ಕಾರು ಉತ್ಪಾದನೆಯಲ್ಲಿ ಹೊಸ ದಾಖಲೆಗೆ ಕಾರಣವಾದ ಮಹೀಂದ್ರಾ
ದೇಶದ ಜನಪ್ರಿಯ ವಾಹನ ಉತ್ಪಾದನಾ ಸಂಸ್ಥೆಯಾಗಿರುವ ಮಹೀಂದ್ರಾ ಸದ್ಯ ಎಸ್‌ಯುವಿ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಸದ್ಯ ಕಾರುಗಳ ಉತ್ಪಾದನೆಯಲ್ಲಿ ಮಹೀಂದ್ರಾ ಸಂಸ್ಥೆಯು ಹೊಸ ದಾಖಲೆಗೆ ಕಾರಣವಾಗಿದೆ.

ದೇಶದ ವಿವಿಧಡೆ ವಾಹನ ಉತ್ಪಾದನಾ ಘಟಕಗಳನ್ನು ಹೊಂದಿರುವ ಮಹೀಂದ್ರಾ ಸಂಸ್ಥೆಯು ಮಹಾರಾಷ್ಟ್ರದಲ್ಲಿರುವ ನಾಶಿಕ್ ಕಾರು ಉತ್ಪಾದನಾ ಘಟಕ ಒಂದರಲ್ಲೇ ಇದುವರೆಗೆ 25 ಲಕ್ಷ ಕಾರುಗಳನ್ನು ನಿರ್ಮಾಣ ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದು, 1981ರ ಆರಂಭವಾಗಿದ್ದ ಈ ಘಟಕದಲ್ಲಿ ಜನಪ್ರಿಯ ಎಸ್‌ಯುವಿ ಮಾದರಿಯಾಗಿರುವ ಸ್ಕಾರ್ಪಿಯೋ ಉತ್ಪಾದನೆ ಮಾಡುವ ಮೂಲಕ 25 ಲಕ್ಷ ಕಾರು ಉತ್ಪಾದನಾ ಗುರಿಯನ್ನು ತಲುಪಲಾಯ್ತು.

1981ರಲ್ಲಿ ಎಫ್‌ಜೆ ಮಿನಿ ಬಸ್ ತಯಾರಿಕೆಯೊಂದಿಗೆ ಆರಂಭವಾಗಿದ್ದ ನಾಶಿಕ್ ಕಾರು ಉತ್ಪಾದನಾ ಘಟಕವು ಆರಂಭದಲ್ಲಿ ಪ್ರತಿ ದಿನ 8 ವಾಹನಗಳನ್ನು ನಿರ್ಮಾಣ ಮಾಡುತ್ತಿತ್ತು. ಇದೀಗ ಇದರ ಪ್ರಮಾಣವು ದಿನಕ್ಕೆ 700ಕ್ಕಿಂತೂ ಹೆಚ್ಚಾಗಿದ್ದು, ವಾರ್ಷಿಕವಾಗಿ 2.10 ಲಕ್ಷ ವಾಹನಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ನಾಶಿಕ್ ಘಟಕದಲ್ಲಿ ಪ್ರಮುಖ ಕಾರು ಮಾದರಿಗಳಾದ ಸ್ಕಾರ್ಪಿಯೋ, ಮರಾಜೋ, ಎಕ್ಸ್‌ಯುವಿ 300, ಬೊಲೆರೊ, ಇ-ವೆರಿಟೋ ಮತ್ತು ಥಾರ್ ಕಾರುಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, ಒಟ್ಟು 147 ಎಕರೆ ವಿಸ್ತೀರ್ಣ ಹೊಂದಿದೆ.

ವಿಶ್ವದ ಪ್ರಮುಖ 34 ರಾಷ್ಟ್ರಗಳಿಗೆ ಇಲ್ಲಿಂದಲೇ ಹೊಸ ವಾಹನಗಳನ್ನು ರಫ್ತು ಮಾಡುವ ಮಹೀಂದ್ರಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ಸಾಗರೋತ್ತರ ಬೇಡಿಕೆಯಲ್ಲೂ ಮುಂಚೂಣಿಯಲ್ಲಿದೆ. ಇದರೊಂದಿಗೆ ಮಹೀಂದ್ರಾ ಸಂಸ್ಥೆಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ವಾಹನ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ನ್ಯೂ ಜನರೇಷನ್ ಆವೃತ್ತಿಗಳೊಂದಿಗೆ ವಿವಿಧ ಮಾದರಿಯ ಹೊಸ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.

