ಇನ್ಮುಂದೆ ಪ್ರತಿ 2 ತಿಂಗಳಿಗೆ ಒಂದು ಬಾರಿ ಕಾರುಗಳನ್ನು ಅಪ್ಡೇಟ್ ಮಾಡಲಿದೆ ಟಾಟಾ
ಕಾರು ಮಾರಾಟದಲ್ಲಿ ಮಹತ್ವದ ಬದಲಾಣೆ ಪರಿಚಯಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಇನ್ಮುಂದೆ ಪ್ರತಿ ಕಾರು ಮಾದರಿಗಳನ್ನು ಪ್ರತಿ ತಿಂಗಳು ಅಥವಾ 2 ತಿಂಗಳಿಗೆ ಒಂದು ಬಾರಿ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಉನ್ನತೀಕರಿಸಲು ನಿರ್ಧರಿಸಿದೆ.

ಹೌದು, ಸದ್ಯದ ಮಾರುಕಟ್ಟೆಯಲ್ಲಿ ಪ್ರತಿ ಆರು ತಿಂಗಳ ಅವಧಿಯಲ್ಲಿ ಹತ್ತಾರು ಹೊಸ ಮಾದರಿಯ ಕಾರುಗಳು ಬಿಡುಗಡೆಯಾಗುವುದಲ್ಲದೆ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತವೆ. ಇದರಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರು ಮಾದರಿಗಳು ಸಹ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ-ಹೊಸ ಫೀಚರ್ಸ್‌ಗಳೊಂದಿಗೆ ಉನ್ನತೀಕರಣಗೊಳ್ಳುತ್ತಿರುತ್ತವೆ. ಇದರಿಂದ ಟಾಟಾ ಕಂಪನಿಯು ಸಹ ಇನ್ಮುಂದೆ ಒಂದು ಫೀಚರ್ಸ್‌ಗಳನ್ನು ಉನ್ನತೀಕರಿಸಿದ ನಂತರ ಒಂದು ಅಥವಾ ಎರಡು ತಿಂಗಳ ಅಂತರದಲ್ಲಿ ಉನ್ನತೀಕರಣಗೊಳಿಸಲು ಮುಂದಾಗಿದೆ.

ಈ ಕುರಿತಂತೆ ಮಾಧ್ಯಮ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾಹಿತಿ ನೀಡಿರುವ ಟಾಟಾ ಕಾರು ಮಾರಾಟ ವಿಭಾಗ ಮುಖ್ಯಸ್ಥ ವಿವೇಕ್ ಶ್ರೀವಾಸ್ತ ಅವರು, ಕಾರು ಮಾರಾಟದಲ್ಲಿ ಬೇಡಿಕೆಯನ್ನು ಕಾಯ್ದಕೊಳ್ಳಲು ಕಾರು ಉನ್ನತೀಕರಣವು ಸಹಕಾರಿಯಾಗಿದೆ ಎಂದಿದ್ದಾರೆ.

ಇನ್ನು ಟಾಟಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ಕಾರುಗಳ ಅಭಿವೃದ್ದಿ ಮತ್ತು ಮಾರಾಟದಲ್ಲಿ ಉತ್ತಮ ಬೇಡಿಕೆ ಕಾಯ್ದಕೊಂಡಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಮೂರು ಹೊಸ ಕಾರುಗಳನ್ನು ಇದೇ ವರ್ಷಾಂತ್ಯದೊಳಗೆ ಬಿಡುಗಡೆ ಮಾಡಲು ನಿರ್ಧರಿಸಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರುಗಳ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳಲಿದೆ. ಹಾಗಾದ್ರೆ ಬಿಡುಗಡೆಯಾಗಲಿರುವ ಕಾರುಗಳ ಯಾವವು? ಮತ್ತು ಹೊಸ ಕಾರುಗಳ ಬಿಡುಗಡೆ ಮತ್ತು ತಾಂತ್ರಿಕ ಅಂಶಗಳ ಕುರಿತಾಗಿ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಹೆಚ್‌ಬಿಎಕ್ಸ್(ಮೈಕ್ರೊ ಎಸ್‌ಯುವಿ)
ಮೈಕ್ರೊ ಎಸ್‌ಯುವಿ ಕಾರುಗಳಲ್ಲಿ ಗಮನಸೆಳೆಯುವಂತಹ ಉದ್ದಳತೆ ಹೊಂದಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು 3,822-ಎಂಎಂ ಉದ್ದ, 1,822-ಎಂಎಂ ಉದ್ದ, 1,635-ಎಂಎಂ ಅಗಲ ಮತ್ತು 2,450-ಎಂಎಂ ವೀಲ್ಹ್‌ಬೆಸ್ ಹೊಂದಿದ್ದು, ಇದು ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಉದ್ದಳತೆಗೆ ಸಮನಾವಾಗಿದೆ.

