ಆಟೋ ಎಕ್ಸ್‌ಪೋ 2020: ಹ್ಯುಂಡೈ ಕಂಪನಿಯು ಅನಾವರಣಗೊಳಿಸಿದ ಕಾರುಗಳು
ಹ್ಯುಂಡೈ ಕಂಪನಿಯು ಭಾರತದ ಎರಡನೇ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಈ ಜನಪ್ರಿಯ ಹ್ಯುಂಡೈ ಕಂಪನಿಯು 2020ರ ಆಟೋ ಎಕ್ಸ್ ಪೋದಲ್ಲಿ ಭಾಗವಾಗಿಸಿದೆ.

ಹ್ಯುಂಡೈ ಮೋಟಾರ್ ಇಂಡಿಯಾ 1996ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ಹ್ಯುಂಡೈ ಮೋಟಾರ್ ಇಂಡಿಯಾ ಭಾರತದಲ್ಲಿ ಚೆನ್ನೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಹ್ಯುಂಡೈ ಕಂಪನಿಯು 2020ರ ಆಟೋ ಎಕ್ಸ್ ಪೋದಲ್ಲಿ ಎಲೆಕ್ಟ್ರಿಕ್ ಕಾನ್ಸೆಪ್ಟ್ ಸೇರಿದಂತೆ ಹಲವಾರು ಪ್ರಮುಖ ಮಾದರಿಗಳನ್ನು ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಹ್ಯುಂಡೈ ಕಂಪನಿಯು ಅನಾವರಣಗೊಳಿಸಿದ ಪ್ರಮುಖ ಮಾದರಿಗಳ ಮಾಹಿತಿ ಇಲ್ಲಿದೆ.

ಹೊಸ ಹ್ಯುಂಡೈ ಕ್ರೆಟಾ
ಹ್ಯುಂಡೈ ಇಂಡಿಯಾ ಎರಡನೇ ತಲೆಮಾರಿನ ಕ್ರೆಟಾ ಎಸ್‌ಯುವಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಕಳೆದ ವರ್ಷ ಈ ಕಾರ್ ಅನ್ನು ಚೀನಾದಲ್ಲಿ ಹೊಸ ತಲೆಮಾರಿನ ಐಎಕ್ಸ್ 25 ಎಂಬ ಹೆಸರಿನಲ್ಲಿ ಅನಾವರಣಗೊಳಿಸಲಾಗಿತ್ತು.

ಹ್ಯುಂಡೈ ಕಂಪನಿಯು ಸೆಲ್ಟೋಸ್ ಕಾರಿನಲ್ಲಿರುವಂತಹ 140 ಬಿಹೆಚ್‌ಪಿ ಪವರ್ ಉತ್ಪಾದಿಸುವ, 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಈ ಕಾರಿನಲ್ಲಿ ಅಳವಡಿಸುವ ಸಾಧ್ಯತೆಗಳಿವೆ. ಹ್ಯುಂಡೈ ಕ್ರೆಟಾದ ಇಂಟಿರಿಯರ್ ಹಾಗೂ ಉಳಿದ ವಿವರಗಳನ್ನು ಬಿಡುಗಡೆಗೂ ಮುನ್ನ ಬಹಿರಂಗಗೊಳಿಸಲಾಗುವುದು. ಈ ಹೊಸ ಕಾರ್ ಅನ್ನು ಮಾರ್ಚ್ ಮಧ್ಯಭಾಗದಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.10ಲಕ್ಷದಿಂದ-ರೂ.16 ಲಕ್ಷಗಳಾಗುವ ಸಾಧ್ಯತೆಗಳಿವೆ.

