ವಿಶೇಷ ಕೊಡುಗೆ: ಇನೋವಾ ಕ್ರಿಸ್ಟಾ ಕಾರಿಗಿಂತಲೂ ಅಗ್ಗದ ಬೆಲೆಗೆ ಕಿಯಾ ಕಾರ್ನಿವಾಲ್
ಕಿಯಾ ಇಂಡಿಯಾ ಕಂಪನಿಯು ತನ್ನ ಐಷಾರಾಮಿ ಎಂಪಿವಿ ಕಾರು ಖರೀದಿಯ ಮೇಲೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದ್ದು, ಹೊಸ ಕಾರು ಖರೀದಿ ಮೇಲೆ ಗ್ರಾಹಕರು ಗರಿಷ್ಠ ಪ್ರಮಾಣದ ಉಳಿತಾಯಕ್ಕೆ ಅವಕಾಶ ನೀಡಿದೆ.

ಕರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಆಟೋ ಉದ್ಯಮವು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಚೇತರಿಸಿಕೊಳ್ಳುತ್ತಿದ್ದು, ಹಲವಾರು ಆಟೋ ಕಂಪನಿಗಳ ಹೊಸ ವಾಹನಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿವೆ. ಕಳೆದ ವರ್ಷದ ಆರಂಭದಲ್ಲಿ ಕೋವಿಡ್ ಪರಿಣಾಮ ಕನಿಷ್ಠ ಪ್ರಮಾಣದ ಹೊಸ ವಾಹನಗಳನ್ನು ಮಾರಾಟ ಮಾಡಿದ್ದ ವಾಹನ ಕಂಪನಿಗಳಿಗೆ ಈ ವರ್ಷದ ಆರಂಭದಲ್ಲಿ ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿತ್ತು.

ಕೋವಿಡ್ 2ನೇ ಅಲೆ ಪರಿಣಾಮ ಮತ್ತೆ ಸಂಕಷ್ಟ ಎದುರಿಸುವಂತಾಗಿದ್ದು, ಕುಸಿದಿರುವ ಆರ್ಥಿಕ ಪರಿಸ್ಥಿತಿಯಿಂದಾಗಿ ತಗ್ಗಿರುವ ವಾಹನ ಮಾರಾಟವನ್ನು ಸುಧಾರಿಸಲು ಗ್ರಾಹಕರಿಗೆ ಹಲವಾರು ಕೊಡುಗೆಗಳನ್ನು ಪ್ರಕಟಿಸಲಾಗುತ್ತಿದೆ.

ಹೊಸ ವಾಹನ ಮಾರಾಟವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಮುಖ ಕಾರು ಕಂಪನಿಗಳು ವಿವಿಧ ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದು, ಕಿಯಾ ಮೋಟಾರ್ಸ್ ಕಂಪನಿಯು ಕೂಡಾ ಕಾರ್ನಿವಾಲ್ ಎಂಪಿವಿಯ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ.

ಕಾರ್ನಿವಾಲ್ ಎಂಪಿವಿ ಕಾರು ಖರೀದಿ ಮೇಲೆ ಕಂಪನಿಯು ಕನಿಷ್ಠ ರೂ.2.50 ಲಕ್ಷದಿಂದ ಗರಿಷ್ಠ ರೂ. 3.75 ಲಕ್ಷದ ತನಕ ಕ್ಯಾಶ್ ಆಫರ್ ನೀಡುತ್ತಿದ್ದು, ಹೊಸ ಆಫರ್‌ಗಳಲ್ಲಿ ಕಾರ್ನಿವಾಲ್ ಆರಂಭಿಕ ಮಾದರಿಯು ರೂ.25.11 ಲಕ್ಷದಿಂದ ರೂ.21.20 ಲಕ್ಷಕ್ಕೆ ದರ ಇಳಿಕೆಯಾಗಿದೆ.

ಹೊಸ ಆಫರ್ ಬೆಲೆಗಳಿಂದಾಗಿ ಕಿಯಾ ಕಾರ್ನಿವಾಲ್ ಕಾರಿನ ಎಂಟ್ರಿ ಲೆವಲ್ ಮಾದರಿಯ ಬೆಲೆಯು ಟೊಯೊಟೊ ಇನೋವಾ ಕ್ರಿಸ್ಟಾ ಎಂಪಿವಿ ಕಾರಿನ ವಿಎಕ್ಸ್ ವೆರಿಯೆಂಟ್‌ಗಿಂತಲೂ ಕಡಿಮೆ ದರ ಹೊಂದಿದ್ದು, ಹೊಸ ಆಫರ್ ಇನೋವಾ ಕ್ರಿಸ್ಟಾ ಖರೀದಿ ಯೋಜನೆಯಲ್ಲಿರುವ ಗ್ರಾಹಕರನ್ನು ಸೆಳೆಯುವ ತವಕದಲ್ಲಿದೆ.

