವವನ್ನು ಪಡೆಯಲಿದ್ದಾರೆ. ಈ ಕಾರಿನಲ್ಲಿ ಹೈಡ್ರೊಜನ್ ಬ್ಯಾಟರಿಯನ್ನು ಅಳವಡಿಸಲಾಗುವುದು. ಇದರಿಂದಾಗಿ ಐಕೋನಾ ಎಲೆಕ್ಟ್ರಿಕ್ ಕಾರು ಸಾಮಾನ್ಯವಾದ ಬ್ಯಾಟರಿ ಹೊಂದಿರುವ ಕಾರುಗಳಿಗಿಂತ ಹೆಚ್ಚು ಮೈಲೇಜ್ ನೀಡಲಿದೆ.

ಈ ಕಾರಿನಲ್ಲಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 1,200 ಕಿ.ಮೀ ದೂರ ಚಲಿಸುತ್ತದೆಂದು ಹೇಳಲಾಗಿದೆ. ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ ಎಷ್ಟು ಶಕ್ತಿಶಾಲಿಯಾಗಿದೆಯೆಂದರೆ ಕೇವಲ 3.5 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಇದರಿಂದಾಗಿ ಹೆಚ್ಚು ದೂರವನ್ನು ವೇಗವಾಗಿ ಕ್ರಮಿಸಬಹುದು. ಬ್ಯಾಟರಿ ಖಾಲಿಯಾಗುತ್ತದೆಂಬ ಚಿಂತೆಯಿಲ್ಲದೇ ಪ್ರಯಾಣಿಸಬಹುದು. ಇದು ಲಗ್ಷುರಿ ಕಾರ್ ಆಗಿದ್ದು, ಐಷಾರಾಮಿ ಹೋಟೆಲ್‍ಗಳಲ್ಲಿರುವಂತಹ ಸೌಲಭ್ಯಗಳನ್ನು ಹಾಗೂ ಎಂಟರ್‍ಟೇನ್‍ಮೆಂಟ್ ಎಕ್ವಿಪ್‍ಮೆಂಟ್‍ಗಳನ್ನು ಹೊಂದಿರುತ್ತದೆ.

ಐಕೋನಾ ನ್ಯೂಕ್ಲಿಯಸ್ ಕಾನ್ಸೆಪ್ಟ್ ಅನ್ನು ನಿಯೊ ಕಾನ್ಸೆಪ್ಟ್ ಆಧಾರದ ಮೇಲೆ ಅಭಿವೃದ್ಧಿಪಡಿಸಿದೆ. ಈ ಕಾರಣಕ್ಕೆ ಮೊದಲು ನಿಯೊ ನಂತರ ನ್ಯೂಕ್ಲಿಯಸ್ ಕಾರುಗಳನ್ನು ಬಿಡುಗಡೆಗೊಳಿಸಲಾಗುವುದು.

ಈ ಎರಡೂ ಕಾರುಗಳು ಅತ್ಯಾಧುನಿಕ ಟೆಕ್ನಾಲಜಿ ಹೊಂದಿರುವ ಆಟೋಮ್ಯಾಟಿಕ್ ಎಲೆಕ್ಟ್ರಿಕ್ ಕಾರುಗಳಾಗಿವೆ. ಈ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಭಾರತದ ಆಟೋಮೊಬೈಲ್ ಉದ್ಯಮದಲ್ಲಿ ದೊಡ್ಡ ಕ್ರಾಂತಿಯಾಗಲಿದೆ.

ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿರುವವರು ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುತ್ತಿದ್ದಾರೆ. ಈ ಕಾರಣಕ್ಕೆ ಐಕೋನಾ ನ್ಯೂಕ್ಲಿಯಸ್ ಕಾನ್ಸೆಪ್ಟ್ ಕಾರು ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿವೆ. ಕಾರು ಫೀಚರ್‍ಗಳಿಂದ ಮಾತ್ರವಲ್ಲದೇ ಲುಕ್‍ನಿಂದಲೂ ಜನರನ್ನು ಸೆಳೆಯಲಿದೆ.

21 ದೇಶಗಳ 90ಕ್ಕೂ ಹೆಚ್ಚು ವಿನ್ಯಾಸಕಾರರು ಈ ಕಾರ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಅಭಿವೃದ್ಧಿ ಕಾರ್ಯವನ್ನು ಶಾಂಘೈ ಹಾಗೂ ಲಾಸ್ ಏಂಜೆಲಿಸ್‍ಗಳಲ್ಲಿ ಮಾಡಲಾಗಿದೆ. ಈ ಎಲ್ಲಾ ಕಾರಣಕ್ಕೆ ಐಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಅಂತರ್‍ರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ತಯಾರಿಸಲಾಗಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿದ್ದರೂ, ಚಾರ್ಜಿಂಗ್ ಸ್ಟೇಷನ್‍ಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲದ ಕಾರಣಕ್ಕೆ ಹಾಗೂ ಹೆಚ್ಚು ದೂರ ಚಲಿಸುವುದಿಲ್ಲವೆಂಬ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಐಕೋನಾ ಕಾರಿನ ಬಿಡುಗಡೆಯ ನಂತರ ಜನರ ಮನಸ್ಥಿತಿ ಬದಲಾಗಬಹುದು.


Click it and Unblock the Notifications