ಹ್ಯುಂಡೈ ನೆಕ್ಸೊ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರು
ಹ್ಯುಂಡೈ ತನ್ನ ಮೊದಲ ಪ್ರಯತ್ನದಲ್ಲಿ ನಿರ್ಮಾಣ ಮಾಡಿರುವ ಫ್ಯೂಲ್ ಸೆಲ್ಸ್ ಎಲೆಕ್ಟ್ರಿಕ್ ಕಾರೊಂದು ಭಾರತೀಯ ಮಾರುಕಟ್ಟೆಗೂ ಪ್ರವೇಶಿಸುತ್ತಿದೆ. ಫ್ಯೂಲ್ ಸೆಲ್ಸ್ ಪ್ರೆರಣೆ ಹೊಂದಿರುವ ನೆಕ್ಸೊ ಕಾರುನ್ನು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿರುವ ಹ್ಯುಂಡೈ ಸಂಸ್ಥೆಯು ಹೊಸ ಕಾರನ್ನು ಭಾರತದಲ್ಲೂ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಬಿಡುಗಡೆಯಾಗಲಿರುವ ಹ್ಯುಂಡೈ ನೆಕ್ಸೊ ಕಾರಿನಲ್ಲೂ ಕೂಡಾ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಹೈಡ್ರೊಜನ್ ಫ್ಯೂಲ್ ಸೆಲ್ಸ್ ಅನ್ನು ಟ್ಯಾಂಕ್ ಭರ್ತಿ ಮಾಡಿಸಿದ್ದಲ್ಲಿ ಗರಿಷ್ಠ 666 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಇದು ಸಾಮಾನ್ಯ ಎಲೆಕ್ಟ್ರಿಕ್ ಕಾರಿಗಿಂತಲೂ ವಿಭಿನ್ನ ತಾಂತ್ರಿಕ ಸೌಲಭ್ಯವನ್ನು ಪಡೆದುಕೊಂಡಿರುತ್ತವೆ. 2021ಕ್ಕೆ ದಕ್ಷಿಣ ಕೊರಿಯಾದಲ್ಲಿ ನೆಕ್ಸೊ ಕಾರು ಅಧಿಕೃತವಾಗಿ ಖರೀದಿಗೆ ಲಭ್ಯವಾಗುವ ಸಾಧ್ಯತೆಗಳಿದ್ದು, ಭಾರತದಲ್ಲಿ ಈ ಹೊಸ ಕಾರು 2023 ಅಥವಾ 2024ರ ಅವಧಿಯಲ್ಲಿ ಬಿಡುಗಡೆಯಾಗಲಿದೆ.

ಹ್ಯುಂಡೈ ಗ್ರಾಂಡ್ ಐ10 ನಿಯೊಸ್ ಟರ್ಬೋ ಪೆಟ್ರೊಲ್
ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಾಗಿರುವ ವೆನ್ಯೂ ಕಾರಿನ ಮಾದರಿಯಲ್ಲೇ ಗ್ರ್ಯಾಂಡ್ ಐ10 ನಿಯೋಸ್ ಆವೃತ್ತಿಯಲ್ಲೂ ಕೂಡಾ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಎಂಜಿನ್ ಪರಿಚಯಿಸುತ್ತಿರುವ ಹ್ಯುಂಡೈ ಸಂಸ್ಥೆಯು 100-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯದ ಹೊಸ 1.0-ಲೀಟರ್ ಪೆಟ್ರೋಲ್ ಎಂಜಿನ್ ಅಭಿವೃದ್ದಿ ಪಡಿಸಿದ್ದು, 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ.

ಗ್ರಾಂಡ್ ಐ10 ನಿಯೋಸ್ ಕಾರು 1.2-ಲೀಟರ್ ಕಪ್ಪಾ ಪೆಟ್ರೋಲ್ ಎಂಜಿನ್ ಮೂಲಕ 81-ಬಿಎಚ್‌ಪಿ, 114-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.2-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಮೂಲಕ 76-ಬಿಎಚ್‌ಪಿ, 190-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಬಿಡುಗಡೆಯಾಗಲಿರುವ ಟರ್ಬೋ ಪೆಟ್ರೋಲ್ ಕಾರು ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಮತ್ತಷ್ಟು ಪೈಪೋಟಿಯಾಗಲಿದೆ ಎನ್ನಬಹುದು.

