ನ್ಯೂ ಜನರೇಷನ್ ಮಾದರಿಯ ಬಿಡುಗಡೆಗಾಗಿ ಎಲೈಟ್ ಐ20 ಸ್ಥಗಿತಗೊಳಿಸಿದ ಹ್ಯುಂಡೈ
ಹ್ಯುಂಡೈ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಜನಪ್ರಿಯ ಕಾರು ಮಾದರಿಯಾದ ಎಲೈಟ್ ಐ20 ಹ್ಯಾಚ್‌ಬ್ಯಾಕ್ ಕಾರು ಮಾದರಿಯ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಕಂಪನಿಯು ಶೀಘ್ರದಲ್ಲೇ ಐ20 ನ್ಯೂ ಜನರೇಷನ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಐ20 ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವು ಹೊಸ ಬದಲಾವಣೆಯೊಂದಿಗೆ ಮುಂದಿನ ತಿಂಗಳು ನವೆಂಬರ್ 5ರಂದು ಬಿಡುಗಡೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಲೈಟ್ ಐ20 ಮಾದರಿಯ ಅಧಿಕೃತ ಮಾಹಿತಿಯನ್ನು ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ವೆಬ್‌ಸೈಟ್‌ನಿಂದ ತೆಗೆದುಹಾಕಿದರೂ ಎಲೈಟ್ ಐ20 ಕಾರು ಮಾರಾಟವು ಹೊಸ ಕಾರಿನೊಂದಿಗೆ ಸ್ಟಾಕ್ ಮುಕ್ತಾಯದ ತನಕವು ಮುಂದುವರಿಯಲಿದ್ದು, ತದನಂತರ ಕಾರು ಮಾರಾಟವನ್ನು ಪೂರ್ಣಪ್ರಮಾಣದಲ್ಲಿ ಸ್ಥಗಿತಗೊಳಿಸಲಾಗುತ್ತದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ 2ನೇ ತಲೆಮಾರಿನ ಎಲೈಟ್ ಐ20 ಕಾರು ಬಿಎಸ್-6 ಜಾರಿಗೂ ಮುನ್ನ 1.2-ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿತ್ತು. ಬಿಎಸ್-6 ಜಾರಿ ನಂತರ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಮಾರಾಟವಾಗುತ್ತಿದ್ದು, ಬಿಡುಗಡೆಗೆ ಸಜ್ಜಾಗಿರುವ 3ನೇ ತಲೆಮಾರಿನ ವೈಶಿಷ್ಟ್ಯತೆಯುಳ್ಳ ಐ20 ಕಾರು ಒಟ್ಟು ಮೂರು ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಗೊಳಿಸಲಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಲೈಟ್ ಐ20 ಕಾರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಹೊಸ ಐ20 ಕಾರು ಬೆಲೆಯಲ್ಲೂ ತುಸು ದುಬಾರಿ ಎನ್ನಿಸಲಿದ್ದು, ಮಾರುತಿ ಬಲೆನೊ ಮತ್ತು ಟಾಟಾ ಆಲ್‌ಟ್ರೊಜ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡುವ ತವಕದಲ್ಲಿದೆ.

ಹೊಸ ಐ20 ಕಾರು ಮಾದರಿಗಾಗಿ ಈಗಾಗಲೇ ರೂ.21 ಸಾವಿರ ಮುಂಗಡದೊಂದಿಗೆ ಆನ್‌ಲೈನ್ ಬುಕ್ಕಿಂಗ್ ಆರಂಭಿಸಲಾಗಿದ್ದು, ಭಾರೀ ಪ್ರಮಾಣದ ಬೇಡಿಕೆ ಹರಿದುಬರುತ್ತಿದೆ. ಹೊಸ ಕಾರು ಮ್ಯಾಗ್ನಾ, ಸ್ಪೋರ್ಟ್ಜ್, ಅಸ್ಟಾ ಮತ್ತು ಅಸ್ಟಾ ಆಪ್ಷನ್ ಎಂಬ ನಾಲ್ಕು ವೆರಿಯೆಂಟ್‌ಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿದ್ದು, ಟೈಫೂನ್ ಸಿಲ್ವರ್, ಸ್ಟಾರಿ ನೈಟ್, ಟೈಟಾನ್ ಗ್ರೇ, ಫೆರಿ ರೆಡ್, ಪೋಲಾರ್ ವೈಟ್ ಮತ್ತು ಸನ್ ಬರ್ನ್ ಸ್ವೇ ಎಂಬ ಬಣ್ಣಗಳ ಆಯ್ಕೆ ಹೊಂದಿದೆ.