ಕೇಂದ್ರ ಸರ್ಕಾರದ ಹೊಸ ನಿಯಮದಂತೆ ಮಹೀಂದ್ರಾ ಸೇರಿದಂತೆ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಬಿಎಸ್-6 ಎಂಜಿನ್ ಪ್ರೇರಿತ ವಾಹನಗಳನ್ನು ಬಿಡುಗಡೆಗೊಳಿಸುತ್ತಿದ್ದು, ಮಹೀಂದ್ರಾ ಕೂಡಾ ತನ್ನ ಹೊಸ ವಾಹನ ಮಾದರಿಗಳನ್ನು ನಾಳೆಯಿಂದ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಿದೆ.

ಪ್ರದರ್ಶನಗೊಳ್ಳುವ ಕಾರುಗಳಲ್ಲಿ ಬಿಎಸ್-6 ಎಂಜಿನ್ ಪ್ರೇರಿತ ಮರಾಜೋ, ಟಿಯುವಿ300 ಪ್ಲಸ್, ಟಿಯುವಿ300, ಎಕ್ಸ್‌ಯುವಿ500, ಎಕ್ಸ್‌ಯುವಿ300 ಮತ್ತು ನೆಕ್ಸ್ಟ್ ಜನರೇಷನ್ ಸ್ಕಾರ್ಪಿಯೋ, ಬೊಲೆರೊ ಪ್ರಮುಖವಾಗಿದ್ದು, ಇದರೊಂದಿಗೆ ಎಲೆಕ್ಟ್ರಿಕ್ ಆವೃತ್ತಿಗಳಾದ ಕೆಯುವಿ100 ಇವಿ, ಎಕ್ಸ್‌ಯುವಿ300 ಇವಿ ಸೇರಿದಂತೆ ಮತ್ತೆರಡು ಹೊಸ ಎಲೆಕ್ಟ್ರಿಕ್ ಕಾನ್ಸೆಪ್ಟ್‌ಗಳು ಭಾಗಿಯಾಗಲಿವೆ.

ಬಿಎಸ್-6 ವೈಶಿಷ್ಟ್ಯತೆಗಳಿಂದಾಗಿ ಮಹೀಂದ್ರಾ ಹೊಸ ಕಾರುಗಳ ಎಂಜಿನ್ ಜೊತೆಗೆ ಪ್ರಯಾಣಿಕ ಸುರಕ್ಷತೆಗಾಗಿ ಹಲವಾರು ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಸ್ಟ್ಯಾಂಡರ್ಡ್ ಫೀಚರ್ಸ್‌ಗಳಾದ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಜೊತೆ ಇಬಿಡಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲ್ ಸಿಸ್ಟಂ, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ರಿಮೆಂಡರ್ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಹಾಗೆಯೇ ಟಾಪ್ ಎಂಡ್ ಆವೃತ್ತಿಗಳಲ್ಲಿ 6 ಏರ್‌ಬ್ಯಾಗ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಯ್ದ ವೆರಿಯೆಂಟ್‌ಗಳಲ್ಲಿ ಸನ್‌ರೂಫ್, ರೂಫ್ ರೈಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟಕ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರಿಯರ್ ಎಸಿ ವೆಂಟ್ಸ್, ಲೆದರ್ ಸೀಟುಗಳು, 6 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಡ್ರೈವರ್ ಸೀಟು ಮತ್ತು ಒಂದೇ ಸೂರಿನಡಿ ವಿವಿಧ ಮಾಹಿತಿಗಳನ್ನು ನೀಡಬಲ್ಲ ಟಚ್ ಸ್ಕ್ರಿನ್ ಇನ್ಪೋಟೈನ್‌ಟೆಂಟ್ ಸಿಸ್ಟಂ ಜೋಡಣೆ ಮಾಡಲಾಗಿದೆ.

ಇದರೊಂದಿಗೆ ಕಾರು ಕಳ್ಳತನಗಳಿಗೆ ಬ್ರೇಕ್ ಹಾಕಲು ಜಿಯೋ ಫೆನ್ಸ್ ಅಲರ್ಟ್ ಸೇರಿದಂತೆ ಸೆಂಟರ್ ಲಾಕಿಂಗ್ ಸಿಸ್ಟಂ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಪ್ರಯಾಣಿಕರ ಸುರಕ್ಷೆತೆಗಾಗಿ ಗರಿಷ್ಠ ಮಟ್ಟದಲ್ಲಿ ಸುರಕ್ಷಾ ಸೌಲಭ್ಯ ಗಳನ್ನು ಅಳವಡಿಸಿರುವುದೇ ಈ ಬಾರಿ ಹೊಸ ಕಾರುಗಳ ಪ್ರಮುಖ ಆಕರ್ಷಣೆಯಾಗಲಿದೆ. ಹಾಗೆಯೇ ಹೊಸ ಕಾರುಗಳಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಅಳವಡಿಸಿರುವುದು ಬೆಲೆ ಹೆಚ್ಚಳಕ್ಕೂ ಕಾರಣವಾಗಿದೆ.


Click it and Unblock the Notifications