ಕಿಯಾ ಕಂಪನಿಯು ಘೋಷಣೆ ಮಾಡಿರುವ ಹೊಸ ಕ್ಯಾಶ್‌ಬ್ಯಾಕ್ ಆಫರ್ ಈ ತಿಂಗಳು ಕೊನೆಯ ತನಕ ಲಭ್ಯವಿರಲಿದ್ದು, ಎಂಪಿವಿ ಕಾರು ಖರೀದಿಸುವ ಗ್ರಾಹಕರಿಗೆ ಇದು ಅತ್ಯುತ್ತಮ ಅವಕಾಶ ಎನ್ನಬಹುದು.

ಇನ್ನು ಕಿಯಾ ಮೋಟಾರ್ಸ್ ಕಂಪನಿಯು ಸೆಲ್ಟೊಸ್ ನಂತರ ಬಿಡುಗಡೆ ಮಾಡಲಾದ ಕಾರ್ನಿವಾಲ್ ಕಾರಿನ ಮಾರಾಟದ ಮೂಲಕ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡಿದ್ದು, ಹೊಸ ಕಾರು ಐಷಾರಾಮಿ ಸೌಲಭ್ಯಗಳೊಂದಿಗೆ ದುಬಾರಿಯಾಗಿದ್ದರೂ ಸಹ ಇನೋವಾ ಕ್ರಿಸ್ಟಾ ಕಾರಿಗೂ ಪೈಪೋಟಿ ನೀಡುತ್ತಿದೆ.

ಗ್ರಾಹಕರ ಬೇಡಿಕೆಯೆಂತೆ 7 ಸೀಟರ್, 8 ಸೀಟರ್ ಮತ್ತು 9 ಸೀಟರ್ ಮಾದರಿಯೊಂದಿಗೆ ಭಾರತದಲ್ಲಿ ಮಾರಾಟವಾಗುವ ಕಾರ್ನಿವಾಲ್ ಕಾರು ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಮಾದರಿಯಾಗಿ ಗುರುತಿಸಿಕೊಂಡಿದ್ದು, ಹೊಸ ಕಾರು ಪ್ರೀಮಿಯಂ, ಪ್ರೆಸ್ಟೀಜ್ ಮತ್ತು ಲಿಮೊಸಿನ್ ಎನ್ನುವ ಮೂರು ವೆರಿಯೆಂಟ್ ಹೊಂದಿದೆ.

ಅತ್ಯುತ್ತಮ ಫೀಚರ್ಸ್ ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಹೊಸ ಕಾರು ಪ್ರೀಮಿಯಂ ಎಂಪಿವಿ ವಿಭಾಗದಲ್ಲಿ ಆಕರ್ಷಣೆಗೆ ಕಾರಣವಾಗಿದ್ದು,ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.25.11 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 33.95 ಲಕ್ಷ ಬೆಲೆ ಹೊಂದಿದೆ.

ಕಾರ್ನಿವಾಲ್ ಕಾರಿನಲ್ಲಿ ಸದ್ಯಕ್ಕೆ ಕೇವಲ ಒಂದೇ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, 2.2-ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಜೋಡಣೆ ಹೊಂದಿದೆ. ಪ್ರತಿ ವೆರಿಯೆಂಟ್‌ನಲ್ಲೂ 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, 200-ಬಿಎಚ್‌ಪಿ, 440-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಕಿಯಾ ಕಾರ್ನಿವಾಲ್ ಕಾರು ಎಂಪಿವಿ ಕಾರುಗಳಲ್ಲೇ ಅತಿ ಹೆಚ್ಚು ಉದ್ದಳತೆ ಹೊಂದಿದ್ದು, 5,115-ಎಂಎಂ ಉದ್ದ, 1,985-ಎಂಎಂ ಅಗಲ, 1,740-ಎಂಎಂ ಎತ್ತರ, 3,060-ಎಂಎಂ ವೀಲ್ಹ್ ಬೆಸ್, 180-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 540-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಸೌಲಭ್ಯ ಹೊಂದಿದೆ.

ಫುಲ್ ಸೈಜ್ ಎಂಪಿವಿಯಾಗಿರುವ ಕಾರ್ನಿವಾಲ್ ಕಾರು ಉದ್ದಳತೆಯಲ್ಲಿ ಗಮನಸೆಳೆಯಲಿದ್ದು, ಎಲೆಕ್ಟ್ರಾನಿಕ್ ಸ್ಲೈಡಿಂಗ್ ಡೋರ್ ಸಿಸ್ಟಂ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 18-ಇಂಚಿನ ಕ್ರೋಮ್ ಲೇಪಿತ ಅಲಾಯ್ ವೀಲ್ಹ್ ಜೋಡಣೆ ಮಾಡಲಾಗಿದ್ದು, ಇದು ಕಾರ್ನಿವಾಲ್ ಕಾರಿನ ಬಲಿಷ್ಠತೆಗೆ ಮತ್ತಷ್ಟು ಪೂರಕವಾಗಿದೆ.


Click it and Unblock the Notifications