ಇದರೊಂದಿಗೆ ಫೆರಿ ರೆಡ್ ಜೊತೆ ಬ್ಲ್ಯಾಕ್ ಮತ್ತು ಟೋನ್ ಬ್ಲ್ಯಾಕ್ ಜೊತೆ ವೈಟ್ ಎಂಬ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರಲಿದ್ದು, ಹಿಂದಿನ ಐ20 ಮಾದರಿಗೆ ಹೋಲಿಸಿದರೆ ಹೊಸ ಕಾರಿನ ಹೆಡ್‌ಲ್ಯಾಂಪ್ ಮತ್ತು ಸೈಡ್ ಫ್ರೋಪೈಲ್ ವಿನ್ಯಾಸವನ್ನು ನವೀಕರಿಸುವುದರ ಜೊತೆಗೆ ದೊಡ್ಡ ಕ್ರೀಸ್ ಲೈನ್‌ಗಳನ್ನು ಜೋಡಿಸಲಾಗಿದೆ.

ಹೊಸ ಕಾರಿನ ಪಿಲ್ಲರ್‍ಗಳು ಬ್ಲ್ಯಾಕ್ ಬಣ್ಣವನ್ನು ಹೊಂದಿದ್ದು, ವಿಡಬ್ಲ್ಯೂ ಟೈಗನ್‍ನಲ್ಲಿ ಇರುವಂತಹ ಕೆಂಪು ಇಲ್‍ಇಡಿ ಡಿಆರ್‍ಎಲ್ ಸ್ಟಾಪ್ ಲೈಟ್ ಹಿಂಭಾಗದಲ್ಲಿ ಇಲ್‍ಇಡಿ ಟೈಲ್‍ಲೈಟ್ ಹೊಂದಿದೆ. ಇನ್ನು ಹೊಸ ಹ್ಯುಂಡೈ ಕಾರಿನ ಇಂಟಿರಿಯರ್‍ನಲ್ಲಿ 4 ಸ್ಫೋಕ್ ಸ್ಟೀರಿಂಗ್ ವ್ಹೀಲ್ ಅನ್ನು ಅಳವಡಿಸಲಾಗಿದೆ.

ಜೊತೆಗೆ ಬಾಷ್ ಸೌಂಡ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಮತ್ತು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಒಳಗೊಂಡಿದ್ದು, ಇದರೊಂದಿಗೆ 33 ಫೀಚರ್ಸ್‌ವುಳ್ಳ ಬ್ಲೂ ಲಿಂಕ್ ಟೆಕ್ನಾಲಜಿಯನ್ನು ಕೂಡ ಹೊಂದಿರಲಿದೆ.

ಹೊಸ ಕಾರಿನಲ್ಲಿ ಸನ್‌ರೂಫ್ ಮತ್ತು ಡಿಜಿಟಲ್ ಕ್ಲಸ್ಟರ್ ಅನ್ನು ಸಹ ಅಳವಡಿಸಲಾಗಿದ್ದು, ಈ ಕಾರಿನ ಇಂಟಿರಿಯರ್‍ನಲ್ಲಿ ಆ್ಯಪಲ್ ಕಾರ್‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಹ್ಯುಂಡೈ ಕನೆಕ್ಟಿವಿಟಿ ಸೂಟ್, ಯುಎಸ್‌ಬಿ ಪೋರ್ಟ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್ ಸೇರಿ ಹಲವು ಪ್ರೀಮಿಯಂ ಫೀಚರ್ಸ್‌ಗಳಿವೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಎಂಜಿನ್ ಮತ್ತು ಪರ್ಫಾಮೆನ್ಸ್
ಹ್ಯುಂಡೈ ಐ20 ಕಾರಿನಲ್ಲಿ ಮೂರು ಎಂಜಿನ್ ಆಯ್ಕೆಗಳನ್ನು ನೀಡಲಾಗುತ್ತಿದ್ದು, ಇದರಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ 82-ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಹೊಂದಿರುತ್ತದೆ.

ಇದರೊಂದಿಗೆ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಸಹ ಹೊಂದಿದ್ದು, ಈ ಎಂಜಿನ್ 99-ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಮತ್ತು 6-ಸ್ಪೀಡ್ ಐಎಂಟಿ(ಇಂಟೆಲಿಜೆಂಟ್ ಮ್ಯಾನುಯಲ್ ಗೇರ್ ಬಾಕ್ಸ್) ಅನ್ನು ಹೊಂದಿರಲಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಇನ್ನು 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 99-ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸಲಿದ್ದು, ಈ ಎಂಜಿನ್‌ನಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ ಹೊಸ ಹ್ಯುಂಡೈ ಐ20 ಕಾರಿನಲ್ಲಿ ಹೊಸ 16 ಇಂಚಿನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍ಗಳು, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‍ಗಳೊಂದಿಗೆ ಸ್ಲಿಕ್ ಒಆರ್‍ವಿಎಂಗಳು ಮತ್ತು ಶಾರ್ಕ್ ಫಿನ್ ಆಂಟೆನಾ ಹೊಂದಿದೆ.


Click it and Unblock the Notifications