ಆಲ್‌ಟ್ರೊಜ್, ನೆಕ್ಸಾನ್ ನಂತರ ಟಿಗೋರ್, ಟಿಯಾಗೋ ಕಾರುಗಳ ಬೆಲೆಯಲ್ಲೂ ಏರಿಳಿತ
ಟಾಟಾ ಮೋಟಾರ್ಸ್ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಪರಿಷ್ಕರಣೆ ಮಾಡಿದ್ದು, ಆಲ್‌ಟ್ರೊಜ್ ಮತ್ತು ನೆಕ್ಸಾನ್ ಕಾರುಗಳ ನಂತರ ಟಿಗೋರ್, ಟಿಯಾಗೋ ಕಾರುಗಳ ಬೆಲೆಯಲ್ಲೂ ಪ್ರಮುಖ ಬದಲಾವಣೆ ಮಾಡಿ ಹೊಸ ದರಪಟ್ಟಿ ಬಿಡುಗಡೆ ಮಾಡಿದೆ.

ಹೊಸದಟ್ಟಿಯಲ್ಲಿ ಟಾಟಾ ಕಂಪನಿಯು ಟಿಗೋರ್ ಕಾರಿನ ಬೆಲೆಯನ್ನು ಕಡಿಮೆ ಮಾಡಿದ್ದಲ್ಲಿ ಟಿಯಾಗೋ ಕಾರಿನ ಬೆಲೆ ಹೆಚ್ಚಳ ಮಾಡಲಾಗಿದ್ದು, ಉತ್ಪಾದನಾ ವೆಚ್ಚಗಳ ಆಧಾರದ ಮೇಲೆ ಹೊಸ ಕಾರುಗಳ ಬೆಲೆಯಲ್ಲಿ ಪರಿಷ್ಕರಣೆ ಮಾಡಿದೆ. ಟಾಟಾ ಬಹುತೇಕ ಕಾರುಗಳು ಬಿಎಸ್-6 ಎಂಜಿನ್‌ನೊಂದಿಗೆ ಮಾರಾಟಗೊಳ್ಳುತ್ತಿದ್ದು, ಬಿಎಸ್-6 ಎಂಜಿನ್ ಜೋಡಣೆ ನಂತರ ಇದು ಎರಡನೇ ಬಾರಿಯ ಬೆಲೆ ಹೆಚ್ಚಳವಾಗಿದೆ.

ಹೊಸ ದರ ಪಟ್ಟಿಯಲ್ಲಿ ಟಿಯಾಗೋ ಹ್ಯಾಚ್‌ಬ್ಯಾಕ್ ಕಾರು ರೂ.9 ಸಾವಿರದಿಂದ ರೂ.13 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಲ್ಲಿ, ಟಿಗೋರ್ ಕಂಪ್ಯಾಕ್ಟ್ ಸೆಡಾನ್ ಮಾದರಿಯು ರೂ.10 ಸಾವಿರದಿಂದ ರೂ.36 ಸಾವಿರ ತನಕ ಬೆಲೆ ಕಡಿತ ಮಾಡಲಾಗಿದೆ.

ಲಾಕ್‌ಡೌನ್ ನಂತರ ಕಾರು ಉತ್ಪಾದನಾ ವೆಚ್ಚದಲ್ಲಿ ಭಾರೀ ಬದಲಾವಣೆಯಾಗಿದ್ದು, ಬಹುತೇಕ ವಾಹನ ಮಾದರಿಗಳು ಬೆಲೆ ಹೆಚ್ಚಳ ಪಡೆದುಕೊಂಡಿವೆ. ಟಾಟಾ ಮತ್ತು ಮಹೀಂದ್ರಾ ಸೇರಿದಂತೆ ಕೆಲವೇ ಕೆಲವು ಕಾರು ಕಂಪನಿಗಳು ಪ್ರಮುಖ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಪೈಪೋಟಿ ನೀಡುವ ತವಕದಲ್ಲಿವೆ.

ಟಾಟಾ ಕೂಡಾ ಇದೇ ನಿಟ್ಟಿನಲ್ಲಿ ಹ್ಯಾಚ್‌ಬ್ಯಾಕ್ ಮಾದರಿಯಾದ ಟಿಯಾಗೋ ಕಾರಿನ ಬೆಲೆ ಹೆಚ್ಚಳ ಮಾಡುವುದರೊಂದಿಗೆ ಟಿಗೋರ್ ಕಾರಿನ ಬೆಲೆ ಇಳಿಕೆ ಮೂಲಕ ಕಂಪ್ಯಾಕ್ಟ್ ಸೆಡಾನ್ ಕಾರು ಖರೀದಿದಾರರನ್ನು ಸೆಳೆಯಲು ಯತ್ನಿಸಿದ್ದು, ಕರೋನಾ ವೈರಸ್ ಪರಿಣಾಮ ಸಂಪೂರ್ಣವಾಗಿ ನೆಲಕಚ್ಚಿದ್ದ ಕಾರು ಮಾರಾಟವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಆಟೋ ಕಂಪನಿಗಳಿಗೆ ಬಲಬಂದಿದೆ.

ಹೀಗಾಗಿ ಬೆಲೆ ಪರಿಷ್ಕರಣೆ ಮೂಲಕ ಕಾರು ಮಾರಾಟದಲ್ಲಿ ಪ್ರಮುಖ ಬದಲಾವಣೆಯ ನೀರಿಕ್ಷೆಯಲ್ಲಿರುವ ಆಟೋ ಕಂಪನಿಗಳು ಮುಂಬರುವ ದಿನಗಳಲ್ಲಿ ಕಾರು ಮಾರಾಟವು ಮೂಲಸ್ಥಿತಿಗೆ ಮರಳುವ ವಿಶ್ವಾಸದಲ್ಲಿದ್ದು, ಟಾಟಾ ಕೂಡಾ ಕಳೆದ ಎರಡು ತಿಂಗಳಿನಲ್ಲಿ ಭಾರೀ ಪ್ರಮಾಣದ ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಕಳೆದ ಮೇ ಮತ್ತು ಜೂನ್ ತಿಂಗಳಿನಲ್ಲಿ ಒಟ್ಟು 4,515 ಯುನಿಟ್ ಕಾರು ಮಾರಾಟದೊಂದಿಗೆ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದ ಟಾಟಾ ಕಂಪನಿಯು ಜುಲೈ ಅವಧಿಯಲ್ಲಿ ಬರೋಬ್ಬರಿ 15 ಸಾವಿರ ಯುನಿಟ್ ಮಾರಾಟ ಮಾಡಿದ್ದು, 2019ರ ಜುಲೈ ಅವಧಿಯಲ್ಲಿನ ಕಾರು ಮಾರಾಟ ಪ್ರಮಾಣಕ್ಕಿಂತಲೂ ಶೇ. 43 ರಷ್ಟು ಹೆಚ್ಚುವರಿ ಬೇಡಿಕೆ ಪಡೆದುಕೊಂಡಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

2019ರ ಜುಲೈ ಅವಧಿಯಲ್ಲಿ 10,485 ಯುನಿಟ್ ಮಾರಾಟ ಮಾಡಿದ್ದ ಟಾಟಾ ಕಂಪನಿಯು ಇದೀಗ ವಿವಿಧ ಕಾರುಗಳ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಅಗಸ್ಟ್ ಅವಧಿಯಲ್ಲಿ ಇನ್ನಷ್ಟು ಹೊಸ ಕಾರು ಮಾರಾಟ ಮಾಡುವ ಗುರಿಯೋಜನೆ ಹೊಂದಿದೆ.

ಪ್ರಯಾಣಿಕರ ಕಾರು ಮಾರಾಟದಲ್ಲಿ ಟಾಟಾ ಮತ್ತು ಹ್ಯುಂಡೈ ನಂತರ ಮೂರನೇ ಸ್ಥಾನದಲ್ಲಿರುವ ಟಾಟಾ ಕಂಪನಿಯು ಜೂನ್ 2020ರ ಅವಧಿಗಿಂತಲೂ ಜುಲೈ ಅವಧಿಯಲ್ಲಿ ಸಾಕಷ್ಟು ಬೇಡಿಕೆ ಪಡೆದುಕೊಂಡಿದ್ದು, ವೈರಸ್ ಭೀತಿ ಹಿನ್ನಲೆಯಲ್ಲಿ ಸ್ವಂತ ವಾಹನ ಬಳಕೆ ಹೆಚ್ಚುತ್ತಿರುವುದು ವಾಹನ ಮಾರಾಟದಲ್ಲಿ ಬೆಳವಣಿಗೆ ಪ್ರಮುಖ ಕಾರಣವಾಗಿದೆ.
MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಜೊತೆಗೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಗೆ ಮೇಡ್ ಇನ್ ಇಂಡಿಯಾ ಅಭಿಯಾನವು ಕೂಡಾ ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎನ್ನಬಹುದು.


Click it and Unblock the Notifications