ಪ್ರಮುಖ ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ ಮಹೀಂದ್ರಾ ಎಕ್ಸ್‌ಯುವಿ300 ಫೇಸ್‌ಲಿಫ್ಟ್
ಮಹೀಂದ್ರಾ ಕಂಪನಿಯು ಹೊಸ ಎಕ್ಸ್‌ಯುವಿ ಸರಣಿಯೊಂದಿಗೆ ಎಸ್‌ಯುವಿ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು 2022ರ ಆರಂಭದಲ್ಲಿ ಪ್ರಮುಖ ಕಾರು ಮಾದರಿಗಳ ಹೊಸ ಆವೃತ್ತಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಮಧ್ಯಮ ಕ್ರಮಾಂಕದ ಎಸ್‌ಯುವಿ ಸರಣಿ ಕಾರುಗಳ ಮಾರಾಟದಲ್ಲಿ ಸದ್ಯ ಅಗ್ರಸ್ಥಾನ ಕಾಯ್ದಕೊಂಡಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ300 ಮೂಲಕ ಉತ್ತಮ ಬೇಡಿಕೆ ಪಡೆದುಕೊಂಡಿದೆ. ಎಕ್ಸ್‌ಯುವಿ300 ಮಾದರಿಯು ಬಿಡುಗಡೆಯ ನಂತರ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಶೀಘ್ರದಲ್ಲೇ ಹೊಸ ಕಾರು ಮತ್ತಷ್ಟು ಉನ್ನತೀಕರಿಸಿದ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ಎಕ್ಸ್‌ಯುವಿ300 ಮಾದರಿಯಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ತಾಂತ್ರಿಕ ಅಂಶಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಫೇಸ್‌ಲಿಫ್ಟ್ ಮಾದರಿಯೊಂದಿಗೆ ಹೊಸ ಕಾರು ಈ ಬಾರಿ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಹೊಂದಿರುವ ಸ್ಪೋರ್ಟ್ಜ್ ಮಾದರಿಯು ಕೂಡಾ ಬಿಡುಗಡೆಯಾಗಬಹುದಾಗಿದೆ.

ಎಕ್ಸ್‌ಯುವಿ 300 ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಗೆ ಲಭ್ಯವಿದ್ದು, ಕಂಪನಿಯು ಶೀಘ್ರದಲ್ಲೇ ಎಕ್ಸ್‌ಯುವಿ300 ಮಾದರಿಯ ಟರ್ಬೊ ವರ್ಷನ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಮಹೀಂದ್ರಾ ಎಕ್ಸ್‌ಯುವಿ300 ಸ್ಪೋರ್ಟ್ಜ್ ಆವೃತ್ತಿಯು ಇದೀಗ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆಯಲ್ಲಿದ್ದು, ಕಳೆದ ವರ್ಷವೇ ಬಿಡುಗಡೆಯಾಗಬೇಕಿದ್ದ ಹೊಸ ಕಾರು ಕೋವಿಡ್ ಪರಿಣಾಮ ಬಿಡುಗಡೆ ಮುಂದೂಡಿಕೆಯಾಗುತ್ತಾ ಇದೀಗ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹೊಸ ಕಾರಿನಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆಯೇ ಪ್ರಮುಖ ತಾಂತ್ರಿಕ ಅಂಶಗಳೊಂದಿಗೆ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಹೊಸದಾಗಿ ಅಭಿವೃದ್ದಿಗೊಳಿಸಲಾದ 1.2-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಜೋಡಣೆ ಹೊಂದಿದ್ದು, ಅತಿ ಹೆಚ್ಚು ಬಿಎಚ್‌ಪಿ ಉತ್ಪಾದನಾ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಎಂಸ್ಟಾಲಿನ್ ಎಂದು ಹೆಸರಿಸಿರುವ ಮಹೀಂದ್ರಾ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

ಹೊಸ ಎಂಜಿನ್ ಅನ್ನು ಸ್ಪೋರ್ಟ್ಜ್ ವರ್ಷನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ಮುಂಬರುವ ಫೇಸ್‌ಲಿಫ್ಟ್ ಮಾದರಿಯಲ್ಲಿ ಬಿಡುಗಡೆಯಾಗಬಹುದಾಗಿದೆ. ಹೊಸ ಎಂಜಿನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಲಿದೆ.

ಇನ್ನು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳಲ್ಲಿಯೇ ಅತಿ ಹೆಚ್ಚು ಸುರಕ್ಷಿತ ಕಾರು ಮಾದರಿಯೆಂಬ ಹೆಗ್ಗಳಿಕೆ ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಕಳೆದ ಕೆಲ ತಿಂಗಳಿನಿಂದ ಹೆಚ್ಚಿನ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದೆ.

2020-21ರ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಮಹೀಂದ್ರಾ ಎಕ್ಸ್‌ಯುವಿ300 ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಬುಕಿಂಗ್ ಪ್ರಮಾಣವು ಶೇಕಡಾ 90ರಷ್ಟು ಹೆಚ್ಚಾಗಿದ್ದು, ಪ್ರತಿ ತಿಂಗಳು ಸರಾಸರಿಯಾಗಿ 6 ಸಾವಿರ ಯುನಿಟ್‌ಗೆ ಬುಕ್ಕಿಂಗ್ ದಾಖಲಾಗಿದೆ.

ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತಿ ಹೆಚ್ಚು ಸುರಕ್ಷಾ ಫೀಚರ್ಸ್ ಹೊಂದಿರುವ ಎಕ್ಸ್‌ಯುವಿ300 ಮಾದರಿಯು ಅತಿ ಹೆಚ್ಚು ಅಂಕಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಬಜೆಟ್ ಕಾರು ಮಾದರಿಯಾಗಿದೆ.

ಪ್ರತಿ ಹೊಸ ಕಾರು ಮಾದರಿಗಳಿಗೂ ಪ್ರಯಾಣಿಕರ ಸುರಕ್ಷಾ ವಿಚಾರವಾಗಿ ಜಾಗತಿಕ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ಎಕ್ಸ್‌ಯುವಿ300 ಪಡೆದುಕೊಳ್ಳುತ್ತಿರುವ ಉತ್ತಮ ರೇಟಿಂಗ್‌ನಿಂದಾಗಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುವುದು ಖಾತ್ರಿಯಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ಈ ಮೊದಲು ಟಾಟಾ ನೆಕ್ಸಾನ್ ನಂತರ ಎಕ್ಸ್‌ಯುವಿ300 ಕೂಡಾ ಗರಿಷ್ಠ ರೇಟಿಂಗ್ ಪಡೆದುಕೊಳ್ಳುವ ಮೂಲಕ ಗರಿಷ್ಠ ಸುರಕ್ಷತಾ ಕಾರು ಮಾದರಿಯಾಗಿ ಗ್ರಾಹಕರ ಗಮನಸೆಳೆಯುತ್ತಿದೆ.

#SAFERCARSFORINDIA ಅಭಿಯಾನದಡಿ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಮಹೀಂದ್ರಾ ಎಕ್ಸ್‌ಯುವಿ300 ಕಾರು ಮಾದರಿಗೆ ಗರಿಷ್ಠ ರೇಟಿಂಗ್ ನೀಡಿದೆ.

ಎಕ್ಸ್‌ಯುವಿ300 ಮಾದರಿಯು ಗುಣಮಟ್ಟದ ಬಿಡಿಭಾಗಗಳೊಂದಿಗೆ ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಟಾಪ್ ಎಂಡ್ ಮಾದರಿಯಲ್ಲಿ 7 ಏರ್‌ಬ್ಯಾಗ್ ಸೇರಿದಂತೆ ಹಲವಾರು ಪ್ರೀಮಿಯಂ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಹೊಂದಿದ್ದು, ಹಲವಾರು ಸೆಗ್ಮೆಂಟ್ ಫಸ್ಟ್ ಪ್ರೀಮಿಯಂ ಫೀಚರ್ಸ್ ಹೊಂದಿದೆ.


Click it and Unblock the Notifications