ಮತ್ತಷ್ಟು ತಡವಾಗಲಿದೆ Mahindra eXUV300 ಎಲೆಕ್ಟ್ರಿಕ್ ಕಾರಿನ ಬಿಡುಗಡೆ
ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ತೀವ್ರ ಬೆಳವಣಿಗೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಹಲವಾರು ಹೊಸ ವಾಹನ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, Mahindra ಕಂಪನಿಯು ಕೂಡಾ ಇವಿ ವಾಹನ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಈಗಾಗಲೇ ಸಾಕಷ್ಟು ಮುಂಚೂಣಿ ಸಾಧಿಸಿರುವ Mahindra ಕಂಪನಿಯ Mahindra Electric ವಿಭಾಗವು ಮತ್ತಷ್ಟು ಹೊಸ ಇವಿ ವಾಹನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ವಾಣಿಜ್ಯ ವಾಹನಗಳ ಮಾದರಿಗಳಂತೆ ಪ್ರಯಾಣಿಕರ ಎಲೆಕ್ಟ್ರಿಕ್ ವಾಹನ ಮಾದರಿಯ ಮಾರಾಟದಲ್ಲೂ ಮುಂಚೂಣಿ ಸಾಧಿಸುವ ತವಕದಲ್ಲಿದೆ.

ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಮೇಲೆ ಈಗಾಗಲೇ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಕಂಪನಿಯು ಇತ್ತೀಚೆಗೆ ಹೆಚ್ಚುವರಿಯಾಗಿ ರೂ.3 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಹೊಸ ಬಂಡವಾಳದೊಂದಿಗೆ ಕಂಪನಿಯು ಇದುವರೆಗೆ ಸುಮಾರು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದಂತಾಗಿದೆ.

Reva Electric ಕಂಪನಿಯೊಂದಿಗೆ 2010ರಲ್ಲಿ ಮೊದಲ ಹೂಡಿಕೆಯೊಂದಿಗೆ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಕಾಲಿರಿಸಿದ Mahindra ಕಂಪನಿಯು ಇದುವರೆಗೆ ಹಲವಾರು ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸಿದ್ದು, ಇದೀಗ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ವಾಹನಗಳ ಅಭಿವೃದ್ದಿಯತ್ತ ಹೆಚ್ಚಿನ ಗಮನಹರಿಸುತ್ತಿದೆ.

ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಮಾತ್ರವಲ್ಲ ವಾಣಿಜ್ಯ ವಾಹನಗಳ ವಿಭಾಗದಲ್ಲೂ ಎಲೆಕ್ಟ್ರಿಕ್ ಮಾದರಿಗಳನ್ನು ಪರಿಚಯಿಸಿರುವ Mahindra ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಪ್ರಮುಖ ಬದಲಾವಣೆಗಳೊಂದಿಗೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

Mahindra ಕಂಪನಿಯು ಕೇವಲ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮಾತ್ರವಲ್ಲದೆ ಸಂಶೋಧನೆ, ವಿಶ್ವಾದ್ಯಂತ ನೂರಾರು ಇವಿ ಸ್ಟಾರ್ಟ ಅಪ್ ಕಂಪನಿಗಳಲ್ಲೂ ಹಣ ಹೂಡಿಕೆ ಮಾಡಿರುವುದು ಭವಿಷ್ಯದ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಮಾರಾಟದಲ್ಲಿ ಮಹತ್ವದ ಪಾತ್ರವಹಿಸಲಿದೆ.

ಹೊಸ ಬಂಡವಾಳದೊಂದಿಗೆ ಇದೀಗ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸುತ್ತಿದ್ದು, ಒಂದೇ ಪ್ಲ್ಯಾಟ್‌ಫಾರ್ಮ್ ಅಡಿ ಹಲವು ವಾಹನ ಮಾದರಿಗಳನ್ನು ನಿರ್ಮಾಣ ಮಾಡುವ ಗುರಿಹೊಂದಿದೆ.

