ಹೊಸ ಬಣ್ಣದ ಆಯ್ಕೆಯೊಂದಿಗೆ ಡೀಲರ್ಸ್ ಯಾರ್ಡ್ ತಲುಪಿದ ಹೆಕ್ಟರ್ ಪ್ಲಸ್
ಮುಂದಿನ ತಿಂಗಳು ಜುಲೈ 1ಕ್ಕೆ ಬಹುನೀರಿಕ್ಷಿತ ಹೆಕ್ಟರ್ ಪ್ಲಸ್ 7 ಸೀಟರ್ ಎಸ್‌ಯುವಿ ಕಾರು ಮಾದರಿಯು ಬಿಡುಗಡೆಯಾಗುವುದು ಅಧಿಕೃತವಾಗಿದ್ದು, ಬಿಡುಗಡೆಗೂ ಮುನ್ನ ಎಂಜಿ ಶೋರೂಂಗಳಲ್ಲಿ ಹೊಸ ಕಾರುಗಳನ್ನು ಸ್ಟಾಕ್ ಮಾಡಲಾಗುತ್ತಿದೆ.

ಶೋರೂಂಗಳಲ್ಲಿ ಕಂಡುಬಂದ ಹೆಕ್ಟಕ್ ಪ್ಲಸ್ ಕಾರು ಮಾದರಿಯು ವಿವಿಧ ಹೊಸ ಬಣ್ಣಗಳ ಆಯ್ಕೆಯೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದ್ದು, ಹೊಸ ಕಾರಿನಲ್ಲಿ ಸ್ಟೇರಿ ಸ್ಕೈ ಬ್ಲೂ ಮತ್ತು ವೈಟ್ ಬಿಜ್ ಬಣ್ಣಗಳೊಂದಿಗೆ ವಿವಿಧ ಬಣ್ಣದ ಆಯ್ಕೆಗಳನ್ನು ಹೊಂದಿರಲಿದೆ. ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡಲಾಗಿದ್ದು, ಎಂಪಿವಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಟೊಯೊಟೊ ಇನೋವಾ ಕ್ರಿಸ್ಟಾ ಕಾರಿಗೆ ಇದು ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ಹೆಕ್ಟರ್ ಪ್ಲಸ್ ಕಾರು ಗ್ರಾಹಕರ ಬೇಡಿಕೆಯೆಂತೆ 6 ಸೀಟರ್ ಅಥವಾ 7 ಸೀಟರ್ ಆವೃತ್ತಿಯಲ್ಲಿ ಖರೀದಿಗೆ ಲಭ್ಯವಿರಲಿದ್ದು, 6 ಸೀಟರ್ ಮಾದರಿಯು 2+2+2 ಮಾದರಿಯ ಆಸನ ಸೌಲಭ್ಯ ಹೊಂದಿದ್ದರೆ 7 ಸೀಟರ್ ಮಾದರಿಯು 2+2+3 ಆಸನ ಮಾದರಿ ಹೊಂದಿರಲಿದೆ.

5 ಸೀಟರ್ ಹೆಕ್ಟರ್ ಕಾರಿನ ಉತ್ಪಾದನಾ ಪ್ಲಾಟ್‌ಫಾರ್ಮ್ ಅಡಿಯಲ್ಲೇ ಹೊಸ ಆವೃತ್ತಿಯನ್ನು ಪರಿಚಯಿಸುತ್ತಿರುವ ಎಂಜಿ ಕಂಪನಿಯು ಹೆಕ್ಟರ್ ಪ್ಲಸ್ ಮೂಲಕ 7 ಸೀಟರ್ ಎಸ್‌ಯುವಿ ಖರೀದಿದಾರರನ್ನು ಸೆಳೆಯಲು ಮುಂದಾಗಿದ್ದು, ಪ್ರತಿಸ್ಪರ್ಧಿ ಕಾರುಗಳಿಂತಲೂ ಇದು ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.

ಎಂಜಿನ್ ಸಾಮರ್ಥ್ಯ
ಸದ್ಯ ಮಾರುಕಟ್ಟೆಯಲ್ಲಿರುವ 5 ಸೀಟರ್ ಹೆಕ್ಟರ್ ಕಾರು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, 7 ಸೀಟರ್ ಹೆಕ್ಟರ್ ಪ್ಲಸ್ ಕಾರು ಕೂಡಾ ಸಾಮಾನ್ಯ ಕಾರಿನಂತೆಯೇ ಎಂಜಿನ್ ಆಯ್ಕೆ ಪಡೆದುಕೊಳ್ಳಲಿದೆ.

ಈ ಮೂಲಕ ಮತ್ತಷ್ಟು ಎಸ್‌ಯುವಿ ಕಾರು ಖರೀದಿದಾರರನ್ನು ಸೆಳೆಯಲಿರುವ ಎಂಜಿ ಮೋಟಾರ್ ಕಂಪನಿಯು ಟಾಟಾ ಬಹುನೀರಿಕ್ಷಿತ ಗ್ರಾವಿಟಾಸ್ ಎಸ್‌ಯುವಿ ಜೊತೆಗೆ ಟೊಯೊಟಾ ಇನೋವಾ ಕ್ರಿಸ್ಟಾ ಆವೃತ್ತಿಗೂ ಪೈಪೋಟಿ ನೀಡಲಿದ್ದು, ಸಾಮಾನ್ಯ ಹೆಕ್ಟರ್ ಕಾರಿಗಿಂತಲೂ ತುಸು ದುಬಾರಿಯಾಗಿರಲಿದೆ.

ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಸೌಲಭ್ಯಗಳಿದ್ದು, ಹೊಸ ಮಾದರಿಯ ಹೆಡ್‌ಲ್ಯಾಂಪ್, ಹೊಲೊಜೆನ್ ಫ್ರಂಟ್ ಗ್ರಿಲ್, ಫ್ರಂಟ್ ಮತ್ತು ರಿಯರ್ ಬಂಪರ್, ಹೊಸ ವಿನ್ಯಾಸದ ರಿಯರ್ ಟೈಲ್ ಲೈಟ್, ಸ್ಕೀಡ್ ಪ್ಲೇಟ್, ಟೈಲ್‌ಗೆಟ್ ತೆರೆಯಲು ಲೆಗ್ ಸ್ಪೈಫ್ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯಗಳನ್ನು ಜೋಡಿಸಲಾಗಿದೆ.

ಸದ್ಯ ಸಾಮಾನ್ಯ ಹೆಕ್ಟರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.74 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.44 ಲಕ್ಷ ಬೆಲೆ ಹೊಂದಿದ್ದು, ಹೊಸ ಹೆಕ್ಟರ್ ಪ್ಲಸ್ ಮಾದರಿಯು ಸಾಮಾನ್ಯ ಕಾರಿಗಿಂತಲೂ ರೂ. 1.50 ಲಕ್ಷದಿಂದ ರೂ.2 ಲಕ್ಷದ ತನಕ ಹೆಚ್ಚುವರಿ ಬೆಲೆ ಹೊಂದಿರಲಿದೆ.


Click it and Unblock the Notifications