Jimny ಎಸ್‍ಯುವಿ ಬಿಡುಗಡೆಗೂ ಮುನ್ನ ಗ್ರಾಹಕರ ಪ್ರತಿಕ್ರಿಯೆಗೆ ಮುಂದಾದ Maruti Suzuki
ಅಂತರರಾಷ್ಟ್ರೀಯ ಮಾರುಕಟ್ಟೆಗಲ್ಲಿ ಭರ್ಜರಿ ಬೇಡಿಕೆಯೊಂದಿಗೆ ಆಫ್-ರೋಡರ್ ಸುಜುಕಿ ಜಿಮ್ನಿ(Suzuki Jimny) ಮಿನಿ-ಎಸ್‍ಯುವಿಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪ್ರಸ್ತುತ ತಲೆಮಾರಿನ ಸುಜುಕಿ ಜಿಮ್ನಿ ಮಿನಿ-ಎಸ್‍ಯುವಿಯು 2018ದಿಂದ ಮಾರಾಟವಾಗುತ್ತಿದೆ.

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದೇಶೀಯ ಮಾರುಕಟ್ಟೆಯಲ್ಲಿ ಜಿಮ್ನಿ ಆಫ್-ರೋಡರ್ ಎಸ್‍ಯುವಿಯನ್ನು ಪರಿಚಯಿಸುವ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಪ್ರಸ್ತುತ ಭಾರತದಲ್ಲಿ ಗ್ರಾಹಕರ ಪ್ರತಿಕ್ರಿಯೆಯನ್ನು ವಿಶ್ಲೇಷಿಸುತ್ತಿದೆ. ಭಾರತದಲ್ಲಿನ ಪ್ರಸ್ತುತ ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಭಿನ್ನವಾಗಿ, ಸುಜುಕಿ ಜಿಮ್ನಿ ಆಫ್-ರೋಡ್ ಎಸ್‌ಯುವಿಯಾಗಿದ್ದು, ಇದು ಸ್ವಲ್ಪ ಕಡಿಮೆ ಪ್ರಾಯೋಗಿಕ ಮತ್ತು ಹೆಚ್ಚು ಉದ್ದೇಶಿತವಾಗಿದೆ. ಪ್ರಸ್ತುತ ಬಾರತದಲ್ಲಿ ಕಂಪನಿಯು ತನ್ನ ಗುರುಗ್ರಾಮ್ ಸ್ಥಾವರದಲ್ಲಿ ಮೂರು-ಡೋರಿನ ಜಿಮ್ನಿಯನ್ನು ತಯಾರಿಸುತ್ತದೆ ಮತ್ತು ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಿದೆ.

ಪಿಟಿಐ ಜೊತೆಗಿನ ಸಂವಾದದಲ್ಲಿ ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಸೇಲ್ ಮತ್ತು ಮಾರ್ಕೆಟಿಂಗ್) ಶಶಾಂಕ್ ಶ್ರೀವಾಸ್ತವ ಮಾತನಾಡಿ, ಇದು ಯೋಗ್ಯವಾದ ವಿಭಾಗವಾಗಿದೆ, ಅದಕ್ಕಾಗಿಯೇ ನಾವು ಇದನ್ನು ಆಟೋ ಎಕ್ಸ್‌ಪೋ 2020 ರಲ್ಲಿ ಪ್ರದರ್ಶಿಸಿದ್ದೇವೆ. ನಾವು ಕೆಲವು ಗ್ರಾಹಕರ ಪ್ರತಿಕ್ರಿಯೆಯನ್ನು ಸಂಗ್ರಹಿಸಿದ್ದೇವೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ. ನಾವು ಈ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡುತ್ತಿದ್ದೇವೆ ಮತ್ತು ನಾವು ಉತ್ಪನ್ನವನ್ನು ಇಲ್ಲಿ ಪರಿಚಯಿಸಬಹುದೇ ಎಂದು ನಾವು ಖಂಡಿತವಾಗಿ ನೋಡುತ್ತೇವೆ ಎಂದು ಹೇಳಿದ್ದಾರೆ.

ಈ ಸುಜುಕಿ ಜಿಮ್ನಿ ಮಿನಿ-ಎಸ್‌ಯುವಿ 2019 ರ 'ವರ್ಲ್ಡ್ ಅರ್ಬನ್ ಕಾರ್ ಅಫ್ ದಿ ಇಯರ್' ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಹೊಸ ಜಿಮ್ನಿ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಇದು 3 ಲಿಂಕ್ ಆಕ್ಸಲ್ ಸಸ್ಪೆಂಷನ್ ಅನ್ನು ಹೊಂದಿದೆ. ಇದು ಕಠಿಣ ಭೂಪ್ರದೇಶಗಳಲ್ಲಿ ಸುಗಮವಾಗಿ ಸಾಗಲು ನೆರವಾಗುತ್ತದೆ. ಈ ಮಿನಿ ಎಸ್‍ಯುವಿಯಲ್ಲಿ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು.

