ಭಾರತದ ರಸ್ತೆಯಲ್ಲಿ ಟೆಸ್ಲಾ ಸೈಬರ್‌ಟ್ರಕ್ ವೈರಲ್: ಇದು ಅಸಲಿ ಟ್ರಕ್ ಅಲ್ಲ, ಅಸಲಿಯತ್ತು ಇಲ್ಲಿದೆ!
ಸೆಪ್ಟೆಂಬರ್ 6ರ ತಡರಾತ್ರಿ ಭಾರತದ ರಸ್ತೆಗಳಲ್ಲಿ ಟೆಸ್ಲಾದ 'ಸೈಬರ್‌ಟ್ರಕ್' ಪ್ರತ್ಯಕ್ಷವಾಗಿದೆ ಎಂಬ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆದವು. ಆದರೆ, ಈ ವಿಡಿಯೋದ ಪ್ರತಿಯೊಂದು ಫ್ರೇಮ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಟೆಸ್ಲಾದ ಅಸಲಿ ಟ್ರಕ್ ಅಲ್ಲ, ಬದಲಿಗೆ ಅದರ ಜುಗಾಡ್ ಅಥವಾ ಡೂಪ್ಲಿಕೇಟ್ ಮಾಡೆಲ್ ಎಂಬುದು ತಕ್ಷಣವೇ ತಿಳಿಯುತ್ತದೆ. ಭಾರತದಲ್ಲಿ ಇಂತಹ 'ಕಾಪಿ' ಕಾರುಗಳನ್ನು ತಯಾರಿಸಲು ಸಾಮಾನ್ಯವಾಗಿ ಇಸುಝು D-Max, ಮಹೀಂದ್ರಾ ಸ್ಕಾರ್ಪಿಯೋ ಗೆಟ್‌ವೇ ಅಥವಾ ಹಳೆಯ ಟಾಟಾ ಕ್ಸೆನಾನ್‌ನಂತಹ ಜನಪ್ರಿಯ ಪಿಕಪ್ ಟ್ರಕ್‌ಗಳನ್ನು ಬಳಸಲಾಗುತ್ತದೆ. ಇವುಗಳ ಬೇಸ್ ಮೇಲೆಯೇ ಹೆಚ್ಚಿನ ನಕಲಿ ಸೈಬರ್‌ಟ್ರಕ್‌ಗಳನ್ನು ನಿರ್ಮಿಸಲಾಗುತ್ತಿದೆ.
ಮೊದಲನೆಯದಾಗಿ ಕಾರಿನ ಗಾತ್ರ ಮತ್ತು ಲುಕ್ ಗಮನಿಸಿ. ಅಸಲಿ ಸೈಬರ್‌ಟ್ರಕ್ ಹೆಚ್ಚು ಅಗಲ, ಉದ್ದ ಮತ್ತು ರಸ್ತೆಗೆ ಅಂಟಿಕೊಂಡಂತೆ ಇರುತ್ತದೆ. ಟೆಸ್ಲಾ ಸೈಬರ್‌ಟ್ರಕ್‌ನ ವೀಲ್‌ಬೇಸ್ 3,635 ಮಿಮೀ ಇದೆ. ಆದರೆ ಡೂಪ್ಲಿಕೇಟ್‌ಗೆ ಬಳಸುವ ಪಿಕಪ್ ಟ್ರಕ್‌ಗಳ ವೀಲ್‌ಬೇಸ್ ಸಾಮಾನ್ಯವಾಗಿ 3,040 ರಿಂದ 3,150 ಮಿಮೀ ಇರುತ್ತದೆ. ಈ ವ್ಯತ್ಯಾಸದಿಂದಾಗಿ ನಕಲಿ ಮಾಡೆಲ್‌ನ ಕ್ಯಾಬಿನ್ ಮತ್ತು ಹಿಂಭಾಗದ ಭಾಗಗಳು ತುಸು ಗಿಡ್ಡದಾಗಿ ಅಥವಾ ಒತ್ತಿದಂತೆ ಕಾಣಿಸುತ್ತವೆ. ಜೊತೆಗೆ ಅಸಲಿ ಟೆಸ್ಲಾದ ದಪ್ಪನೆಯ ಟೈರುಗಳಿಗೆ ಹೋಲಿಸಿದರೆ, ಡೂಪ್ಲಿಕೇಟ್ ಕಾರುಗಳ ಟೈರುಗಳು ಒಳಗಿಳಿದಂತೆ ಮತ್ತು ತೆಳ್ಳಗೆ ಕಾಣುವುದರಿಂದ ಸುಲಭವಾಗಿ ಗುರುತಿಸಬಹುದು.

