ನಿಸ್ಸಾನ್ ಬಿಡುಗಡೆ ಮಾಡಲಿರುವ ಮ್ಯಾಗ್ನೆಟ್ ಕಂಪ್ಯಾಕ್ಟ್ ಎಸ್‌ಯುವಿ ಸ್ಪೆಷಲ್ ಏನು?
ಮಾರುಕಟ್ಟೆಯಲ್ಲಿ ಸದ್ಯ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಉತ್ತಮ ಮಾರುಕಟ್ಟೆಯಿದ್ದು, ನಿಸ್ಸಾನ್ ಮತ್ತು ರೆನಾಲ್ಟ್ ಕಂಪನಿಗಳು ಭಾರತದಲ್ಲಿ ಹೊಸ ಮಾದರಿಯ ಕಾರುಗಳ ಉತ್ಪಾದನೆಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.

ನಿಸ್ಸಾನ್ ಬಿಡುಗಡೆ ಮಾಡಲಿರುವ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ಶೀಘ್ರದಲ್ಲೇ ಆಕರ್ಷಕ ಬೆಲೆಯೊಂದಿಗೆ ಬಿಡುಗಡೆಯಾಗುವ ಸುಳಿವು ನೀಡಿದ್ದು, ಗ್ರಾಹಕರನ್ನು ಸೆಳೆಯಲು ಸಿದ್ದವಾಗಿರುವ ಹೊಸ ಕಾರಿನ ತಾಂತ್ರಿಕ ಅಂಶಗಳು ಈಗಾಗಲೇ ಬಹಿರಂಗವಾಗಿವೆ. ಸದ್ಯಕ್ಕೆ EM2 ಕೋಡ್ ನೆಮ್ ಆಧಾರದ ಮೇಲೆ ಹೊಸ ಕಾರಿನ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಹೊಸ ಕಾರಿನ ಅಧಿಕೃತ ಹೆಸರನ್ನು 'ಮ್ಯಾಗ್ನೆಟ್' ಎಂದು ಕರೆಯಲಾಗಿದೆ.

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300 ಮಾದರಿಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದ್ದು, ಬೆಲೆ ವಿಚಾರದಲ್ಲಿ ಪ್ರತಿಸ್ಪರ್ಧಿ ಕಾರುಗಳಿಗಳಿಂತಲೂ ಉತ್ತಮವಾಗಿದೆ.

ಮಾರುಕಟ್ಟೆಯಲ್ಲಿರುವ ಕಿಕ್ಸ್ ಎಸ್‌ಯುವಿ ಮಾದರಿಗಿಂತಲೂ ಕೆಳದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿರುವ ಹೊಸ ಮ್ಯಾಗ್ನೆಟ್ ಕಾರು ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವೇ ಮಾರಾಟಗೊಳ್ಳಲಿದೆ.

ಇದಕ್ಕಾಗಿ ನಿಸ್ಸಾನ್ ಜೊತೆಗೆ ಮತ್ತಷ್ಟು ಹೊಸ ಪೆಟ್ರೋಲ್ ಎಂಜಿನ್‌ಗಳ ಅಭಿವೃದ್ದಿಗೆ ಚಾಲನೆ ನೀಡಿದ್ದು, ಸಹಭಾಗಿತ್ವದ ಯೋಜನೆ ಅಡಿ ನಿರ್ಮಾಣವಾಗುತ್ತಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಎರಡು ಸಂಸ್ಥೆಗಳು ಬಳಕೆ ಮಾಡಿಕೊಳ್ಳಲಿವೆ.

ರೆನಾಲ್ಟ್ ಹೊಚ್ಚ ಹೊಸ ಕಿಗರ್ ಮತ್ತು ನಿಸ್ಸಾನ್ ಮ್ಯಾಗ್ನೆಟ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನಲ್ಲಿ ಒಂದೇ ಮಾದರಿಯ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಗೆ ಲಭ್ಯವಾಗಲಿದ್ದು, ಉತ್ತಮ ಎಂಜಿನ್ ಪರ್ಫಾಮೆನ್ಸ್‌ನೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳಲಿವೆ.

ಇನ್ನು ಹೊಸ ಮ್ಯಾಗ್ನೆಟ್ ಕಾರಿನಲ್ಲಿ ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್ಇಡಿ ಟೈಲ್‌ಲೈಟ್, ಸನ್‌ರೂಫ್ ಸೇರಿದಂತೆ ಹಲವು ಕಾರ್ ಕನೆಕ್ಟ್ ಫೀಚರ್ಸ್‌ಗಳನ್ನು ನೀಡಲಾಗುತ್ತಿದ್ದು, ಕಿಕ್ಸ್ ಮಾದರಿಯಲ್ಲಿನ ಕೆಲವು ಫೀಚರ್ಸ್‌ಗಳನ್ನು ಸಹ ಹೊಸ ಕಾರಿನ ಹೊರಭಾಗದ ವಿನ್ಯಾಸಗಳಲ್ಲಿ ಅಳವಡಿಸಲಾಗಿದೆ.

ಬಿಡುಗಡೆಯ ಅವಧಿ ಮತ್ತು ಬೆಲೆ(ಅಂದಾಜು)
ಮಾಹಿತಿಗಳ ಪ್ರಕಾರ, ನಿಸ್ಸಾನ್ ಹೊಸ ಮ್ಯಾಗ್ನೆಟ್ ಕಾರು ಮುಂದಿನ ಸೆಪ್ಟೆಂಬರ್ ಹೊತ್ತಿಗೆ ಖರೀದಿಗೆ ಲಭ್ಯವಾಗಲಿದ್ದು, ಹೊಸ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ವಿವಿಧ ಹಂತಗಳ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಇದೀಗ ಚಾಲನೆ ನೀಡಲಾಗುತ್ತಿದೆ.

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿರುವ ನಿಸ್ಸಾನ್ ಮತ್ತು ರೆನಾಲ್ಟ್ ಸಂಸ್ಥೆಗಳು ಹೊಸ ಕಾರನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಮಾದರಿಯ ಬೆಲೆಯನ್ನು ರೂ.8 ಲಕ್ಷದೊಳಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.


Click it and Unblock the Notifications