ಹೈಲೋಡ್ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಬಿಡುಗಡೆ ಮಾಡಿದ ಯೂಲರ್ ಮೋಟಾರ್ಸ್
ಎಲೆಕ್ಟ್ರಿಕ್ ವಾಹನಗಳ ಬಿಡುಗಡೆ ಪ್ರಕ್ರಿಯೆ ಜೋರಾಗಿದ್ದು, ಹಲವಾರು ಹೊಸ ಸ್ಟಾರ್ಟ್ಅಪ್ ಕಂಪನಿಗಳು ಇವಿ ವಾಹನ ಉದ್ಯಮಕ್ಕೆ ಪ್ರವೇಶಿಸುತ್ತಿವೆ. ದೆಹಲಿ ಮೂಲದ ಯೂಲರ್ ಮೋಟಾರ್ಸ್ ಸಹ ಗ್ರಾಹಕರ ಬೇಡಿಕೆಯೆಂತೆ ವಾಣಿಜ್ಯ ಹೊಸ ಇವಿ ವಾಹನ ಪರಿಚಯಿಸಿದ್ದು, ಹೊಸ ವಾಹನವು ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಯೂಲರ್ ಮೋಟಾರ್ಸ್ ಕಂಪನಿಯ ಹೊಚ್ಚ ಹೊಸ ಹೈಲೋಡ್ ಎಲೆಕ್ಟ್ರಿಕ್ ತ್ರಿ ಚಕ್ರ ವಾಣಿಜ್ಯ ವಾಹನವು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.50 ಲಕ್ಷ ಬೆಲೆ ಹೊಂದಿದ್ದು, ಅತಿ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಸರಕು ಸಾಗಾಣಿಕೆಯನ್ನು ಲಾಭದಾಯಕಗೊಳಿಸುತ್ತದೆ. ಹಾಗೆಯೇ ಹೊಸ ವಾಹನದಲ್ಲಿರುವ ಪ್ರಮುಖ ಹೊಸ ವೈಶಿಷ್ಟ್ಯತೆಗಳು ಗ್ರಾಹಕರ ಆಕರ್ಷಿಸಲಿದ್ದು, ಭವಿಷ್ಯದಲ್ಲಿ ಹೊಸ ಹೈಲೋಡ್ ಮಾದರಿಯು ಭರ್ಜರಿ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ದುಬಾರಿ ಇಂಧನದ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.

ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯದ ಸರ್ಕಾರಗಳು ಸಹ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ವಿವಿಧ ವಾಹನ ತಯಾರಕ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದು, ದೆಹಲಿ ಮೂಲದ ಯೂಲರ್ ಮೋಟಾರ್ಸ್ ಸಹ ಹಲವು ಪ್ರಯತ್ನಗಳ ನಂತರ ಅಂತಿಮವಾಗಿ ಹೈಲೋಡ್ ಕಮರ್ಷಿಯಲ್ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ದಿಗೊಳಿಸುವಲ್ಲಿ ಯಶಸ್ವಿಯಾಗಿದೆ.

ಹೈಲೋಡ್ ಎಲೆಕ್ಟ್ರಿಕ್ ವಾಹನವನ್ನು ಸದ್ಯ ಬಿಡುಗಡೆ ಮಾಡಿರುವ ಯೂಲರ್ ಮೋಟಾರ್ಸ್ ಕಂಪನಿಯು ಇಂದಿನಿಂದಲೇ ಬುಕ್ಕಿಂಗ್ ಆರಂಭಿಸಿದ್ದು, ಹೊಸ ವಾಹನವನ್ನು 2022ರ ಜನವರಿ 15ರಿಂದ ವಿತರಣೆ ಮಾಡುವುದಾಗಿ ಹೇಳಿಕೊಂಡಿದೆ.

ಹೊಸ ಇವಿ ತ್ರಿ ಚಕ್ರ ವಾಹನವು ಬೆಸ್ಟ್ ಇನ್ ಕ್ಲಾಸ್ ಪ್ಲೇ ಲೋಡ್ ಸಾಮರ್ಥ್ಯದೊಂದಿಗೆ(680 ಕೆ.ಜಿ) ಉತ್ತಮ ಮೈಲೇಜ್ ಹಿಂದಿರುಗಿಸಲಿದ್ದು, ಸಿಂಗಲ್ ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ 72V, 12.4kW ಲಿಕ್ವಿಡ್ ಕೂಲಿಂಗ್ ಬ್ಯಾಟರಿ ಪ್ಯಾಕ್ ಹೊಂದಿರಲಿದೆ.

