ಬಿಡುಗಡೆಯಾಯ್ತು ಮರ್ಸಿಡಿಸ್ ಬೆಂಝ್ ಜಿಎಲ್ಸಿ ಕೂಪೆ
ಮರ್ಸಿಡಿಸ್ ಬೆಂಝ್ ಕಂಪನಿಯು ತನ್ನ ಜಿಎಲ್‌ಸಿ ಕೂಪೆಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಮರ್ಸಿಡಿಸ್ ಬೆಂಝ್ ಜಿಎಲ್‍ಸಿ ಕೂಪೆಯ ಆರಂಭಿಕ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 62.70 ಲಕ್ಷಗಳಾಗಿದೆ.

2020ರ ಜಿಎಲ್‌ಸಿ ಕೂಪೆ ಎಸ್‌ಯುವಿಯ ಬುಕ್ಕಿಂಗ್‍ಗಳನ್ನು ಆರಂಭಿಸಲಾಗಿದ್ದು, ಈ ಎಸ್‍ಯುವಿಯ ವಿತರಣೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. 2020ರ ಮರ್ಸಿಡಿಸ್ ಬೆಂಝ್ ಜಿಎಲ್ಸಿ ಕೂಪೆ ಹಲವಾರು ಹೊಸ ಫೀಚರ್ ಹಾಗೂ ಎಕ್ವಿಪ್‍ಮೆಂಟ್‍ಗಳನ್ನು ಹೊಂದಿದೆ. ಇವುಗಳಲ್ಲಿ ಕಂಪನಿಯ ಇತ್ತೀಚಿನ ಎಂಬಿಯುಎಕ್ಸ್ ಕನೆಕ್ಟಿವಿಟಿ ಟೆಕ್ನಾಲಜಿಯು ಸಹ ಸೇರಿದೆ.

ಹೊಸ ಜಿಎಲ್‌ಸಿ ಕೂಪೆ ಕಳೆದ ವರ್ಷದ ಕೊನೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ಜಿಎಲ್‌ಸಿ ಎಸ್‍ಯುವಿಗಿಂತ ಮೇಲಿನ ಸ್ಥಾನದಲ್ಲಿರಲಿದೆ. ಹೊಸ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ ಕೂಪೆಯನ್ನು 300 ಡಿ 4 ಮ್ಯಾಟಿಕ್ ಹಾಗೂ 300 4 ಮ್ಯಾಟಿಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಜಿಎಲ್ಸಿ ಕೂಪೆಯ ಟಾಪ್ ಎಂಡ್ ಡೀಸೆಲ್ ಮಾದರಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.63.70 ಲಕ್ಷಗಳಾಗಲಿದೆ. ಜರ್ಮನಿ ಮೂಲದ ಮರ್ಸಿಡಿಸ್ ಬೆಂಝ್ ಕಂಪನಿಯು ಇದೇ ಮೊದಲ ಬಾರಿಗೆ ಜಿಎಲ್‍ಸಿ ಕೂಪೆಯ ಎಎಂಜಿ ಹೊಂದಿಲ್ಲದ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ.

ಈ ಜಿಎಲ್‍ಸಿ ಕೂಪೆಯನ್ನು ಸಿಕೆಡಿ (ಕಂಪ್ಲೀಟ್ಲಿ ನಾಕ್ ಡೌನ್) ಘಟಕವಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಜಿಎಲ್‍ಸಿ ಕೂಪೆ, ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಲ್ಲಿ ಸ್ಥಳೀಯವಾಗಿ ಅಸೆಂಬ್ಲ್ ಮಾಡುತ್ತಿರುವ ಕಂಪನಿಯ 10ನೇ ಮಾದರಿಯಾಗಿದೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಸಿ ಕೂಪೆ ತನ್ನ ವಿನ್ಯಾಸವನ್ನು 2019ರ ಡಿಸೆಂಬರ್‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಹೊಸ ತಲೆಮಾರಿನ ಜಿಎಲ್‌ಸಿ ಎಸ್‍ಯುವಿಯಿಂದ ಪಡೆದಿದೆ. ಈ ಎಸ್‍ಯುವಿಯ ಮುಂಭಾಗದಲ್ಲಿರುವ ಫಾಸ್ಕಿಯಾ ಕಂಪನಿಯ ಸಿಗ್ನೇಚರ್ ಡೈಮಂಡ್-ಪ್ಯಾಟರ್ನ್ ಗ್ರಿಲ್ ಅನ್ನು ಹೊಂದಿದೆ.

ಈ ಎಸ್‍ಯುವಿಯ ಎರಡೂ ಕಡೆ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‍ಎಲ್ ಹೊಂದಿರುವ ಎಲ್‍ಇಡಿ ಹೆಡ್‌ಲ್ಯಾಂಪ್‌ಗಳಿವೆ. ಮುಂಭಾಗದ ಬಂಪರ್ ಅನ್ನು ಅಪ್‍ಡೇಟ್ ಮಾಡಲಾಗಿದೆ. ಜಿಎಲ್‌ಸಿ ಕೂಪೆಯ ಸೈಡ್ ಹಾಗೂ ಹಿಂಭಾಗದಲ್ಲಿ ಹೊಸ ಎಸ್‍ಯುವಿಯ ವಿನ್ಯಾಸವು ಎದ್ದು ಕಾಣುತ್ತದೆ.

