ಭಾರತದಲ್ಲಿ ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಐಷಾರಾಮಿ ಎಸ್‌ಯುವಿ ಬಿಡುಗಡೆ ಮಾಹಿತಿ ಬಹಿರಂಗ
ಐಷಾರಾಮಿ ಕಾರು ತಯಾರಕ ಕಂಪನಿಯಾಗಿರುವ ಆಡಿ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಕಾರು ಮಾದರಿಯಾದ ಇ-ಟ್ರಾನ್ ಎಸ್‌ಯುವಿ ಮಾದರಿಯು ಯುರೋಪ್ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ಹೊಸ ಎಲೆಕ್ಟ್ರಿಕ್ ಮಾದರಿಯನ್ನು ಆಡಿ ಕಂಪನಿಯು ಭಾರತದಲ್ಲೂ ಶೀಘ್ರದಲ್ಲೇ ಬಿಡುಗಡೆ ಮಾಡುವ ಸುಳಿವು ನೀಡಿದೆ.

ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಕಳೆದ ಕೆಲ ತಿಂಗಳಿನಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಧ್ಯಮ ಗಾತ್ರದ ಕಾರುಗಳಲ್ಲಿ ಮಾತ್ರವಲ್ಲದೆ ಐಷಾರಾಮಿ ಕಾರು ಮಾದರಿಗಳು ಸಹ ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ ಮಾರಾಟವಾಗುತ್ತಿವೆ. ಆಡಿ ಕಂಪನಿಯು ಕೂಡಾ ಈ ನಿಟ್ಟಿನಲ್ಲಿ ಈಗಾಗಲೇ ಇ-ಟ್ರಾನ್ ಎಸ್‌ಯುವಿ ಮಾರಾಟ ಹೊಸ ದಾಖಲೆಗೆ ಕಾರಣವಾಗಿದ್ದು, ಶೀಘ್ರದಲ್ಲೇ ಭಾರತದಲ್ಲೂ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಇ-ಟ್ರಾನ್ ಎಲೆಕ್ಟ್ರಿಕ್ ಕಾರಿನ ಬಿಡುಗಡೆಯ ಬಗೆಗೆ ಈಗಾಗಲೇ ಕೆಲವು ಮಾಹಿತಿಗಳನ್ನು ಹಂಚಿಕೊಂಡಿರುವ ಆಡಿ ಇಂಡಿಯಾ ಕಂಪನಿಯು ಇದೀಗ ಹೊಸ ಇವಿ ಕಾರಿನ ಟೀಸರ್ ಚಿತ್ರವನ್ನು ಹಂಚಿಕೊಂಡಿದ್ದು, ಹೊಸ ಕಾರನ್ನು ಈ ವರ್ಷದ ಮಧ್ಯಂತರದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದೆ.
2019ರ ಆರಂಭದಲ್ಲೇ ಯುರೋಪಿನ ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆಯಿಟ್ಟಿರುವ ಆಡಿ ಇ-ಟ್ರಾನ್ ಕಾರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಭರ್ಜರಿಯಾಗಿ ಮಾರಾಟಗೊಂಡಿದ್ದು, ಕಳೆದ ವರ್ಷಕ್ಕಿಂತಲೂ ಹೆಚ್ಚು 2020ರ ಅವಧಿಯಲ್ಲಿ ಅತಿಹೆಚ್ಚು ಬೇಡಿಕೆ ಪಡೆದುಕೊಂಡಿದೆ.

ಯುರೋಪ್ ಮಾರುಕಟ್ಟೆಯಲ್ಲಿ ಹೊಸ ಕಾರು 2020ರಲ್ಲಿ ಒಟ್ಟು 17,641 ಯುನಿಟ್ ಮಾರಾಟಗೊಳ್ಳುವ ಮೂಲಕ ಬೆಸ್ಟ್ ಸೆಲ್ಲಿಂಗ್ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಭಾರತದಲ್ಲೂ ಉತ್ತಮ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ. ಇ-ಟ್ರಾನ್ ಎಲೆಕ್ಟ್ರಿಕ್ ಕಾರು ದುಬಾರಿ ಬೆಲೆ ನಡುವೆಯೂ ಭರ್ಜರಿ ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಳ್ಳುತ್ತಿದ್ದು, ಅಮೆರಿಕದಲ್ಲೂ ಟೆಸ್ಲಾ ಕಾರುಗಳಿಗೂ ಉತ್ತಮ ಪೈಪೋಟಿ ನೀಡುವ ಮೂಲಕ ಕಳೆದ ವರ್ಷಕ್ಕಿಂತ ಶೇ.50ರಷ್ಟು ಬೆಳವಣಿಗೆ ಸಾಧಿಸಿದೆ.

ಇದೀಗ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿರುವ ಇ-ಟ್ರಾನ್ ಕಾರು ಈಗಾಗಲೇ ಪ್ರದರ್ಶನಗೊಳ್ಳುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯ ಸುಳಿವು ನೀಡಿದ್ದು, ಕರೋನಾ ವೈರಸ್ ಪರಿಣಾಮ ಹೊಸ ಕಾರಿನ ಬಿಡುಗಡೆಯ ಯೋಜನೆಯಲ್ಲಿ ವಿಳಂಬವಾಗಿದೆ.

ವಿನೂತನ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಇ-ಟ್ರಾನ್ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 95kWh ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಇ-ಟ್ರಾನ್ ಕಾರು ಪ್ರತಿ ಗಂಟೆಗೆ 200ಕಿ.ಮಿ ಟಾಪ್ ಸ್ಪೀಡ್ ಪಡೆದುಕೊಂಡಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಡಿಸಿ ಫಾಸ್ಟ್ ಚಾರ್ಜರ್ ಮೂಲಕ ಅಥವಾ 400 ವೊಲ್ಟ್ಸ್ ಹೋಮ್ ಚಾರ್ಜರ್‌ನೊಂದಿಗೆ 95kWh ಬ್ಯಾಟರಿಯನ್ನು ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 452 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 5.7 ಸೇಕೆಂಡುಗಳಲ್ಲಿ 100 ಕಿ.ಮಿ ಗರಿಷ್ಠ ವೇಗ ಸಾಧಿಸುವ ಹೊಸ ಇ-ಟ್ರಾನ್ ಕಾರು ಟೆಸ್ಲಾ ಎಕ್ಸ್, ಜಾಗ್ವಾರ್ ಐಪೆಸ್ ಮತ್ತು ಮರ್ಸಿಡಿಸ್ ಬೆಂಝ್ ಇಕ್ಯೂಸಿ ಕಾರುಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಲಿದೆ.
MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ಭಾರತದಲ್ಲಿ ಬಿಡುಗಡೆಯಾಗಲಿರುವ ಇ-ಟ್ರಾನ್ ಕಾರು ಯುರೋಪ್ ಮಾರುಕಟ್ಟೆಯಲ್ಲಿ ಮಾದರಿಗಿಂತಲೂ ತುಸು ಬದಲಾವಣೆ ಪಡೆದುಕೊಳ್ಳಲಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 80 ಲಕ್ಷದಿಂದ ರೂ. 90 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.


Click it and Unblock the Notifications








