ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಮಾರಾಟವಾದ ರೋಲ್ಸ್ ರಾಯ್ಸ್ ಕಾರುಗಳು
ಜಗತ್ತಿನಲ್ಲಿರುವ ಐಷಾರಾಮಿ ಕಾರುಗಳ ಪೈಕಿ ರೋಲ್ಸ್ ರಾಯ್ಸ್ ಕಾರುಗಳೂ ಸಹ ಒಂದು. ರೋಲ್ಸ್ ರಾಯ್ಸ್ ಮೋಟರ್ ಕಾರ್ಸ್ ಲಿಮಿಟೆಡ್ ಬ್ರಿಟನ್ ಮೂಲದ ಕಾರು ತಯಾರಕ ಕಂಪನಿಯಾಗಿದೆ. ರೋಲ್ಸ್ ರಾಯ್ಸ್ ಕಾರುಗಳನ್ನು ಪ್ರಪಂಚದಾದ್ಯಂತ ಮಾರಾಟ ಮಾಡಲಾಗುತ್ತದೆ.

ಯಾರೇ ಚಿತ್ರನಟರಿರಲಿ, ರಾಜಕಾರಣಿಗಳಿರಲಿ, ಉದ್ಯಮಿಗಳಿರಲಿ ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಲು ಬಯಸುತ್ತಾರೆ. ರೋಲ್ಸ್ ರಾಯ್ಸ್ ಕಾರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಲೇ ಇರುತ್ತವೆ. ರೋಲ್ಸ್ ರಾಯ್ಸ್ ಕಂಪನಿಯು 116 ವರ್ಷಗಳ ಇತಿಹಾಸವನ್ನು ಹೊಂದಿದೆ.

ರೋಲ್ಸ್ ರಾಯ್ಸ್ ಕಂಪನಿಯು ತನ್ನ 116 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಬಿಎಂಡಬ್ಲ್ಯು ಕಂಪನಿಯ ಅಂಗಸಂಸ್ಥೆಯಾದ ರೋಲ್ಸ್ ರಾಯ್ಸ್ 2019ರಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ 5,152 ಕಾರುಗಳನ್ನು ಮಾರಾಟ ಮಾಡಿದೆ.

ಕಂಪನಿಯು 2018ರಲ್ಲಿ ವಿಶ್ವಾದ್ಯಂತ 4,107 ಕಾರುಗಳನ್ನು ಮಾರಾಟ ಮಾಡಿತ್ತು. ಈ ಮೂಲಕ 2018ಕ್ಕೆ ಹೋಲಿಸಿದರೆ 25%ನಷ್ಟು ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ. ಈ ಬೆಳವಣಿಗೆಯ ಬಗ್ಗೆ ರೋಲ್ಸ್ ರಾಯ್ಸ್ ಕಂಪನಿಯ ಸಿಇಒ ಟರ್ಸ್ಟನ್ ಮುಲ್ಲರ್ ಒಟ್ವಾಸ್‍ರವರು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಈ ಮಾರಾಟವು ಹಿಂದಿನ ವರ್ಷದ ಮಾರಾಟಕ್ಕಿಂತ ಹೆಚ್ಚಿದೆ. ಈ ಮಾರಾಟವನ್ನು ಸಂಭ್ರಮಿಸುವಾಗ, ನಮ್ಮ ಗ್ರಾಹಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಬೇಕಿದೆ. 2019ರಲ್ಲಿ 25%ನಷ್ಟು ಹೆಚ್ಚು ಮಾರಾಟವಾಗಿರುವುದಕ್ಕೆ ಹೆಮ್ಮೆಪಡುತ್ತೇವೆ ಎಂದು ಹೇಳಿದರು.

