ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಇದೀಗ ಹ್ಯುಂಡೈ ವೆನ್ಯೂ ಕಾರು ನಂ.1
ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಿಗೆ ಅತಿ ಬೇಡಿಕೆಯಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರು ಮಾದರಗಳ ನಡುವೆ ಭಾರೀ ಪೈಪೋಟಿಯಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿನ ಅಗ್ರಸ್ಥಾನಕ್ಕಾಗಿ ಎಕ್ಸ್‌ಯುವಿ300 ಮತ್ತು ನೆಕ್ಸಾನ್ ಮಾದರಿಗಳಿಂತಲೂ ಹ್ಯುಂಡೈ ವೆನ್ಯೂ ಮತ್ತು ಮಾರುತಿ ಸುಜುಕಿ ಬ್ರೆಝಾ ನಡುವೆ ಭಾರೀ ಪೈಪೋಟಿಯಿದ್ದು, ಅಗಸ್ಟ್ ಅವಧಿಯ ಕಾರು ಮಾರಾಟದಲ್ಲಿ ವೆನ್ಯೂ ಕಾರು ಬ್ರೆಝಾ ಕಾರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಲಾಕ್‌ಡೌನ್ ವೇಳೆ ತೀವ್ರವಾಗಿ ಕುಸಿತ ಕಂಡಿದ್ದ ವೆನ್ಯೂ ಕಾರಿನ ಮಾರಾಟವು ಇದೀಗ ಸುಧಾರಣೆ ಕಂಡಿದ್ದು, 8,267 ಯುನಿಟ್ ಮಾರಾಟಗೊಂಡಿದೆ.

ಇದೇ ಸಮಯದಲ್ಲಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರು 6,903 ಯುನಿಟ್‌ನೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿ ಕ್ರಮವಾಗಿ ಟಾಟಾ ನೆಕ್ಸಾನ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಮಾದರಿಗಳು ಅತಿ ಹೆಚ್ಚು ಮಾರಾಟವಾದ ಕಾರು ಮಾದರಿಗಳಾಗಿವೆ.

2019 ಮೇ ಅವಧಿಯಲ್ಲಿ ಬಿಡುಗಡೆಗೊಂಡಿದ್ದ ಹ್ಯುಂಡೈ ಕಂಪನಿಯ ಹೊಸ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಬಿಡುಗಡೆಯಾದ ಕೆಲವೇ ಒಂದೇ ವರ್ಷದ ಅವಧಿಯಲ್ಲಿ 1 ಲಕ್ಷಕ್ಕೂ ಅಧಿಕ ಕಾರು ಮಾರಾಟ ದಾಖಲೆ ಕಂಡಿದ್ದು, ಟಾಪ್ ಎಂಡ್ ಮಾದರಿಯಾದ 1.0-ಲೀಟರ್ ಟರ್ಬೋ ಎಂಜಿನ್ ಮಾದರಿಗೆ ಅತಿ ಹೆಚ್ಚು ಬೇಡಿಕೆ ಹೊಂದಿದೆ.

ಹ್ಯುಂಡೈ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವೆನ್ಯೂ ಮಾದರಿಯಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಇದು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಿಂತಲೂ ಹೆಚ್ಚಿನ ಪರ್ಫಾಮೆನ್ಸ್ ಮತ್ತು ತಾಂತ್ರಿಕವಾಗಿ ಬಲಿಷ್ಠ ಕಾರು ಮಾದರಿಯಾಗಿದೆ. ಹೀಗಾಗಿ ಸಾಕಷ್ಟು ಗ್ರಾಹಕರು ಬೆಲೆ ದುಬಾರಿಯಾಗಿದ್ದರೂ ಸಹ ಟಾಪ್ ಎಂಡ್ ಮಾದರಿಯ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹ್ಯುಂಡೈ ಕಂಪನಿಗೂ ಇದು ಭಾರೀ ಪ್ರಮಾಣದ ಲಾಭ ತಂದುಕೊಟ್ಟಿದೆ.