ಹೈಲೋಡ್ ಮಾದರಿಯಲ್ಲಿ ಯೂಲರ್ ಮೋಟಾರ್ಸ್ ಕಂಪನಿಯು ತನ್ನ ವಿನೂತನ 'ಆರ್ಕ್ ರಿಯಾಕ್ಟರ್ 100' ತಂತ್ರಜ್ಞಾನ ಬಳಕೆ ಮಾಡಿದ್ದು, ಇದು ಸರಕು ಸಾಗಾಣಿಕೆಯ ವೇಳೆ ಒತ್ತಡದಲ್ಲೂ ಇವಿ ವಾಹನವು ಉತ್ತಮ ಕಾರ್ಯಕ್ಷಮತೆ ಕಾಯ್ದುಕೊಳ್ಳಲು ನೆರವಾಗಲಿದೆ.

ಹೊಸ ಹೈಲೋಡ್ ಇವಿ ವಾಹನವನ್ನು ಬಳಕೆದಾರರು ಸಾಮಾನ್ಯ ಬಳಕೆಯ ತ್ರಿ ಪಿನ್ ಸಾಕೆಟ್ ಮೂಲಕವು ಚಾರ್ಜ್ ಮಾಡಬಹುದು ಇಲ್ಲವೇ ಫಾಸ್ಟ್ ಡಿಸಿ ಚಾರ್ಜಿಂಗ್ ಸೌಲಭ್ಯವನ್ನು ಬಳಕೆ ಮಾಡಬಹುದಾಗಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯಕ್ಕೆ ಎರಡು ಮಾದರಿಯ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದೆ.

ಫಾಸ್ಟ್ ಚಾರ್ಜಿಂಗ್‌ನಲ್ಲೂ ಫ್ಲ್ಯಾಶ್ 6 ಮತ್ತು ಫ್ಲ್ಯಾಶ್ 27 ಎನ್ನುವ ಎರಡು ಮಾದರಿಯ ಚಾರ್ಜಿಂಗ್ ಸಾಕೆಟ್ ನೀಡಲಾಗಿದ್ದು, ಫ್ಲ್ಯಾಶ್ ಮೂಲಕ ಹೊಸ ವಾಹನವು ತುಸು ನಿಧಾನವಾಗಿ ಚಾರ್ಜ್ ಆಗಲಿದ್ದರೆ ಫ್ಲ್ಯಾಶ್ 27 ಮೂಲಕ ಅತಿ ಕಡಿಮೆ ಅವಧಿ ಹೆಚ್ಚಿನ ಮಟ್ಟದ ಚಾರ್ಜಿಂಗ್ ಮಾಡಬಹುದಾಗಿದೆ.

ಗೃಹ ಬಳಕೆಯ ಚಾರ್ಜಿಂಗ್ ಸೌಲಭ್ಯದೊಂದಿಗೆ ಶೇ.80 ರಷ್ಟು ಆಗಲು ಮೂರು ಗಂಟೆ ಸಮಯ ತೆಗೆದುಕೊಳ್ಳುವ ಹೊಸ ವಾಹನವು ಫ್ಲ್ಯಾಶ್ 6 ಮೂಲಕ ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ ಎರಡು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಾಗೆಯೇ ಫ್ಲ್ಯಾಶ್ 27 ಮೂಲಕ ಕ್ವಿಕ್ ಚಾರ್ಜಿಂಗ್ ಮಾಡಬಹುದಾಗಿದ್ದು, ಫ್ಲ್ಯಾಶ್ 27 ಮೂಲಕ ಕೇವಲ 15 ನಿಮಿಷ ಚಾರ್ಜ್ ಮಾಡಿದರೂ ಕನಿಷ್ಠ 50 ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಗೃಹ ಬಳಕೆಯ ಚಾರ್ಜಿಂಗ್ ಸೌಲಭ್ಯದ ಮೂಲಕ 30 ನಿಮಿಷ ಚಾರ್ಜ್ ಮಾಡಿದರೆ ಕನಿಷ್ಠ 20 ಕಿ.ಮೀ ಮೈಲೇಜ್ ಹಿಂಪಡೆಯಬಹುದಾಗಿದ್ದು, ಡಿಸಿ ಫಾಸ್ಟ್ ಚಾರ್ಜಿಂಗ್ ಸೌಲಭ್ಯವು ವಾಹನ ನಿರ್ವಹಣೆಗೆ ಸಾಕಷ್ಟು ಸಹಕಾರಿಯಾಗಿದೆ.