ಈ ಎಂಜಿನ್ 6,000 ಆರ್‌ಪಿಎಂನಲ್ಲಿ 101 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 130 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಅಥವಾ 4 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಮಿನಿ ಎಸ್‍ಯುವಿಯನ್ನು ಡೀಸೆಲ್ ಅಥವಾ ಹೈಬ್ರಿಡ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವುದಿಲ್ಲ.

ಈ ಜಿಮ್ನಿ ಮಾದರಿಯು ಈ ಎಂಜಿನ್‌ನ ಟರ್ಬೋಚಾರ್ಜ್ಡ್ ಆವೃತ್ತಿಯನ್ನು ಪಡೆಯಬಹುದು; ಆದೆರೆ ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ. ಜಿಮ್ನಿ ಆಫ್-ರೋಡ್ ಎಸ್‍ಯುವಿಯಲ್ಲಿ 15 ಇಂಚಿನ ವ್ಹೀಲ್ ಅನ್ನು ಹೊಂದಿರುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ 3-ಡೋರಿನ ಅಥವಾ 5-ಡೋರ್ ಜಿಮ್ನಿಯನ್ನು ಬಿಡುಗಡೆಗೊಳಿಸಬಹುದು.

ಒಂದು ವೇಳೆ ಭಾರತದಲ್ಲಿ ಜಿಮ್ನಿಯನ್ನು ಬಿಡುಗಡೆಗೊಳಿಸಿದರೆ, 5-ಡೋರ್ ಜಿಮ್ನಿ ಬಿಡುಗಡೆಯಾಗಬಹುದು. ಇದು ಐದು ಡೋರುಗಳ ಜಿಮ್ನಿ ಇನ್ನು ನಾಲ್ಕು ಮೀಟರ್ ಉದ್ದದ ಮಾದರಿಯಾಗಿದೆ. ಭಾರತದಲ್ಲಿ ಇದು ತೆರಿಗೆ ಪ್ರಯೋಜನಗಳನ್ನು ಪಡೆಯುತ್ತದೆ. 2,550 ಎಂಎಂ ವ್ಹೀಲ್ ಬೇಸ್ ಉದ್ದವು ಕಾಂಪ್ಯಾಕ್ಟ್ ಎಸ್‌ಯುವಿಗಳಿಗಿಂತ ಹೆಚ್ಚಿನದಾಗಿದೆ.

ಈ ಎಸ್‍ಯುವಿಯು ಸುಮಾರು 2,500 ಎಂಎಂ ವ್ಹೀಲ್‌ಬೇಸ್ ಹೊಂದಿದೆ ಆದರೆ ಮಧ್ಯಮ ಗಾತ್ರದ ಎಸ್‍ಯುವಿಗಿಂತ ಚಿಕ್ಕದಾಗಿದೆ. ಇದರಿಂದ 5-ಡೋರ್ ಜಿಮ್ನಿ ಮಾದರಿಯು ಕಾಂಪ್ಯಾಕ್ಟ್ ಎಸ್‌ಯುವಿ ಮತ್ತು ಮಧ್ಯಮ ಗಾತ್ರದ ಎಸ್‍ಯುವಿಯ ನಡುವಿನ ವಿಭಾಗದಲ್ಲಿ ಇರಿಸಬಹುದು. ಜಿಮ್ನಿ 5-ಡೋರ್ ಎಸ್‍ಯುವಿಯ ವ್ಹೀಲ್‌ಬೇಸ್ ಮಹೀಂದ್ರಾ ಥಾರ್‌ಗಿಂತ 100 ಎಂಎಂ ಉದ್ದವಿರುತ್ತದೆ,

ಒಟ್ಟಾರೆ ಜಿಮ್ನಿ ಆಫ್-ರೋಡ್ ಎಸ್‍ಯುವಿಯು ಫ್ಹೋರ್ ವ್ಹೀಲ್ ಡ್ರೈವ್ ಸಿಸ್ಟಂ, ಅಗ್ರೇಸಿವ್ ಲುಕ್ ನೊಂದಿಗೆ ಸಾಟಿಯಿಲ್ಲದ ಆಫ್-ರೋಡ್ ಸಾಮರ್ಥ್ಯವನ್ನು ಕೂಡ ಹೊಂದಿರುತ್ತದೆ. ಈ ಸುಜುಕಿ ಜಿಮ್ನಿ ಎಸ್‍ಯುವಿಯು ಯುರೋಪಿಯನ್ ದೇಶಗಳಲ್ಲಿ ಬಹುಬೇಡಿಕೆಯನ್ನು ಪಡೆದುಕೊಂಡಿದೆ, ಅಲ್ಲದೇ ಸುಜುಕಿ ಜಿಮ್ನಿ ತವರು ಜಪಾನ್ ನಲ್ಲಿಯು ಬೇಡಿಕೆ ಹೆಚ್ಚಾಗಿದೆ.

