ಸ್ಯಾಂಗ್‌ಯಾಂಗ್ ಜೊತೆಗಿನ ಸಹಭಾಗಿತ್ವ ಯೋಜನೆ ಕೈಬಿಡಲಿದೆ ಮಹೀಂದ್ರಾ
ದಕ್ಷಿಣ ಕೊರಿಯಾ ಕಾರು ಉತ್ಪಾದನಾ ಕಂಪನಿ ಸ್ಯಾಂಗ್‌ಯಾಂಗ್ ಜೊತೆಗಿನ ಸಹಭಾಗಿತ್ವ ಯೋಜನೆಯನ್ನು ಕೈಬಿಡಲು ನಿರ್ಧರಿಸಿರುವ ಮಹೀಂದ್ರಾ ಕಂಪನಿಯು ಸ್ಯಾಂಗ್‌ಯಾಂಗ್ ಕಂಪನಿಯ ಸ್ಟಾಕ್ ಮಾರಾಟ ಮಾಡುವ ನಿರ್ಧಾರ ಪ್ರಕಟಿಸಿದೆ.

ಸ್ಯಾಂಗ್‌ಯಾಂಗ್ ಕಂಪನಿ ಜೊತೆಗಿನ ಯೋಜನೆಗಳಿಂದ ಸತತ ನಷ್ಟ ಮತ್ತು ಕರೋನಾ ವೈರಸ್ ಪರಿಣಾಮ ನೆಲಕಚ್ಚಿರುವ ಆಟೋ ಉದ್ಯಮದಲ್ಲಿನ ಸಂಕಷ್ಟಕರ ಪರಿಸ್ಥಿತಿಯಿಂದ ಸಹಭಾಗಿತ್ವ ಯೋಜನೆಗೆ ಬ್ರೇಕ್ ಹಾಕಿರುವ ಮಹೀಂದ್ರಾ ಕಂಪನಿಯು ಸ್ಯಾಂಗ್‌ಯಾಂಗ್ ಕಂಪನಿಯಲ್ಲಿನ ಹೂಡಿಕೆಯನ್ನು ಹಿಂಪಡೆಯಲು ನಿರ್ಧರಿಸಿದೆ. ಸುಮಾರು 10 ವರ್ಷಗಳ ಹಿಂದೆ ಭಾರತದಲ್ಲಿ ಸ್ಯಾಂಗ್‌ಯಾಂಗ್ ಪರಿಚಯಿಸಿದ್ದ ಮಹೀಂದ್ರಾ ಕಂಪನಿಯು ಸತತ ನಷ್ಟವಾಗುತ್ತಿರುವ ಹಿನ್ನಲೆ ಹೊಸ ಹೂಡಿಕೆದಾರರತ್ತ ಮುಖ ಮಾಡಿದೆ.

ಸ್ಯಾಂಗ್‌ಯಾಂಗ್ ಕಂಪನಿಯಲ್ಲಿ ಶೇ.75ರಷ್ಟು ಸ್ಟಾಕ್ ಹೊಂದಿರುವ ಮಹೀಂದ್ರಾ ಕಂಪನಿಯು ಕಳೆದ ವರ್ಷ ರೂ.3,255 ಕೋಟಿ ನಷ್ಟ ಅನುಭವಿಸಿದ್ದು, ಇದೀಗ ಕರೋನಾ ವೈರಸ್ ಪರಿಣಾಮ ಮತ್ತಷ್ಟು ನಷ್ಟ ಉಂಟಾಗುವ ಮುನ್ಸೂಚನೆ ಸಿಕ್ಕಿದೆ.

ಹೀಗಿರುವಾಗ ಸ್ಯಾಂಗ್‌ಯಾಂಗ್ ಉತ್ಪನ್ನಗಳ ಅಭಿವೃದ್ದಿಗಾಗಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿರುವ ಮಹೀಂದ್ರಾ ಕಂಪನಿಯು ಹೊಸ ಹೂಡಿಕೆದಾರರಿಗೆ ಸ್ಟಾಕ್ ಮಾರಾಟ ಮಾಡಲು ನಿರ್ಧರಿಸಿದ್ದು, ಕೋವಿಡ್-19 ವೈರಸ್ ಹರಡುವುದಕ್ಕೂ ಮುನ್ನ ಕೈಗೊಳ್ಳಲಾಗಿದ್ದ ಹಲವು ಹೊಸ ಯೋಜನೆಗಳನ್ನು ಸಹ ಮೊಟಕುಗೊಳಿಸಿದೆ.

