ಕಾರು ಉತ್ಪಾದನೆಗೆ ಮರುಚಾಲನೆ: ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಹ್ಯುಂಡೈ
ಮಾಹಾಮಾರಿ ಕರೋನಾ ವೈರಸ್ ಮಟ್ಟ ಹಾಕುವುದಕ್ಕಾಗಿ ಸದ್ಯ ಮೂರನೇ ಹಂತದ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ಆರ್ಥಿಕ ಪುನಶ್ಚೇತನಕ್ಕಾಗಿ ಕೈಗಾರಿಕಾ ವಲಯಕ್ಕೆ ಕೆಲವು ವಿನಾಯ್ತಿಗಳನ್ನು ಘೋಷಿಸಿದ್ದು, ಆಟೋ ಕಂಪನಿಗಳು ಕೂಡಾ ಹೊಸ ಮಾರ್ಗಸೂಚಿ ಅನುಸಾರವಾಗಿ ವಾಹನ ಉತ್ಪಾದನೆಗೆ ಮರುಚಾಲನೆ ನೀಡಿವೆ.

ಹ್ಯುಂಡೈ ಕೂಡಾ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಾರ ಕಾರು ಉತ್ಪಾದನೆಯನ್ನು ಪುನಾರಂಭಿಸಿದ್ದು, ಚೆನ್ನೈ ಹೊರವಲಯದಲ್ಲಿರುವ ಕಾರು ಉತ್ಪಾದನಾ ಘಟಕದಲ್ಲಿ ಗರಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಗ ಮರುಚಾಲನೆ ನೀಡಿದೆ. ಶೇ.33 ರಷ್ಟು ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆಗೆ ಗುಣಮಟ್ಟದ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿರಲಿದೆ.

ಇದಲ್ಲದೇ ವಾಹನ ಮತ್ತು ಬಿಡಿಭಾಗಗಳ ಉತ್ಪಾದನೆಗೆ ಮರುಚಾಲನೆ ನೀಡಿರುವ ವಿವಿಧ ಆಟೋ ಕಂಪನಿಗಳು ಸಹ ಸೋಂಕು ಹರಡದಂತೆ ಈಗಾಗಲೇ ಹಲವಾರು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ನಿರ್ದಿಷ್ಟ ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಆರಂಭಿಸಲಾಗಿದೆ.

ಮಾರುತಿ ಸುಜುಕಿ, ಬಜಾಜ್ ಆಟೋ, ಟಿವಿಎಸ್, ಟೊಯೊಟಾ, ಮಹೀಂದ್ರಾ ಸೇರಿದಂತೆ ಬಿಡಿಭಾಗಗಳ ಉತ್ಪಾದನಾ ಕಂಪನಿಗಳಾದ ಲುಮ್ಯಾಕ್ಸ್, ಸೆಟ್ಕೋ, ಪ್ರಿಕೊಲ್ ಮತ್ತು ಅಪೊಲೋ ಕಂಪನಿಗಳು ಕೂಡಾ ಉತ್ಪಾದನಾ ಚಟುವಟಿಕೆಗೆ ಮರುಚಾಲನೆ ನೀಡಿವೆ.
MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಕೇಂದ್ರ ಸರ್ಕಾರ ನೀಡಿರುವ ಹೊಸ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ.

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಯಾವುದೇ ಉತ್ಪಾದನಾ ಚಟುವಟಿಕೆಗಳಿಲ್ಲದೆ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದ ಕೈಗಾರಿಕೆ ವಲಯಕ್ಕೆ ಇದೀಗ ನೀಡಿರುವ ಕೆಲವು ವಿನಾಯ್ತಿಗಳಿಂದ ಉತ್ಪಾದನೆಗೆ ಮತ್ತೆ ಚಾಲನೆ ಸಿಕ್ಕಿರುವುದು ತುಸು ಸಮಾಧಾನ ತಂದಿದೆ.
MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಆದರೆ ಉತ್ಪಾದನಾ ಸ್ಥಳದಲ್ಲಿ ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ತೆಗೆದುಕೊಳ್ಳಬೇಕಿರುವುದು ಆಯಾ ಕಂಪನಿಗಳ ಆದ್ಯ ಕರ್ತವ್ಯವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಖಾತ್ರಿ ವ್ಯಕ್ತಪಡಿಸಿವೆ.

ಇನ್ನು ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುತ್ತಿವೆ.
MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..

ಹ್ಯುಂಡೈ ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರೂ.12 ಕೋಟಿ ಹಣಕಾಸಿನ ನೆರವು ನೀಡಿದ್ದು, ಜೊತೆಗೆ ರೂ.5 ಕೋಟಿ ಮೌಲ್ಯದ ಪಿಪಿಇ ಕಿಟ್, ಕೋವಿಡ್-19 ಅಡ್ವಾನ್ಸ್ ಟೆಸ್ಟಿಂಗ್ ಕಿಟ್, ಸುಧಾರಿತ ತಂತ್ರಜ್ಞಾನ ಪ್ರೇರಿತ ಸಾವಿರಾರು ವೆಂಟಿಲೇಟರ್‌ಗಳು ಮತ್ತು ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೂ ಸಹಕಾರ ನೀಡುತ್ತಿದೆ.


Click it and Unblock the Notifications