ರೋಲ್ಸ್ ರಾಯ್ಸ್ ಕಾರುಗಳಲ್ಲಿ ಕಲಿನನ್ ಕಾರುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿವೆ. ಟರ್ಸ್ಟನ್ ಮುಲ್ಲರ್‍ರವರ ಪ್ರಕಾರ ಕಳೆದ ವರ್ಷ ವಿಶ್ವಾದ್ಯಂತ ಕಲಿನನ್ ಎಸ್‌ಯುವಿಗಳು ಹೆಚ್ಚು ಮಾರಾಟವಾಗಿವೆ. 2020ರಲ್ಲಿಯೂ ಈ ಪ್ರಮಾಣವು ಹೀಗೆ ಮುಂದುವರೆಯುವ ಸಾಧ್ಯತೆಗಳಿವೆ.

ಇದು ಗ್ರಾಹಕರು ನಮ್ಮ ಕಾರುಗಳ ಗುಣಮಟ್ಟದ ಮೇಲಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ಇದರ ಜೊತೆಗೆ ವಿಶ್ವದಾದ್ಯಂತವಿರುವ ರೋಲ್ಸ್ ರಾಯ್ಸ್ ಡೀಲರ್‍ಗಳು ಹಾಗೂ ನಮ್ಮ ಕಂಪನಿಯಲ್ಲಿರುವ ಅಸಾಧಾರಣ ತಂಡದ ಕೌಶಲ್ಯದಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದರು.

ರೋಲ್ಸ್ ರಾಯ್ಸ್ ಕಂಪನಿಯ ಫ್ಯಾಂಟಮ್ ಕಾರ್ ಅನ್ನು ಕಾರು ಉದ್ಯಮದ ಅತಿ ದೊಡ್ಡ ಐಷಾರಾಮಿ ಕಾರೆಂದು ಪರಿಗಣಿಸಲಾಗುತ್ತದೆ. ಈ ಕಾರು ರೋಲ್ಸ್ ರಾಯ್ಸ್ ಸರಣಿಯಲ್ಲಿ ಹೆಚ್ಚು ಮಾರಾಟವಾದ ವಾಹನವೆಂಬ ಖ್ಯಾತಿಯನ್ನು ಹೊಂದಿದೆ.

ರೋಲ್ಸ್ ರಾಯ್ಸ್ ಕಂಪನಿಯ ಪ್ರಕಾರ, ಡಾನ್ ಹಾಗೂ ವ್ರೆಥ್ ಕಾರುಗಳೂ ಸಹ ತಮ್ಮ ಸೆಗ್‍ಮೆಂಟ್‍ಗಳಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ. ಒಟ್ಟು ಮಾರಾಟವಾದ ಕಾರುಗಳನ್ನು ಪರಿಗಣಿಸಿದರೆ, ಉತ್ತರ ಅಮೆರಿಕಾದಲ್ಲಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಲಾಗಿದೆ.

ನಂತರದ ಸ್ಥಾನಗಳಲ್ಲಿ ಚೀನಾ ಹಾಗೂ ಯುರೋಪ್ ಮಾರುಕಟ್ಟೆಗಳಿವೆ. ರೋಲ್ಸ್ ರಾಯ್ಸ್ ಕಂಪನಿಯು ಜಗತ್ತಿನ 50ಕ್ಕೂ ಹೆಚ್ಚು ದೇಶಗಳಲ್ಲಿ ಒಟ್ಟು 135 ಡೀಲರ್‍ಗಳನ್ನು ಹೊಂದಿದೆ.

ಭಾರತದಲ್ಲಿ ರೋಲ್ಸ್ ರಾಯ್ಸ್ ಕಂಪನಿಯ ಕಾರುಗಳ ಬೆಲೆಯು ಎಕ್ಸ್ ಶೋರೂಂ ದರದಂತೆ ಕಡಿಮೆಯೆಂದರೂ ರೂ.6.07 ಕೋಟಿಗಳಾಗುತ್ತವೆ. ಈ ಬೆಲೆಗೆ ರೋಲ್ಸ್ ರಾಯ್ಸ್ ಘೋಸ್ಟ್ ಕಾರ್ ಅನ್ನು ಖರೀದಿಸಬಹುದು. ವ್ರೆಥ್, ಡಾನ್, ಕಲಿನನ್ ಅಥವಾ ಫ್ಯಾಂಟಮ್ ಖರೀದಿಸಲು ಇನ್ನೂ ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ.


Click it and Unblock the Notifications