2011ರಲ್ಲಿ ರೆಕ್ಸ್ಟಾನ್ ಎಸ್‌ಯುವಿ ಮೂಲಕ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದ ಸ್ಯಾಂಗ್‌ಯಾಂಗ್ ಕಂಪನಿಯು ಮಹೀಂದ್ರಾ ಸಹಭಾಗಿತ್ವದಲ್ಲಿ ವಿವಿಧ ಕಾರು ಮಾದರಿಗಳನ್ನು ಅಭಿವೃದ್ದಿಗೊಳಿಸಿತ್ತು. ಆದರೆ ಪ್ರತಿಸ್ಪರ್ಧಿ ಕಾರು ಮಾದರಿಗಳ ಅಬ್ಬರದ ಮುಂದೆ ಸ್ಯಾಂಗ್‌ಯಾಂಗ್ ಹೊಸ ಕಾರುಗಳ ಮಾರಾಟವು ನೀರಿಕ್ಷಿತ ಪ್ರಮಾಣವನ್ನು ಸಹ ತಲುಪುವಲ್ಲಿ ವಿಫಲವಾದವು.

ತದನಂತರ ಸ್ಯಾಂಗ್‌ಯಾಂಗ್ ಕಾರುಗಳ ವಿನ್ಯಾಸವನ್ನೇ ಬಳಸಿಕೊಂಡ ಮಹೀಂದ್ರಾ ಕಂಪನಿಯು ರೆಕ್ಸ್ಟಾನ್ ಬದಲಿದೆ ಅಲ್ಟುರಾಸ್ ಜಿ4 ಮತ್ತು ಸ್ಯಾಂಗ್‌ಯಾಂಗ್ ಟ್ರಿವೊಲಿ ಕಾರಿನ ವಿನ್ಯಾಸದಲ್ಲಿ ಎಕ್ಸ್‌ಯುವಿ300 ಮಾದರಿಯನ್ನು ಬಿಡುಗಡೆ ಮಾಡಿತ್ತು.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಎಕ್ಸ್‌ಯುವಿ300 ಹೊರತುಪಡಿಸಿ ಅಲ್ಟುರಾಸ್ ಜಿ4 ಸಹ ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಈ ಹಿನ್ನಲೆಯಲ್ಲಿ ಸ್ಯಾಂಗ್‌ಯಾಂಗ್ ಕಂಪನಿಯಲ್ಲಿನ ತನ್ನ ಸ್ಟಾಕ್ ಮಾರಾಟಕ್ಕೆ ನಿರ್ಧರಿಸಿದೆ. ಹಾಗೆಂದು ಸಂಪೂರ್ಣವಾಗಿ ಮಹೀಂದ್ರಾ ಕಂಪನಿಯು ಸ್ಯಾಂಗ್‌ಯಾಂಗ್ ಕಂಪನಿಯಲ್ಲಿನ ಸ್ಟಾಕ್ ಪ್ರಮಾಣವನ್ನು ಸಂಪೂರ್ಣವಾಗಿ ಬಿಟ್ಟುಕೊಡಲು ನಿರ್ಧರಿಸಿಲ್ಲ.

ಇಂತಿಷ್ಟು ಪ್ರಮಾಣದಲ್ಲಿ ಸ್ಟಾಕ್ ಮಾರಾಟ ಮಾಡಿ ಸ್ಯಾಂಗ್‌ಯಾಂಗ್ ಕಂಪನಿಯ ಹೊಸ ಯೋಜನೆಗಳಿಗೆ ಹೂಡಿಕೆದಾರರನ್ನು ಹುಡುಕುತ್ತಿರುವ ಮಹೀಂದ್ರಾ ಕಂಪನಿಯು ಫೋರ್ಡ್ ಜೊತೆಗಿನ ಸಹಭಾಗಿತ್ವದ ಯೋಜನೆ ಮೇಲೆ ಹೆಚ್ಚು ಗಮನಹರಿಸಲು ಮುಂದಾಗಿದೆ.
MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಕಳೆದ ವರ್ಷವೇ ಭಾರತದಲ್ಲಿ ಹೊಸ ಕಾರುಗಳ ಬಿಡುಗಡೆಯ ಯೋಜನೆಗಾಗಿ ಸಹಭಾಗಿತ್ವ ಯೋಜನೆಯನ್ನು ಘೋಷಣೆ ಮಾಡಿರುವ ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳು 2021ಕ್ಕೆ ಮೊದಲ ಕಾರು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಯೋಜನೆಯ ತರಾತುರಿಯಲ್ಲಿದ್ದ ಆಟೋ ಕಂಪನಿಗಳಿಗೆ ಸದ್ಯ ಕರೋನಾ ವೈರಸ್ ಬ್ರೇಕ್ ಹಾಕಿದೆ.


Click it and Unblock the Notifications