ಹ್ಯುಂಡೈ ಟಕ್ಸನ್
ಹ್ಯುಂಡೈ ಕಂಪನಿಯು ದೆಹಲಿಯಲ್ಲಿ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ತನ್ನ ಟಕ್ಸನ್ ಅನ್ನು ಅನಾವರಣಗೊಳಿಸಿದೆ. ಈ ಟಕ್ಸನ್ ಎಸ್‍ಯುವಿಯು ಬಿಎಸ್-6 ಎಂಜಿನ್ ಅನ್ನು ಹೊಂದಿರಲಿದೆ. ಈ ಎಸ್‍ಯುವಿಯು 2.0 ಪೆಟ್ರೂಲ್ ಎಂಜಿನ್ ಮತ್ತು 2.0 ಡೀಸೆಲ್ ಟರ್ಬೊ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ.

ಹ್ಯುಂಡೈ ಐ30 ಫಾಸ್ಟ್ ಬ್ಯಾಕ್
ಹ್ಯುಂಡೈ ಮೋಟಾರ್ಸ್ ಭವಿಷ್ಯದಲ್ಲಿ ಹಲವಾರು ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ ಹ್ಯುಂಡೈ ಕಂಪನಿಯು ಈಗ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ಐ30 ಫಾಸ್ಟ್ ಬ್ಯಾಕ್ ಕಾರ್ ಅನ್ನು ಅನಾವರಣಗೊಳಿಸಿದೆ. ಐ30 ಫಾಸ್ಟ್ ಬ್ಯಾಕ್ ಕಾರು ಹ್ಯುಂಡೈ ಕಂಪನಿಯ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಈ ಕಾರಿನಲ್ಲಿ 4 ಸಿಲಿಂಡರ್ ಹೊಂದಿರುವ 2.0 ಲೀಟರಿನ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಸ್ಟಾಂಡರ್ಡ್ ಪ್ಯಾಕೇಜ್‍ನಲ್ಲಿ 275 ಬಿಹೆಚ್‍ಪಿ ಪವರ್ ಹಾಗೂ ಪರ್ಫಾಮೆನ್ಸ್ ಪ್ಯಾಕೇಜ್‍ನಲ್ಲಿ 353 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. ಐ 30 ಫಾಸ್ಟ್ ಬ್ಯಾಕ್ ಕಾರ್ ಅನ್ನು ಭಾರತದಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುವುದು.

ಹ್ಯುಂಡೈ ಕೈಟ್ ಕಾನ್ಸೆಪ್ಟ್
ಹ್ಯುಂಡೈ ಕಂಪನಿಯು ದೆಹಲಿಯಲ್ಲಿ ನಡೆಯುತ್ತಿರುವ 2020ರ ಆಟೋ ಎಕ್ಸ್ ಪೋದಲ್ಲಿ ತನ್ನ ಎಲೆಕ್ಟ್ರಿಕ್ ಕೈಟ್ ಡ್ಯೂನ್ ಬಗ್ಗಿ ಕಾನ್ಸೆಪ್ಟ್ ಕಾರ್ ಅನ್ನು ಪ್ರದರ್ಶಿಸಿದೆ. ಈ ಲಘು ತೂಕದ ಕಾನ್ಸೆಪ್ಟ್ ಎಲೆಕ್ಟ್ರಿಕ್ ಕಾರ್ ಅನ್ನು ಯುರೋಪ್‍ನಲ್ಲಿರುವ ಹ್ಯುಂಡೈ ಡಿಸೈನ್ ಸೆಂಟರ್ ಅಭಿವೃದ್ಧಿಪಡಿಸಿದೆ. ಹ್ಯುಂಡೈ ಕೈಟ್ ವಾಹನವು ಮೊನೊಕಾಕ್ ಚಾಸೀಸ್ ಹೊಂದಿದೆ. ಈ ವಾಹನದ ಉದ್ದ 3,745 ಎಂಎಂ ಹಾಗೂ ಎತ್ತರ 1,455 ಎಂಎಂಗಳಾಗಿದೆ. ಅಂದ ಹಾಗೆ ಈ ಕಾನ್ಸೆಪ್ಟ್ ಕಾರ್ ಅನ್ನು ಕೇವಲ ಪ್ರದರ್ಶನಕ್ಕೆ ಸೀಮಿತಗೊಳಿಸಲಾಗಿದ್ದು, ಈ ಕಾರ್ ಅನ್ನು ಉತ್ಪಾದಿಸುವುದಿಲ್ಲ.


Click it and Unblock the Notifications








