Bolero Neo ಕಾರಿನ ಟಾಪ್ ಎಂಡ್ ಮಾದರಿ N10(0) ಬೆಲೆ ಮಾಹಿತಿ ಹಂಚಿಕೊಂಡ Mahindra
Mahindra ಕಂಪನಿಯು TUV300 ಸ್ಥಗಿತಗೊಳಿಸಿ ಹೊಸದಾಗಿ Bolero Neo ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದ್ದು, ಕಂಪನಿಯು ಹೊಸ ಕಾರಿನ ಟಾಪ್ ಎಂಡ್ ಮಾದರಿಯ ಬೆಲೆ ಮಾಹಿತಿಯನ್ನು ಇದೀಗ ಹಂಚಿಕೊಂಡಿದೆ.

Bolero Neo ಬಿಡುಗಡೆಯ ಸಂದರ್ಭದಲ್ಲಿ ಹೊಸ ಕಾರಿನ N10(0) ವೆರಿಯೆಂಟ್ ಬೆಲೆಯ ಮಾಹಿತಿಯನ್ನು ಕಾರಣಾಂತರಗಳಿಂದ ತಡವಾಗಿ ಹಂಚಿಕೊಳ್ಳುವುದಾಗಿ ಹೇಳಿದ್ದ Mahindra ಕಂಪನಿಯು ಇದೀಗ ಬೆಲೆ ಮಾಹಿತಿ ಪ್ರಕಟಿಸಿದ್ದು, ಟಾಪ್ ಎಂಡ್ ಮಾದರಿಯಾಗಿ ಮಾರಾಟವಾಗಲಿರುವ Bolero Neo N10(0) ಆವೃತ್ತಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 10.69 ಲಕ್ಷ ಬೆಲೆ ಹೊಂದಿದೆ.

7 ಸೀಟರ್ ಸೌಲಭ್ಯದೊಂದಿಗೆ Bolero Neo ಆವೃತ್ತಿಯು N4, N8, N10 ಮತ್ತು N10(0) ಎನ್ನುವ ನಾಲ್ಕು ವೆರಿಯೆಂಟ್‌ನಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಮಾಹಿತಿ ಬಿಡುಗಡೆಯ ನಂತರ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.48 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 10.69 ಲಕ್ಷ ಬೆಲೆ ಹೊಂದಿದೆ.

ತಾಂತ್ರಿಕ ಅಂಶಗಳ ಜೋಡಣೆಯ ಆಧಾರದ ಮೇಲೆ N4(ರೂ.8.48 ಲಕ್ಷ), N8(ರೂ.9.48 ಲಕ್ಷ), N10(ರೂ.9.99 ಲಕ್ಷ) ಮತ್ತು N10 Option(ರೂ.10.69) ಬೆಲೆ ಹೊಂದಿದ್ದು, ಹೊಸ ಕಾರು Scorpio ಮತ್ತು Thar ಕಾರಿನ ಮ್ಯಾಡುಲರ್ ಚಾರ್ಸಿ ಸೌಲಭ್ಯದೊಂದಿಗೆ ಹಲವು ಹೊಸ ತಾಂತ್ರಿಕ ಅಂಶಗಳನ್ನು ಒಳಗೊಂಡಿದೆ.

Bolero Neo ಆವೃತ್ತಿಯು ಬಿಡುಗಡೆಗೊಂಡ ಮೊದಲ ತಿಂಗಳಿನಲ್ಲಿಯೇ 6 ಸಾವಿರಕ್ಕೂ ಹೆಚ್ಚು ಯುನಿಟ್‌ಗಳಿಗೆ ಬೇಡಿಕೆ ಪಡೆದುಕೊಂಡಿದ್ದು, ಕಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಪ್ರಮುಖ ಕಾರು ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದೆ.

ಹೊಸ Bolero Neo ಮಾದರಿಯ ವಿತರಣೆಯನ್ನು ಈಗಾಗಲೇ ಆರಂಭಿಸಿರುವ ಮಹೀಂದ್ರಾ ಕಂಪನಿಯು ಮುಂಬರುವ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟ ಮಾಡುವ ನೀರಿಕ್ಷೆಯಿದ್ದು, ಹೊಸ ಕಾರು ಕೂಡಾ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಎಂಜಿನ್ ಆಯ್ಕೆ ಮತ್ತು ಬೆಲೆ ಅಂತರದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ SUV ಸರಣಿಯಲ್ಲಿ ಸಾಕಷ್ಟು ಬದಲಾವಣೆ ತಂದಿರುವ Mahindra ಕಂಪನಿಯು TUV300 ಕಂಪ್ಯಾಕ್ಟ್ ಎಸ್‌ಯುವಿ ಮಾರಾಟವನ್ನು ಸ್ಥಗಿತಗೊಳಿಸಿದರೂ ಸಹ ಹೊಸ ಹೆಸರಿನೊಂದಿಗೆ ಫೇಸ್‌ಲಿಫ್ಟ್ ಮಾದರಿಯನ್ನು ಮಾರುಕಟ್ಟೆಯಲ್ಲಿ ಉಳಿಸಿಕೊಂಡಿದೆ.