ಡೂಪ್ಲಿಕೇಟ್ ಸೈಬರ್‌ಟ್ರಕ್ ಗುರುತಿಸುವುದು ಹೇಗೆ? ಸರಳ ಟಿಪ್ಸ್
ಕಾರಿನ ಗ್ಲಾಸ್‌ಲೈನ್ ಮತ್ತು ಲೈಟಿಂಗ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಅಸಲಿ ಟೆಸ್ಲಾ ಟ್ರಕ್‌ನಲ್ಲಿ ಮುಂಭಾಗದಿಂದ ಕೊನೆಯವರೆಗೂ ಹರಡಿರುವ ಒಂದೇ ಕಂಟಿನ್ಯೂಯಸ್ ಲೈಟ್ ಬಾರ್ ಮತ್ತು ತ್ರಿಕೋನ ಆಕಾರದ ಕ್ವಾರ್ಟರ್ ವಿಂಡೋಗಳಿರುತ್ತವೆ. ಇದರ ಡೋರ್ ಗ್ಲಾಸ್ ಫ್ರೇಮ್‌ಲೆಸ್ ಆಗಿದ್ದು, ಅತ್ಯಂತ ಸ್ಮೂತ್ ಆಗಿ ಕೂರುತ್ತದೆ. ಜೊತೆಗೆ ಇದರ ಸ್ಟೇನ್‌ಲೆಸ್ ಸ್ಟೀಲ್ ಬಾಡಿ ಸಾಫ್ಟ್ ಬ್ರಷ್ಡ್ ಫಿನಿಶ್ ಹೊಂದಿದೆ. ಆದರೆ ನಕಲಿ ಮಾಡೆಲ್‌ಗಳಲ್ಲಿ ಹೆಚ್ಚಾಗಿ ವಿನೈಲ್ ರ್‍ಯಾಪ್ ಬಳಸಿರುತ್ತಾರೆ ಮತ್ತು A-ಪಿಲ್ಲರ್‌ಗಳ ಹತ್ತಿರ ಜಾಯಿಂಟ್‌ಗಳು ಕಾಣಿಸುತ್ತವೆ. ಹಲವು ರೆಪ್ಲಿಕಾಗಳಲ್ಲಿ ಫ್ರೇಮ್ ಇರುವ ವಿಂಡೋಗಳಿದ್ದು, ಆಫ್ಟರ್‌ಮಾರ್ಕೆಟ್ ಹೆಡ್‌ಲ್ಯಾಂಪ್‌ಗಳನ್ನು ಟೆಸ್ಲಾದ ಒರಿಜಿನಲ್ ಸ್ಟ್ರಿಪ್‌ಗಿಂತ ಕೊಂಚ ಕೆಳಗೆ ಅಳವಡಿಸಿರುತ್ತಾರೆ.
ಭಾರತದಲ್ಲಿ ನಕಲಿ ಸೈಬರ್‌ಟ್ರಕ್ ಕ್ರೇಜ್: ಏಕಾಗಿ ನಿರ್ಮಿಸುತ್ತಾರೆ ಮತ್ತು ಇದರ ಅಪಾಯಗಳೇನು?