ಸ್ಲೋಪಿಂಗ್ ಕೂಪೆ ರೀತಿಯ ರೂಫ್‌ಲೈನ್, ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್‍ಗಳು ಈ ಎಸ್‍ಯುವಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. ಈ ಎಸ್‍ಯುವಿಯ ಹಿಂಭಾಗದಲ್ಲಿ ಅಪ್‍ಡೇಟ್ ಮಾಡಲಾದ ಎಲ್ಇಡಿ ಟೇಲ್‌ಲೈಟ್‌ಗಳು, ಮೌಲ್ಡೆಡ್ ಡಿಫ್ಯೂಸರ್ ಹಾಗೂ ಹೊಸ ಎಕ್ಸಾಸ್ಟ್ ಟಿಪ್‍ಗಳಿವೆ.

ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಸಿ ಕೂಪೆ ಪರಿಷ್ಕರಿಸಿದ ಇಂಟಿರಿಯರ್‍ಗಳನ್ನು ಹೊಂದಿದೆ. ಇವುಗಳಲ್ಲಿ ಸೆಂಟರ್ ಕನ್ಸೋಲ್‌ನಲ್ಲಿ ಹೊಸ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದೆ. ಇದು ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳಿಗೆ ಹೊಂದಿಕೊಳ್ಳುತ್ತದೆ.

ಹೊಸ ಇನ್ಫೋಟೇನ್‌ಮೆಂಟ್ ಡಿಸ್‍ಪ್ಲೇ ಕಂಪನಿಯ ಎಂಬಿಯುಎಕ್ಸ್ (ಮರ್ಸಿಡಿಸ್ ಬೆಂಝ್ ಯೂಸರ್ ಎಕ್ಸ್ ಪಿರಿಯನ್ಸ್) ಟೆಕ್ನಾಲಜಿಯನ್ನು ಸಹ ಹೊಂದಿದೆ. 12.3-ಇಂಚಿನ ಇನ್ಸ್ ಟ್ರೂಮೆಂಟ್ ಕನ್ಸೋಲ್‍ನಲ್ಲಿ ಹಲವಾರು ಪ್ರೀಮಿಯಂ ಫೀಚರ್ ಹಾಗೂ ಸುರಕ್ಷತಾ ಎಕ್ವಿಪ್‍ಮೆಂಟ್‍ಗಳಿವೆ.

ಈ ಹೊಸ ಎಸ್‍ಯುವಿಯಲ್ಲಿರುವ ಎಂಜಿನ್‍ಗಳ ಬಗ್ಗೆ ಹೇಳುವುದಾದರೆ, ಹೊಸ ಮರ್ಸಿಡಿಸ್ ಬೆಂಝ್ ಜಿಎಲ್ಸಿ ಕೂಪೆ 2.0 ಲೀಟರಿನ ಬಿಎಸ್ 6 ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‍ಗಳನ್ನು ಹೊಂದಿದೆ. ಜಿಎಲ್‍ಸಿ ಕೂಪೆ 300 4 ಮ್ಯಾಟಿಕ್ ಮಾದರಿಯಲ್ಲಿರುವ 2.0 ಲೀಟರಿನ ಪೆಟ್ರೋಲ್ ಎಂಜಿನ್ 258 ಬಿಹೆಚ್‍ಪಿ ಪವರ್ ಹಾಗೂ 370 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಜಿಎಲ್ಸಿ ಕೂಪೆ 300 ಡಿ 4ಮ್ಯಾಟಿಕ್ ಮಾದರಿಯಲ್ಲಿರುವ 2.0 ಲೀಟರಿನ ಡೀಸೆಲ್ ಎಂಜಿನ್ 245 ಬಿಹೆಚ್‍ಪಿ ಪವರ್ ಹಾಗೂ 500 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎರಡೂ ಎಂಜಿನ್‍ಗಳಲ್ಲಿ ಸ್ಟಾಂಡರ್ಡ್ 9ಜಿ ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಜರ್ಮನಿ ಮೂಲದ ಮರ್ಸಿಡಿಸ್ ಬೆಂಝ್ ಕಂಪನಿಯು ಭಾರತದಲ್ಲಿ ಹಲವಾರು ವಾಹನಗಳನ್ನು ಬಿಡುಗಡೆಗೊಳಿಸುವ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಮುಂದಿನ ವರ್ಷ ಭಾರತದಲ್ಲಿ 10 ಹೊಸ ಮಾದರಿಗಳನ್ನು ಬಿಡುಗಡೆಗೊಳಿಸುವುದಾಗಿ ಮರ್ಸಿಡಿಸ್ ಬೆಂಝ್ ಕಂಪನಿಯು ತಿಳಿಸಿದೆ.


Click it and Unblock the Notifications