ಹೊಸ ಹೈಲೋಡ್ ಇವಿ ವಾಹನವು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್ ಮತ್ತು ಎಕ್ಸ್ಆರ್ ಎನ್ನುವ ವೆರಿಯೆಂಟ್‌ಗಳನ್ನು ಹೊಂದಿರಲಿದ್ದು, ಎಕ್ಸ್ ವೆರಿಯೆಂಟ್ 680 ಕೆಜಿ ಪ್ಲೇ ಲೋಡ್ ಸಾಮರ್ಥ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 129 ಕಿ.ಮೀ ಮೈಲೇಜ್ ನೀಡುತ್ತದೆ.

ಎಕ್ಸ್ಆರ್ ವೆರಿಯೆಂಟ್ ಕೂಡಾ ಎಕ್ಸ್ ಮಾದರಿಯಲ್ಲಿ ಪ್ರತಿ ಚಾರ್ಜ್‌ಗೆ 129 ಕಿ.ಮೀ ಮೈಲೇಜ್ ಹೊಂದಿದ್ದು, ಇದು 655 ಕೆಜಿ ಪ್ಲೇ ಲೋಡ್ ಸಾಮರ್ಥ್ಯ ಹೊಂದಿದೆ. ಎರಡು ಮಾದರಿಗಳು ಪ್ರತಿ ಗಂಟೆಗೆ 42 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, 9.1 ಬಿಎಚ್‌ಪಿ, 88.55 ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಹೈಲೋಡ್ ಇವಿ ವಾಹನವು ಒಟ್ಟು 2,100 ಎಂಎಂ ಉದ್ದಳತೆಯೊಂದಿಗೆ 190 ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಅತ್ಯುತ್ತಮ ಪ್ಲೇ ಲೋಡ್ ಕಂಟನೈರ್ ಅಳವಡಿಸಲಾಗಿದೆ. ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಹಾಫ್ ಲೋಡ್ ಬಾಡಿ, ಡೆಲಿವರಿ ವ್ಯಾನ್, ಹೈ ಡೆಕ್ ಕಂಟನೈರ್ ಮತ್ತು ಫ್ಲ್ಯಾಟ್ ಡೆಕ್ ಆಯ್ಕೆಗಳನ್ನು ನೀಡಲಾಗಿದೆ.

ಜೊತೆಗೆ ಹೊಸ ವಾಹನದಲ್ಲಿ ಹಲವಾರು ಹೊಸ ಫೀಚರ್ಸ್ ನೀಡಲಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫ್ರಂಟ್ ಡಿಸ್ಕ್ ಬ್ರೇಕ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ರಿಯಲ್ ಟೈಮ್ ಡೆಟಾ, ತಾಂತ್ರಿಕ ಅಂಶಗಳ ನಿಯಂತ್ರಣಕ್ಕಾಗಿ ಶೇಫರ್ಡ್ ಆ್ಯಪ್(ಜಿಯೋ ಫೆನ್ಸ್, ಜಿಪಿಎಸ್ ಟ್ರ್ಯಾಕಿಂಗ್) ಹೊಂದಿದೆ.

2018ರಿಂದ ಹೊಸ ಇವಿ ವಾಹನ ಬಿಡುಗಡೆಗಾಗಿ ವಿವಿಧ ಹಂತದ ರೋಡ್ ಟೆಸ್ಟಿಂಗ್ ನಡೆಸಿರುವ ಯೂಲರ್ ಮೋಟಾರ್ಸ್ ಕಂಪನಿಯು ಇದುವರೆಗೆ ಹಲವು ವಾಹನಗಳೊಂದಿಗೆ ಒಟ್ಟು 10 ಲಕ್ಷ ಕಿ.ಮೀ ಟೆಸ್ಟಿಂಗ್ ನಡೆಸಿ ಹೊಸ ಉತ್ಪನ್ನವನ್ನು ಸಿದ್ದಪಡಿಸಿದ್ದು, ಹೊಸ ವಾಹನಕ್ಕಾಗಿ ಈಗಾಗಲೇ ಫ್ಲಿಪ್‌ಕಾರ್ಟ್, ಬಿಗ್‌ಬಾಸ್ಕೆಟ್ ಮತ್ತು ಉಡಾನ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಕಂಪನಿಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ಸಲ್ಲಿಕೆಯಾಗುತ್ತಿದೆ.


Click it and Unblock the Notifications