ಆಟೋ ಎಕ್ಸ್‌ಪೋ 2020: ಬಹುನೀರಿಕ್ಷಿತ ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿ ಅನಾವರಣ
ಫೋಕ್ಸ್‌ವ್ಯಾಗನ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ತನ್ನ ಬಹುನೀರಿಕ್ಷಿತ ಟೈಗನ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಜೊತೆಗೂಡಿ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಟೈಗನ್, ಟಿ-ರಾಕ್, ಟಿಗ್ವಾನ್ ಆಲ್‌ಸ್ಪೆಸ್ ಮತ್ತು ಸ್ಕೋಡಾ ವಿಷನ್-ಇನ್ ಕಾನ್ಸೆಪ್ಟ್ ಆವೃತ್ತಿಗಳನ್ನು ಸಹಭಾಗಿತ್ವದ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದರಲ್ಲಿ ಟೈಗನ್ ಕಾರು ಮಧ್ಯಮ ಗಾತ್ರದ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಿಡುಗಡೆಯಾಗಲಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಹೊಸ ಟೈಗನ್ ಎಸ್‍ಯುವಿ ಕಾರು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿರುವ ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ ಹಾಗೂ ಎಂಜಿ ಹೆಕ್ಟರ್ ಕಾರುಗಳಿಗೆ ಪೈಪೋಟಿ ನೀಡಲಿದ್ದು, ಹೊಸ ಎಂಕ್ಯೂಬಿ ಎ0 ಪ್ಲಾಟ್‍ಫಾರಂನಡಿಯಲ್ಲಿ ಈ ಕಾರು ಅಭಿವೃದ್ದಿಗೊಳ್ಳಲಿದೆ.

ಸದ್ಯ ಅನಾವರಣಗೊಂಡಿರುವ ಟೈಗನ್ ಎಸ್‍ಯುವಿಯನ್ನು ಕಾನ್ಸೆಪ್ಟ್ ಮಾದರಿ ಎಂದು ಹೇಳಲಾಗಿದ್ದು, ಈ ಎಸ್‍ಯುವಿ ಕಾರು ಉತ್ಪಾದನಾ ಆವೃತ್ತಿಯಲ್ಲಿ ಇನ್ನು ಹಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ.

ಇನ್ನು ಟೈಗನ್ ಕಂಪ್ಯಾಕ್ಟ್ ಎಸ್‍ಯುವಿ ಮಾದರಿಯು ಅಂತರ್‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಸ್‍ಯುವಿಗಳಿಗಿಂತಲೂ ಹೆಚ್ಚಿನ ಪ್ರಮಾಣದ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಹೆಚ್ಚುವರಿ ವ್ಹೀಲ್‍ಬೇಸ್ ಅನ್ನು ಹೊಂದಿರಲಿದ್ದು, ಹಲವಾರು ಪ್ರೀಮಿಯಂ ಫೀಚರ್ಸ್‌ಗಳ ಜೊತೆಗೆ ಎಲ್‍ಇಡಿ ಟೈಲ್ ಲೈಟ್ ಹಾಗೂ ಎಲ್‍ಇಡಿ ಲೈಟ್ ಬಾರ್‍ಗಳನ್ನು ಹೊಂದುವ ಮೂಲಕ ಆಕರ್ಷಕ ಹೊರನೋಟವನ್ನು ಪಡೆದುಕೊಂಡಿದೆ.

ಹಾಗೆಯೇ ಆಕರ್ಷಕವಾಗಿರುವ ಈ ಕಾರಿನ ಇಂಟಿರಿಯರ್ ಅಡ್ವಾನ್ಸ್ ಟೆಕ್ನಿಕಲ್ ಫೀಚರ್ಸ್‌ಗಳಾದ ಟಚ್ ಸ್ಕ್ರೀನ್ ಇನ್ಫೋಟೆನ್‍ಮೆಂಟ್ ಸಿಸ್ಟಂ ಹಾಗೂ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‍ಗಳನ್ನು ಹೊಂದಿದೆ.

ಎಂಜಿನ್ ಸಾಮರ್ಥ್ಯ
ಟೈಗನ್ ಕಾರಿನಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 5-ಸ್ಪಿಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 130-ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ.

ಮಾಹಿತಿಗಳ ಪ್ರಕಾರ ಹೊಸ ಕಾರು ಡೀಸೆಲ್ ಎಂಜಿನ್ ಪಡೆದುಕೊಳ್ಳುವುದು ಅನುಮಾನ ಎನ್ನಲಾಗುತ್ತಿದ್ದು, ಭಾರತದಲ್ಲಿ ಡೀಸೆಲ್ ಗೇಟ್ ಹಗರಣದ ನಂತರ ಫೋಕ್ಸ್‌ವ್ಯಾಗನ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಸಾಧ್ಯವಾದಷ್ಟು ಕಡಿತಗೊಳಿಸುತ್ತಿದೆ.

ಇನ್ನು ಫೋಕ್ಸ್‌ವ್ಯಾಗನ್ ಸಂಸ್ಥೆಯು ಇಂಡಿಯಾ 2.0 ಯೋಜನೆಯಡಿ ಸ್ಕೋಡಾ ಸಹಭಾಗಿತ್ವದೊಂದಿಗೆ ಉತ್ಪಾದನಾ ಯೋಜನೆಗೆ ಚಾಲನೆ ನೀಡುತ್ತಿದ್ದು, ಹೊಸ ಯೋಜನೆಗಾಗಿ ಭಾರತದಲ್ಲಿ ಬರೋಬ್ಬರಿ ರೂ.7,900 ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತದೆ.


Click it and Unblock the Notifications








