ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಮಾರುತಿ ಸುಜುಕಿ ಪ್ರಮುಖ ಕಾರುಗಳ ಡೀಸೆಲ್ ವರ್ಷನ್
ಹೊಸ ಎಮಿಷನ್ ನಿಯಮ ಅನುಸಾರವಾಗಿ ಡೀಸೆಲ್ ಎಂಜಿನ್ ಮಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರು ಮಾದರಿಗಳನ್ನು ಮಾತ್ರ ಮಾರಾಟ ಮಾಡುತ್ತಿರುವ ಮಾರುತಿ ಸುಜುಕಿ ಇದೀಗ ಮತ್ತೆ ಹೊಸ ಮಾದರಿಯ ಡೀಸೆಲ್ ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿರುವ ಮಾಹಿತಿ ಲಭ್ಯವಾಗಿದೆ.

2020ರ ಎಪ್ರಿಲ್ 1ರಿಂದ ಜಾರಿಗೆ ಬಂದ ಹೊಸ ಎಮಿಷನ್ ನಿಯಮ ಅನ್ವಯ 1.3-ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಮಾರುತಿ ಸುಜುಕಿ ಕಂಪನಿಯು ಸದ್ಯ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಎಂಜಿನ್ ಪ್ರೇರಿತ ಕಾರುಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಆಯ್ದ ಕಾರು ಮಾದರಿಯಗಳಲ್ಲಿ ಬಿಎಸ್-6 ನಿಯಮ ಅನುಸಾರವಾಗಿ ಅಭಿವೃದ್ದಿಗೊಳಿಸಲಾದ 1.5-ಲೀಟರ್ ಡೀಸೆಲ್ ಎಂಜಿನ್ ಪರಿಚಯಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.

ಬಿಎಸ್-6 ಎಮಿಷನ್ ಜಾರಿ ನಂತರ ಡೀಸೆಲ್ ಎಂಜಿನ್ ಕಾರುಗಳನ್ನು ಮರುಬಿಡುಗಡೆ ಮಾಡುವುದಿಲ್ಲ ಎಂದಿದ್ದ ಮಾರುತಿ ಸುಜುಕಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಆಯ್ದ ಕಾರು ಮಾದರಿಗಳಿಗಾಗಿ ಮತ್ತೆ ಹೊಸ ಡೀಸೆಲ್ ಮಾದರಿಯನ್ನು ಅಳವಡಿಸಿಕೊಳ್ಳುವ ಸಿದ್ದತೆಯಲ್ಲಿದೆ.

ಹೊಸ ಡೀಸೆಲ್ ಎಂಜಿನ್ ಮಾದರಿಯನ್ನು ಮೊದಲ ಹಂತವಾಗಿ ಎಕ್ಸ್ಎಲ್6 ಎಂಪಿವಿ ಮಾದರಿಯಲ್ಲಿ ತದನಂತರ ವಿಟಾರಾ ಬ್ರೆಝಾ, ಎರ್ಟಿಗಾ ಮತ್ತು ಎಸ್-ಕ್ರಾಸ್ ಮಾದರಿಗಳಲ್ಲಿ ಅಳವಡಿಸುವ ಯೋಜನೆಯಲ್ಲಿದ್ದು, ಸಿಯಾಜ್ ಸೆಡಾನ್ ಮಾದರಿಯಲ್ಲೂ ಡೀಸೆಲ್ ಮಾದರಿ ಅಳವಡಿಸಬಹುದಾಗಿದೆ.

ಮೇಲಿನ ಐದು ಕಾರು ಮಾದರಿಗಳನ್ನು ಹೊರತುಪಡಿಸಿ ಇನ್ನುಳಿದ ಮಾದರಿಗಳಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿನ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಮಾತ್ರ ಮುಂದುವರಿಸಲಿದ್ದು, ಹೈ ಎಂಡ್ ಮಾದರಿಗಳಿಗಾಗಿ ಮಾತ್ರವೇ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ.

ಭವಿಷ್ಯದ ದೃಷ್ಠಿಯಿಂದ ಡೀಸೆಲ್ ವಾಹನಗಳಿಗೆ ಸಂಪೂರ್ಣವಾಗಿ ಗುಡ್‌ಬೈ ಹೇಳಿದ್ದ ಮಾರುತಿ ಸುಜುಕಿಯು ಇದೀಗ ಗ್ರಾಹಕರ ಬೇಡಿಕೆ ಅನುಸಾರವಾಗಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಮರಳಿ ಪರಿಚಯಿಸಲಾಗುತ್ತಿದ್ದು, ಹೊಸ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಮಾರುತಿ ಸುಜುಕಿ ಕಂಪನಿಯೇ ಅಭಿವೃದ್ದಿಗೊಳಿಸುತ್ತಿದೆ.

ಈ ವರ್ಷದ ಮಧ್ಯಂತರದಲ್ಲೇ ಹೊಸ ಡೀಸೆಲ್ ಎಂಜಿನ್ ಪರಿಚಯಿಸಬೇಕಿದ್ದ ಮಾರುತಿ ಸುಜುಕಿಯು ಕೋವಿಡ್ ಪರಿಣಾಮ ಡೀಸೆಲ್ ಎಂಜಿನ್ ಹೊಂದಿರುವ ಎಕ್ಸ್ಎಲ್ 6 ಮಾದರಿಯನ್ನು 2022ರ ಜನವರಿಯಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದು, ವಿಟಾರಾ ಬ್ರೆಝಾ ಡೀಸೆಲ್ ಮಾದರಿಯು 2022ರ ಫೆಬ್ರವರಿಯಲ್ಲಿ ನಡೆಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ನಂತರವಷ್ಟೇ ಬಿಡುಗಡೆಯಾಗಲಿದೆ.

ತನನಂತರ ಎರ್ಟಿಗಾ, ಎಸ್-ಕ್ರಾಸ್ ಮತ್ತು ಸಿಯಾಜ್ ಕಾರುಗಳಲ್ಲೂ ಡೀಸೆಲ್ ಮಾದರಿಯನ್ನು ಪರಿಚಯಿಸಲು ನಿರ್ಧರಿಸಲಾಗಿದ್ದು, ಹೊಸ ಎಂಜಿನ್ ಮಾದರಿಯು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಎರಡು ಮಾದರಿಯಲ್ಲೂ ಖರೀದಿಗೆ ಲಭ್ಯವಿರಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಾರುಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯಿಲ್ಲದ ಪರಿಣಾಮ ವಿವಿಧ ಕಾರು ಕಂಪನಿಗಳ ಡೀಸೆಲ್ ಮಾದರಿಗಳು ಉತ್ತಮ ಬೇಡಿಕೆ ಹೊಂದಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆ ಆಧಾರದ ಮೇಲೆ ಮಾರುತಿ ಸುಜುಕಿಯು ಡೀಸೆಲ್ ಮೇಲೆ ಮತ್ತೆ ಆಸಕ್ತಿ ತೋರುತ್ತಿದೆ.


Click it and Unblock the Notifications








