ಹಲವಾರು ಹೊಸ ಸುರಕ್ಷಾ ಫೀಚರ್ಸ್ ಪಡೆದುಕೊಳ್ಳಲಿದೆ ಮಹೀಂದ್ರಾ ಎಕ್ಸ್‌ಯುವಿ700
ಮಹೀಂದ್ರಾ ತನ್ನ ಬಹುನೀರಿಕ್ಷಿತ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯನ್ನು ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದ್ದು, ಹೊಸ ಕಾರು ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಕ್ಸ್‌ಯುವಿ500 ಮಾದರಿಯ ನ್ಯೂ ಜನರೇಷನ್ ಮಾದರಿಯಾಗಿ ಬಿಡುಗಡೆಗೊಳ್ಳುತ್ತಿದ್ದು, ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ಜೋಡಣೆ ಮಾಡಿದೆ. ಹೊಸ ಕಾರು ಮುಂಬರುವ ಅಗಸ್ಟ್ ಹೊತ್ತಿಗೆ ಬಿಡುಗಡೆಯಾಗಲಿದ್ದು, ಹೊಸ ಕಾರು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳೊಂದಿಗೆ ಬಲಿಷ್ಠ ಎಂಜಿನ್ ಆಯ್ಕೆ ಪಡೆದುಕೊಳ್ಳಲಿರುವ ಹೊಸ ಎಕ್ಸ್‌ಯುವಿ700 ಕಾರು ಮಾದರಿಯಲ್ಲಿ ಮಹೀಂದ್ರಾ ಕಂಪನಿಯು ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳನ್ನು ಜೋಡಣೆ ಮಾಡಿದ್ದು, ಆಸಕ್ತ ಗ್ರಾಹಕರಿಗಾಗಿ ಸೇಫ್ಟಿ ಫೀಚರ್ಸ್‌ಗಳನ್ನು ವೈಯಕ್ತಿಕರಣಗೊಳಿಸುವ ಆಯ್ಕೆ ನೀಡಿದೆ.

ಅಂದರೆ ಹೊಸ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗುವ ಸೇಫ್ಟಿ ಫೀಚರ್ಸ್‌ಗಳ ಜೊತೆಗೆ ಆಸಕ್ತ ಗ್ರಾಹಕರು ಹೆಚ್ಚುವರಿ ದರಗಳಲ್ಲಿ ಮತ್ತಷ್ಟು ಸುರಕ್ಷಿತಗೊಳಿಸಬಹುದಾಗಿದ್ದು, ಎಕ್ಸ್‌ಯುವಿ700 ಮಾದರಿಯು ಸ್ಪೀಡ್ ವಾರ್ನಿಂಗ್ ಸೇರಿದಂತೆ ಹಲವಾರು ಹೊಸ ಸೇಫ್ಟಿ ಫೀಚರ್ಸ್ ಪಡೆದುಕೊಳ್ಳುವುದನ್ನು ಮಹೀಂದ್ರಾ ಕಂಪನಿಯು ಹೊಸ ಟೀಸರ್‌ನಲ್ಲಿ ಖಚಿತಪಡಿಸಿದೆ.

ಹಾಗೆಯೇ ಮೊದಲ ಟೀಸರ್‌ನಲ್ಲಿ ಹೊಸ ಕಾರು ಆಟೋ ಬೂಸ್ಟರ್ ಹೆಡ್‌ಲ್ಯಾಂಪ್ ಮತ್ತು ಸೆಗ್ಮೆಂಟ್ ಫಸ್ಟ್ ಲಾರ್ಜ್ ಸನ್‌ರೂಫ್ ಹೊಂದಿದ್ದು, ಹೊಸ ಮಾದರಿಯ ಹೆಡ್‌ಲ್ಯಾಂಪ್‌ನೊಂದಿಗೆ ಕಾರು ಚಾಲನೆ ವೇಳೆ ಹೆಡ್‌ಲ್ಯಾಂಪ್ ಬೆಳಕನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಲು ಸಹಕಾರಿಯಾಗಿದೆ.

