ಬಹುನೀರಿಕ್ಷಿತ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ
ಆಡಿ ಇಂಡಿಯಾ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಇ-ಟ್ರಾನ್ ಎಸ್‌ಯುವಿಯನ್ನು ದೇಶಿಯ ಮಾರುಕಟ್ಟೆಗೂ ಪರಿಚಯಿಸಿದ್ದು, ಹೊಸ ಕಾರು ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಿದೆ.

ಐಷಾರಾಮಿ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ಹಲವಾರು ಹೊಸ ಮಾದರಿಯ ಸುಧಾರಿತ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿರುವ ಹೊಸ ಇ-ಟ್ರಾನ್ ಕಾರು ಗ್ರಾಹಕರ ಬೇಡಿಕೆಯೆಂತೆ ಇ-ಟ್ರಾನ್ 50, ಇ-ಟ್ರಾನ್ 55 ಮತ್ತು ಇ-ಟ್ರಾನ್ 55 ಸ್ಪೋರ್ಟ್‌ಬ್ಯಾಕ್ ಎನ್ನುವ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಇ-ಟ್ರಾನ್ 50 ಮಾದರಿಗೆ ರೂ.99.99 ಲಕ್ಷ, ಇ-ಟ್ರಾನ್ 55 ಮಾದರಿಗೆ ರೂ. 1.16 ಕೋಟಿ ಮತ್ತು ಇ-ಟ್ರಾನ 55 ಸ್ಪೋರ್ಟ್‌ಬ್ಯಾಕ್ ಮಾದರಿಗೆ ರೂ. 1.17 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

ಇ-ಟ್ರಾನ್ ಕಾರಿನ ಆರಂಭಿಕ ಮಾದರಿಯಲ್ಲಿ ಆಡಿ ಕಂಪನಿಯು 71 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು 308 ಬಿಹೆಚ್‌ಪಿ ಹಾಗೂ 540 ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 380 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೊಸ ಕಾರಿನ ಮಧ್ಯಮ ಆವೃತ್ತಿ ಮತ್ತು ಹೈ ಎಂಡ್ ಮಾದರಿಯಾದ 55 ಮತ್ತು 55 ಸ್ಪೋರ್ಟ್‌ಬ್ಯಾಕ್‌ನಲ್ಲಿ ಆಡಿ ಕಂಪನಿಯು 95 ಕಿ.ವ್ಯಾ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು 402 ಬಿಹೆಚ್‌ಪಿ ಹಾಗೂ 664 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 480 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲದು.

ಹೊಸ ಕಾರಿನ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು 11kW ಎಸಿ ಹೋಂ ಚಾರ್ಜರ್ ಮೂಲಕ ಕನಿಷ್ಠ ಎಂಟೂವರೆ ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, 150kW ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜಿಂಗ್ ಮಾಡಬಹುದಾಗಿದೆ.

ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕಾಗಿ ಆಡಿ ಕಂಪನಿಯು ಸದ್ಯ ತನ್ನ ಡೀಲರ್ಸ್ ಯಾರ್ಡ್‌ಗಳಲ್ಲಿಯೇ 50kW ಸಾಮರ್ಥ್ಯದ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದ್ದು, ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಚಾರ್ಜಿಂಗ್ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಇನ್ನು ಹೊಸ ಕಾರಿನ ಡಿಸೈನ್, ಫೀಚರ್ಸ್‌ಗಳು ಮತ್ತು ಟೆಕ್ನಾಲಜಿ ಬಗೆಗೆ ಹೇಳುವುದಾದರೇ ಹೊಸ ಕಾರು ಆಕರ್ಷಕ ಹೊರ ಮತ್ತು ಒಳನೋಟದೊಂದಿಗೆ ಗ್ರಾಹಕರನ್ನು ಆಕರ್ಷಿಸಲಿದ್ದು, ಹೊಸ ಕಾರಿನ ಡಿಜಿಟಲ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಆನಿಮೆಟೆಡ್ ಪ್ರೊಜೆಕ್ಷನ್, ಎಲ್ಇಡಿ ಟೈಲ್‌ಲ್ಯಾಂಪ್, 20-ಇಂಚಿನ ಅಲಾಯ್ ವ್ಹೀಲ್‌ಗಳು ಮತ್ತು ಕಾರಿನ ಎರಡು ಬದಿಗಳಲ್ಲೂ ಚಾರ್ಜಿಂಗ್ ಪೋರ್ಟ್ ನೀಡಲಾಗಿದೆ.

