ಭಾರತದಲ್ಲಿ ಎಐ ತಂತ್ರಜ್ಞಾನ ಪ್ರೇರಿತ ಆಸ್ಟರ್ ಎಸ್‌ಯುವಿ ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್
ಎಂಜಿ ಮೋಟಾರ್ ಕಂಪನಿಯು ಭಾರತದಲ್ಲಿ ಹೆಕ್ಟರ್, ಹೆಕ್ಟರ್ ಪ್ಲಸ್, ಜೆಡ್ಎಸ್ ಇವಿ ಮತ್ತು ಗ್ಲೊಸ್ಟರ್ ಎಸ್‌ಯುವಿ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಮತ್ತೊಂದು ಹೊಸ ಕಾರು ಮಾದರಿಯನ್ನು ಪರಿಚಯಿಸುತ್ತಿದೆ.

ಕಾರುಗಳ ತಂತ್ರಜ್ಞಾನ ಅಭಿವೃದ್ದಿಯಲ್ಲಿ ಮಹತ್ವದ ಬದಲಾವಣೆ ಪರಿಚಯಿಸುತ್ತಿರುವ ಎಂಜಿ ಮೋಟಾರ್ ಕಂಪನಿಯು ಶೀಘ್ರದಲ್ಲೇ ತನ್ನ ಹೊಸ ಆಸ್ಟರ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡುತ್ತಿದ್ದು, ಹೊಸ ಆಸ್ಟರ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಹೊಂದಿರುವ ಮೊದಲ ಕಾರು ಮಾದರಿಯಾಗಿ ಗ್ರಾಹಕರಿಗೆ ವಿಭಿನ್ನವಾದ ಚಾಲನಾ ಅನುಭವ ನೀಡಲಿದೆ.

ಸ್ಟ್ಯಾಂಡರ್ಡ್ ಹೆಕ್ಟರ್ ಮಾದರಿಗಿಂತಲೂ ಕೆಳ ದರ್ಜೆಯ ಕಾರು ಮಾದರಿಯಾಗಿ ಮಾರಾಟಗೊಳ್ಳಲಿರುವ ಹೊಸ ಕಾರು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದ್ದು, ವ್ಯಯಕ್ತಿಕರಣಗೊಳಿಸಿದ ಮೊದಲ ಕೃತಕ ಬುದ್ಧಿಮತ್ತೆ ಸೌಲಭ್ಯ ಹೊಂದಿರುವ ಭಾರತದ ಮೊದಲ ಕಾರು ಮಾದರಿಯಾಗಲಿದೆ.

ರಿಲಯನ್ಸ್ ಜಿಯೋದಿಂದ ಎರವಲು ಪಡೆಯಲಾದ ರಿಯಲ್-ಟೈಮ್ ಇನ್ಫೋಟೈನ್‌ಮೆಂಟ್ ಮತ್ತು ಟೆಲಿಮ್ಯಾಟಿಕ್ಸ್‌ಗಾಗಿ ಇ-ಸಿಮ್ ಮತ್ತು ಐಒಟಿ ಟೆಕ್ ಅನ್ನು ಒಳಗೊಂಡಿರುವ ಹೊಸ ಕಾರು ಗರಿಷ್ಠ ಸುರಕ್ಷತೆ ಖಚಿತಪಡಿಸಲಿದ್ದು, 4ಜಿ ಇಂಟರ್‌ನೆಟ್ ಸೌಲಭ್ಯದೊಂದಿಗೆ ಹಲವಾರು ಆಟೋಮೋಟಿವ್ ಸಂಬಂಧಿತ ಗ್ರಾಹಕರ ಸೇವೆಗಳನ್ನು ಸುಲಭವಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಮೂಲಕ ಪಡೆದುಕೊಳ್ಳಬಹುದು.

ಹಾಗೆಯೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಸೌಲಭ್ಯದೊಂದಿಗೆ ಮನರಂಜನೆ, ಕಾರಿನ ನ್ಯೂನತೆಗಳ ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಲಿದ್ದು, ವಾಯ್ಸ್ ಅಸಿಸ್ಟ್ ಮೂಲಕ ಚಾಲನೆಯನ್ನ ಸರಳಗೊಳಿಸುತ್ತದೆ.

ಜೊತೆಗೆ ಹೊಸ ಕಾರಿನಲ್ಲಿ ಕಂಪನಿಯು ಬಾಷ್ ಕಂಪನಿಯ ಜೊತೆಗೂಡಿ ಅಭಿವೃದ್ದಿಗೊಳಿಸಲಾದ ಎರಡನೇ ಹಂತದ ಆಟೊನಮಸ್ ಟೆಕ್ನಾಲಜಿ ಪ್ರೇರಿತ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್) ಸೌಲಭ್ಯವು ಸಹ ಈ ಕಾರಿನಲ್ಲಿದ್ದು, ಹೊಸ ಎಡಿಎಎಸ್ ಸೌಲಭ್ಯ ಅಳವಡಿಕೆಯಿಂದಾಗಿ ಸುರಕ್ಷಿತ ಕಾರು ಚಾಲನೆಗೆ ಅನುಕೂಲಕರವಾಗಿದೆ.

ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ(ಎಡಿಎಎಸ್)ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವಡ್ ಕೂಲಿಷನ್ ಕಂಟ್ರೋಲ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಲೈನ್ ಡಿಫಾರ್ಚರ್ ಪ್ರಿವೆಷನ್, ಸ್ಪೀಡ್ ವಾರ್ನಿಂಗ್, ಇಂಟೆಲಿಜೆಂಟ್ ಮೋಡ್ ಹೊಂದಿರುವ ಸ್ಪಿಡ್ ಅಸಿಸ್ಟ್ ಸಿಸ್ಟಂ, ಮ್ಯಾನುವಲ್ ಮೋಡ್ ಹೊಂದಿರುವ ಸ್ಪೀಡ್ ಅಸಿಸ್ಟ್ ಸಿಸ್ಟಂ, ರಿಯರ್ ಡ್ರೈವ್ ಅಸಿಸ್ಟ್, ಲೈನ್ ಚೆಂಜ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಮತ್ತು ಇಂಟೆಲಿಜೆಂಟ್ ಹೆಡ್‌ಲ್ಯಾಂಪ್ ಲೈಟಿಂಗ್ಸ್ ಕಂಟ್ರೋಲ್‌ಗಳಲಿವೆ.

ಜೊತೆಗೆ ಕಾರು ಚಾಲನೆ ವೇಳೆ ರಸ್ತೆಗುಂಡಿಗಳನ್ನು ಸುಲಭವಾಗಿ ಪತ್ತೆಹಚ್ಚಲು ಎಡಿಎಎಸ್ ತಂತ್ರಜ್ಞಾನದಲ್ಲಿ ರಡಾರ್ ಸೌಲಭ್ಯವಿದ್ದು, ಇದು ಅಗತ್ಯ ಸಂದರ್ಭಗಳಲ್ಲಿ ಅಟೊನೊಮಸ್ ಬ್ರೇಕಿಂಗ್ ಸಿಸ್ಟಂನೊಂದಿಗೆ ಕಾರ್ಯ ನಿರ್ವಹಣೆ ಮಾಡುವ ಮೂಲಕ ರಸ್ತೆಗುಂಡಿಯಿಂದಾಗುವ ಅಪಾಯವನ್ನು ತಡೆಯಬಲ್ಲದು.

ಅಪಾಯದ ಮುನ್ಸೂಚನೆಯನ್ನು ಚಾಲಕನಿಗೆ ಧ್ವನಿ ಸಂದೇಶ ಮೂಲಕ ಎಚ್ಚರಿಕೆ ನೀಡುವ ಎಡಿಎಎಸ್ ಸೌಲಭ್ಯವು ರಿವರ್ಸ್ ಸಂದರ್ಭದಲ್ಲಿ 3ಡಿ ಪನೊರಮಿಕ್ ವ್ಯೂ ಸೌಲಭ್ಯ ಒದಗಿಸಲಿದ್ದು, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

ಈ ಮೂಲಕ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಂತಲೂ ವಿಭಿನ್ನವಾಗಿ ಗುರುತಿಸಿಕೊಳ್ಳಲಿರುವ ಎಂಜಿ ಆಸ್ಟರ್ ಕಾರು ಮಾರುಕಟ್ಟೆಯಲ್ಲಿ ಮಾರುತಿ ಎಸ್-ಕ್ರಾಸ್, ರೆನಾಲ್ಟ್ ಡಸ್ಟರ್, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಕಾರುಗಳಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಅತ್ಯುತ್ತಮ ಲೆದರ್ ವ್ಯಾರ್ಪ್ ಆಸನಗಳು, ಹಿಂಬದಿಯ ಪ್ರಯಾಣಿಕರಿಗೆ ಎಸಿ ವೆಂಟ್ಸ್, 10-ಇಂಚಿನ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಪ್ಲ್ಯಾಟ್-ಬಾಟಮ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಹಿಂಬದಿಯ ಪ್ರಯಾಣಿಕರಿಗೆ ಅರಾಮದಾಯಕವಾದ ಆಸನ ಸೌಲಭ್ಯಗಳಿವೆ.

ಹೊಸ ಕಾರು ಜೆಡ್ಎಸ್ ಎಲೆಕ್ಟ್ರಿಕ್ ಕಾರಿನ ಮಾದರಿಯಲ್ಲೇ ತುಸು ವಿಭಿನ್ನ ವಿನ್ಯಾಸವನ್ನು ಹೊಂದಿರುವ ಹೊಸ ಕಾರು ಎರಡು ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರಲಿದೆ ಎನ್ನಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಯೆಂತೆ ಸಾಮಾನ್ಯ ಪೆಟ್ರೋಲ್ ಮಾದರಿಯನ್ನು ಮತ್ತು ಪರ್ಫಾಮೆನ್ಸ್ ಬಯಸುವ ಗ್ರಾಹಕರು ಟರ್ಬೊ ಪೆಟ್ರೋಲ್ ಮಾದರಿಯನ್ನು ಖರೀದಿಸಬಹುದು.

ಹೊಸ ಆಸ್ಟರ್ ಕಾರಿನಲ್ಲಿ 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಮತ್ತು ಹೈ ಎಂಡ್ ಮಾದರಿಗಾಗಿ 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿದ್ದು, ಹೊಸ ಎಂಜಿನ್‌ನಲ್ಲಿ 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮ್ಯಾಟಿಕ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಬಹುದೆಂದು ಅಂದಾಜಿಸಲಾಗಿದೆ.

ಈ ಮೂಲಕ ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರುವ ಎಂಜಿ ಹೊಸ ಕಂಪ್ಯಾಕ್ಟ್ ಎಸ್‌ಯುವಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಕಾರು ಆರಂಭಿಕವಾಗಿ ರೂ. 9.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗಿದ್ದು, ಪ್ರತಿ ಸ್ಪರ್ಧಿ ಕಾರು ಮಾದರಿಗಳಿಂತಲೂ ತಂತ್ರಜ್ಞಾನದಲ್ಲಿ ಮುಂಚೂಣಿ ಸಾಧಿಸುವ ಮೂಲಕ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎನ್ನಬಹುದು.


Click it and Unblock the Notifications








