ಬಹುನೀರಿಕ್ಷಿತ ಮಹೀಂದ್ರಾ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಬಿಡುಗಡೆಯ ಮಾಹಿತಿ ಬಹಿರಂಗ
ಮಹೀಂದ್ರಾ ಸಂಸ್ಥೆಯು ಈಗಾಗಲೇ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತೆ ಮೂರು ಹೊಸ ಮಾದರಿಯ ಎಲೆಕ್ಟ್ರಿಕ್ ಕಾರು ಆವೃತ್ತಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಇ-ವೆರಿಟೋ ಹೊರತುಪಡಿಸಿ ಹೊಸ ಸುರಕ್ಷಾ ನಿಯಮಗಳ ಅನ್ವಯ ಇ2ಒ ಪ್ಲಸ್ ಮಾದರಿಯ ಉತ್ಪಾದನೆಯನ್ನ ಸ್ಥಗಿತಗೊಳಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆ ಮತ್ತು ಕೇಂದ್ರ ಸರ್ಕಾರದ ಹೊಸ ನಿಯಮಾವಳಿಗಳ ಪ್ರಕಾರ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕೆಯುವಿ100 ಕಾರಿನ ಎಲೆಕ್ಟ್ರಿಕ್ ವರ್ಷನ್ ಸೇರಿದಂತೆ ಎಕ್ಸ್‌ಯುವಿ300 ಎಲೆಕ್ಟ್ರಿಕ್ ಮತ್ತು ಫೋರ್ಡ್ ಜೊತೆಗಿನ ಸಹಭಾಗಿತ್ವದ ಯೋಜನೆ ಅಡಿಯಲ್ಲಿ ಆಸ್ಪೈರ್ ಎಲೆಕ್ಟ್ರಿಕ್ ಸೆಡಾನ್ ಕಾರನ್ನು ಬಿಡುಗಡೆ ಮಾಡಲಿದೆ.

ಇದಕ್ಕಾಗಿಯೇ ಮಹೀಂದ್ರಾ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಅತ್ಯತ್ತಮ ಮೈಲೇಜ್ ನೀಡಬಲ್ಲ ಬ್ಯಾಟರಿ ಬಳಕೆಯನ್ನು ಮಾಡುತ್ತಿದೆ.

ಸದ್ಯ ಮಹೀಂದ್ರಾ ಸಂಸ್ಥೆಯು ಹೊಸ ನಿಯಮಗಳಿಗೆ ಅನುಗುಣವಾಗಿ ತನ್ನ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆ ನೀಡುವ ಉದ್ದೇಶದಿಂದ ಈ ಹಿಂದಿನ ಇ2ಓ ಪ್ಲಸ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿ ಹೊಸ ಕಾರು ಉತ್ಪನ್ನಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಪ್ರಸ್ತತ ಮಾರುಕಟ್ಟೆಯಲ್ಲಿ ಇ-ವೆರಿಟೊ ಸೆಡಾನ್ ಕಾರನ್ನು ಮಾತ್ರವೇ ಮಾರಾಟ ಮಾಡುತ್ತಿರುವ ಮಹೀಂದ್ರಾ ಸಂಸ್ಥೆಯು ಮುಂಬರುವ ಮಾರ್ಚ್ ಅಥವಾ ಏಪ್ರಿಲ್ ಹೊತ್ತಿಗೆ ಕೆಯುವಿ100 ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಿದ್ದವಾಗುತ್ತಿದ್ದು, ತದನಂತರವಷ್ಟೇ ಎಕ್ಸ್‌ಯುವಿ300 ಎಲೆಕ್ಟ್ರಿಕ್ ವರ್ಷನ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಮಾಹಿತಿಗಳ ಪ್ರಕಾರ ಹೊಸ ಎಕ್ಸ್‌ಯುವಿ300 ಇವಿ ಕಾರು ಮುಂದಿನ ತಿಂಗಳು 5ರಿಂದ ಆರಂಭವಾಗಲಿರುವ ದೆಹಲಿ ಆಟೋ ಮೇಳದಲ್ಲಿ ಭಾಗಿಯಾಗುವ ಸಾಧ್ಯತೆಗಳಿದ್ದು, ಉತ್ಪಾದನಾ ಆವೃತ್ತಿಗಳನ್ನು ಪ್ರದರ್ಶನಗೊಳ್ಳಲಿದೆ.

ಸ್ಟ್ಯಾಂಡರ್ಡ್ ಮತ್ತು ಲಾಂಗ್ ರೇಂಜ್ ಎನ್ನುವ ವೆರಿಯೆಂಟ್‌ಗಳನ್ನು ಹೊಂದಲಿರುವ ಎಕ್ಸ್‌ಯುವಿ300 ಇವಿ ಆವೃತ್ತಿಯು ಪ್ರತಿ ಚಾರ್ಚ್‌ಗೆ ಸ್ಟ್ಯಾಂಡರ್ಡ್ ವೆರಿಯೆಂಟ್‌ನಲ್ಲಿ 200ಕಿ.ಮೀ ಮತ್ತು ಲಾಂಗ್ ರೇಂಜ್ ವೆರಿಯೆಂಟ್‌ನಲ್ಲಿ 350-400ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಹೊಸ ಕಾರಿನ ಬ್ಯಾಟರಿ ತಂತ್ರಜ್ಞಾನ ಅಭಿವೃದ್ದಿಗಾಗಿ ಎಲ್‌ಜಿ ಕೆಮಿಕಲ್ಸ್ ಸಂಸ್ಥೆಯೊಂದಿಗೆ ಕೈಜೋಡಿಸಿರುವ ಮಹೀಂದ್ರಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀಥಿಯಂ ಅಯಾನ್ ಬ್ಯಾಟರಿ ಒದಗಿಸಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಸ್ಟ್ಯಾಂಡರ್ಡ್ ಅಥವಾ ಲಾಂಗ್ ರೇಂಜ್ ವೆರಿಯೆಂಟ್ ಆಯ್ಕೆ ಮಾಡಬಹುದಾಗಿದೆ.

