ಫಾಸ್ಟ್‌ಟ್ಯಾಗ್ ಕಡ್ಡಾಯಕ್ಕೆ ದಿನಗಣನೆ- ಹೊಸ ಸೌಲಭ್ಯಕ್ಕಾಗಿ ಹೆಚ್ಚಿದ ಬೇಡಿಕೆ
ಕಾರಣಾಂತರಗಳಿಂದ ಫಾಸ್ಟ್‌ಟ್ಯಾಗ್ ಕಡ್ಡಾಯವನ್ನು ಮುಂದೂಡಿಕೆ ಮಾಡುತ್ತಲೇ ಬರುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಬಾರಿ ಜನವರಿ 15ರಿಂದ ಕಡ್ಡಾಯವಾಗಿ ಜಾರಿಗೆ ಮಾಡುವುದಾಗಿ ಹೇಳಿಕೊಂಡಿದ್ದು, ಹೊಸ ಟೋಲ್ ಶುಲ್ಕು ಪಾವತಿ ಸೌಲಭ್ಯವನ್ನು ಪಡೆಯುವುದಕ್ಕಾಗಿ ಸಾಕಷ್ಟು ಬೇಡಿಕೆ ಬರುತ್ತಿದೆ.

ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಕಡ್ಡಾಯವಾಗಿ ಜಾರಿಗೆ ತರಲು ಈ ಹಿಂದೆ ಎರಡು ಬಾರಿ ದಿನಾಂಕ ಘೋಷಣೆ ಮಾಡಿ ಮುಂದೂಡಿಕೆ ಮಾಡಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಇದೀಗ ಜನವರಿ 15ರಿಂದ ಕಡ್ಡಾಯವಾಗಿ ಜಾರಿಗೆ ತರವುದಾಗಿ ಹೇಳಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ಗರಿಷ್ಠ ಪ್ರಮಾಣದ ಫಾಸ್ಟ್‌ಟ್ಯಾಗ್‌ಗಳನ್ನು ವಿತರಣೆ ಮಾಡಲಾಗಿದೆ.

ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಗೆ ಜನವರಿ 15ರಿಂದ ಹೆದ್ದಾರಿಗಳಲ್ಲಿ ದುಪ್ಪಟ್ಟು ಶುಲ್ಕು ವಸೂಲಿ ಮಾಡಲಿದ್ದು, ಕಳೆದ 15 ದಿನಗಳಲ್ಲಿ ಬರೋಬ್ಬರಿ 1.20 ಲಕ್ಷಕ್ಕೂ ಹೆಚ್ಚು ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಅಳವಡಿಕೆ ಮಾಡಿಕೊಂಡಿದ್ದಾರೆ.

ಹೀಗಾಗಿ ಮುಂದಿನ 4 ದಿನಗಳ ಅವಧಿಯಲ್ಲಿ ಮತ್ತಷ್ಟು ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ಖರೀದಿಸಲಿದ್ದು, ಫಾಸ್ಟ್‌ಟ್ಯಾಗ್ ಸೌಲಭ್ಯ ಹೊಂದಿರುವ ವಾಹನಗಳಲ್ಲಿ ಎದುರಾಗುತ್ತಿರುವ ಸಿಗ್ನಲ್ ಸಮಸ್ಯೆ ಬಗೆಹರಿಸಲು ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ.

ಕಾಯುವಿಕೆ ಅವಧಿಯಲ್ಲಿ ಇಳಿಕೆ, ಆದಾಯದಲ್ಲಿ ಹೆಚ್ಚಳ
ಫಾಸ್ಟ್‌ಟ್ಯಾಗ್ ಸೌಲಭ್ಯದಿಂದಾಗಿ ದೇಶಾದ್ಯಂತ ಕಾರ್ಯನಿರ್ವಹಣೆಯಲ್ಲಿರುವ 530 ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆಯು ಗಣನೀಯವಾಗಿ ಇಳಿಕೆಯಾಗಿದ್ದು, ಟೋಲ್ ಶುಲ್ಕ ಪಾವತಿಯಲ್ಲಿ ಆಗುತ್ತಿದ್ದ ವಿಳಂಬವು ಹೊಸ ಸೌಲಭ್ಯದಿಂದಾಗಿ ಇಳಿಮುಖವಾಗಿದೆ. ಆದರೂ ಕೂಡಾ ಕೆಲವು ಟೋಲ್ ಬೂತ್‌ಗಳಲ್ಲಿ ಸಿಗ್ನಲ್ ಸಮಸ್ಯೆಯಿಂದಾಗಿ ವಾಹನಗಳ ಚಲನೆ ನಿಧಾನವಾಗುತ್ತಿರುವ ದೂರುಗಳು ಕೇಳಿಬರುತ್ತಿದ್ದು, ಜನವರಿ 15ರ ಒಳಗಾಗಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದೆ.

ಇನ್ನು ಫಾಸ್ಟ್‌ಟ್ಯಾಗ್ ಅಳವಡಿಕೆಗೂ ಮುನ್ನ ಪ್ರತಿದಿನ ರೂ.68 ಕೋಟಿ ಸರಾಸರಿ ಆದಾಯ ಗಳಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರವು ಇದೀಗ ಪ್ರತಿದಿನ ಸರಾಸರಿಯಾಗಿ ರೂ.80 ಕೋಟಿಯಷ್ಟು ಆದಾಯ ಗಳಿಕೆ ಮಾಡುತ್ತಿರುವುದಾಗಿ ಅಧಿಕೃತ ಹೇಳಿಕೆ ನೀಡಿದೆ.