ಭಾರತದಲ್ಲಿ ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಹೊಂದಿರುವ ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ಬಹುನೀರಿಕ್ಷಿತ eKUV100 ಇವಿ ನಂತರ eXUV300 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಕಳೆದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ eKUV100, eXUV300 ಎಲೆಕ್ಟ್ರಿಕ್ ಮತ್ತು ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಗಳನ್ನು ಪ್ರದರ್ಶನ ಮಾಡಿದ್ದ Mahindra Electric ಕಂಪನಿಯು ಪ್ರದರ್ಶನದ ವೇಳೆ ಕೆಯುವಿ100 ಎಲೆಕ್ಟ್ರಿಕ್ ಕಾರು ಮಾದರಿಯ ಬೆಲೆ ಮಾಹಿತಿ ಮಾತ್ರವೇ ಹಂಚಿಕೊಳ್ಳುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ವಿತರಣೆ ಮಾಡುವುದಾಗಿ ಹೇಳಿಕೊಂಡಿತ್ತು.

ಆದರೆ ಕಳೆದ ವರ್ಷದ ಮಾರ್ಚ್ ಹೊತ್ತಿಗೆ ಕರೋನಾ ವೈರಸ್ ಹೆಚ್ಚಾದ ಹಿನ್ನಲೆ ಲಾಕ್‌ಡೌನ್ ಮಾಡಿದ ಪರಿಣಾಮ ಹೊಸ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನು ಮುಂದೂಡಿಕೆ ಮಾಡುತ್ತ ಬಂದಿರುವ ಮಹೀಂದ್ರಾ ಕಂಪನಿಯು ಮುಂದಿನ 2 ಎರಡು ವರ್ಷಗಳಿಗೆ ಹೊಸ ಯೋಜನೆಯನ್ನು ಮುಂದೂಡಿದೆ.

Mahindra ಕಂಪನಿಯು ಸದ್ಯ eKUV100 ಮಾತ್ರ ಮಾರಾಟ ಮಾಡಲು ನಿರ್ಧರಿಸಿದ್ದು, ಇನ್ನುಳಿದ ಹೊಸ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯನ್ನು ಮುಂಬರುವ 2023ಕ್ಕೆ ಮುಂದೂಡಿಕೆ ಮಾಡಿದೆ.

ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ eXUV300 ಕಾರು ಮಾದರಿಯೊಂದಿಗೆ 2025ರ ವೇಳೆಗೆ 5 ಲಕ್ಷ ಯುನಿಟ್ ಇವಿ ವಾಹನಗಳನ್ನು ಮಾರಾಟ ಮಾಡುವ ಗುರಿಹೊಂದಿದ್ದು, ಹೊಸ ಕಾರುಗಳು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಬದಲಾವಣೆ ತರಲಿವೆ.

eXUV300 ಎಲೆಕ್ಟ್ರಿಕ್ ಮಾದರಿಯು Tata Nexon EV ಮಾದರಿಗೆ ಪೈಪೋಟಿಯಾಗಿ ಮಾರಾಟಗೊಳ್ಳಲಿದ್ದು, Mahindra ಹೊಸ ಕಾರಿನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಬಳಕೆ ಮಾಡಲಿದೆ.

ಹೊಸ eXUV300 ಮಾದರಿಯು ಪ್ರತಿ ಚಾರ್ಜ್‌ಗೆ ಕನಿಷ್ಠ 350 ಕಿ.ಮೀ ನಿಂದ 375 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಟಾಟಾ ಮಾದರಿಯಲ್ಲೇ ಬೆಲೆ ಹೊಂದಿರಲಿದ್ದು, ಹೊಸ ಕಾರು MG ZS EV ಮಾದರಿಗೂ ಪೈಪೋಟಿ ನೀಡಲಿದೆ.

ಇನ್ನು ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರದ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಳ್ಳುತ್ತಿರುವ ಇವಿ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹವು ಹೊಸ ಬದಲಾವಣೆಗೆ ಕಾರಣವಾಗಿದೆ.


Click it and Unblock the Notifications