XUV700 ಮಾದರಿಯಲ್ಲೂ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆ ಮಾಡಲಿದೆ Mahindra
ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರ ಬೆಳವಣಿಗೆ ಕಂಡುಬರುತ್ತಿರುವ ಹಿನ್ನಲೆಯಲ್ಲಿ ಹಲವಾರು ಹೊಸ ವಾಹನ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಇವಿ ವಾಹನಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಮಹೀಂದ್ರಾ(Mahindra) ಕಂಪನಿಯು ಕೂಡಾ ಇವಿ ವಾಹನ ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಈಗಾಗಲೇ ಸಾಕಷ್ಟು ಮುಂಚೂಣಿ ಸಾಧಿಸಿರುವ ಮಹೀಂದ್ರಾ ಎಲೆಕ್ಟ್ರಿಕ್(Mahindra Electric) ವಿಭಾಗವು ಮತ್ತಷ್ಟು ಹೊಸ ಇವಿ ವಾಹನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ದವಾಗುತ್ತಿದ್ದು, ವಾಣಿಜ್ಯ ವಾಹನಗಳ ಮಾದರಿಗಳಂತೆ ಪ್ರಯಾಣಿಕರ ಎಲೆಕ್ಟ್ರಿಕ್ ವಾಹನ ಮಾದರಿಯ ಮಾರಾಟದಲ್ಲೂ ಮುಂಚೂಣಿ ಸಾಧಿಸುವ ತವಕದಲ್ಲಿದೆ.

ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಮೇಲೆ ಈಗಾಗಲೇ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಕಂಪನಿಯು ಇತ್ತೀಚೆಗೆ ಹೆಚ್ಚುವರಿಯಾಗಿ ರೂ.3 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಹೊಸ ಬಂಡವಾಳದೊಂದಿಗೆ ಕಂಪನಿಯು ಇದುವರೆಗೆ ಸುಮಾರು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದಂತಾಗಿದೆ.

ರೆವಾ ಎಲೆಕ್ಟ್ರಿಕ್(Reva Electric) ಕಂಪನಿಯೊಂದಿಗೆ 2010ರಲ್ಲಿ ಮೊದಲ ಹೂಡಿಕೆಯೊಂದಿಗೆ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಕಾಲಿರಿಸಿದ ಮಹೀಂದ್ರಾ ಕಂಪನಿಯು ಇದುವರೆಗೆ ಹಲವಾರು ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸಿದ್ದು, ಇದೀಗ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ವಾಹನಗಳ ಅಭಿವೃದ್ದಿಯತ್ತ ಹೆಚ್ಚಿನ ಗಮನಹರಿಸುತ್ತಿದೆ.

ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಮಾತ್ರವಲ್ಲ ವಾಣಿಜ್ಯ ವಾಹನಗಳ ವಿಭಾಗದಲ್ಲೂ ಎಲೆಕ್ಟ್ರಿಕ್ ಮಾದರಿಗಳನ್ನು ಪರಿಚಯಿಸಿರುವ ಮಹೀಂದ್ರಾ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಪ್ರಮುಖ ಬದಲಾವಣೆಗಳೊಂದಿಗೆ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಹೊಸ ಬಂಡವಾಳದೊಂದಿಗೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗಾಗಿ ಹೊಸ ಪ್ಲ್ಯಾಟ್‌ಫಾರ್ಮ್ ಸಿದ್ದಪಡಿಸುತ್ತಿದ್ದು, ಒಂದೇ ಪ್ಲ್ಯಾಟ್‌ಫಾರ್ಮ್ ಅಡಿ ಹಲವು ವಾಹನ ಮಾದರಿಗಳನ್ನು ನಿರ್ಮಾಣ ಮಾಡುವ ಗುರಿಹೊಂದಿದೆ.