ಇದರೊಂದಿಗೆ ಹ್ಯಾಚ್‌ಬ್ಯಾಕ್ ಕಾರುಗಳ ಮಾರಾಟದಲ್ಲೂ ಸದ್ದು ಮಾಡಲಿರುವ ಹೆಚ್‌ಬಿಎಕ್ಸ್ ಕಾನ್ಸೆಪ್ಟ್ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 86-ಬಿಎಚ್‌ಪಿ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 6.50 ಲಕ್ಷ ಬೆಲೆ ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿದ್ದು, ವರ್ಷದ ಕೊನೆಯಲ್ಲಿ(ನವೆಂಬರ್ ಅಥವಾ ಡಿಸೆಂಬರ್) ಬಿಡುಗಡೆಯಾಗಲಿದೆ.

ಗ್ರಾವಿಟಾಸ್ ಎಸ್‌ಯುವಿ
ಕಳೆದ ತಿಂಗಳು ಫೆಬ್ರುವರಿಯಲ್ಲಿ ಅನಾವರಣಗೊಂಡಿದ್ದ ಗ್ರಾವಿಟಾಸ್ ಕಾರು ಟಾಟಾ ಉತ್ಪಾದನೆಯ ವಿಶೇಷ ವಿನ್ಯಾಸದ ಎಸ್‌ಯುವಿ ಆವೃತ್ತಿಯಾಗಿದ್ದು, ಹ್ಯಾರಿಯರ್ ಉತ್ಪಾದನೆಗಾಗಿ ಉತ್ಪಾದನೆಗೆ ಬಳಕೆ ಮಾಡಲಾಗಿದ್ದ OMEGA ಪ್ಲ್ಯಾಟ್‌ಫಾರ್ಮ್‌ನಡಿಯಲ್ಲೇ ಹೊಸ ಗ್ರಾವಿಟಾಸ್ ಕೂಡಾ ಅಭಿವೃದ್ದಿಗೊಳ್ಳುತ್ತಿದೆ.

OMEGA(ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್)ತಂತ್ರಜ್ಞಾನವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಕಾಣಬಹುದಾಗಿದ್ದು, ಐಷಾರಾಮಿ ವಿನ್ಯಾಸ, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ನೀಡುವುದರ ಜೊತೆಗೆ ಎಂಜಿನ್ ಕಾರ್ಯಕ್ಷಮತೆಯಲ್ಲೂ ಗಮನಸೆಳೆಯಲಿದೆ.

2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಮಾತ್ರ ಬಿಡುಗಡೆಯಾಗಲಿರುವ ಗ್ರಾವಿಟಾಸ್ ಕಾರು ಮುಂಬರುವ ಜುಲೈ ಅಥವಾ ಅಗಸ್ಟ್ ಹೊತ್ತಿಗೆ ಬಿಡುಗಡೆಯಾಗಲಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.20 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.23 ಲಕ್ಷ ಬೆಲೆ ಹೊಂದಿರಬಹುದೆಂದು ನೀರಿಕ್ಷಿಸಲಾಗಿದೆ.

ಆಲ್‌ಟ್ರೊಜ್ ಎಲೆಕ್ಟ್ರಿಕ್
ಸಾಮಾನ್ಯ ಆಲ್‌ಟ್ರೊಜ್ ಕಾರು ಮಾದರಿಯಲ್ಲೇ ಅಭಿವೃದ್ದಿಗೊಂಡಿರುವ ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರು ಮಾದರಿಯು ಅತ್ಯುತ್ತಮ ಬ್ಯಾಟರಿ ಬಳಕೆ ಹೊಂದಿದ್ದು, ನೆಕ್ಸಾನ್ ಇವಿ ಕಾರಿನಿಂದಲೂ ಫೀಚರ್ಸ್‌ಗಳನ್ನು ಎರವಲು ಪಡೆದುಕೊಂಡಿದೆ. ಗ್ರಾವಿಟಾಸ್ ಕಾರು ಬಿಡುಗಡೆಯ ನಂತರವಷ್ಟೇ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ರೂ.9 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರದೊಂದಿಗೆ ಪ್ರತಿ ಚಾರ್ಜಿಗೆ 250 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿವೆ.


Click it and Unblock the Notifications