ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಸೊಲ್ ಎಲೆಕ್ಟ್ರಿಕ್ ಕಾರು ಪ್ರದರ್ಶನಗೊಳಿಸಲಿದೆ ಕಿಯಾ
ಕಿಯಾ ಮೋಟಾರ್ಸ್ ಸಂಸ್ಥೆಯು ಸದ್ಯ ಸೆಲ್ಟೊಸ್ ಕಾರು ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲೇ ಕಾರ್ನಿವಾಲ್ ಎಂಪಿವಿ ಸೇರಿದಂತೆ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಭರ್ಜರಿ ಸಿದ್ದತೆ ನಡೆಸುತ್ತಿದೆ.

ಇದೇ ತಿಂಗಳು 5ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಭಾಗಿಯಾಗಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ತನ್ನ ಭವಿಷ್ಯದ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಲಿದ್ದು, ಸಾಮಾನ್ಯ ಕಾರು ಮಾದರಿಗಳಲ್ಲೇ ವಿವಿಧ ಮಾದರಿಯ ಎಲೆಕ್ಟ್ರಿಕ್ ಕಾರುಗಳನ್ನು ಸಹ ಅನಾವರಣಗೊಳಿಸಲಿದೆ. ಅನಾವರಣಗೊಳ್ಳುವ ಎಲೆಕ್ಟ್ರಿಕ್ ಕಾರುಗಳಲ್ಲಿ ಸೊಲ್ ಮತ್ತು ನಿರೋ ಇವಿ ಕಾರುಗಳು ಪ್ರಮುಖ ಆಕರ್ಷಣೆಯಾಗಲಿದ್ದು, ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಲಿವೆ.

ಸಹೋದರ ಸಂಸ್ಥೆ ಹ್ಯುಂಡೈಗಿಂತಲೂ ಅತ್ಯುತ್ತಮ ಕಾರು ಉತ್ಪನ್ನಗಳನ್ನು ಹೊಂದಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಭಾರೀ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಅಗ್ಗದ ಬೆಲೆಯಲ್ಲಿ ಉತ್ತಮ ಮಾದರಿಯ ಹ್ಯಾಚ್‌ಬ್ಯಾಕ್, ಎಸ್‌ಯುವಿ, ಸೆಡಾನ್, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯು ತನ್ನ ಮೊದಲ ಕಾರು ಮಾದರಿಯಾದ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗೊಳಿಸಿ ದಾಖಲೆ ಪ್ರಮಾಣದ ಮಾರಾಟವನ್ನು ತನ್ನದಾಗಿಸಿಕೊಂಡಿದ್ದು, ಸೆಲ್ಟೊಸ್ ಯಶಸ್ವಿ ಬಿಡುಗಡೆಯ ನಂತರ ಮತ್ತೈದು ಹೊಸ ಬ್ರಾಂಡ್ ಕಾರುಗಳನ್ನು ಬಿಡುಗಡೆಗಾಗಿ ಸಿದ್ದವಾಗುತ್ತಿದೆ.

ಮಾಹಿತಿಗಳ ಪ್ರಕಾರ ಮುಂದಿನ ಫೆಬ್ರುವರಿ ವೇಳೆಗೆ ಕಾರ್ನಿವಾಲ್ 7 ಸೀಟರ್ ಎಂಪಿವಿ ಬಿಡುಗಡೆ ಮಾಡಲಿರುವ ಕಿಯಾ ಸಂಸ್ಥೆಯು ತದನಂತರ ಸೆರೆಂಟೊ ಸೆಡಾನ್ ಮತ್ತು ಸೊಲ್ ಎಲೆಕ್ಟ್ರಿಕ್, ನಿರೋ ಎಲೆಕ್ಟ್ರಿಕ್ ಮತ್ತು ಐಷಾರಾಮಿ ಎಸ್‌ಯುವಿ ಮಾದರಿಯಾದ ಟೆಲ್ಲುರೈಡ್ ಕಾರನ್ನು ಬಿಡುಗಡೆ ಮಾಡಲಿದೆ. ಸೊಲ್ ಎಲೆಕ್ಟ್ರಿಕ್ ಮಾದರಿಯು ಮಧ್ಯಮ ಕ್ರಮಾಂಕ ಹ್ಯಾಚ್‌ಬ್ಯಾಕ್ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದ್ದರೆ ನಿರೋ ಎಲೆಕ್ಟ್ರಿಕ್ ಕಾರು ಮಾದರಿಯು ಐಷಾರಾಮಿ ಫೀಚರ್ಸ್‌ನೊಂದಿಗೆ ಅಧಿಕ ಮಟ್ಟದ ಮಟ್ಟದ ಮೈಲೇಜ್ ಪಡೆದುಕೊಂಡಿರಲಿದೆ.

ಸೊಲ್ ಮತ್ತು ನಿರೋ ಎಲೆಕ್ಟ್ರಿಕ್ ಕಾರುಗಳು ಈಗಾಗಲೇ ಚೀನಾ ಮತ್ತು ಕೊರಿಯಾದಲ್ಲಿ ಮಾರಾಟಗೊಳ್ಳುತ್ತಿದ್ದು, ಇದೀಗ ಮೊದಲ ಬಾರಿಗೆ ಭಾರತದಲ್ಲೂ ಬಿಡುಗಡೆಯಾಗುತ್ತಿರುವುದು ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

ಹ್ಯಾಚ್‌ಬ್ಯಾಕ್ ಆವೃತ್ತಿಯಾಗಿರುವ ಸೊಲ್ ಕಾರು ಭಾರತದಲ್ಲಿ ಇದೇ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗಲಿದ್ದು, ಆಟೋ ಎಕ್ಸ್‌ಪೋದಲ್ಲಿ ಭಾಗಿಯಾದ ನಂತರ ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆ ಅಧಿಕೃತ ಚಾಲನೆ ದೊರೆಯಲಿದೆ.

ಪ್ರತಿ ಚಾರ್ಜ್‌ಗೆ 250ಕಿ.ಮೀ ನಿಂದ 300 ಕಿ.ಮೀ ಮೈಲೇಜ್ ಹೊಂದಿರುವ ಸೊಲ್ ಕಾರು ರೂ.10 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದ್ದು, ಐಷಾರಾಮಿ ಫೀಚರ್ಸ್ ಹೊಂದಿರುವ ನಿರೋ ಕಾರು ತುಸು ದುಬಾರಿಯಾಗಿರಲಿದೆ.

ನಿರೋ ಕಾರು ಪ್ರತಿ ಚಾರ್ಜ್‌ಗೆ 481 ಕಿ.ಮೀ ಮೈಲೇಜ್‌ನೊಂದಿಗೆ ಹಲವು ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ಕೇವಲ 50 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾದ ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ಈ ಕಾರಿನಲ್ಲಿದೆ.

ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳಿಂದಾಗಿ ನಿರೋ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.25 ಲಕ್ಷದಿಂದ ರೂ.30 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಭಾರತೀಯ ಮಾರುಕಟ್ಟೆಗಾಗಿ ಕೆಲವು ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ.

ಇನ್ನು ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಅಭಿವೃದ್ದಿಗಾಗಿ ಹ್ಯುಂಡೈ ಜೊತೆಗೂಡಿರುವ ಕಿಯಾ ಸಂಸ್ಥೆಯು ಸ್ವತಂತ್ರವಾಗಿ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡಲಿದ್ದು, ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಳ್ಳಲಿವೆ.


Click it and Unblock the Notifications








