ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ನಡೆಸಿದ ನಿಸ್ಸಾನ್ ಮ್ಯಾಗ್ನೈಟ್ ಕಾರು
ನಿಸ್ಸಾನ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯನ್ನು ಕಳೆದ ತಿಂಗಳ ಹಿಂದಷ್ಟೇ ಅನಾವರಣಗೊಳಿಸಿದ್ದು, ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿರುವ ನಿಸ್ಸಾನ್ ಮ್ಯಾಗ್ನೈಟ್ ಕಾರು ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ನಮ್ಮ ಬೆಂಗಳೂರಿನ ಹೊರವಲಯದಲ್ಲೂ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯಲ್ಲಿ ನಿರತವಾಗಿದೆ. ಟೆಸ್ಟಿಂಗ್ ಸಂದರ್ಭದಲ್ಲಿ ಡ್ರೈವ್‌ಸ್ಪಾರ್ಕ್ ತಂಡಕ್ಕೂ ಹೊಸ ಕಾರಿನ ಚಿತ್ರಗಳು ಲಭ್ಯವಾಗಿದ್ದು, ಶೀಘ್ರದಲ್ಲೇ ಹೊಸ ಕಾರು ಉತ್ಪಾದನಾ ಮಾದರಿಯನ್ನು ಪಡೆದುಕೊಳ್ಳಲಿದೆ.

ಕಿಕ್ಸ್ ಕಾರಿನ ನಂತರ ಮ್ಯಾಗ್ನೈಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆ ಮಾಡುತ್ತಿರುವ ನಿಸ್ಸಾನ್ ಕಂಪನಿಯು ಹೊಸ ಕಾರಿನ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿದ್ದು, ಪ್ರತಿ ಸ್ಪರ್ಧಿ ಕಾರುಗಳಿಗೆ ಪೈಪೋಟಿಯಾಗಿ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿದೆ.

ಹೊಸ ಕಾರಿನಲ್ಲಿ ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ಜೊತೆ ಮಲ್ಟಿ ಫಂಕ್ಷನ್ ಕೀ ಹೊಂದಿದ್ದು, ಸೆಂಟರ್ ಆರ್ಮ್ ರೆಸ್ಟ್, ಅರಾಮದಾಯಕವಾದ ಆಸನ ಸೌಲಭ್ಯ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, 8-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಹಿಂಭಾಗ ಆಸನದಲ್ಲೂ ಸೆಂಟರ್ ಆರ್ಮ್ ರೆಸ್ಟ್, ಕಪ್ ಹೋಲ್ಡರ್, ರಿಯರ್ ಎಸಿ ವೆಂಟ್ಟ್ ಸೌಲಭ್ಯವನ್ನು ಹೊಂದಿದೆ.

ಕಾನ್ಸೆಪ್ಟ್ ಮಾದರಿಯಲ್ಲೇ ಉತ್ಪಾದನಾ ಆವೃತ್ತಿಯನ್ನು ಬಿಡುಗಡೆ ಮಾಡುವ ಸುಳಿವು ನೀಡಿರುವ ನಿಸ್ಸಾನ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆನ್ಯೂ ಸೇರಿದಂತೆ ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ಭರ್ಜರಿಯಾಗಿ ಪೈಪೋಟಿ ನೀಡುವ ತವಕದಲ್ಲಿದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಸದ್ಯಕ್ಕೆ ಹೊಸ ಕಾರನ್ನು ಭಾರತದಲ್ಲಿ EM2 ಕೋಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ಮಾಡಲಾಗುತ್ತಿದ್ದು, ಹೊಸ ಕಾರಿನ ಅಧಿಕೃತ ಹೆಸರನ್ನು 'ಮ್ಯಾಗ್ನೈಟ್' ಎಂದು ಕರೆಯಲಾಗಿದೆ. ಹೆಸರಿಗೆ ತಕ್ಕಂತೆ ಬಲಿಷ್ಠ ಹೊರ ನೋಟ ಹೊಂದಿರುವ ಹೊಸ ಕಾರು ಕಟಿಂಗ್ಎಡ್ಜ್ ವಿನ್ಯಾಸ ಹೊಂದಿದೆ.

ಹೊಸ ಕಾರು ಕಿಕ್ಸ್ ಎಸ್‌ಯುವಿ ಮಾದರಿಗಿಂತಲೂ ಕೆಳದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಹೊಸ ಕಾರಿನಲ್ಲಿ ರೆನಾಲ್ಟ್ ಜೊತೆಗೂಡಿ ಅಭಿವೃದ್ದಿಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಬಳಕೆ ಮಾಡಲಾಗುತ್ತಿದೆ.

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಮಾದರಿಯು ನಿಸ್ಸಾನ್ ಮ್ಯಾಗ್ನೆೈಟ್ ಕಾರಿನಲ್ಲಿ ಮಾತ್ರವಲ್ಲದೇ ರೆನಾಲ್ಟ್ ಟ್ರೈಬರ್ ಟರ್ಬೋ ವರ್ಷನ್ ಮತ್ತು ಕಿಗರ್ ಕಾರಿನಲ್ಲೂ ಬಳಕೆಯಾಗಲಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಕಾರುಗಳಿಂತಲೂ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗಲಿದೆ.
MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಹೊಸ ಕಾರನ್ನು ಇದೇ ವರ್ಷಾಂತ್ಯದೊಳಗೆ ಬಿಡುಗಡೆಗೊಳಿಸಲು ಯತ್ನಿಸುತ್ತಿರುವ ನಿಸ್ಸಾನ್ ಕಂಪನಿಯು ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ತೀವ್ರಗೊಳಿಸಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 6.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.


Click it and Unblock the Notifications