ಬಿಡುಗಡೆಗೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಆಡಿ ಇ-ಟ್ರಾನ್ ಇವಿ
ಆಡಿ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾಗಿರುವ ಇ-ಟ್ರಾನ್ ಎಸ್‌ಯುವಿ ಮಾದರಿಯು ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಹೊಸ ಎಲೆಕ್ಟ್ರಿಕ್ ಮಾದರಿಯನ್ನು ಆಡಿ ಕಂಪನಿಯು ಭಾರತದಲ್ಲೂ ಶೀಘ್ರದಲ್ಲೇ ಬಿಡುಗಡೆ ಮಾಡುವ ಸುಳಿವು ನೀಡಿದೆ.

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಧ್ಯಮ ಗಾತ್ರದ ಕಾರುಗಳಲ್ಲಿ ಮಾತ್ರವಲ್ಲದೆ ಐಷಾರಾಮಿ ಕಾರು ಮಾದರಿಗಳು ಸಹ ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ ಮಾರಾಟವಾಗುತ್ತಿವೆ. ಆಡಿ ಕಂಪನಿಯು ಕೂಡಾ ಈ ನಿಟ್ಟಿನಲ್ಲಿ ಈಗಾಗಲೇ ಇ-ಟ್ರಾನ್ ಎಸ್‌ಯುವಿ ಮಾರಾಟದಲ್ಲಿ ಹೊಸ ದಾಖಲೆಗೆ ಕಾರಣವಾಗಿದ್ದು, ಶೀಘ್ರದಲ್ಲೇ ಭಾರತದಲ್ಲೂ ಬಿಡುಗಡೆ ಮಾಡಲಿದೆ.

ಇ-ಟ್ರಾನ್ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ಬಗೆಗೆ ಈಗಾಗಲೇ ಕೆಲವು ಮಾಹಿತಿಗಳನ್ನು ಹಂಚಿಕೊಂಡಿರುವ ಆಡಿ ಇಂಡಿಯಾ ಕಂಪನಿಯು ಹೊಸ ಕಾರಿನ ಟೆಸ್ಟ್ ಮಾದರಿಗಳನ್ನು ಆಯ್ದ ಡೀಲರ್ಸ್‌ಗಳಲ್ಲಿ ಪ್ರದರ್ಶನಗೊಳಿಸಲಾಗುತ್ತಿದ್ದು, ಟೆಸ್ಟ್ ಡ್ರೈವ್ ಪ್ರಕ್ರಿಯೆ ಶೀಘ್ರದಲ್ಲೇ ಆರಂಭಗೊಳ್ಳುವ ಸಾಧ್ಯತೆಗಳಿವೆ.

2019ರ ಆರಂಭದಲ್ಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿರುವ ಆಡಿ ಇ-ಟ್ರಾನ್ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ಮಾರಾಟಗೊಂಡಿದ್ದು, ಕಳೆದ ವರ್ಷ ಅತಿಹೆಚ್ಚು ಬೇಡಿಕೆ ಪಡೆದುಕೊಂಡ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಗುರುತಿಸಿಕೊಂಡಿದೆ.

ಯುರೋಪ್ ಮಾರುಕಟ್ಟೆಯಲ್ಲಿ ಹೊಸ ಕಾರು ಕಳೆದ ವರ್ಷ ಒಟ್ಟು 17,641 ಯುನಿಟ್ ಮಾರಾಟಗೊಳ್ಳುವ ಮೂಲಕ ಬೆಸ್ಟ್ ಸೆಲ್ಲಿಂಗ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಭಾರತದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಇ-ಟ್ರಾನ್ ಎಲೆಕ್ಟ್ರಿಕ್ ಕಾರು ದುಬಾರಿ ಬೆಲೆ ನಡುವೆಯೂ ಭರ್ಜರಿ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಳ್ಳುತ್ತಿದ್ದು, ಅಮೆರಿಕದಲ್ಲೂ ಟೆಸ್ಲಾ ಕಾರುಗಳಿಗೂ ಉತ್ತಮ ಪೈಪೋಟಿ ನೀಡುವ ಮೂಲಕ ಶೇ.50ರಷ್ಟು ಬೆಳವಣಿಗೆ ಸಾಧಿಸಿದೆ.

ಇದೀಗ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿರುವ ಇ-ಟ್ರಾನ್ ಕಾರು ಈಗಾಗಲೇ ಪ್ರದರ್ಶನಗೊಳ್ಳುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಕರೋನಾ ವೈರಸ್ ಪರಿಣಾಮ ಹೊಸ ಕಾರಿನ ಬಿಡುಗಡೆಯ ಯೋಜನೆಯಲ್ಲಿ ವಿಳಂಬವಾಗುತ್ತಿದೆ.

ವಿನೂತನ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಇ-ಟ್ರಾನ್ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 95kWh ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಇ-ಟ್ರಾನ್ ಕಾರು ಪ್ರತಿ ಗಂಟೆಗೆ 200ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದೆ.

ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಅಥವಾ 400 ವೊಲ್ಟ್ಸ್ ಹೋಮ್ ಚಾರ್ಜರ್‌ನೊಂದಿಗೆ 95kWh ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 5.7 ಸೇಕೆಂಡುಗಳಲ್ಲಿ 100 ಕಿ.ಮಿ ಗರಿಷ್ಠ ವೇಗ ಸಾಧಿಸುವ ಹೊಸ ಇ-ಟ್ರಾನ್ ಕಾರು ಟೆಸ್ಲಾ ಎಕ್ಸ್, ಜಾಗ್ವಾರ್ ಐಪೆಸ್ ಮತ್ತು ಮರ್ಸಿಡಿಸ್ ಬೆಂಝ್ ಇಕ್ಯೂಸಿ ಕಾರುಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಇ-ಟ್ರಾನ್ ಕಾರು ಯುರೋಪ್ ಮಾರುಕಟ್ಟೆಯಲ್ಲಿನ ಮಾದರಿಗಿಂತಲೂ ತುಸು ಬದಲಾವಣೆ ಪಡೆದುಕೊಳ್ಳಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 80 ಲಕ್ಷದಿಂದ ರೂ. 90 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








