ಬರೋಬ್ಬರಿ 1 ತಿಂಗಳ ನಂತರ ಕಾರು ಉತ್ಪಾದನೆಗೆ ಮರುಚಾಲನೆ ನೀಡಿದ ಟೊಯೊಟಾ
ಕರೋನಾ ವೈರಸ್ ತಗ್ಗಿಸಲು ಮೇ 3ರ ತನಕ ವಿಧಿಸಲಾಗಿದ್ದ ಲಾಕ್‌ಡೌನ್ ಅನ್ನು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಸಡಿಲಿಕೆ ಮಾಡಲಾಗುತ್ತಿದ್ದು, ಟೊಯೊಟಾ ಕಿರ್ಲೋಸ್ಕರ್ ಕಂಪನಿಯು ಕೇಂದ್ರ ಸರ್ಕಾರದ ಹೊಸ ನಿಯಮಾನುಸಾರ ವಾಹನಗಳ ಉತ್ಪಾದನೆಯನ್ನು ಪುನಾರಂಭಿಸಿದೆ.

2ನೇ ಹಂತದ ಲಾಕ್‌ಡೌನ್ ಮುಗಿಯಲು ಇನ್ನು ಹತ್ತು ದಿನ ಬಾಕಿ ಇರುವಾಗಲೇ ಹಸಿರು ವಲಯಗಳಲ್ಲಿರುವ ಕೈಗಾರಿಕೆಗಳ ಉತ್ಪಾದನಾ ಚಟುವಟಿಕೆಗಳಿಗೆ ಷರತ್ತುಬದ್ಧ ಅವಕಾಶ ನೀಡಲಾಗಿದ್ದು, ದೇಶಾದ್ಯಂತ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಕಳೆದ ಒಂದು ತಿಂಗಳ ನಂತರ ವಾಹನ ಉತ್ಪಾದನೆಯನ್ನು ಪುನಾರಂಭಿಸುತ್ತಿವೆ. ಟೊಯೊಟಾ ಇದೀಗ ಕಾರು ಉತ್ಪಾದನೆಗೆ ಮರುಚಾಲನೆ ನೀಡಿದ್ದು, ಸೋಂಕು ಹರಡದಂತೆ ಹಲವಾರು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಬೆಂಗಳೂರಿನ ಹೊರವಲಯದಲ್ಲಿರುವ ಬಿಡದಿ ಕಾರು ಉತ್ಪಾದನಾ ಘಟಕದಲ್ಲಿ ಹೊಸ ಕಾರುಗಳ ಉತ್ಪಾದನೆ ಆರಂಭಿಸಿರುವ ಟೊಯೊಟಾ ಕಂಪನಿಯು ಶೇ.30 ಉದ್ಯೋಗಿಗಳೊಂದಿಗೆ ಉತ್ಪಾದನಾ ಪ್ರಕ್ರಿಯೆಯನ್ನು ಕೈಗೊಂಡಿದೆ.
MOST READ: ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಕೇಂದ್ರ ಸರ್ಕಾರ ನೀಡಿರುವ ಹೊಸ ಗೈಡ್‌ಲೆನ್ಸ್ ಪ್ರಕಾರ, ಹಸಿರು ವಲಯದಲ್ಲಿರುವ ಮುನ್ಸಿಪಲ್ ಕಾರ್ಪೊರೇಶನ್ ಮಿತಿ ಹೊರಗಿನ ಕೈಗಾರಿಕಾ ಸಂಸ್ಥೆಗಳಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಗುತ್ತಿದ್ದು, ಗರಿಷ್ಠ ಪ್ರಮಾಣದ ಸುರಕ್ಷಾ ಸಾಧನಗಳನ್ನು ಬಳಕೆ ಮಾಡುವುದು ಕಡ್ಡಾಯವಾಗಿದೆ.