ಇನ್ನುಳಿದಂತೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ ಸಾಮಾನ್ಯ ಮಾದರಿಯೆಂತೆ ಹೊಸ ವಿನ್ಯಾಸವನ್ನು ಹೊಂದಿರುವ ಎಲೆಕ್ಟ್ರಿಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.16 ಲಕ್ಷದಿಂದ ರೂ.20 ಲಕ್ಷ ಬೆಲೆಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಇದಲ್ಲದೇ ಮಹೀಂದ್ರಾ ಸಂಸ್ಥೆಯು ಸಾಮಾನ್ಯ ಎಕ್ಸ್‌ಯುವಿ300 ಕಾರು ಮಾರಾಟವನ್ನು ಸಹ ಮುಂದುವರಿಸಲಿದ್ದು, ಈಗಾಗಲೇ ಬಿಎಸ್-6 ಪ್ರೇರಿತ ಪೆಟ್ರೋಲ್ ಮಾದರಿಯನ್ನು ಬಿಡುಗಡೆ ಮಾಡಿದೆ. ಡೀಸೆಲ್ ಆವೃತ್ತಿ ಮಾತ್ರವೇ ಬಿಎಸ್-6 ಎಂಜಿನ್ ಹೊಂದಬೇಕಿದ್ದು, ಹೊಸ ಕಾರು ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ನಂತರವಷ್ಟೇ ಖರೀದಿಗೆ ಲಭ್ಯವಿರಲಿದೆ.

ಬಿಎಸ್-6 ಎಕ್ಸ್‌ಯುವಿ300 ಪೆಟ್ರೋಲ್ ಮಾದರಿಯು ಬಿಎಸ್-4 ಮಾದರಿಗಿಂತಲೂ ರೂ.20 ಸಾವಿರ ಹೆಚ್ಚುವರಿ ಬೆಲೆಯೊಂದಿಗೆ ಬಿಡುಗಡೆಯಾಗಿದ್ದು, ಡೀಸೆಲ್ ಮಾದರಿ ಮಾತ್ರ ಪೆಟ್ರೋಲ್ ಎಂಜಿನ್‌ಗಿಂತಲೂ ದುಬಾರಿ ಬೆಲೆ ಪಡೆದುಕೊಳ್ಳಲಿದೆ.

ಹೊಸ ನಿಯಮದ ಪ್ರಕಾರ, ಪೆಟ್ರೋಲ್ ಕಾರುಗಳಿಂತ ಡೀಸೆಲ್ ಎಂಜಿನ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಬೇಕಿದ್ದು, ಹೊಸ ತಂತ್ರಜ್ಞಾನ ಪ್ರೇರಣೆಯಿಂದಾಗಿ ಪೆಟ್ರೋಲ್ ಕಾರುಗಳು ಪ್ರಸ್ತುತ ಬೆಲೆಗಿಂತ ರೂ.10 ಸಾವಿರದಿಂದ ರೂ.30 ಸಾವಿರ ತನಕ ಮತ್ತು ಡೀಸೆಲ್ ಕಾರುಗಳು ರೂ.80 ಸಾವಿರದಿಂದ ರೂ.1.50 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳಲಿವೆ.

ಎಕ್ಸ್‌ಯುವಿ300 ಕಾರು ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಡಬ್ಲ್ಯು4, ಡಬ್ಲ್ಯು6, ಡಬ್ಲ್ಯು8 ಮತ್ತು ಡಬ್ಲ್ಯು8 ಆಪ್ಷನ್ ಎನ್ನುವ ಪ್ರಮುಖ ಐದು ವೆರಿಯೆಂಟ್‌ಗಳನ್ನು ಹೊಂದಿದ್ದು, ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ. 8.10 ಲಕ್ಷದಿಂದ ಟಾಪ್ ಎಂಡ್ ಮಾದರಿಯು 12.69 ಲಕ್ಷಕ್ಕೆ ಮಾರಾಟವಾಗುತ್ತಿದೆ.

ಇದೀಗ ಬಿಡುಗಡೆಯಾಗಬೇಕಿರುವ ಬಿಎಸ್-6 ಎಕ್ಸ್‌ಯುವಿ300 ಡೀಸೆಲ್ ಮಾದರಿಯು ರೂ.1 ಲಕ್ಷದ ತನಕ ಹೆಚ್ಚುವರಿ ಬೆಲೆ ಪಡೆಯುವ ಸಾಧ್ಯತೆಗಳಿದ್ದು, ಇದೇ ಕಾರಣಕ್ಕೆ ಹಲವಾರು ಕಾರು ಉತ್ಪಾದನಾ ಸಂಸ್ಥೆಗಳು ಸಣ್ಣ ಗಾತ್ರದ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನೇ ತೆಗದುಹಾಕುತ್ತಿವೆ. ಆದರೆ ಡೀಸೆಲ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಸಂಸ್ಥೆಯು ಬೆಲೆ ಏರಿಕೆಯ ನಡುವೆಯೂ ಡೀಸೆಲ್ ಎಂಜಿನ್ ಆಯ್ಕೆ ಮುಂದುವರಿಸಲು ನಿರ್ಧರಿಸಿದೆ.


Click it and Unblock the Notifications