ಮಹೀಂದ್ರಾ ಹೊಸ ಎಲೆಕ್ಟ್ರಿಕ್ ಕಾರುಗಳ ಪೈಕಿ ಎಕ್ಸ್‌ಯುವಿ700(XUV700) ಮಾದರಿಯು ಕೂಡಾ ಇವಿ ಆವೃತ್ತಿಯೊಂದಿಗೆ ಬಿಡುಗಡೆಯಾಗುವ ನೀರಿಕ್ಷೆಯಲ್ಲಿದ್ದು, ಸಾಮಾನ್ಯ ಮಾದರಿಯೊಂದಿಗೆ ಸದ್ಯಕ್ಕೆ ಬಿಡುಗಡೆಯಾಗುತ್ತಿರುವ ಎಕ್ಸ್‌ಯುವಿ700 ಮಾದರಿಯು ಮುಂಬರುವ ದಿನಗಳಲ್ಲಿ ಇವಿ ಆವೃತ್ತಿಯಲ್ಲೂ ಗಮನಸೆಳೆಯಲಿದೆ.

ಹೊಸ ಎಕ್ಸ್‌ಯುವಿ700 ಮಾದರಿಯನ್ನು 54kwh ಬ್ಯಾಟರಿ ಪ್ಯಾಕ್‌ನೊಂದಿಗೆ ಅಭಿವೃದ್ದಿಗೊಳಿಸಲಾಗುತ್ತಿದೆ ಎನ್ನಲಾಗಿದ್ದು, ಹೊಸ ಕಾರು ಪರ್ಫಾಮೆನ್ಸ್‌ನೊಂದಿಗೆ ಮೈಲೇಜ್ ವಿಚಾರದಲ್ಲೂ ಗಮನಸೆಳೆಯಲಿದೆ.

ಹೊಸ ಕಾರನ್ನು ಮಧ್ಯಮ ಗಾತ್ರ ಎಸ್‌ಯುವಿ ಮಾದರಿಯಾಗಿ ಬಿಡುಗಡೆ ಮಾಡಲಿದ್ದು, ಪ್ರತಿ ಚಾರ್ಜ್‌ಗೆ 500 ಕಿ.ಮೀ ಗೂ ಅಧಿಕ ಮೈಲೇಜ್ ನೀಡಬಹುದಾಗಿದೆ. ಸದ್ಯಕ್ಕೆ ಕಂಪನಿಯು eKUV100 ಇವಿ ನಂತರ eXUV300 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಎಕ್ಸ್‌ಯುವಿ700 ಮಾದರಿಯನ್ನು ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಬಿಡುಗಡೆ ಮಾಡಲಿದೆ.

ಕಳೆದ 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ eKUV100, eXUV300 ಎಲೆಕ್ಟ್ರಿಕ್ ಮತ್ತು ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಗಳನ್ನು ಪ್ರದರ್ಶನ ಮಾಡಿದ್ದ ಮಹೀಂದ್ರಾ ಎಲೆಕ್ಟ್ರಿಕ್ ಕಂಪನಿಯು ಮುಂದಿನ ಕೆಲ ತಿಂಗಳಿನಲ್ಲಿ ಬಿಡುಗಡೆ ಮಾಡಲಿದ್ದು, ತದನಂತರವಷ್ಟೇ ಭವಿಷ್ಯದ ಇವಿ ಮಾದರಿಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಮಹೀಂದ್ರಾ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಕಾರು ಮಾದರಿಯೊಂದಿಗೆ 2025ರ ವೇಳೆಗೆ 5 ಲಕ್ಷ ಯುನಿಟ್ ಇವಿ ವಾಹನಗಳನ್ನು ಮಾರಾಟ ಮಾಡುವ ಗುರಿಹೊಂದಿದ್ದು, ಹೊಸ ಕಾರುಗಳು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಬದಲಾವಣೆ ತರಲಿವೆ.

ಹೊಸ eXUV300 ಮಾದರಿಯು ಪ್ರತಿ ಚಾರ್ಜ್‌ಗೆ ಕನಿಷ್ಠ 350 ಕಿ.ಮೀ ನಿಂದ 375 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಟಾಟಾ ಮಾದರಿಯಲ್ಲೇ ಬೆಲೆ ಹೊಂದಿರಲಿದ್ದು, ಹೊಸ ಕಾರು MG ZS EV ಮಾದರಿಗೂ ಪೈಪೋಟಿ ನೀಡಲಿದೆ.