ಫಾಸ್ಟ್‌ಟ್ಯಾಗ್ ಪರಿಚಯಿಸುವುದಕ್ಕೂ ಮುನ್ನ ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಗಾಗಿ ಸರಾಸರಿಯಾಗಿ 12 ನಿಮಿಷ ಕಾಯಬೇಕಿತ್ತು. ಇದೀಗ ಅದು ಸರಾಸರಿ 10.04 ನಿಮಿಷಕ್ಕೆ ಇಳಿಕೆಯಾಗಿದ್ದು, ಪೂರ್ಣಪ್ರಮಾಣದಲ್ಲಿ ಹೊಸ ಸೌಲಭ್ಯ ಜಾರಿ ಬಂದಲ್ಲಿ ಪರಿಸ್ಥಿತಿ ಮತ್ತಷ್ಟು ಸುಧಾರಣೆಯಾಗಲಿದೆ ಎನ್ನಲಾಗಿದೆ.

ಇನ್ನು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಬಳಕೆ ಮಾಡುವುದರಿಂದ ವಾಹನ ಮಾಲೀಕರು ಟೋಲ್ ಗೇಟ್‌ಗಳಲ್ಲಿ ಗಂಟೆಗಟ್ಟಲೇ ಕ್ಯೂ ನಿಂತು ಶುಲ್ಕ ಪಾವತಿ ಮಾಡುವ ತಾಪತ್ರಯ ಕಡಿಮೆಯಾಗುವುದಲ್ಲದೇ ಇದರಿಂದ ಹಲವು ಪ್ರಯೋಜನಗಳಿದ್ದು, ಅತಿ ಸುಲಭವಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಫಾಸ್ಟ್‌ಟ್ಯಾಗ್ ಎಂದರೇನು?
ಫಾಸ್ಟ್‌ಟ್ಯಾಗ್ ಸೌಲಭ್ಯವು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವಾಹನಗಳ ಟೋಲ್ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಈ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್‍ಗಳಲ್ಲಿ ನಿಲ್ಲುವ ಅಗತ್ಯವಿಲ್ಲ. ದೇಶದಲ್ಲಿರುವ ಅನೇಕ ಬ್ಯಾಂಕುಗಳು ಆನ್‌ಲೈನ್‌ನಲ್ಲಿ ಫಾಸ್ಟ್‌ಟ್ಯಾಗ್ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ.

ಇದಕ್ಕಾಗಿಯೇ ಪ್ರತ್ಯೇಕ ಫಾಸ್ಟ್‌ಟ್ಯಾಗ್ ಆ್ಯಪ್ ಕೂಡಾ ಅಭಿವೃದ್ದಿಗೊಳಿಸಲಾಗಿದ್ದು, ಆ್ಯಪ್ ಮೂಲಕವೇ ನೀವು ಫಾಸ್ಟ್‌ಟ್ಯಾಗ್ ರೀಚಾರ್ಜ್ ಮತ್ತು ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದ ಇತರೆ ಮಾಹಿತಿಗಳನ್ನು ಒಂದೇ ಸೂರಿನಡಿ ಪಡೆಯಬಹುದು.

ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ, ಎಸ್‌ಬಿಐ, ಹೆಚ್‌ಡಿಎಫ್‌ಸಿ, ಸಿಂಡಿಕೇಟ್, ಪೇಟಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳಲ್ಲಿ ಫಾಸ್ಟ್‌ಟ್ಯಾಗ್‍ಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಫಾಸ್ಟ್‌ಟ್ಯಾಗ್ ಅನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.

ಇದರೊಂದಿಗೆ ಫಾಸ್ಟ್‌ಟ್ಯಾಗ್ ಅನ್ನು ಟೋಲ್ ಪ್ಲಾಜಾ ಅಥವಾ ಅಧಿಕೃತ ಏಜೆನ್ಸಿ ಮೂಲಕವೂ ಖರೀದಿಸಬಹುದಾಗಿದ್ದು, ಗ್ರಾಹಕರು ಆನ್‌ಲೈನ್ ಫಾರಂ ಅನ್ನು ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗುತ್ತದೆ.

ಗ್ರಾಹಕರು ರೂ.100ನಿಂದ ರೂ.1 ಲಕ್ಷದವರೆಗೆ ರೀಚಾರ್ಜ್ ಮಾಡಬಹುದಾಗಿದ್ದು, ಸುಲಭವಾಗಿ ರೀಚಾರ್ಜ್ ಮಾಡಲು ಬೇರೆ ಬೇರೆ ಏಜೆನ್ಸಿಗಳು ಬೇರೆ ಬೇರೆ ವಿಧಾನಗಳನ್ನು ಹಾಗೂ ಆಯ್ಕೆಗಳನ್ನು ನೀಡಲಾಗಿದೆ. ಹೀಗಾಗಿ ಇದೊಂದು ಅತಿ ಸುಲಭವಾಗಿ ಉಪಯೋಗಿಸಬಹುದಾದ ಸೌಲಭ್ಯವಾಗಿದ್ದು, ಒಂದು ಫಾಸ್ಟ್‌ಟ್ಯಾಗ್ ಅನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡುವಂತಿಲ್ಲ. ಇದರಿಂದ ವಾಹನ ಮಾಲೀಕರು ಹೊಸ ಸೌಲಭ್ಯ ಬೇಡವಾದಲ್ಲಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಡಿಆಕ್ಟಿವೆಟ್ ಮಾಡಬೇಕಾಗುತ್ತದೆ.


Click it and Unblock the Notifications








