ಇಕ್ಯೂ ಎಲೆಕ್ಟ್ರಿಕ್ ಕಾರ್ ಅನಾವರಣಗೊಳಿಸಿದ ಮರ್ಸಿಡಿಸ್ ಬೆಂಝ್
ದೇಶಿಯ ಮಾರುಕಟ್ಟೆಯಲ್ಲಿರುವ ಲಗ್ಷುರಿ ಕಾರುಗಳ ಪೈಕಿ ಮರ್ಸಿಡಿಸ್ ಬೆಂಝ್ ಕಂಪನಿಯ ಕಾರುಗಳು ಅಗ್ರಸ್ಥಾನದಲ್ಲಿವೆ. ಇದರ ಜೊತೆಗೆ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯೂ ಸಹ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಇಕ್ಯೂ ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇಕ್ಯೂ ಬ್ರಾಂಡ್‍ನಡಿಯಲ್ಲಿ ಕಂಪನಿಯು ಹಲವಾರು ಕಾರುಗಳನ್ನು ಮಾರಾಟ ಮಾಡಲಿದೆ. ಇಕ್ಯೂ ಎಲೆಕ್ಟ್ರಿಕ್ ಲಗ್ಷುರಿ ಕಾರು ಭಾರತದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

ಮತ್ತೊಂದು ಲಗ್ಷುರಿ ಕಾರು ತಯಾರಕ ಕಂಪನಿಯಾದ ಆಡಿ ಸಹ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ ಈ ಎಲೆಕ್ಟ್ರಿಕ್ ಕಾರುಗಳನ್ನು ಯಾವಾಗ ಬಿಡುಗಡೆಗೊಳಿಸಲಾಗುವುದು ಎಂಬುದನ್ನು ಆಡಿ ಕಂಪನಿಯು ಬಹಿರಂಗಪಡಿಸಿಲ್ಲ.

ಮರ್ಸಿಡಿಸ್ ಬೆಂಝ್‍ನ ಭಾರತ ವಿಭಾಗದ ಮ್ಯಾನೇಜಿಂಗ್ ಡೈರೆಕ್ಟರ್ ಆದ ಮಾರ್ಟಿನ್ ಶ್ವೆಂಕ್‍ರವರು ಮಾತನಾಡಿ, ನಮ್ಮ ಕಂಪನಿಯು ಆಟೋಮೊಬೈಲ್ ಉದ್ಯಮದಲ್ಲಿ ಯಾವಾಗಲೂ ಹೊಸತನವನ್ನು ನೀಡುತ್ತಿರುತ್ತದೆ. ಭಾರತದ ಲಗ್ಷುರಿ ಕಾರು ಸೆಗ್‍ಮೆಂಟಿನಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು.

ನಾವು ಎಲೆಕ್ಟ್ರಿಕ್ ವಾಹನಗಳ ಸೆಗ್‍ಮೆಂಟಿನಲ್ಲಿಯೂ ಇಕ್ಯೂ ಬ್ರಾಂಡ್‍ಗಳ ಮೂಲಕ ಅಗ್ರಸ್ಥಾನಕ್ಕೆ ಏರುವ ಯೋಜನೆಯನ್ನು ಹೊಂದಿದ್ದೇವೆ. ಇಕ್ಯೂ ಬ್ರಾಂಡ್ ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಕಂಪನಿಯು ಬಿಡುಗಡೆಗೊಳಿಸಲಿರುವ ಮೊದಲ ಎಲೆಕ್ಟ್ರಿಕ್ ಕಾರ್ ಆಗಿರಲಿದೆ ಎಂದು ಅವರು ಹೇಳಿದರು.

ಮರ್ಸಿಡಿಸ್ ಬೆಂಝ್ ಕಂಪನಿಯು ಇಕ್ಯೂ ಎಲೆಕ್ಟ್ರಿಕ್ ಕಾರ್ ಅನ್ನು ಜಾಗತಿಕವಾಗಿ ಮೊದಲ ಬಾರಿಗೆ 2016ರ ಪ್ಯಾರಿಸ್ ಮೋಟಾರ್ ಶೋದಲ್ಲಿ ಅನಾವರಣಗೊಳಿಸಿತ್ತು. ಮರ್ಸಿಡಿಸ್ ಕಂಪನಿಯು ವಿವಿಧ ಎಲೆಕ್ಟ್ರಿಕ್ ಕಾರ್ ಟೆಕ್ನಾಲಜಿಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಇಕ್ಯೂ ಎಲೆಕ್ಟ್ರಿಕ್ ಕಾರ್ ಅನ್ನು ಮರ್ಸಿಡಿಸ್ ಬೆಂಝ್ ಕಂಪನಿಯ ಜಿಎಲ್‍ಸಿ ಕಾರಿನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟರ್ 402 ಬಿಹೆಚ್‍ಪಿ ಪವರ್ ಹಾಗೂ 760 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಇಕ್ಯೂ ಎಲೆಕ್ಟ್ರಿಕ್ ಕಾರಿನಲ್ಲಿ 80 ಕಿ.ವ್ಯಾ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದರೆ 400 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಕಾರು ಕೇವಲ 5.1 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 180 ಕಿ.ಮೀಗಳಾಗಿದೆ.

ಇಕ್ಯೂ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ನಂತರ ಮರ್ಸಿಡಿಸ್ ಬೆಂಝ್ ಕಂಪನಿಯು ಜಿ ಕ್ಲಾಸಿನ ಎಲೆಕ್ಟ್ರಿಕ್ ಲಗ್ಷುರಿ ಎಸ್‍ಯುವಿ ಹಾಗೂ ವಿ ಕ್ಲಾಸ್ ಲಗ್ಷುರಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ.

ಇದರ ಜೊತೆಗೆ ಕಂಪನಿಯು ತನ್ನ ಜನಪ್ರಿಯ ಎಸ್ ಕ್ಲಾಸ್ ಕಾರ್ ಅನ್ನು ಸಹ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಮರ್ಸಿಡಿಸ್ ಬೆಂಝ್ ಕಾರಿನ ಈ ನಡೆಯಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿರುವ ಇತರ ಕಾರು ತಯಾರಕ ಕಂಪನಿಗಳು ತಮ್ಮ ಮಾರುಕಟ್ಟೆಯನ್ನು ಭದ್ರಪಡಿಸುತ್ತಿವೆ.


Click it and Unblock the Notifications