ಹಾಗೆಯೇ ಎಕ್ಸ್‌ಯುವಿ700 ಎಲೆಕ್ಟ್ರಿಕ್ ವರ್ಷನ್ ಮಾದರಿಯು ಕೆಲವು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಉನ್ನತ ಮಟ್ಟದ ಇವಿ ಮಾದರಿಯಾಗಿ ಮಾರಾಟಗೊಳ್ಳಲಿದ್ದು, ಸದ್ಯಕ್ಕೆ ಹೊಸ ಆವೃತ್ತಿಯು ಸಾಮಾನ್ಯ ಮಾದರಿಯಾಗಿ ಬಿಡುಗಡೆಯ ಸಿದ್ದತೆಯಲ್ಲಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಕ್ರಮಾಂಕದ ಎಸ್‌ಯುವಿ ಕಾರುಗಳಲ್ಲಿ ಹೊಸ ಸಂಚಲನಕ್ಕಾಗಿ ಎಕ್ಸ್‌ಯುವಿ700 ಹೊಸ ಕಾರು ಮಾದರಿಯು ಸುಮಾರು 15 ಕಾರು ಮಾದರಿಗಳಿಗೆ ಪೈಪೋಟಿ ನೀಡಲು ಅಚ್ಚರಿಯ ಬೆಲೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹೊಸ ಕಾರಿನ ಬೆಲೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮಹೀಂದ್ರಾ ಡೀಲರ್ಸ್‌ಗಳಲ್ಲಿ ಹೊಸ ಕಾರು ಖರೀದಿಗಾಗಿ ಭಾರೀ ಪ್ರಮಾಣದ ಬೇಡಿಕೆ ಸಲ್ಲಿಕೆಯಾಗಿದೆ.

ಹೊಸ ಕಾರು ಎಂಎಕ್ಸ್ ಸೀರಿಸ್ ಮತ್ತು ಆಂಡ್ರಿನೊಎಕ್ಸ್ ಸೀರಿಸ್ ಪಡೆದುಕೊಂಡಿದೆ. ಇದರಲ್ಲಿ ಎಂಎಕ್ಸ್ ಸೀರಿಸ್ ಮಾದರಿಗಳು 5 ಸೀಟರ್‌ನೊಂದಿಗೆ ಬಿಡುಗಡೆಯಾಗಲಿದ್ದರೆ ಆಂಡ್ರಿನೊಎಕ್ಸ್ ಸೀರಿಸ್ ಕಾರುಗಳು 7 ಸೀಟರ್ ಸೌಲಭ್ಯದೊಂದಿಗೆ ತುಸು ಐಷಾರಾಮಿ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಲಿದೆ.

ಹೊಸ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಎಕ್ಸ್‌ಯುವಿ700 ಎಸ್‌ಯುವಿ ಅಭಿವೃದ್ದಿಗೊಂಡಿದ್ದು, ಸಂಪೂರ್ಣವಾಗಿ ಹೊಸ ತಂತ್ರಜ್ಞಾನ, ವಿನೂತನ ವಿನ್ಯಾಸ ಮತ್ತು ಬಲಿಷ್ಠ ಎಂಜಿನ್ ಆಯ್ಕೆ ಪಡೆದುಕೊಂಡಿದೆ. ಎಂಎಕ್ಸ್ ಸೀರಿಸ್ ಹೊಂದಿರುವ ಎಕ್ಸ್‌ಯುವಿ700 ಮಾದರಿಯ ಬೆಲೆಯನ್ನು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 11.99 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.99 ಲಕ್ಷ ಬೆಲೆಗೆ ನಿಗದಿಪಡಿಸಿದೆ.

ಸದ್ಯ ಎಂಎಕ್ಸ್ ಸರಣಿ ಬೆಲೆ ಹಂಚಿಕೊಂಡರುವ ಮಹೀಂದ್ರಾ ಕಂಪನಿಯು ಹೈ ಮಾದರಿಯಾದ ಆಂಡ್ರಿನೊಎಕ್ಸ್ ಸೀರಿಸ್ ಎಕ್ಸ್‌ಯುವಿ700 ಎಸ್‌ಯುವಿ ಬೆಲೆ ಹಂಚಿಕೊಳ್ಳಲಿದ್ದು, ಎಂಎಕ್ಸ್ ಸರಣಿಗಿಂತ ಆಂಡ್ರಿನೊಎಕ್ಸ್ ಸರಣಿ ಮಾದರಿಗಳ ಬೆಲೆ ತುಸು ದುಬಾರಿಯಾಗಿರಲಿದೆ.


Click it and Unblock the Notifications