ಅಷ್ಟಕ್ಕೂ ಇಂತಹ ನಕಲಿ ಸೈಬರ್‌ಟ್ರಕ್‌ಗಳನ್ನು ಏಕೆ ತಯಾರಿಸುತ್ತಾರೆ? ಜಾಹೀರಾತು ಶೂಟಿಂಗ್‌ಗಳಿಗೆ ಆಕರ್ಷಕ ಲುಕ್ ನೀಡಲು, ಸೆಲೆಬ್ರಿಟಿಗಳ ಕಾನ್ವಾಯ್‌ಗಳಲ್ಲಿ ಸೀನ್ ಕ್ರಿಯೇಟ್ ಮಾಡಲು ಮತ್ತು ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಲೈಕ್ಸ್ ಗಿಟ್ಟಿಸಲು ಇಂತಹ ಶೋ ಆಫ್ ಗಾಡಿಗಳ ಅಗತ್ಯವಿರುತ್ತದೆ. ಇನ್ನು ನಿಜವಾದ ಸೈಬರ್‌ಟ್ರಕ್ ವಿಷಯಕ್ಕೆ ಬಂದರೆ, ಕಳೆದ ಜನವರಿಯಲ್ಲಿ ಮುಂಬೈನಲ್ಲಿ ಒಂದು ಅಸಲಿ ಸೈಬರ್‌ಟ್ರಕ್ ಕಾಣಿಸಿಕೊಂಡಿತ್ತು. ನಟ ಸಂಜಯ್ ದತ್ ಇದನ್ನು ತಾತ್ಕಾಲಿಕ ಕಾರ್ನೆಟ್ ಪರ್ಮಿಟ್ ಮೇಲೆ ಓಡಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದನ್ನು ಹೊರತುಪಡಿಸಿದರೆ, ರಸ್ತೆಯಲ್ಲಿ ರಾತ್ರಿ ವೇಳೆ ಕಾಣಿಸಿಕೊಳ್ಳುವ ಬಹುತೇಕ ಸೈಬರ್‌ಟ್ರಕ್‌ಗಳು ಬರಿ ಪ್ರೊಪ್ಸ್ ಅಥವಾ ನಕಲಿ ಮಾಡೆಲ್‌ಗಳೇ ಹೊರತು ಟೆಸ್ಲಾದ ಅಧಿಕೃತ ಡೆಲಿವರಿಗಳಲ್ಲ.
ಬುಕಿಂಗ್ ಅಥವಾ ಶೂಟಿಂಗ್ ಹೆಸರಿನಲ್ಲಿ ಯಾರಾದರೂ 'ಸೈಬರ್‌ಟ್ರಕ್' ಬಾಡಿಗೆಗೆ ನೀಡಿದರೆ ಎಚ್ಚರದಿಂದಿರಿ! ವಾಹನದ ಆರ್‌ಸಿ ಪರಿಶೀಲಿಸಿ ಮತ್ತು mParivahan ಆಪ್‌ನಲ್ಲಿ ಅದರ ಬ್ರ್ಯಾಂಡ್, ಮಾಡೆಲ್ ಮತ್ತು ಇಂಧನದ ಮಾದರಿಯನ್ನು ಕ್ರಾಸ್ ಚೆಕ್ ಮಾಡಿ. ಚಾಸಿಸ್ ಮೇಲೆ ಮುದ್ರಿಸಲಾದ VIN ಮತ್ತು ಎಂಜಿನ್ ನಂಬರ್‌ಗಳನ್ನು ಆರ್‌ಸಿಗೆ ಹೋಲಿಸಿ ನೋಡಿ. ಜೊತೆಗೆ ಎಕ್ಸ್ಟ್ರಾ ಬಾಡಿ ವರ್ಕ್‌ನಿಂದಾಗಿ ವಾಹನದ ತೂಕ ಹೆಚ್ಚಾಗಿ, ಏರ್‌ಫ್ಲೋ, ಕೂಲಿಂಗ್, ಬ್ರೇಕಿಂಗ್ ಮತ್ತು ಸ್ಟೀರಿಂಗ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಇನ್ನು ಈ ಗಾಡಿಗಳ ಆರ್‌ಸಿಯಲ್ಲಿ ಮೂಲ ಪಿಕಪ್ ಟ್ರಕ್ ಹೆಸರು ಇರುವುದರಿಂದ, ಮರುಮಾರಾಟ ಮೌಲ್ಯ ತೀರಾ ಕಡಿಮೆ ಇರುತ್ತದೆ ಎಂಬುದನ್ನು ನೆನಪಿಡಿ.


Click it and Unblock the Notifications