ಹೊಸ ಕಾರಿನ ಒಳಭಾಗವು ಕೂಡಾ ಸಾಕಷ್ಟು ಆಕರ್ಷಣೆಯಾಗಿರುವುದಲ್ಲದೆ ಹಲವಾರು ಹೊಸ ತಂತ್ರಜ್ಞಾನ ಸೌಲಭ್ಯ ಹೊಂದಿದ್ದು, ಟ್ವಿನ್ ಸ್ಪೋಕ್ ಸ್ಟೀರಿಂಗ್ ವ್ಹೀಲ್ ಜೊತೆ ಮೌಂಟೆಡ್ ಕಂಟ್ರೋಲ್, ಆಂಡ್ರಾಯಿಡ್ ಆಟೋ ಮತ್ತು ಕಾರ್‌ಪ್ಲೇ, ಮೈ ಆಡಿ ಕನೆಕ್ಟ್, ವಾಯ್ಸ್ ಅಸಿಸ್ಟಂಟ್, ಫೋರ್ ಜೋನ್ ಕ್ಲೈಮೆಟ್ ಕಂಟ್ರೋಲ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಹೆಡ್ಸ್ಅಪ್ ಡಿಸ್‌ಪ್ಲೇ, ಪನೊರಮಿಕ್ ಸನ್‌ರೂಫ್ ಸೌಲಭ್ಯಗಳಿವೆ.

ಹೊಸ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರಮುಖ ಸೇಫ್ಟಿ ಫೀಚರ್ಸ್‌ಗಳಾದ ಎಬಿಎಸ್ ಜೊತೆ ಬ್ರೇಕ್ ಅಸಿಸ್ಟ್, ಲೆನ್ ಡಿಪಾರ್ಚರ್ ವಾರ್ನಿಂಗ್, ಪಾರ್ಕ್ ಅಸಿಸ್ಟ್ ಫಂಕ್ಷನ್, 8 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಬ್ಲೈಂಡ್ ಸ್ಪಾಟ್ ಮಾನಿಟರ್ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್‌ಗಳಿವೆ.

ಇ-ಟ್ರಾನ್ ವಾರಂಟಿ ಮತ್ತು ಸರ್ವಿಸ್
ಇ-ಟ್ರಾನ್ ಕಾರಿನ ಮೇಲೆ ಆಡಿ ಕಂಪನಿಯು ಎರಡು ವರ್ಷಗಳ ಕಾಲ ಸ್ಟ್ಯಾಂಡರ್ಡ್ ವಾರಂಟಿಯನ್ನು ಘೋಷಿಸಿದ್ದು, ಬ್ಯಾಟರಿ ಪ್ಯಾಕ್ ಮೇಲೆ 8 ವರ್ಷ ಅಥವಾ 1.60 ಲಕ್ಷ ಕಿ.ಮೀ ಆಧಾರದ ಮೇಲೆ ವಾರಂಟಿ ನೀಡುತ್ತಿದೆ.

ಬ್ಯಾಟರಿ ಪ್ಯಾಕ್ ಮೇಲೆ ಗ್ರಾಹಕರ ಹೆಚ್ಚುವರಿ ಮೊತ್ತ ಪಾವತಿಸಿದ್ದಲ್ಲಿ ವಾರಂಟಿ ಅವಧಿಯನ್ನು ಮತ್ತೆ ಮೂರು ವರ್ಷಗಳ ಕಾಲ ವಿಸ್ತರಣೆ ಮಾಡುವ ಅವಕಾಶಗಳಿದ್ದು, ಸ್ಟ್ಯಾಂಡರ್ಡ್ ಆಗಿ ಹೊಸ ಕಾರಿಗಾಗಿ 5 ವರ್ಷಗಳ ರೋಡ್ ಸೈಡ್ ಅಸಿಸ್ಟ್ ಸೌಲಭ್ಯ ನೀಡಲಾಗಿದೆ.


Click it and Unblock the Notifications