ಸುಜುಕಿ ಕಂಪನಿಯ ಜಪಾನ್ ನಲ್ಲಿರುವ ಕೊಸೈನ ಘಟಕದಲ್ಲಿ ಉತ್ಪಾದನೆಯನ್ನು ಗರಿಷ್ಠ ಪ್ರಮಾಣಕ್ಕೆ ಏರಿಸಿದೆ.ಆದರೂ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಐಕಾನಿಕ್ ಆಪ್-ರೋಡರ್ ಜಿಮ್ನಿ ಬೇಡಿಕೆಯು ಅಷ್ಟರ ಪ್ರಮಾಣಕ್ಕೆ ಇದೆ. ಇದರಿಂದ ಭಾರತದಲ್ಲಿ ಮಾರುತಿ ಸುಜುಕಿಯ ಗುರುಗಾಂವ್‌ನಲ್ಲಿರುವ ಘಟಕದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ.

ಇನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಮೂರು ಡೋರಿನ ಸುಜುಕಿ ಜಿಮ್ನಿ ಮಾದರಿಯನ್ನು ಭಾರತದಿಂದ ಲ್ಯಾಟಿನ್ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ. ಜಿಮ್ನಿಯನ್ನು ಇತ್ತೀಚೆಗೆ ಮೆಕ್ಸಿಕೊದಲ್ಲಿ ಸುಜುಕಿ ಕಂಪನಿಯು ಬಿಡುಗಡೆಗೊಳಿಸಿತ್ತು. ಇದು ಕೇವಲ 72 ಗಂಟೆಗಳ ಅವಧಿಯಲ್ಲಿ ಸೋಲ್ಡ್ ಔಟ್ ಆಯ್ತು. ಇದೇ ರೀತಿ ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹುಬೇಡಿಕೆಯ ಮಾದರಿಯಾಗಿದೆ.

ಈ ಜಿಮ್ನಿ ಮಿನಿ ಎಸ್‍ಯುವಿಯನ್ನು 2018ರಲ್ಲಿ ಜಾಗತಿಕವಾಗಿ ಅನಾವರಣಗೊಂಡಿತು. ಜಾಗತಿಕವಾಗಿ ಅನಾವರಣಗೊಂಡು 1.5 ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಭಾರತದಲ್ಲಿ ಆಫ್-ರೋಡ್ ವಾಹನ ಎಂದು ಹೇಳಿದಾಗ ಮೊದಲು ಯೋಚನೆಗೆ ಬರುವುದು ಮಹೀಂದ್ರಾ ಥಾರ್ ಎಂದು ಹೇಳಬಹುದು. ಆದರೆ ಅದೇ ರೀತಿ ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಜಿಮ್ನಿ ಭಾರತದಲ್ಲಿ ಒಂದು ವೇಳೆ ಬಿಡುಗಡೆಗೊಂಡರೆ ಥಾರ್ ಎಸ್‍ಯುವಿಗೆ ಪ್ರಬಲ ಎದುರಾಳಿ ಆಗುತ್ತದೆ.

2020ರ ಆಟೋ ಎಕ್ಸ್‌ಪೋ ಸಂದರ್ಭದಲ್ಲಿ ಮಾರುತಿ ಸುಜುಕಿ ಭಾರತದಲ್ಲಿ ಜಿಮ್ನಿಯನ್ನು ಪ್ರದರ್ಶಿಸಿದಾಗ ಆಫ್-ರೋಡ್ ವಾಹನ ಪ್ರಿಯರಿಗೆ ಹೆಚ್ಚಿನ ಕುತೂಹಲ ಹುಟ್ಟು ಹಾಕಿತು. ಒಟ್ಟಿನಲ್ಲಿ ಭಾರತದಲ್ಲಿ ಬಿಡುಗಡೆಯಾದರೆ ಈ ಬಹುನಿರೀಕ್ಷಿತ ಸುಜುಕಿ 5-ಡೋರ್ ಜಿಮ್ನಿ ಮಿನಿ ಎಸ್‍ಯುವಿಯು 33 ವರ್ಷಗಳ ಕಾಲ ದೇಶದಲ್ಲಿ ಮಾರಾಟವಾಗಿದ್ದ ಜನಪ್ರಿಯ ಜಿಪ್ಸಿ ಮಾದರಿಯ ಉತ್ತರಾಧಿಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications