ರಸ್ತೆ ಅಪಘಾತದಲ್ಲಿ ಟೆಸ್ಲಾ ಎಕ್ಸ್ ಎಲೆಕ್ಟ್ರಿಕ್ ಕಾರು ಪೀಸ್ ಪೀಸ್
ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಪ್ರತಿ ದಿನ ಸಾವಿರಾರು ಅಪಘಾತಗಳು ಸಂಭವಿಸುತ್ತವೆ. ಬಹುತೇಕ ಅಪಘಾತಗಳಿಗೆ ವಾಹನ ಸವಾರರು ಎಸಗುವ ತಪ್ಪುಗಳು ಕಾರಣವಾಗುತ್ತವೆ. ತಾವು ಎಸಗುವ ಒಂದು ಸಣ್ಣ ತಪ್ಪು ತಮ್ಮ ಜೀವಕ್ಕೆ ಎರವಾಗುತ್ತದೆ ಎಂಬುದು ಅನೇಕರಿಗೆ ಗೊತ್ತಿದೆ.

ಪ್ರತಿದಿನ ಸಾವಿರಾರು ರಸ್ತೆ ಅಪಘಾತಗಳು ಸಂಭವಿಸಿದರೂ ಅವುಗಳಲ್ಲಿ ಕೆಲವು ಅಪಘಾತಗಳು ಭಯಾನಕವಾಗಿರುತ್ತವೆ. ಅಮೇರಿಕಾದಲ್ಲಿ ಸಂಭವಿಸಿರುವ ರಸ್ತೆ ಅಪಘಾತವೊಂದು ಜನರನ್ನು ಬೆಚ್ಚಿ ಬೀಳಿಸಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾರ ಜೀವಕ್ಕೂ ತೊಂದರೆಯಾಗಿಲ್ಲ. ಈ ಚಿತ್ರಗಳನ್ನು ಡಬ್ಲ್ಯುಪಿಎಲ್‍ಜಿ ಲೋಕಲ್ 10 ಶೇರ್ ಮಾಡಿದ್ದು, ಭಾರೀ ಪ್ರಮಾಣದಲ್ಲಿ ವೈರಲ್ ಆಗಿವೆ.

ಈ ಅಪಘಾತವು ಅಮೇರಿಕಾದಲ್ಲಿ ದೊಡ್ಡ ತಲ್ಲಣವನ್ನು ಸೃಷ್ಟಿಸಿದೆ. ಟೆಸ್ಲಾ ಕಾರು ಮತ್ತೊಂದು ಕಾರಿಗೆ ಗುದ್ದಿದೆ. ಈ ಅಪಘಾತ ಸಂಭವಿಸಿದ್ದು ಟೆಸ್ಲಾ ಎಲೆಕ್ಟ್ರಿಕ್ ಎಸ್‍ಯುವಿ ಹಾಗೂ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರುಗಳ ನಡುವೆ ಎಂಬುದನ್ನು ಗಮನಿಸಬೇಕು. ಈ ಕಾರು ಟೆಸ್ಲಾ ಕಂಪನಿಯ ಎಕ್ಸ್ ಎಲೆಕ್ಟ್ರಿಕ್ ಎಸ್‍ಯುವಿಯಾಗಿದೆ.

ಅಮೇರಿಕಾ ಮೂಲದ ಟೆಸ್ಲಾ ಕಾರು ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವುದಕ್ಕೆ ವಿಶ್ವದ್ಯಾಂತ ಜನಪ್ರಿಯವಾಗಿದೆ. ಎಕ್ಸ್ ಮಾದರಿಯು ಟೆಸ್ಲಾ ಕಂಪನಿಯು ಅಭಿವೃದ್ಧಿಪಡಿಸಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಈ ಅಪಘಾತದಲ್ಲಿ ನಿಸ್ಸಾನ್ ಕಂಪನಿಯ ಜಿಟಿ ಆರ್ ಸೂಪರ್ ಕಾರು ಹಾಗೂ ಎಕ್ಸ್ ಮಾದರಿಯ ಕಾರುಗಳು ಮುಖಾಮುಖಿಯಾಗಿವೆ. ನಿಸ್ಸಾನ್ ಜಿಟಿ ಆರ್ ಕಾರಿಗೆ ಗುದ್ದಿದ ನಂತರ ಎಕ್ಸ್ ಮಾದರಿಯ ಕಾರು ಎರಡು ತುಂಡಾಗಿದೆ. ಟೆಸ್ಲಾ ಕಾರಿನಲ್ಲಿದ್ದ ಚಾಲಕನು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.

ಟೆಸ್ಲಾ ಕಾರಿನ ಚಾಲಕನಿಗೆ ಯಾವುದೇ ಅಪಾಯವಾಗದಿರುವುದು ನಿಜಕ್ಕೂ ಆಶ್ಚರ್ಯವಾಗಿದೆ. ಗಾಯಗೊಂಡಿದ್ದ ನಿಸ್ಸಾನ್ ಕಾರಿನಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟೆಸ್ಲಾ ಕಾರಿನ ಚಾಲಕನನ್ನು ಜೋಸ್ ಡಯಾಜ್ ಎಂದು ಗುರುತಿಸಲಾಗಿದೆ. ಆತನ ಒಂದು ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಅಪಘಾತವಾದಾಗ ನಿಸ್ಸಾನ್ ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ನಿಸ್ಸಾನ್ ಕಾರಿಗೆ ಅತಿ ವೇಗದಲ್ಲಿದ್ದ ಮಾಡೆಲ್ ಎಕ್ಸ್ ಕಾರು ಗುದ್ದಿದ ಕಾರಣಕ್ಕೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅತಿ ವೇಗವಾಗಿ ಯಾವುದೇ ವಾಹನವನ್ನು ಚಲಾಯಿಸಿದರೂ ಅಪಘಾತಗಳು ಸಂಭವಿಸುತ್ತವೆ ಎಂದು ತಿಳಿದಿದ್ದರೂ ಸಹ ವಾಹನ ಸವಾರರು ವೇಗವಾಗಿಯೇ ವಾಹನಗಳನ್ನು ಚಲಾಯಿಸುತ್ತಾರೆ. ಇದರ ಜೊತೆಗೆ ಕುಡಿದು ವಾಹನಗಳನ್ನು ಚಲಾಯಿಸುವುದು ಸಹ ಅಪಘಾತಗಳಿಗೆ ಕಾರಣವಾಗುತ್ತಿವೆ.

ಈ ಕಾರಣಕ್ಕೆ, ಈ ಎರಡು ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಬಹುತೇಕ ಎಲ್ಲಾ ದೇಶಗಳು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಭಾರತದಲ್ಲಿಯೂ ಸಹ ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ.


Click it and Unblock the Notifications