ಸದ್ಯ ಉತ್ಪಾದನೆಗೆ ಅನುಮತಿ ಪಡೆದುಕೊಂಡಿರುವ ಕೈಗಾರಿಕಾ ಸಂಸ್ಥೆಗಳು ಕೇವಲ ಶೇ.30 ರಷ್ಟು ಪ್ರಮಾಣದ ಉದ್ಯೋಗಿಗಳೊಂದಿಗೆ ಉತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದ್ದು, ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರದ ಜೊತೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಹ್ಯಾಂಡ್ ಗ್ಲೌಸ್ ಬಳಕೆಯು ಕಡ್ಡಾಯವಾಗಿರಲಿದೆ.
MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ

ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಯಾವುದೇ ಉತ್ಪಾದನಾ ಚಟುವಟಿಕೆಗಳಿಲ್ಲದೆ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದ ಕೈಗಾರಿಕೆ ವಲಯಕ್ಕೆ ಇದೀಗ ನೀಡಿರುವ ಕೆಲವು ವಿನಾಯ್ತಿಗಳಿಂದ ಉತ್ಪಾದನೆಗೆ ಮತ್ತೆ ಚಾಲನೆ ಸಿಕ್ಕಿರುವುದು ತುಸು ಸಮಾಧಾನ ತಂದಿದೆ.

ಆದರೆ ಉತ್ಪಾದನಾ ಸ್ಥಳದಲ್ಲಿ ಗರಿಷ್ಠ ಪ್ರಮಾಣದ ಸುರಕ್ಷತೆಯನ್ನು ತೆಗೆದುಕೊಳ್ಳಬೇಕಿರುವುದು ಆಯಾ ಕಂಪನಿಗಳ ಆದ್ಯ ಕರ್ತವ್ಯವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಗರಿಷ್ಠ ಸುರಕ್ಷತೆ ನೀಡುವ ಖಾತ್ರಿ ವ್ಯಕ್ತಪಡಿಸಿವೆ.
MOST READ: ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5,000..!

ಇನ್ನು ಮಾಹಾಮಾರಿ ಕರೋನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಸ್ಪಂದಿಸಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಧನಸಹಾಯದ ಜೊತೆ ವೈದ್ಯಕೀಯ ಉಪಕರಣಗಳನ್ನು ಉತ್ಪಾದನೆ ಮಾಡುತ್ತಿವೆ.

ಆಟೋ ಉತ್ಪಾದನಾ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದ್ದರಿಂದ ವೈದ್ಯಕೀಯ ಉಪಕರಣಗಳ ಉತ್ಪಾದನೆ ಹೆಚ್ಚಿನ ಒತ್ತುನೀಡಿರುವ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ದೇಣಿಗೆ ಜೊತೆಗೆ ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ್, ಪ್ರೋಟೆಕ್ವಿಟ್ ಕ್ಲಾಥ್, ರ‍್ಯಾಪಿಡ್ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಉತ್ಪನ್ನಗಳನ್ನು ತಯಾರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡುತ್ತಿವೆ.
MOST READ:ಲಾಕ್‌ಡೌನ್ ವೇಳೆ ತಂಗಿಗಾಗಿ 85 ಕಿ.ಮೀ ದೂರ ಸೈಕಲ್ ತುಳಿದ ಅಣ್ಣ..!

ಇದರಲ್ಲಿ ಟೊಯೊಟಾ ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಾಕಷ್ಟು ನೆರವು ನೀಡಿದ್ದು, ರಾಜ್ಯ ಸರ್ಕಾರಕ್ಕೆ ರೂ.2 ಕೋಟಿ ದೇಣಿಗೆಯ ಜೊತೆಗೆ ಸಹಭಾಗಿತ್ವ ಸಂಸ್ಥೆಗಳ ಜೊತೆಗೂಡಿ ಪರ್ಸನಲ್ ಪ್ರೋಟೆಕ್ಟಿವ್ ಇಕ್ವಿಪ್‌ಮೆಂಟ್(ಪಿಪಿಇ) ಕಿಟ್ ಉತ್ಪಾದನೆಗೆ ಚಾಲನೆ ನೀಡಿದೆ.


Click it and Unblock the Notifications