Bolero ಹೊಸ ಕಾರಿನಲ್ಲಿ Mahindra ಕಂಪನಿಯು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಕಾರಿನಲ್ಲಿ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್, ಮಾಡಿಫೈಗೊಳಿಸಿದ ಹೆಡ್‌ಲ್ಯಾಂಪ್, ಹಾರಿಜಂಟಲ್ ಆಗಿರುವ ಎಲ್‌ಇಡಿ ಡಿಆರ್‌ಎಲ್ ಲೈಟ್‌ಗಳನ್ನು ಹೊಂದಿದೆ.

ಇದರ ಜೊತೆಗೆ ಹೊಸ ಕಾರಿನಲ್ಲಿ ವಿಶಾಲವಾದ ಏರ್ ಡ್ಯಾಂ, ಸರ್ಕ್ಯೂಲರ್ ಫಾಗ್ ಲೈಟ್, ಮರುವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್, ಹೊಸ ಬೊಲೆರೊ ನಿಯೋ ಬ್ಯಾಡ್ಜಿಂಗ್ ಸೇರಿದಂತೆ ಹಲವು ಹೊಸ ತಾಂತ್ರಿಕ ಸೌಲಭ್ಯಗಳು ಈ ಎಸ್‌ಯುವಿಯಲ್ಲಿ ಕಾಣಬಹುದಾಗಿದ್ದು, ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೆ ಒಳಭಾಗದ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

Bolero Neo ಎಸ್‌ಯುವಿಯಲ್ಲಿ Mahindra ಕಂಪನಿಯು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸಿಬಿಸಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಕ್ರೂಸ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳನ್ನು ನೀಡಿದೆ.

ಹೊಸ ಕಾರು ಮಾದರಿಯಲ್ಲಿ ಈ ಹಿಂದಿನ TUV300 ಮಾದರಿಯಲ್ಲಿ ಅಳವಡಿಸಲಾಗುತ್ತಿದ್ದ 1.5-ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 100-ಬಿಎಚ್‌ಪಿ ಮತ್ತು 260 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಪಡೆದುಕೊಂಡಿದೆ.

Mahindra ಕಂಪನಿಯು ಹೊಸ ಕಾರಿನಲ್ಲಿ ರಾಕಿ ಬಿಜ್, ಮೆಜೆಸ್ಟಿಕ್ ಸಿಲ್ವರ್, ಹೈವೆ ರೆಡ್, ಪರ್ಲ್ ವೈಟ್, ಡೈಮಂಡ್ ವೈಟ್, ನಪೊಲಿ ಬ್ಲ್ಯಾಕ್ ಮತ್ತು ರಾಯಲ್ ಗೋಲ್ಡ್ ಬಣ್ಣಗಳ ಆಯ್ಕೆ ನೀಡಿದ್ದು, ಹೊಸ ಕಾರು ಬೆಲೆ ವಿಚಾರದಲ್ಲಿ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ವಿವಿಧ ಪರಿಕರಗಳು ಕಾರಿನ ಬಲಿಷ್ಠತೆ ಹೆಚ್ಚಿಸಲು ಸಹಕಾರಿಯಾಗಲಿದ್ದು, ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಗ್ರಾಹಕರು ಆಯ್ದ ಪರಿಕರಗಳನ್ನು ಇಲ್ಲವೇ ಸಂಪೂರ್ಣ ಪ್ಯಾಕೇಜ್ ಅನ್ನು ಆಕರ್ಷಕ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Bolero Neo ಮಾದರಿಯಾಗಿಯೇ ವಿಶೇಷವಾಗಿ ನೀಡಲಾಗಿರುವ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ವಿವಿಧ ಪರಿಕರಗಳು ರೂ. 199ರಿಂದ ರೂ. 25 ಸಾವಿರ ತನಕ ಬೆಲೆ ಹೊಂದಿದ್ದು, ಹೆಚ್ಚುವರಿ ಪರಿಕರಗಳಿಗಾಗಿ ಸುಮಾರು ರೂ. 1 ಲಕ್ಷದೊಳಗೆ ಪ್ರಮುಖ ಆಕ್ಸೆಸರಿಸ್ ಖರೀದಿಸಬಹುದಾಗಿದೆ.


Click it and Unblock the Notifications