ಜುಲೈ ತಿಂಗಳಿನಲ್ಲಿ 17 ಸಾವಿರಕ್ಕೂ ಹೆಚ್ಚು ಎಂಪಿವಿ ಕಾರುಗಳನ್ನು ಮಾರಾಟ ಮಾಡಿದ ಮಾರುತಿ ಸುಜುಕಿ
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್) ಕಂಪನಿಯು ತನ್ನ 2021ರ ಜುಲೈ ತಿಂಗಳಿನ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಇದರಲ್ಲಿ ಮಾರುತಿ ಸುಜುಕಿ ಕಂಪನಿಯು ಒಟ್ಟು 17,624 ಎಂಪಿವಿ ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಕಳೆದ ತಿಂಗಳಿನಲ್ಲಿ ಭಾರತದಲ್ಲಿ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಮಾದರಿಯ 13,434 ಯುನಿಟ್‌ಗಳನ್ನು ಮಾರಾಟಗೊಳಿಸಿದರೆ, ಎಕ್ಸ್‌ಎಲ್6 ಮಾದರಿಯ 4,190 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. ಈ ವರ್ಷದ ಜೂನ್ ತಿಂಗಳಿನಲ್ಲಿ ಎರ್ಟಿಗಾ ಎಂಪಿವಿಯ 9,920 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಮಾಸಿಕವಾಗಿ ಮಾರಾಟದಲ್ಲಿ ಶೇ.35.42 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇನ್ನು ವಾರ್ಷಿಕವಾಗಿ ಶೇ.57.97 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಈ ವರ್ಷದ ಜೂನ್ ತಿಂಗಳಿನಲ್ಲಿ ಎಕ್ಸ್‌ಎಲ್6 ಮಾದರಿಯ 3,978 ಯುನಿಟ್‌ಗಳು ಮಾರಾಟವಾಗಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.5.34 ರಷ್ಟು ಬೆಳೆವಣಿಹೆಯನ್ನು ಸಾಧಿಸಿದೆ. ಇನ್ನು 2020ರ ಜುಲೈ ತಿಂಗಳಿನಲ್ಲಿ ಎಕ್ಸ್‌ಎಲ್6 ಮಾದರಿಯ 1,874 ಯುನಿಟ್‌ಗಳು ಮಾರಾಟವಾಗಿತ್ತು, ವಾರ್ಷಿಕವಾಗಿ ಶೇ.123.59 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಎಕ್ಸ್‌ಎಲ್6 ಮತ್ತು ಎರ್ಟಿಗಾ ಎಂಪಿವಿಗಳನ್ನು ನವೀಕರಿಸಿ ಹೆಚ್ಚು ಪ್ರೀಮಿಯಂ ಮಾದರಿಗಳಾಗಿ ದೇಶಿಯ ಮಾರುಕಟ್ಟೆಯಲ್ಲಿ 2019ರಲ್ಲಿ ಪರಿಚಯಿಸಿತು. ಇದರಲ್ಲಿ ಎಕ್ಸ್‌ಎಲ್6 ಎಂಪಿವಿಯನ್ನು ಮಾರುತಿ ಸುಜುಕಿಯ ನೆಕ್ಸಾ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಎರ್ಟಿಗಾ ಎಂಪಿವಿಯು ಅರೆನಾ ಡೀಲರುಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಎಂಪಿವಿಗಳ ಪಟ್ಟಿಯಲ್ಲಿ ಎರ್ಟಿಗಾ ನಂ.1 ಸ್ಥಾನದಲ್ಲಿದೆ. ಇತ್ತೀಚೆಗೆ ಎಂಪಿವಿಗಳ ವಿಭಾಗದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ.

