ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಎಲೆಕ್ಟ್ರಿಕ್ ವಾಹನ ನೋಂದಣಿಯಲ್ಲಿ ಭಾರೀ ಏರಿಕೆ
ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, 2020-21ರ ಹಣಕಾಸು ವರ್ಷದಲ್ಲಿ ಒಟ್ಟು 1.35 ಲಕ್ಷ ಯುನಿಟ್ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿರುವ ಬಗ್ಗೆ ಸೆಂಟರ್ ಫಾರ್ ಎನರ್ಜಿ ಫೈನಾನ್ಸ್ (ಸಿಇಎಫ್) ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ.

ಕಳೆದ 10 ವರ್ಷಗಳ ಅವಧಿಯಲ್ಲೇ ಮೊದಲ ಬಾರಿಗೆ 2020-21 ಹಣಕಾಸು ವರ್ಷದಲ್ಲಿ ಹೆಚ್ಚಿನ ಮಟ್ಟದ ಎಲೆಕ್ಟ್ರಿಕ್ ವಾಹನಗಳು ಮಾರಾಟಗೊಂಡಿದ್ದು, ಕಳೆದ ಹತ್ತುಅವಧಿಯಲ್ಲಿ ಸುಮಾರು 6.38 ಲಕ್ಷ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗಿವೆ.

ಸಿಇಇ-ಸಿಇಎಫ್ ಎಲೆಕ್ಟ್ರಿಕ್ ಮೊಬಿಲಿಟಿ ವರದಿಯ ಪ್ರಕಾರ, 2020-21ರಲ್ಲಿನ ಒಟ್ಟು ವಾಹನಗಳ ನೋಂದಣಿಯಲ್ಲಿ ಎಲೆಕ್ಟ್ರಿಕ್ ವಾಹನಗಳು ಶೇಕಡಾ 0.88 ರಷ್ಟನ್ನು ನೋಂದಣಿ ಹೊಂದಿದ್ದು, ಇದು ಈ ವರ್ಷದ ವಾಹನ ಮಾರಾಟದಲ್ಲಿ ಮತ್ತಷ್ಟು ಹೆಚ್ಚಳವಾಗುವ ನೀರಿಕ್ಷೆಯಲ್ಲಿದೆ.

ಎಲೆಕ್ಟ್ರಿಕ್ ವಾಹನಗಳ ನೋಂದಣಿ ಹೆಚ್ಚಿಸುವಲ್ಲಿ ಇತರೆ ರಾಜ್ಯಗಳಿಂತಲೂ ಮುಂದಿರುವ ದೆಹಲಿ ಸರ್ಕಾರವು ಹೊಸ ಇವಿ ವಾಹನ ನೀತಿ ಮೂಲಕ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆ ತೆರಿಗೆಯಿಂದ ವಿನಾಯ್ತಿ ಮೂಲಕ 2025ರ ವೇಳೆಗೆ ಶೇ.25ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಹೊಂದುವ ಗುರಿ ಹೊಂದಲಾಗಿದೆ.

ಹಾಗೆಯೇ ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಲ್ಲೂ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಜೊತೆಗೆ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಖಾಸಗಿ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣಕ್ಕೂ ಫೇಮ್ 2 ಯೋಜನೆ ಅಡಿ ಸಬ್ಸಡಿ ಪ್ರಕಟಿಸಿದ್ದು, ಹೊಸ ಯೋಜನೆಗಾಗಿ ಕೇಂದ್ರ ಸರ್ಕಾರವು ಒಟ್ಟು ರೂ.10 ಸಾವಿರ ಕೋಟಿ ಮೀಸಲಿಟ್ಟಿದೆ.
MOST READ: ಭಾರತದಲ್ಲಿ ಅತಿ ಹೆಚ್ಚು ರಿಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಫೇಮ್ ಯೋಜನೆಯ ಮೊದಲ ಹಂತದಲ್ಲಿ ಸುಮಾರು ರೂ. 3 ಸಾವಿರ ಕೋಟಿ ನೀಡಿದ್ದ ಕೇಂದ್ರ ಸರ್ಕಾರವು ಎರಡನೇ ಹಂತದ ಯೋಜನೆಗಾಗಿ ರೂ. 10 ಸಾವಿರ ಕೋಟಿ ಮೀಸಲಿಟ್ಟಿದ್ದು, ಎರಡನೇ ಹಂತದಲ್ಲಿ 62 ಸಾವಿರ ಪ್ಯಾಸೆಂಜರ್ ಕಾರುಗಳು ಮತ್ತು ಬಸ್‌ಗಳಿಗೆ, 15 ಲಕ್ಷ ದ್ವಿಚಕ್ರ ವಾಹನಗಳ ಮತ್ತು ತ್ರಿ ಚಕ್ರ ವಾಹನಗಳು ಸಬ್ಸಡಿ ಪಡೆದುಕೊಳ್ಳಲಿವೆ.

ವ್ಯಯಕ್ತಿಕ ಬಳಕೆಯ ವಾಹನಗಳ ಜೊತೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲೂ ಎಲೆಕ್ಟ್ರಿಕ್ ವಾಹನಗಳ ಅಳವಡಿಸಿಕೊಳ್ಳಲು ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಮಾಲಿನ್ಯ ತಡೆ ಜೊತೆಗೆ ಹೆಚ್ಚುತ್ತಿರುವ ಇಂಧನ ಬಳಕೆ ಪ್ರಮಾಣವನ್ನು ತಗ್ಗಿಸಲು ಇದರ ಪ್ರಮುಖ ಉದ್ದೇಶವಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಫೇಮ್ 2 ಯೋಜನೆ ಅಡಿ ಒಟ್ಟು 7 ಸಾವಿರ ಇ-ಬಸ್‌ಗಳು, 5 ಲಕ್ಷ ತ್ರಿಚಕ್ರ ಇವಿ ವಾಹನಗಳು, 55 ಸಾವಿರ ಎಲೆಕ್ಟ್ರಿಕ್ ಕಾರುಗಳು ಮತ್ತು 10 ಲಕ್ಷ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಬ್ಸಿಡಿ ಸಿಗಲಿದ್ದು, ಸಬ್ಸಡಿ ಯೋಜನೆಯು ವಾಹನ ಮಾಲೀಕತ್ವ ಹೊರೆಯನ್ನು ತಗ್ಗಿಸಲು ಸಾಕಷ್ಟು ಸಹಕಾರಿಯಾಗಿದೆ.


Click it and Unblock the Notifications