ವೆನ್ಯೂ ಕಾರು ಸದ್ಯ ಹ್ಯುಂಡೈ ನಿರ್ಮಾಣದ ಇತರೆ ಕಾರುಗಳಿಂತಲೂ ಅತಿ ವಿನೂತನ ತಂತ್ರಜ್ಞಾನ ಸೌಲಭ್ಯಗಳನ್ನು ಹೊತ್ತು ಬಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 5 ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.70 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.11.58 ಲಕ್ಷ ಬೆಲೆ ಪಡೆದುಕೊಂಡಿದೆ.

ವೆನ್ಯೂ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದ್ದರೆ ಡಿಸೇಲ್ ಎಂಜಿನ್‌ನಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದ್ದು, ಇ, ಎಸ್, ಎಸ್ಎಕ್ಸ್, ಎಸ್ಎಕ್ಸ್(0) ಮತ್ತು ಎಸ್ಎಕ್ಸ್ ಪ್ಲಸ್ ವೆರಿಯೆಂಟ್‌ಗಳಲ್ಲಿ ಹೊಸ ವೆನ್ಯೂ ಕಾರು ಖರೀದಿಗೆ ಲಭ್ಯವಿದೆ.

ಮೊದಲ ಬಾರಿಗೆ ಬಿಡುಗಡೆಯಾದ ಸಂದರ್ಭದಲ್ಲಿ ಬಿಎಸ್-4 ಎಂಜಿನ್ ಹೊಂದಿದ್ದ ವೆನ್ಯೂ ಕಾರು ಇದೀಗ ಹೊಸ ಎಮಿಷನ್ ನಿಯಮದಂತೆ ಬಿಎಸ್-6 ಎಂಜಿನ್ ಆಯ್ಕೆ ಹೊಂದಿದ್ದು, 1.2-ಲೀಟರ್ ಕಪ್ಪಾ ಪೆಟ್ರೋಲ್, 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಜೋಡಣೆ ಮಾಡಲಾಗಿದೆ.

ಬಿಎಸ್-4 ಎಂಜಿನ್ ಆಯ್ಕೆಯಲ್ಲಿ 1.2-ಲೀಟರ್ ಪೆಟ್ರೋಲ್, 1.4-ಲೀಟರ್ ಡೀಸೆಲ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದ ವೆನ್ಯೂ ಕಾರಿನಲ್ಲಿ ಬಿಎಸ್-6 ಎಮಿಷನ್ ಕಡ್ಡಾಯ ನಂತರ 1.4-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಹೊಸದಾಗಿ ಅಭಿವೃದ್ದಿಪಡಿಸಲಾಗಿದ್ದ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಪವರ್‌ಪುಲ್ ಎಂಜಿನ್ ಆಯ್ಕೆ ಹೊಂದಿರುವ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಯು ಅತಿ ಹೆಚ್ಚು ಬೇಡಿಕೆಯ ವೆರಿಯೆಂಟ್ ಆಗಿ ಹೊರಹೊಮ್ಮಿದ್ದು, 6-ಸ್ಪೀಡ್ ಐಎಂಟಿ(ಇಂಟೆಲಿಜೆಂಟ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಮತ್ತು ಟರ್ಬೋ ಪೆಟ್ರೋಲ್‌ನಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 120-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಇನ್ನುಳಿದ 1.2-ಲೀಟರ್ ಕಪ್ಪಾ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 82-ಬಿಎಚ್‌ಪಿ, 115-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ, 1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮಾದರಿಯು 99-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಇನ್ನುಳಿದಂತೆ ತಾಂತ್ರಿಕವಾಗಿ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿರುವ ವೆನ್ಯೂ ಕಾರು 33 ಫೀಚರ್ಸ್‌ಗಳನ್ನು ಹೊಂದಿರುವ ಬ್ಯೂ ಲಿಂಕ್ ಕನೆಕ್ಟಿವಿಟಿ ಸೌಲಭ್ಯವನ್ನು ಸಹ ಹೊಂದಿದ್ದು, ಹೊಸ ಕಾರಿಗೆ ಗರಿಷ್ಠ ಭದ್ರತೆಯನ್ನು ದೊರೆಯಲಿದೆ.

ಹೊಸ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್, ISOFIX ಸೀಟ್, ಹೊಂದಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.


Click it and Unblock the Notifications