ಇನ್ನು ಹೊಸ ಎಕ್ಸ್‌ಯುವಿ700 ಕಾರು ಮಾದರಿಯು ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ವಿವಿಧ ಎಂಜಿನ್ ಆಯ್ಕೆಯಲ್ಲಿ ಒಟ್ಟು 11 ವೆರಿಯೆಂಟ್‌ಗಳನ್ನು ಪಡೆದುಕೊಳ್ಳಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ಮಾದರಿಗಳನ್ನು ಹೊಂದಿರುವ ಹೊಸ ಕಾರಿನಲ್ಲಿ ಡೀಸೆಲ್ ಪವರ್‌ಫುಲ್ ಎಂಜಿನ್ ಆಯ್ಕೆ ಹೊಂದಿರಲಿದೆ.

2.2-ಲೀಟರ್ ಡೀಸೆಲ್ ಎಂಜಿನ್ ಮಾದರಿಯನ್ನು ಸದ್ಯ ಕಂಪನಿಯು 180 ಬಿಎಚ್‌ಪಿ, 190 ಬಿಎಚ್‌ಪಿ ಮತ್ತು 210 ಬಿಎಚ್‌ಪಿ ಟ್ಯೂನ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ಹೊಸ ಕಾರು ಉತ್ಪಾದನಾ ಮಾದರಿಯಲ್ಲಿ 180-ಬಿಎಚ್‌ಪಿ ಮಾದರಿಯನ್ನು ಪಡೆದುಕೊಳ್ಳುವ ನೀರಿಕ್ಷೆಗಳಿವೆ.

ಹೊಸ ಕಾರಿನಲ್ಲಿ ನೀಡಲಾಗುತ್ತಿರುವ ಪೆಟ್ರೋಲ್ ಎಂಜಿನ್ ಮಾಹಿತಿ ಲಭ್ಯವಿಲ್ಲವಾದರೂ ಥಾರ್ ಮಾದರಿಯಲ್ಲಿ ನೀಡಲಾಗಿರುವ 2.0-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದುವ ಸಾಧ್ಯತೆಗಳಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ ಕಂಪನಿಯು ಡೀಸೆಲ್ ಮಾದರಿಯ ಹೈ ಎಂಡ್ ಆವೃತ್ತಿಯಲ್ಲಿ 210 ಬಿಎಚ್‌ಪಿ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಗಳಿವೆ.

ಎಕ್ಸ್‌ಯುವಿ700 ಬಿಡುಗಡೆಯ ನಂತರ ಎಕ್ಸ್‌ಯುವಿ500 ಮಾದರಿಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಿರುವ ಮಹೀಂದ್ರಾ ಕಂಪನಿಯು ಸದ್ಯ ಲಭ್ಯವಿರುವಂತಹ 7 ಸೀಟರ್ ಸೌಲಭ್ಯವನ್ನು ತೆಗೆದುಹಾಕಿ ಆರಾಮದಾಯಕ ಕ್ಯಾಬಿನ್ ರೂಂ ಹೊಂದಿರುವ 5 ಸೀಟರ್ ಮಾದರಿಯನ್ನಾಗಿ ಮರುಬಿಡುಗಡೆ ಮಾಡಲಿದೆ.

ಈ ಮೂಲಕ 5 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ500 ಮತ್ತು 7 ಸೀಟರ್ ಬಯಸುವ ಗ್ರಾಹಕರಿಗೆ ಎಕ್ಸ್‌ಯುವಿ700 ಮಾರಾಟ ಮಾಡಲಿದ್ದು, ಇತ್ತೀಚೆಗೆ ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್ ಕಾರು ಮಾದರಿಗಳು ಮಾರುಕಟ್ಟೆ ಪ್ರವೇಶಿಸಿರುವ ಹಿನ್ನಲೆಯಲ್ಲಿ ಕಂಪನಿಯು ಎಕ್ಸ್‌ಯುವಿ ಸರಣಿಯಲ್ಲಿ ಈ ಬದಲಾವಣೆ ತಂದಿದೆ.


Click it and Unblock the Notifications