ಇದರಿಂದ ಮಾರುತಿ ಸುಜುಕಿ ಎರ್ಟಿಗಾದಲ್ಲಿ ಹಲವು ನವೀಕರಣಗಳನ್ನು ನಡೆಸುತ್ತಾ ಬಂದಿದೆ. ಇದೀಗ ಮಾರುತಿ ಸುಜುಕಿ ಕಂಪನಿಯು ಎರ್ಟಿಗಾ ಎಂಪಿವಿಯಲ್ಲಿ ಗಮನಾರ್ಹವಾದ ನವೀಕರಣವನ್ನು ನಡೆಸಲು ಸಜ್ಜಾಗಿದೆ. ಮುಂಬರುವ ತಿಂಗಳುಗಳಲ್ಲಿ ಎರ್ಟಿಗಾ ಮತ್ತು ಎಕ್ಸ್‌ಎಲ್6 ಎಂಪಿವಿಗಳು ಹೊಸ ನವೀಕರಣಗಳೊಂದಿಗೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಈ ಎರಡು ಎಂಪಿವಿಗಳು ಹೆಚ್ಚಿನ ಏರ್‌ಬ್ಯಾಗ್‌ಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್ ಸೌಲಭ್ಯ, ದೊಡ್ಡ ಟೈರ್ ಮತ್ತು ಇನ್ನಷ್ಟು ಹೆಚ್ಚುವರಿ ಫೀಚರ್ಸ್ ಗಳನ್ನು ಪಡೆಯಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗಬಹುದು.

ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಮಾದರಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ ಏಕೈಕ 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ, ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಮಾರುತಿ ಸುಜುಕಿ ಎರ್ಟಿಗಾ ಕಾರಿನಲ್ಲಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, 15 ಇಂಚಿನ ವ್ಹೀಲ್ ಗಳು, ಆಂಡ್ರಾಯ್ಡ್ ಆಟೋ ಮತ್ತು ಕಾರ್‌ಪ್ಲೇಯೊಂದಿಗೆ 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿದೆ

ಇದರೊಂದಿಗೆ ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಹಿಂಭಾಗದ ಎಸಿಯೊಂದಿಗೆ ಆಟೋ ಕ್ಲೈಮೇಟ್ ಕಂಟ್ರೋಲ್, ವೆಂಟಿಲೇಟೆಡ್ ಫ್ರಂಟ್ ಕಪ್ ಹೋಲ್ಡರ್ಸ್ ಮತ್ತು ಸ್ಪೀಕರ್ ಆಡಿಯೊ ಸಿಸ್ಟಂ ಅನ್ನು ಒಳಗೊಂಡಿದೆ.

ಈ ಎರ್ಟಿಗಾ ಎಂಪಿವಿಯಲ್ಲಿ ಸುರಕ್ಷತೆಗಾಗಿ, ಎಂಪಿವಿ ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಇಎಸ್‌ಪಿ, ಹಿಲ್ ಹೋಲ್ಡ್ ಕಂಟ್ರೋಲ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಡ್ಯುಯಲ್ ಫ್ರಂಟಲ್ ಏರ್‌ಬ್ಯಾಗ್ ಮತ್ತು ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕಾರೇಜ್‌ಗಳೊಂದಿಗೆ ಎಬಿಎಸ್ ಅನ್ನು ಹೊಂದಿದೆ.

ಇನ್ನು ಮಾರುತಿ ಸುಜುಕಿ ಎಕ್ಸ್‌ಎಲ್6 ಎಂಪಿವಿಯ ಬಗ್ಗೆ ಹೇಳುವುದಾದರೆ, ಇದರಲ್ಲಿ 1.5-ಲೀಟರ್ ಇನ್-ಲೈಮ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 105 ಬಿಹೆಚ್‍ಪಿ ಪವರ್ ಮತ್ತು 138 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಿದೆ. ಮೈಲ್ಡ್-ಹೈಬ್ರಿಡ್ ಸಿಸ್ಟಂ ಮತ್ತು ಐಡಲ್ ಸ್ಟಾರ್ಟ್-ಸ್ಟಾಪ್ ಕಾರ್ಯಗಳು ಎಂಪಿವಿಯಲ್ಲಿ ಸ್ಯಾಂಡರ್ಡ್ ಆಗಿ ಲಭ್ಯವಿದೆ.

ಮಾರುತಿ ಸುಜುಕಿ ಕಂಪನಿಯ ತನ್ನ ಸರಣಿಯಲ್ಲಿರುವ ಎಲ್ಲಾ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಿತ್ತು. ಆದರೆ ಎಂಪಿವಿ ವಿಭಾಗದ ಎರ್ಟಿಗಾ ಮತ್ತು ಎಕ್ಸ್‌ಎಲ್6 ಮಾದರಿಗಳ ಮಾರಾಟದಲ್ಲಿ ಹೆಚ್ಚಿಸಲು ಮುಂದಿನ ಎರಡು ವರ್ಷಗಳಲ್ಲಿ ಈ ಎರಡು ಮಾದರಿಗಳನ್ನು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.


Click it and Unblock the Notifications